ಮಂಗಳವಾರ, ಏಪ್ರಿಲ್ 13, 2021
32 °C
ಅಸ್ಪೃಶ್ಯತೆ ನಿವಾರಣೆಯ ಹೆಜ್ಜೆಗಳು...

‘ದಲಿತರ ಗೃಹಪ್ರವೇಶ’ಕ್ಕೆ ಐದು ವರ್ಷ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

‘ಶಿವಪ್ಪ... ನಿಮ್ಮನ್ನು ನೆನೆಸಿಕೊಂಡು ನಗುತ್ತಿದ್ದೇನೆ. ಇಂಥವರೂ ಇರ್ತಾರಲ್ಲ ಅಂತ, ಅಲ್ರೀ ಸ್ವಾಮಿ, ಒಂದು ಮನೆಯ ಗೃಹಪ್ರವೇಶದ ಹೊತ್ತಿಗೇನೇ ನೆತ್ತಿ ಸುಟ್ಟು ಹೋಗಿರುತ್ತದೆ. ಇನ್ನು ಹತ್ತಾರು, ನೂರಾರು.. ಶಿವನೇ, ಇದ್ಯಾವ ಪೀಡೆ, ಬೇತಾಳ ಬೆನ್ನಿಗೇರಿಸಿಕೊಂಡಿದ್ದೀರಲ್ಲ?’ 

–ದಲಿತ ಚಳವಳಿಯ ಪ್ರಮುಖರಲ್ಲೊಬ್ಬರಾದ ಕೋಟಿಗಾನಹಳ್ಳಿ ರಾಮಯ್ಯ ಜನವರಿ 29ರಂದು ಕೋಲಾರದ ಜಿ.ಶಿವಪ್ಪ ಅವರಿಗೆ ಬರೆದ ಪತ್ರದ ಮೊದಲ ಸಾಲುಗಳು ಇವು.

ದೇಶದಲ್ಲಿ ಅಸ್ಪೃಶ್ಯತೆಯ ಆಚರಣೆ ನಿಷೇಧಿಸಿ ಹಲವು ದಶಕಗಳು ಉರುಳಿದರೂ, ಅದು ಬೇರೆ ಬೇರೆ ರೂಪಗಳಲ್ಲಿ ಗುಪ್ತವಾಗಿ, ಒಪ್ಪಿತ ಜೀವನಶೈಲಿಯಾಗಿ, ಗೆಲುವಿಲ್ಲದ ವಿರೋಧವಾಗಿ, ತಣ್ಣನೆಯ ದಬ್ಬಾಳಿಕೆಯಾಗಿ, ಅಸಮಾನತೆಯ ಕುರುಹಾಗಿ, ಪೀಡೆಯಂತೆ, ಬೇತಾಳನಂತೆ ನೇತಾಡುತ್ತಿದೆ. ಅದನ್ನು ಅಹಿಂಸೆಯ ಅಸ್ತ್ರವೊಂದರಿಂದಲೇ ಮಣಿಸಿ, ಮಣ್ಣುಮಾಡುವ ಮಹತ್ವಾಕಾಂಕ್ಷೆಯಿಂದ ಶಿವಪ್ಪ ಸಮಾನಮನಸ್ಕರೊಂದಿಗೆ ನಡೆಸುತ್ತಿರುವ ‘ದಲಿತರ ಗೃಹಪ್ರವೇಶ’ ಎಂಬ ಮನಪರಿವರ್ತನೆಯ ಸುಧಾರಣಾವಾದಿ ಆಂದೋಲನ ಆರಂಭವಾಗಿ ಜುಲೈ 30ಕ್ಕೆ ಐದು ವರ್ಷ ತುಂಬುತ್ತಿರುವ ಹೊತ್ತಿನಲ್ಲೇ ರಾಮಯ್ಯ ಈ ಪತ್ರ ಬರೆದಿರುವುದು ಬಹುಮುಖ್ಯ ಬೆಳವಣಿಗೆಯೇ.

ಕೋಲಾರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಜಿ.ಶಿವಪ್ಪ ಅದೇ ಜಿಲ್ಲೆಯ ಮುಳಬಾಗಲಿನವರು. ಒಕ್ಕಲಿಗ ಸಮುದಾಯದ ಅವರು ತಮ್ಮ ಹುಟ್ಟೂರಾದ ಮಣಿಘಟ್ಟ ಗೊಲ್ಲಹಳ್ಳಿಯ ಮನೆಯಲ್ಲಿ ತಮ್ಮ ತಂದೆಯ 6ನೇ ವರ್ಷದ ತಿಥಿಯ ದಿನವಾದ ಜುಲೈ 30ರಂದು ಮನೆ ಮಂದಿಯ ಮನವೊಲಿಸಿ ಆ ಹಳ್ಳಿಯ ಎಲ್ಲ ದಲಿತರನ್ನೂ ಮನೆಯೊಳಕ್ಕೆ ಕರೆದುಕೊಳ್ಳುವ ಮೂಲಕ ಅಭಿಯಾನವನ್ನು ತಮ್ಮ ಮನೆಯಿಂದಲೇ ಆರಂಭಿಸಿದರು. ಸುತ್ತಮುತ್ತಲಿನ ಮಣಿಘಟ್ಟ ಮಿಟ್ಟ, ಕೋಡಿಹಳ್ಳಿ, ಹೆಬ್ಬಣಿ, ತಮ್ಮರೆಡ್ಡಿಹಳ್ಳಿ, ಬಂಗವಾದಿ, ಕಾಡೇನಹಳ್ಳಿ, ಬೂಡದೇರು, ಯಲವಟೂರಿನ ನೂರಾರು ದಲಿತರು ಅಂದು ಅವರ ಮನೆಯೊಳಕ್ಕೆ ಬಂದರು. ಉಂಡರು, ತತ್ವಪದಗಳನ್ನು ಹಾಡಿ ಸಂಭ್ರಮಿಸಿದರು.

ನಂತರ ಅದನ್ನು ಬೇರೆ ಹಳ್ಳಿಗಳಲ್ಲೂ ಏರ್ಪಡಿಸುವುದು ಸುಲಭದ ಮಾತಾಗಿರಲಿಲ್ಲ. ಜಾತಿಪದ್ಧತಿಯ ಕಂದಾಚಾರಕ್ಕೆ ಕೊರಳು ಮತ್ತು ಕರುಳನ್ನು ಕೊಟ್ಟ ಮಂದಿ ಶಿವಪ್ಪ ಅವರ ಈ ಸುಧಾರಣಾವಾದಿ ಪ್ರಯತ್ನವನ್ನು ಸುತಾರಾಂ ಒಪ್ಪಿರಲಿಲ್ಲ. ಅಂದು ಒಪ್ಪಿದ್ದ ಮನೆಯೊಳಗಿನವರು, ಹೊರಗಿನವರು, ಸಹೋದ್ಯೋಗಿಗಳು, ಮುಖಂಡರ ಜೊತೆಗೆ, ಅಸ್ಪೃಶ್ಯತೆಯನ್ನು ಒಪ್ಪದೇ ಇದ್ದರೂ, ಬಹಿರಂಗವಾಗಿ ವಿರೋಧಿಸಲು ಒಪ್ಪದ ಕೆಲವು ದಲಿತರಿಂದಲೂ ಶಿವಪ್ಪ ಟೀಕೆ, ನಿಂದನೆ, ತೆಗಳಿಕೆ, ವಿರೋಧವನ್ನು ಎದುರಿಸಬೇಕಾಯಿತು. ಅಸ್ಪೃಶ್ಯತೆಯನ್ನು ಆಚರಿಸುವವರು ಮತ್ತು ಅದಕ್ಕೆ ತಮ್ಮ ಘನತೆಯನ್ನು ಬಿಟ್ಟುಕೊಟ್ಟವರು– ಈ ಎರಡೂ ಸಮುದಾಯದವರ ಮನಪರಿವರ್ತನೆ ಸುಲಭ ಸಾಧ್ಯವಾಗಿರಲಿಲ್ಲ.

‘ನಿಮಗ್ಯಾಕೆ ಇದೆಲ್ಲಾ ಉಸಾಬರಿ’ ಎಂಬ ಟೀಕೆ, ‘ನಿಮ್ಮದು ಗೃಹಪ್ರವೇಶವಲ್ಲ, ಗ್ರಹ ಪ್ರವೇಶ’ ಎಂಬ ಎಚ್ಚರಿಕೆ, ‘ಇದೆಲ್ಲ ಪ್ರಚಾರದ ತೆವಲು’ ಎಂಬ ಕೆಲವು ‘ಮಾಧ್ಯಮ ಮಿತ್ರರ’ ಕೊಂಕು ನುಡಿಗಳಿಗೆ ಶಿವಪ್ಪ ಯಾವ ವಿರೋಧವನ್ನು ವ್ಯಕ್ತಪಡಿಸದೆ ನಡೆದ ನಡಿಗೆಗೆ ಈಗ ಐದು ವರ್ಷ ತುಂಬಿದೆ ಎಂದರೆ ಅದು ಸಲೀಸು ನಡಿಗೆಯಲ್ಲ ಎಂದೇ ಹೇಳಬೇಕು. ಆ ಹೆಜ್ಜೆಗಳು ಮೂಡಿಸಿದ ಹಾದಿಯಲ್ಲಿ ಬುದ್ಧನ ತಾಳ್ಮೆಯ ನೆರಳೂ ಕಾಣುತ್ತದೆ. ಅಸ್ಪೃಶ್ಯತೆಯನ್ನು ಮಟ್ಟಹಾಕುವಲ್ಲಿ ಮಹಾನ್‌ ಸಂಘರ್ಷದ ದಾರಿಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಇದ್ದರೆ, ಶಿವಪ್ಪನವರ ದಾರಿಯಲ್ಲಿ ಬುದ್ಧನಿದ್ದಾನೆ. ಅವರು ಬುದ್ಧನ ಅನುಯಾಯಿ. ನಗರ ಪ್ರದೇಶಗಳಲ್ಲಿ ಮನೆ ಬಾಡಿಗೆಗೆ ಕೊಡುವ ಸಂದರ್ಭಗಳಲ್ಲಿ ಈ ಅಸ್ಪೃಶ್ಯತೆಯ ಆಚರಣೆ ಢಾಳಾಗಿ ಕಂಡರೂ, ಉಳಿದ ಸಂದರ್ಭಗಳಲ್ಲಿ ಯಾರು, ಯಾವ ಜಾತಿ ಎಂಬುದು ಮುಖ್ಯವಾಗುವುದಿಲ್ಲ. ಆದರೆ, ಹಳ್ಳಿಗಳಲ್ಲಿ ಹುಟ್ಟಿನಾರಂಭದಿಂದ ಅಂತ್ಯದವರೆಗೂ ಅಸ್ಪೃಶ್ಯತೆ ಈಗಲೂ ಮನುಷ್ಯರನ್ನು ಕಾಡುತ್ತದೆ. ಕನಲುವಂತೆ ಮಾಡುತ್ತದೆ.

ಇಂಥ ಸನ್ನಿವೇಶದಲ್ಲಿ ‘ನಮ್ಮ ನಡಿಗೆ ಅಸ್ಪೃಶ್ಯತೆಮುಕ್ತ ಭಾರತದೆಡೆಗೆ’ ಎಂದು ನಡೆದವರು ಶಿವಪ್ಪ. ಹಳ್ಳಿಗಳೇ ಅವರ ಪ್ರಧಾನ ಕರ್ಮಭೂಮಿ. ‘ಇತರೆ ಜಾತಿಗಳ ಮನೆಗಳಿಗೆ ದಲಿತರ ಗೃಹಪ್ರವೇಶದಿಂದ ಶುರುವಾದ ಈ ಅಭಿಯಾನವು, ಅದೇ ವರ್ಷದಲ್ಲೇ, ‘ದೇವಾಲಯ ಪ್ರವೇಶ’, ‘ಒಂದೇ ಊರು ಒಂದೇ ನೀರು’ ‘ಸಮಾನತೆಗಾಗಿ ಸಹಭೋಜನ’, ‘ಭಾರತವನ್ನು ಅಸ್ಪೃಶ್ಯತೆಮುಕ್ತ ರಾಷ್ಟ್ರವಾಗಿಸುತ್ತೇವೆ’ ಎಂದು ವಿದ್ಯಾರ್ಥಿಗಳ ಪ್ರತಿಜ್ಞೆ ಸ್ವೀಕಾರದ ಹಲವು ವೈವಿಧ್ಯಮಯ ಟಿಸಿಲುಗಳಲ್ಲಿ ಹರಡಿಕೊಂಡಿದ್ದು ವಿಶೇಷ.

ಜಿಲ್ಲಾಡಳಿತವೇ ಅವರೊಂದಿಗೆ ಸೇರಿದ ಪರಿಣಾಮವಾಗಿ ಸ್ಥಳೀಯ ಆಡಳಿತಗಳು, ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳೂ, ಮಾಜಿ ಶಾಸಕರು, ಸಚಿವರು ಅಸ್ಪೃಶ್ಯತೆ ನಿವಾರಣೆಯ ದಾರಿಯಲ್ಲಿ ನಡೆದರು.

2014ರಲ್ಲಿ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ, ಶಿವಪ್ಪನವರ ಮನವಿಗೆ ಸ್ಪಂದಿಸಿ, ‘ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಎಲ್ಲಾ ವರ್ಗದ ಜನಾಂಗದವರಿಗೂ ಪ್ರವೇಶವಿದೆ’ ಎಂಬ ಫಲಕಗಳನ್ನು ಅಳವಡಿಸುವಂತೆ ಮಾಡಿದರು. ದಲಿತರೊಂದಿಗೆ ಗುಡಿಸಲುಗಳಲ್ಲಿ ಕುಳಿತು ಊಟ ಮಾಡಿದರು. ಅವರ ನಂತರ ಬಂದ ಕೆ.ವಿ. ತ್ರಿಲೋಕಚಂದ್ರ ಅವರೂ ಈ ಅಸ್ಪೃಶ್ಯತೆ ನಿವಾರಣೆಗೆ ಕೈಜೋಡಿಸಿದರು.

ಈ ಹೋರಾಟಕ್ಕೆ ಇನ್ನೊಂದು ಬಗೆಯ ಘನತೆ ಬಂದಿದ್ದು, ‘ದಲಿತರ ದೇವಾಲಯ ಪ್ರವೇಶ’ದ ಪ್ರಯತ್ನಕ್ಕೆ ಇದೇ ಜಿಲ್ಲೆಯವರಾದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಹಾಗೂ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್‌.ಶ್ರೀನಿವಾಸಾಚಾರಿ ಅವರು ಕೈ ಜೋಡಿಸಿದ ಬಳಿಕ. ಮುಳಬಾಗಲು ತಾಲ್ಲೂಕಿನ ಕಾಡೇನಹಳ್ಳಿಯಲ್ಲಿ ನಾಗಮೋಹನದಾಸ್‌ ನೇತೃತ್ವದಲ್ಲೇ ಚೌಡೇಶ್ವರಿ ಮತ್ತು ಸೋಮೇಶ್ವರ ಗುಡಿಯೊಳಕ್ಕೆ ದಲಿತರು ಪ್ರವೇಶ ಮಾಡಿದರು. ಅದು ದೇವಾಲಯ ಪ್ರವೇಶದ ಮೊದಲ ಕಾರ್ಯಕ್ರಮ. ನಂತರ, ಅಸ್ಪೃಶ್ಯತೆ ಕುರಿತು ನಾಗಮೋಹನ್‌ದಾಸ್‌ ಕಿರುಪುಸ್ತಕವನ್ನೂ ಬರೆದರು.

ಈ ಆಂದೋಲನಕ್ಕಾಗಿ ರಚಿಸಲಾಗಿರುವ ‘ಭಾರತ ಗೃಹ ಪ್ರವೇಶ ಸಮಿತಿ’ಯಲ್ಲಿ ಹೋರಾಟಗಾರರಾದ ಟಿ.ವಿಜಯಕುಮಾರ್, ಹೂವಹಳ್ಳಿ ನಾಗರಾಜ್, ಪಂಡಿತ್ ಮುನಿವೆಂಕಟಪ್ಪ, ಪ್ರಭಾವತಿ, ಸುಬ್ರಮಣಿ, ರಾಮಕೃಷ್ಣ,  ಮೇಡಿಹಾಳ ಮುನಿಆಂಜಿ, ನಾಗನಾಳ ರಮೇಶ್, ತಿಪ್ಪಸಂದ್ರ ಶ್ರೀನಿವಾಸ್, ಹಾಡುಗಾರ ವೆಂಕಟಾಚಲಪತಿ, ಉಪನ್ಯಾಸಕರಾದ ರುದ್ರೇಶ್‍ ಅದರಂಗಿ, ಸಿ.ಎ.ರಮೇಶ್, ನಿವೃತ್ತ ಶಿಕ್ಷಕ, ಲೇಖಕ ಸ.ರಘುನಾಥ್ ಇದ್ದಾರೆ. ಮಾಲೂರು ಶಾಸಕ ನಂಜೇಗೌಡ, ಮಾಜಿ ಶಾಸಕ ಮಂಜುನಾಥಗೌಡ, ವಕ್ಕಲೇರಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ  ಮಾಜಿ ಸದಸ್ಯೆ ಚೌಡೇಶ್ವರಿ ಅವರ ಸಹಯೋಗವೂ ದೊರಕಿದೆ.

ಪತ್ರ ಚಳವಳಿ

ಮೂರು ವರ್ಷದ ಹಿಂದೆ(2016), ಡಾ.ಬಿ.ಆರ್. ಅಂಬೇಡ್ಕರ್‍ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಆರಂಭವಾದ ‘ಅಸ್ಪೃಶ್ಯತೆ ಆಚರಿಸದಿರಿ’ ಪತ್ರ ಚಳುವಳಿಯು ಗೃಹಪ್ರವೇಶದ ಹೊಸ ಆಯಾಮ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರಾಜಕಾರಣಿಗಳು, ಅಧಿಕಾರಿಗಳು, ಮತ್ತು ಪ್ರಗತಿಪರ ನಾಯಕರಿಗೆ ಸಮಿತಿಯು ಅಂಚೆ ಮೂಲಕ ಪತ್ರ ಬರೆಯಿತು. ಎಲ್ಲ ಜಿಲ್ಲೆಗಳಿಗೂ ವಿಸ್ತರಣೆಯಾಯಿತು. ‘ನಮ್ಮಲ್ಲಿ ಅಸ್ಪೃಶ್ಯತೆ ಆಚರಣೆ ಇಲ್ಲ’ ಎಂಬ ಮಾರುತ್ತರಗಳೂ ಬಂದವು!
ಮತ್ತೆ ಮೂರು ವರ್ಷದ ಬಳಿಕ (2019), ಶ್ರೀನಿವಾಸಪುರ ತಾಲ್ಲೂಕಿನ ಗಡಿಗ್ರಾಮ ಪಿ.ಚನ್ನಯ್ಯಗಾರಿಪಲ್ಲಿಯಲ್ಲಿ ಗಣರಾಜ್ಯೋತ್ಸವಕ್ಕೆ ಎರಡು ದಿನ ಮೊದಲೇ ಸರ್ಕಾರಿ ಶಾಲೆಯ ಮಕ್ಕಳ ಜೊತೆ ಮನೆಮನೆಗೆ ಹೋಗಿ ಭಿಕ್ಷೆ ಬೇಡಿದ ಸಮಿತಿ ಸದಸ್ಯರು, ಬಂದ ಭಿಕ್ಷೆಯನ್ನು ಒಂದು ಮಾಡಿ ಗಣರಾಜ್ಯೋತ್ಸವದ ದಿನ ಸಹಭೋಜನ ಏರ್ಪಡಿಸಿದರು. ಇದು, ಗಣರಾಜ್ಯೋತ್ಸವದ ದಿನವೇ ಅಸ್ಪೃಶ್ಯತೆ ನಿವಾರಣೆಯ ಮತ್ತೊಂದು ಪ್ರಯತ್ನ.

250 ರೂಪಾಯಿ!

ಈ ಕಾರ್ಯಕ್ರಮಕ್ಕೆ ಸಾವಿರಾರು ರೂಪಾಯಿ ಖರ್ಚಾಗಬಹುದು ಎಂದುಕೊಂಡರೆ ತಪ್ಪಾಗುತ್ತದೆ. ಸಹಭೋಜನಕ್ಕೆ ಆಹ್ವಾನಿಸಿದವರೇ ಊಟ ತಯಾರಿಸುವುದರಿಂದ, ಬರುವವರ ಸಾರಿಗೆ ವೆಚ್ಚವೇ ಖರ್ಚು. ಶಿವಪ್ಪ ಸ್ವತಃ ಕರಪತ್ರಗಳನ್ನು ತಯಾರಿಸಿ ಜೆರಾಕ್ಸ್‌ ಮಾಡಿಸಿ, ಮುದ್ರಿಸಿ ಹಂಚುತ್ತಾರೆ, ಮೊದಲಿಗೆ ದಾನಿಗಳನ್ನು ನೆಚ್ಚಿಕೊಂಡಿದ್ದ ಸಮಿತಿಯು ನಂತರ ತನ್ನದೇ ಖರ್ಚಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

‘ಕೇವಲ ₹ 250 ಇದ್ದರೂ ಸಾಕು. ಒಮ್ಮೆ ಟೀ ಪಾರ್ಟಿ ಹೆಸರಿನಲ್ಲಿ ಮನೆಯೊಂದರಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಟೀಗಾಗಿ 250 ಖರ್ಚಾಯಿತಷ್ಟೇ’ ಎನ್ನುತ್ತಾರೆ ಶಿವಪ್ಪ. ಮನೆ ಕಟ್ಟಿದ ಸಾಲ ಮತ್ತು ವಾಹನ ಸಾಲದ ಕಂತುಗಳನ್ನು ಕಟ್ಟುತ್ತಲೇ ಅವರು ತಮ್ಮ ಸಂಬಳದ ಸ್ವಲ್ಪ ಭಾಗವನ್ನು ಗೃಹಪ್ರವೇಶ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದಾರೆ, ಸರ್ಕಾರಿ ರಜೆ ದಿನಗಳು ಮತ್ತು ತಮ್ಮ ವೈಯಕ್ತಿಕ ರಜೆಗಳ ದಿನಗಳಲ್ಲಷ್ಟೇ ಈ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳುತ್ತಿರುವುದು ವಿಶೇಷ.

ಸುಧಾರಣೆಯ ಪರ್ವ

‘ಸಾವಿರಾರು ವರ್ಷಗಳ ಹಿಂದೆಯೇ, ನೀವು ಬರಬೇಡಿ ಎಂದಿರುವವರ ಮನೆಗಳಿಗೆ, ಗುಡಿಗಳಿಗೆ ಈಗ ನಾವೇಕೆ ಹೋಗಬೇಕು. ಹೋದಕೂಡಲೇ ನಮ್ಮ ಬದುಕೇನು ಬಂಗಾರವಾಗಿಬಿಡುತ್ತದೆಯೇ?’ ಎಂದು ದಲಿತ ಅಸ್ಮಿತೆಯನ್ನು ಮುಂದೊಡ್ಡುವವರೊಂದಿಗೆ  ಶಿವಪ್ಪ ಸಂಘರ್ಷಕ್ಕಿಳಿಯುವವರಲ್ಲ.

‘ಇಂಥ ಆಕ್ರೋಶ, ಅಸಮಾಧಾನಗಳುಳ್ಳವರಿಗೆ ಅವರದ್ದೇ ದಾರಿಗಳುಂಟು. ಆದರೆ ಹಳ್ಳಿಗಳಿಂದ ಹೊರಬರಲಾರದೇ ಜೀವ ತೇಯುತ್ತಿರುವ ಹಳೇ ತಲೆಮಾರು, ಸಮಾನತೆಯ ಬದುಕಿನ ಕನಸು ಕಾಣುವ ಹೊಸ,ಎಳೆಯ ತಲೆಮಾರಿಗೆ ಸಂಘರ್ಷ ರಹಿತ ಬದುಕಿನ, ಮನಪರಿವರ್ತನೆಯ ದಾರಿಯೊಂದು ಇದೆ ಎಂದು ತಿಳಿಸುವುದೇ ನನ್ನ ಕೆಲಸ’ ಎಂಬುದು ಅವರ ಪ್ರತಿಪಾದನೆ. ‘ಈ ಐದು ವರ್ಷದಲ್ಲಿ ಆಗಿರುವ ಸಾಧನೆ ಸಣ್ಣದೇ. ಆದರೆ ಮನಪರಿವರ್ತನೆ ಒಳಗೇ ಹರಿಯುವ ನದಿಯಂತೆ. ಕಾಣುವುದಿಲ್ಲ. ಅನುಭವಿಸಬೇಕು ಎನ್ನುತ್ತಾರೆ ಅವರು.

ಅವರು ಹೇಳುತ್ತಾರೆ: ಐದು ವರ್ಷದಲ್ಲಿ, ಮಾತಿನಲ್ಲಷ್ಟೇ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದವರ ಚಳಿ ಬಿಡಿಸಿದ್ದೇವೆ, ವಾಸ್ತವದಲ್ಲಿ ಅವರ ಮನೆಗಳಿಗೆ ದಲಿತರ ಪ್ರವೇಶ ಸಿಗಬೇಕೆಂದು ಸಾರ್ವಜನಿಕವಾಗಿ ಹೇಳಿ,  ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತೆ ಮಾಡುತ್ತಿದ್ದೇವೆ.

ಪ್ರಗತಿಪರ ಸಂಘಟನೆಗಳ ಮುಖಂಡರು ಕೂಡ ಇದುವರೆಗೂ ಅವರ ಹಳ್ಳಿ ಮನೆಗಳಿಗೆ ದಲಿತರನ್ನು ಬಿಟ್ಟಲ್ಲವೆಂಬ ಸತ್ಯವನ್ನು ಮನದಟ್ಟು ಮಾಡಿದ್ದೇವೆ. ಅವರಲ್ಲಿ ಒಂದಷ್ಟು ಮಂದಿ ದಲಿತರ ಪ್ರವೇಶಕ್ಕೆ ಮುಂದಾಗುತ್ತಿದ್ದಾರೆ,  ಮನೆಯಲ್ಲಿಒಪ್ಪದಿರುವಾಗ ತಾವೂ ಮನೆ ಒಳಗೆ ಹೋಗದಿರಲು ನಿರ್ಧರಿಸಿ ಮಾದರಿಯಾಗುತ್ತಿದ್ದಾರೆ.

ಊರಿನ ಎಲ್ಲ ಜಾತಿಯ ಜನರಲ್ಲಿ ಪ್ರೀತಿ, ಸೌರ್ಹಾದತೆಯಿಂದ ಅವರ ಮನಸು ಗೆದ್ದ ಪರಿಣಾಮ ಕೆಲವು ಊರುಗಳಲ್ಲಿ ಎಲ್ಲಾ ಮನೆಗಳಿಗೂ ದಲಿತರು ಹೋಗಬಹುದಾದ ವಾತಾವರಣ ನಿರ್ಮಾಣಗೊಂಡಿದೆ.

ಮುಳಬಾಗಿಲು ತಾಲ್ಲೂಕಿನ ಮೇಲಾಗಾಣಿ ಗ್ರಾಮದಲ್ಲಿ ಒಂದೆರಡು ಮನೆಗೆ ದಲಿತರನ್ನು ಆಹ್ವಾನಿಸುವ ಕಾರ್ಯಕ್ರಮದಲ್ಲಿ ಮನಸ್ಸು ಬದಲಾಯಿಸಿಕೊಂಡ ಇಡೀ ಊರಿನ ಜನ ತಮ್ಮ ಮನೆಗಳಿಗೆ ದಲಿತರನ್ನು ಆಹ್ವಾನಿಸಿದ್ದರು. ಮಾಲೂರಿನ ಲಕ್ಕೂರಿನಲ್ಲೂ ಹೀಗೇ ಆಯಿತು.

ದೇವಾಲಯಗಳ ಪ್ರವೇಶದಲ್ಲಿ ತಾರತಮ್ಯ ಇನ್ನೂ ಇರುವುದರ ಕುರಿತು ನಿರಂತರವಾಗಿ ಸರ್ಕಾರದ ಗಮನ ಸೆಳೆದಿದ್ದರಿಂದ ರಾಜ್ಯದ 32 ಸಾವಿರ ಮುಜರಾಯಿ ದೇವಾಲಯಗಳ ಮುಂದೆ ಮುಕ್ತ ಪ್ರವೇಶದ ಕುರಿತುಫಲಕ ಹಾಕಲು ಸರ್ಕಾರ ಸೂಚಿಸಿದೆ. ಈಗಾಗಲೇ ಶಿರಸಿಯಿಂದ ಶ್ರೀನಿವಾಸಪುರದವರೆಗೆ ಫಲಕಗಳು ಕಾಣಿಸುತ್ತಿವೆ.

ಐದು ವರ್ಷಗಳ ಈ ಆಂದೋಲನದಲ್ಲಿ ಎಲ್ಲೂ ಗಲಾಟೆಯಾಗಿಲ್ಲ, ಪೋಲಿಸ್ ಕಂಪ್ಲೇಟ್‌ ಆಗಿಲ್ಲ ಎಂಬುದು ದೊಡ್ಡ ವಿಶೇಷ. ಮನಪರಿವರ್ತನೆಯೇ  ಅಸ್ಪೃಶ್ಯತೆ ನಿವಾರಣೆಗೆ ದಾರಿ ಎಂಬ ಸೂತ್ರ ಅಡೆ ತಡೆಗಳನ್ನೆಲ್ಲ ನಿವಾರಿಸುತ್ತಿದೆ.

ಆಂದೋಲನ ಕೇವಲ ಕೋಲಾರಕ್ಕಷ್ಟೇ ಸೀಮಿತಗೊಳ್ಳದೆ, ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ಪಕ್ಕದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲೂ ನಡೆಯುತ್ತಿದೆ. ಅಲ್ಲಿನ ಜಿಲ್ಲಾಡಳಿತವರೂ ಆಸಕ್ತಿ ತೋರಿದೆ. ತಮಿಳುನಾಡಿದ ಕೃಷ್ಣಗಿರಿ ಜಿಲ್ಲೆಯಲ್ಲೂ ಐದಾರು ಕಡೆ ಶಾಲಾ–ಕಾಲೇಜುಗಳ ವಿದ್ಯಾಥಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಗೃಹಪ್ರವೇಶ ಕಾರ್ಯಕ್ರಮದಲ್ಲಿ ಎಲ್ಲ ಜಾತಿಗಳ ಮುಖಂಡರನ್ನೂ ತೊಡಗಿಸಿಕೊಂಡಿರುವುದರಿಂದಲೇ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿದೆ...

...ಅವರ ಮಾತುಗಳನ್ನು ಕೇಳುತ್ತಿದ್ದರೆ, ಗೋಪಾಲಕೃಷ್ಣ ಅಡಿಗರ, ‘ಅಮೃತವಾಹಿನಿಯೊಂದು ಹರಿಯುತಿದೆ, ಮಾನವನ ಎದೆಯಿಂದ ಎದೆಗೆ ಸತತ’ ಎಂಬ ಸಾಲು ನೆನಪಾಗುತ್ತದೆ. ಅವರನ್ನು ನೆನೆಸಿಕೊಂಡು ವಿಶ್ವಾಸದಿಂದ, ಹೆಮ್ಮೆಯಿಂದ ನಗುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು