ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ರಂಗಭೂಮಿ ಪ್ರತಿಭೆ ಕೋಗಳಿ ಪಂಪಣ್ಣ

Last Updated 2 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಹಳ್ಳಿಗರು ತಮ್ಮ ಪಾಡಿಗೆ ನಾಟಕ ಪ್ರದರ್ಶನ ಮಾಡುತ್ತಿರುತ್ತಾರೆ. ಅದು ಅವರ ಹವ್ಯಾಸ. ನಾಟಕದ ವೆಚ್ಚವನ್ನು ಅವರೇ ಭರಿಸುತ್ತಾರೆ. ಕೆಲವೊಮ್ಮೆ ಅವರದೇ ಊರಿನ ನಾಟಕ ಉಮೇದಿನ ಮಂದಿಯೂ ಖರ್ಚಿನಲ್ಲಿ ಕೈಜೋಡಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳು ಹಣ ನೀಡುತ್ತಾರೆ. ಇದರಿಂದಾಗಿ ಲಕ್ಷಗಟ್ಟಲೆ ವೆಚ್ಚದ ಪೌರಾಣಿಕ, ಹತ್ತಿರತ್ತಿರ ಲಕ್ಷ ವೆಚ್ಚದ ಸಾಮಾಜಿಕ ನಾಟಕಗಳು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಅನೇಕ ಹಳ್ಳಿಗಳಲ್ಲಿ ಅಟ್ಟವೇರುತ್ತವೆ.

ಪಾತ್ರಧಾರಿಗಳ ಪರಿಚಯಸ್ಥರು, ಬೀಗರು ಬಿಜ್ಜರು ನಾಟಕದ ಪ್ರೇಕ್ಷಕ ಪ್ರಭುಗಳಾಗಿರುತ್ತಾರೆ. ಇದರಿಂದ ಅಭಿನಯದ ಗುಣಮಟ್ಟವನ್ನು ಗಣನೆಗೆ ತಂದುಕೊಂಡದ್ದು ಕಡಿಮೆ. ಹೇಗೋ ನಮ್ಮವರು ಬಣ್ಣ ಹಚ್ಚಿಕೊಳ್ಳುತ್ತಾರೆ, ಝಗಮಗಿಸುವ ಮೇಕಪ್ ಮಾಡಿಕೊಂಡು, ಸಂದರ್ಭೋಚಿತವಾಗಿ ಹಾಡುತ್ತ, ನಾಟಕದ ಮಾತುಗಳನ್ನು ಭರ್ಜರಿಯಾಗಿ ಹೇಳುತ್ತಾರೆ ಎನ್ನುವುದಷ್ಟೇ ಅಲ್ಲಿ ಮುಖ್ಯ. ವೃತ್ತಿಪರತೆಯ ಕೊರತೆ ಇಂತಹ ನಾಟಕಗಳಲ್ಲಿ ಎದ್ದುಕಾಣುತ್ತದೆ.

ಆದರೆ, ನಾಟಕವನ್ನು ಕುಶಲವಾಗಿ ಕಟ್ಟಿ ಪ್ರದರ್ಶಿಸುವ ಕಲಾಕಾರರು ರಾಜ್ಯದ ಹಲವೆಡೆ ಇದ್ದಾರೆ. ಅವರೂ ಅದೇ ಹಳ್ಳಿಯ ರೈತರೇ. ಒಂದು ಜಿಲ್ಲಾ ವ್ಯಾಪ್ತಿಯ ಪ್ರದೇಶದಲ್ಲಿ ಇಂತಹ ಮೂರ್ನಾಲ್ಕು ಕಲಾವಿದರಿದ್ದರೆ ಸಾಕು, ಆ ಭಾಗದ ನಾಟಕಗಳು ರಂಗೇರುತ್ತವೆ. ಬಳ್ಳಾರಿ ಭಾಗದ ಹಳ್ಳಿಗಾಡಿನಲ್ಲಿ ನಾಟಕಗಳು ಕಳೆಕಟ್ಟುತ್ತವೆ ಎಂದು ಹೆಸರಾಗಿರುವುದಕ್ಕೆ ಅಲ್ಲಿನ ಗ್ರಾಮೀಣ ಭಾಗದಲ್ಲಿ ನೆಲೆಯೂರಿರುವ ವೃತ್ತಿ ಕಲಾವಿದರು ಹಾಗೂ ಅವರ ಸಹವಾಸ(ದೋಷ)ದಲ್ಲಿರುವ ನಾಲ್ಕಾರು ಮಂದಿ ಇಂತಹ ರೈತರು ಕಾರಣ.

ಅಂತಹವರ ಪೈಕಿ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿಯ ಪಂಪಣ್ಣ ಒಬ್ಬರು. ವೃತ್ತಿಯಲ್ಲಿ ಅವರು ಕೃಷಿಕ. ಆದರೆ, ಅಪ್ಪಟ ಕಲಾವಿದರು. ನಟ, ನಾಟಕಕಾರ, ಸಂಘಟಕ, ನಿರ್ದೇಶಕ ಎಲ್ಲವೂ ಹೌದು. ವೃತ್ತಿನಾಟಕ ಕಂಪನಿಗಳ ಒಡನಾಟ, ಸಂಗೀತ ದಿಗ್ಗಜರ ಸಾಹಚರ್ಯ, ಸಾಹಿತಿಗಳ ಸಂಪರ್ಕದಿಂದ ಅವರೊಬ್ಬ ಉತ್ತಮ ನಟರಾಗಿ ಬೆಳೆದಿದ್ದಾರೆ.

ಪಂಪಣ್ಣ ಓದಿರುವುದು 4ನೇ ತರಗತಿ. ವರ್ಷಕ್ಕೆ ಒಂದೆರಡು ನಾಟಕಗಳು ಊರಲ್ಲಿ ಪ್ರದರ್ಶನ ಕಾಣುತ್ತಿದ್ದವು. ಅವುಗಳಲ್ಲಿ ಅತೀವ ಆಸಕ್ತಿ ತಾಳಿದ್ದ ಉಮಾಪತಿ (ಪಂಪಣ್ಣನವರ ಸ್ವಂತ ಅಣ್ಣ) ಹದಿಹರೆಯದ ಪಂಪಣ್ಣನನ್ನು ಕರೆದೊಯ್ದು 'ನಿರ್ಮಲ', 'ಸೀತಾ ಸ್ವಯಂವರ', 'ಸೋಹಂ', 'ಪ್ರಪಂಚ ಪರೀಕ್ಷೆ' ಮುಂತಾದ ನಾಟಕಗಳ ಸ್ತ್ರೀ ಪಾತ್ರಗಳಿಗೆ ಬಣ್ಣ ಹಚ್ಚಿಸಿದರು. ಅಭಿನಯಿಸುವ ಆಸೆ ಪಂಪಣ್ಣರಲ್ಲಿ ಗರಿಗೆದರಿತು.

ತಮ್ಮೂರಿಗೆ ಹೊಂದಿಕೊಂಡಿರುವ ಚಿಮ್ಮನಹಳ್ಳಿಯಲ್ಲಿ ಪ್ರತಿವರ್ಷ ಮೂರು ದಿನಗಳ ಎತ್ತಿನ ಜಾತ್ರೆ ಭರ್ಜರಿಯಾಗಿ ನಡೆಯುತ್ತಿತ್ತು. ಆ ಜಾತ್ರೆಗೆ ನಾಡಿನ ಹೆಸರಾಂತ ನಾಟಕ ಕಂಪನಿಗಳು ಕ್ಯಾಂಪ್ ಮಾಡುತ್ತಿದ್ದವು. ಕಲಾವಿದರ ವಸತಿ ವ್ಯವಸ್ಥೆ ಕೋಗಳಿಯಲ್ಲೇ ಇರುತ್ತಿತ್ತು. ನಾಕೋಡ, ಬೆಳವಣಿಕೆ, ಬೆಳ್ಳಟ್ಟಿ, ಬ್ಯಾಡಗಿ ಮುಂತಾದ ಕಂಪನಿಗಳ ಕ್ಯಾಂಪ್ ಸಮಯದಲ್ಲಿ ಪ್ರಸಿದ್ಧ ಕಲಾವಿದರ ಆತಿಥ್ಯ ಮಾಡುತ್ತ ಅವರ ಒಡನಾಟವನ್ನು ಪಂಪಣ್ಣ ಬೆಳೆಸಿಕೊಂಡರು. ವೃತ್ತಿ ಕಲಾವಿದರ ಹಾಡು, ಅಭಿನಯದ ವರಸೆಗಳನ್ನು ಸೂಕ್ಷ್ಮವಾಗಿ ಗಮನಿಸಿ ತಮ್ಮಲ್ಲಿ ಆವಾಹಿಸಿಕೊಂಡರು. ನಾರಿಸಾಹಸ, ಬಾಲಚಂದ್ರ, ಸುವರ್ಣ, ಸ್ತ್ರೀರತ್ನ, ರಕ್ತರಾತ್ರಿ, ಹೇಮರೆಡ್ಡಿ ಮಲ್ಲಮ್ಮ ಮುಂತಾದ ನಾಟಕಗಳಲ್ಲಿ ಅರ್ಜುನ ಸಾ ನಾಕೋಡ, ಬಳ್ಳಾರಿ ಸಾವಿತ್ರಿ, ಸುಮತಿ, ಎಲಿವಾಳ ಸಿದ್ದಯ್ಯಸ್ವಾಮಿ ಮುಂತಾದವರ ನಟನಾ ಚತುರತೆಯನ್ನು ಚಿತ್ತವಿಟ್ಟು ಆಲಿಸಿದರು, ವೀಕ್ಷಿಸಿದರು. ನಾನೂ ಇವರ ಮಟ್ಟಕ್ಕೆ ಬೆಳೆಯಬೇಕು ಎಂಬ ಸಂಕಲ್ಪ ಮಾಡಿಕೊಂಡು ಮನೆಯಲ್ಲೇ ನಿರಂತರವಾಗಿ ಅಭ್ಯಾಸ ಮಾಡಿದರು.

ನಟನೆಗೆ ಸಂಗೀತದ ನಿನಾದ

ಕೋಗಳಿ ಪರಿಸರದಲ್ಲಿ ಸಂಗೀತ ನಿನದಿಸುತ್ತಿತ್ತು. 1980ರಲ್ಲಿ ಆರಂಭವಾದ ಶ್ರೀ ಮಾರುತಿ ಭಜನಾಸಂಘ, ಶ್ರೀ ಮಾರುತಿ ನಾಟ್ಯಕಲಾಸಂಘವು ಭಜನೆ, ನಾಟಕಗಳ ಜತೆಗೆ ಸಂಗೀತ ವಿದ್ವಾನ್ ಆಗಿದ್ದ ಸ್ಥಳೀಯ ಕಲಾವಿದ ಜೆ.ಎಂ. ಗುರುಸಿದ್ದಯ್ಯ ಸ್ಮರಣಾರ್ಥ ಪಂಡಿತ ಪಂಚಾಕ್ಷರಿ ಗವಾಯಿ ಪುಣ್ಯತಿಥಿ ಹಮ್ಮಿಕೊಂಡು ಮೂರು ದಿನ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಶುರು ಮಾಡಿತು. ಮುಂದಿನ 20 ವರ್ಷ ಇದು ಯಶಸ್ವಿಯಾಗಿ ನಡೆಯಿತು.

ಈಶ್ವರ ಮೋರಗೇರಿ, ಮದಿರಿ ವೀರಯ್ಯ, ಜುಬೇದಬಾಯಿ ಸವಣೂರು, ಸಿರಿಗೇರಿ ನಾಗನಗೌಡ, ಮದಿರಿ ಮರಿಸ್ವಾಮಿ, ಸುಭದ್ರಮ್ಮ ಮನ್ಸೂರು, ಉಜ್ಜನಿ ಸಿದ್ದಲಿಂಗಪ್ಪ ಮಂತಾದವರು ಸಂಗೀತ ಕಾರ್ಯಕ್ರಮ ನೀಡಿದರು. ಧಾರ್ಮಿಕ, ಸಾಹಿತ್ಯದ ಸಮಾಗಮವೂ ಆಯಿತು. ವಿಶ್ವವಿದ್ಯಾಲಯಗಳ ಪ್ರಸಾರಾಂಗದವರು ಕೋಗಳಿಗೆ ಬಂದು ಉಪನ್ಯಾಸ ಮಾಲಿಕೆಗಳನ್ನು ನೀಡಿದರು. ನಡೆದಾಡುವ ದೇವರು ಎಂದು ಪ್ರತೀತಿಯಾದ ಸಂಗೀತ ನಿಧಿ ಪುಟ್ಟರಾಜ ಗವಾಯಿಗಳಿಗೆ ಕನಕ ಪುರಂದರ ಪ್ರಶಸ್ತಿ ಬಂದಾಗ ಊರವರೆಲ್ಲ ಸೇರಿ ತುಲಾಭಾರ ಮಾಡಿದರು. ಊರಿನ ಈ ಎಲ್ಲ ಪುಣ್ಯದ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಪಂಪಣ್ಣ ಮಂಚೂಣಿಯಲ್ಲಿದ್ದರು.

ಈ ಮಧ್ಯೆ ಕುವೆಂಪು ಅವರ 'ರಾಮಾಯಣ ದರ್ಶನಂ', ಷಡಾಕ್ಷರ ಕವಿಯ 'ರಾಜಶೇಖರ ವಿಳಾಸ' ಹಾಗೂ ಸರಳಗನ್ನಡದಲ್ಲಿ ಲಭ್ಯವಾದ ಮಹಾಭಾರತ ಓದಿಕೊಂಡರು. ಎಂ.ಪಿ. ಕೋಗಿಲೆ ಕಾವ್ಯನಾಮದಲ್ಲಿ ಒಂದು ಕವನ ಸಂಕಲನ ಹೊರತಂದರು. ವೃತ್ತಿ ರಂಗಕಲಾವಿದರ ಒಡನಾಟವಂತೂ ಹರೆಯದಿಂದಲೇ ಇತ್ತು. ಸ್ವತಃ ನಾಟಕ ರಚಿಸುವ ಮಟ್ಟಕ್ಕೆ ಪಂಪಣ್ಣ ಬೆಳೆದರು. ಹಾಡುಗಳನ್ನು ಬರೆದು ರಾಗ ಸಂಯೋಜಿಸಿದರು. ನಾಟಕಗಳನ್ನು ನಿರ್ದೇಶಿಸಿದರು.

ಪಂಪಣ್ಣ ರಚಿಸಿದ 'ಯಾರು ನನ್ನವರು?' ನಾಟಕ ಕೋಗಳಿ ಹಾಗೂ ಪರವೂರುಗಳಲ್ಲಿ ಸೇರಿದಂತೆ ಹತ್ತು ಪ್ರದರ್ಶನ ಕಂಡಿದೆ. ಮುದ್ರಣವಾಗಿದೆ. 'ಇದು ಯಾರ ತಪ್ಪು', 'ಇವನು ನನ್ನ ಗೆಳೆಯನೆ' ಎಂಬ ಅವರ ಇತರ ಎರಡು ನಾಟಕಗಳು ಪ್ರಕಟವಾಗದಿದ್ದರೂ, ಪ್ರದರ್ಶನ ಕಂಡಿವೆ. ಕೀರಣಗಿಯವರ ಪ್ರಸಿದ್ದ ನಾಟಕ 'ಅಣ್ಣ ತಂಗಿ'ಗೆ ಪಂಪಣ್ಣ ರಚಿಸಿದ 'ಈ ರಾಗರಂಗ ನೀ ಹಾಡು ಗಂಗ... ನಾದ ತಾಳ ಸಾಹಿತ್ಯದ ಸಂಗದಿ... ಮನದಿನಿಯನ ತಣಿಸಲು...' ಹಾಡು ಯಮನ್ ರಾಗದಲ್ಲಿ ಪ್ರಸಿದ್ಧಿ ಪಡೆದಿದೆ. ಕಲಾವಿದರು ಈ ಹಾಡನ್ನು ಬೇರೆ ನಾಟಕಕ್ಕೂ ಹಾಡಿದ್ದಾರೆ. ಪಂಪಣ್ಣ ತಮ್ಮದೇ ನಾಟಕಗಳಿಗೆ ರಚಿಸಿದ 'ನೂರಾರು ಬಯಕೆಗಳು ಮನದಲಿ ತುಂಬಿರಲು... ಬರಡಾಯಿತು ನಿನ್ನ ಆಸೆಯ ಹೊನಲು.... ಗುಣಹೀನನಾಗಿರಲು ಹಣ ಅವನ ಬಳಿ ಇರಲು... ಮತಿವಂತನವನೆಂದು ಹಿತದಿ ನುಡಿಯುವರು... ಹಿರಿಗುಣವೆ ತುಂಬಿರಲು ಹಣದಿಂದ ಬರಿದಿರಲು... ಹೆಣದೊಡನೆ ಮಾತೇನು ಎನುತ ಸಾಗುವರು...'; ಮಾಲಕಂಸ ರಾಗದಲ್ಲಿ 'ಬಾ ವೀರ ಹಮ್ಮೀರ... ಓ ಸುಂದರಾ... ತಾರೆಯ ಮಧ್ಯದಿ ಹೊಳೆವ ಚಂದಿರ... ಜಗ್ಗುತಿದೆ ಈ ಯೌವನ ಭಾರ... ನೀಡು ಬಾರ ತೋಳಿನಾಸರ...' ಮುಂತಾಗಿ ಅವರು ರಚಿಸಿದ ಹಾಡುಗಳು ಇತರ ನಾಟಕಗಳಲ್ಲೂ ಖ್ಯಾತವಾಗಿವೆ.

ವೃತ್ತಿ ಕಲಾವಿದರ ನಂಟು

ಎಷ್ಟೇ ಆದರೂ ಹಳ್ಳಿಗಳಲ್ಲಿ ನಾಟಕ ಪ್ರಯೋಗಗಳು ಕಡಿಮೆಯೇ. ಆದರೆ ವೃತ್ತಿ ಕಲಾವಿದರ ನಂಟು ಪಂಪಣ್ಣನವರನ್ನು ಖಾಲಿ ಕೂಡಿಸಲಿಲ್ಲ. ವೃತ್ತಿಯವರು ಹಲವು ರಂಗಯಾತ್ರೆಗಳಲ್ಲಿ ಪಾಲ್ಗೊಂಡಿದ್ದಾರೆ. ಒಮ್ಮೆ ಬಳ್ಳಾರಿಯಿಂದ ಆರಂಭಿಸಿ ಆಳಂದದವರೆಗೆ ಐದು ಜಿಲ್ಲೆಗಳಲ್ಲಿ ನಿರಂತರ ನಾಟಕ ಪ್ರದರ್ಶನ ನೀಡಿದಾಗ ಪಾಲ್ಗೊಂಡು ನಟಿಸಿದರು. ದುರ್ಗಾದಾಸ್, ಎಲಿವಾಳ ಸಿದ್ದಯ್ಯಸ್ವಾಮಿ, ಚಿತ್ರನಟ ಸುಧೀರ್, ವೀಣಾ ಆದವಾನಿ, ಕೂಡ್ಲಿಗಿ ಪದ್ಮಾ, ಮರಿಯಮ್ಮನಹಳ್ಳಿ ನಾಗರತ್ನಮ್ಮ, ಬಳ್ಳಾರಿ ವರಲಕ್ಷ್ಮಿ, ಸರೋಜಮ್ಮ ಧುತ್ತರಗಿ, ಸುಭದ್ರಮ್ಮ ಮನ್ಸೂರು, ಜುಬೇದಾಬಾಯಿ, ಬೆಳಗಲ್ಲು ವೀರಣ್ಣ ಮುಂತಾದ ಪರಿಣತ ಕಲಾವಿದರೊಂದಿಗೆ ಸರಿಸಾಟಿಯಾಗಿ ಅಭಿನಯಿಸುವ ಅವಕಾಶ ಸಿಕ್ಕು ಪಂಪಣ್ಣನವರ ನಟನೆ ಮತ್ತಷ್ಟು ಹೊಳಪು ಪಡೆಯಿತು. ಗಾದಿಗನೂರು ಹಾಲಪ್ಪ, ದಿವಂಗತ ಗೋವಿಂದ, ಬನ್ನಿಗೋಳದ ಗವಿಸಿದ್ದಪ್ಪ, ಯೋಗಾನಂದ, ತಿಮ್ಮನಗೌಡ ಗೆಣಕಿಹಾಳು, ನಾಗರಾಜ ಹಿರೇಕುಂಬಳಗುಂಟಿ, ರಮೇಶಗೌಡ ಪಾಟೀಲ ಅವರೂ ಕೂಡ ವೃತ್ತಿ ಕಲಾವಿದರ ಒಡನಾಟದಲ್ಲಿ ಕೊಪ್ಪಳ, ಬಳ್ಳಾರಿ, ರಾಯಚೂರು, ದಾವಣಗೆರೆ ಜಿಲ್ಲೆಗಳ ಭಾಗದಲ್ಲಿ ಉತ್ತಮ ನಟರಾಗಿ ಬೆಳೆದವರು.

ಮಲ್ಲಮ್ಮ ನಾಟಕದ ವೇಮಣ್ಣ, ಕುರುಕ್ಷೇತ್ರ, ರಕ್ತರಾತ್ರಿ ನಾಟಕಗಳ ದುರ್ಯೋಧನ, ಭೀಮ ಮುಂತಾದ ಪಾತ್ರಗಳಲ್ಲಿ ಆಜಾನುಬಾಹು ಪಂಪಣ್ಣ ದೊಡ್ಡ ಹೆಸರನ್ನೇ ಮಾಡಿದರು. ಮರಿಯಮ್ಮನಹಳ್ಳಿ ಲಲಿತ ಕಲಾರಂಗ ಸಂಘಟಿಸಿದ ಕಲಬುರಗಿ ವಿಭಾಗಮಟ್ಟದ ನಾಟಕ ಸ್ಪರ್ಧೆಯಲ್ಲಿ ಅಂಗೂಲಿಮಾಲ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಬಳ್ಳಾರಿ ರಾಘವ, ಕರ್ನಾಟಕ ನಾಟಕ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಪಂಪಣ್ಣನವರ ನಟನೆಯ ಸೊಗಸಿಗೆ ಮುಡಿಗೇರಿವೆ.

ಸಾಹಿತ್ಯದ ಅರಿವಿನ, ವೃತ್ತಿಯವರ ಒಡನಾಟದ, ಸಂಗೀತಗಾರರ ಗೆಳೆತನ ಇರುವ ಇಂತಹ ಕೃಷಿಕ ಕಲಾವಿದರು ಒಂದು ಜಿಲ್ಲೆಯಲ್ಲಿ ಎಂಟತ್ತು ಮಂದಿ ಇದ್ದರೂ ಆ ಭಾಗದ ನಾಟಕಗಳು ಸೊರಗುವುದಿಲ್ಲ. ಸುತ್ತಲಿನ ಊರುಗಳಲ್ಲಿ ಅವರೇ ಹೋಗಿ ನಾಟಕಗಳನ್ನು ತಿದ್ದುತ್ತಾರೆ. ನಟರ ಕೊರತೆ ಇದ್ದರೆ ತಾವೇ ಅಭಿನಯಿಸಿ ನಾಟಕ ಕಳೆಗಟ್ಟಿಸುತ್ತಾರೆ. ನಾಟಕಗಳಲ್ಲಿ ವೃತ್ತಿಪರತೆ ಮೆರೆಯುತ್ತದೆ. ಅಂತಹವರ ಉತ್ತಮ ಪ್ರಾತಿನಿಧಿಕ ಪ್ರತಿನಿಧಿ ಕೋಗಳಿ ಪಂಪಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT