ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಘಲಾಯಿ ನೆಲದ ಜವಾರಿ ಲೇಖಕಿ ಗೀತಾ

Last Updated 29 ಜೂನ್ 2020, 12:04 IST
ಅಕ್ಷರ ಗಾತ್ರ

‘ಏಯ್ ನಿನ್ ಬಾಯಾಗಾ ಮಣ್ಣ ಹಾಕ್ಲೀ... ನಿನ್ ಕೈಗಿ ಕರಿನಾಗರ ಕಡೀಲಿ.... ನಿನ್ ಹೆಣ್ತಿ ರಂಡಿ ಆಗಲೋ... ನಿನ್ ತೆಲಿಮ್ಯಾಲಿನ ಜುಟ್ಟಾ ಕತ್ತರಸಬೇಕೋ ನನ್ ಹಾಟ್ಯಾ..... ಹೊಡಿತಾನಂತ ನನಗ ಇಂವಾ ಅದೇ ಚಪಲಿ ಕಸಗೊಂಡ ನಿನಗೇ ಹೊಡಿತಿನಿ.....’ ಮಡಿವಂತರು ಮೂಗು ಮುರಿಯುವಂತ ಇಂಥ ತೀರ ರೂಕ್ಷವಾದ ಆದರೆ ಪಕ್ಕಾ ಜವಾರಿ ಬದುಕು ಮತ್ತು ಭಾಷೆಯನ್ನು ದುಡಿಸಿಕೊಂಡ ಲೇಖಕಿ ಎಂದರೆ ಗೀತಾ ನಾಗಭೂಷಣ ಮಾತ್ರ.

ಹೌದು ಇನ್ನೂ ದಲಿತ–ಬಂಡಾಯಗಳು ಎಳಮೆಯಲ್ಲಿ ಕನ್ನಡ ಪರಿಸರದಲ್ಲಿ ಕಾಲೂರುತ್ತಿರುವಾಗಲೇ ಗೀತಾ ಈ ಭಾಗದ ಪಾಳೇಗಾರಿ ಫ್ಯೂಡಲ್ ವ್ಯವಸ್ಥೆಯ ಸಕಲೆಂಟು ಆಯಾಮಗಳನ್ನು ಕಥೆ, ಕಾದಂಬರಿಯಲ್ಲಿ ಹಿಡಿದಿಟ್ಟು ಅಚ್ಚರಿ ಮೂಡಿಸಿದ್ದರು. ಅಸಲಿ ಜೋಪಡಿಪಟ್ಟಿ ಮಂದಿಯ ಬದುಕನ್ನು ಅದಿರುವಂತೆಯೇ ಎತ್ತಿ ಅಕ್ಷರಗಳಲ್ಲಿ ಭಟ್ಟಿ ಇಳಿಸಿದ್ದರು. ಈವರೆಗೂ ಕನ್ನಡದ ಶಿಷ್ಟ ಲೋಕಕ್ಕೆ ಪರಿಚಯವೇ ಇರದ ತಳವರ್ಗದ ದುಡಿಯುವ ಮಂದಿಯ ನೋವು–ನಲಿವು, ಅವರ ಮೇಲಾಗುತ್ತಿದ್ದ ದರ್ಪ, ದಬ್ಬಾಳಿಕೆ, ಕ್ರೌರ್ಯ, ಹಿಂಸೆಗಳನ್ನು ನಿಗಿ ನಿಗಿ ಕೆಂಡದಂಥ ಭಾಷೆಯಲ್ಲಿ ಹಿಡಿದಿಟ್ಟು ಕನ್ನಡ ಸಾಹಿತ್ಯದ ಗ್ರಹಿಕಾ ಕ್ರಮವನ್ನೆ ಬದಲಿಸಿದ್ದರು.

ಹಿಂದುಳಿಸಲ್ಪಟ್ಟಿದ್ದ ಇಂದು ಕಲ್ಯಾಣ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿರುವ ಕಲಬುರ್ಗಿಯ ಬಿರು ಬಿಸಲಿನ ಎರೆಮಣ್ಣಿನ ತೀರ ಬಡ ಹಿಂದುಳಿದ ಕುಟುಂಬದಲ್ಲಿ ಜನಿಸಿದ್ದ ಗೀತಾ, ಸಾಹಿತ್ಯ ಲೋಕದಲ್ಲಿ ಈ ಎತ್ತರಕ್ಕೆ ಬೆಳೆದದ್ದು ಹಗುರು ಮಾತೇನಲ್ಲ. ಎಂ.ಎಸ್.ಕೆ ಮಿಲ್‌ನಲ್ಲಿ ಕೂಲಿ ಕಾರ್ಮಿಕನಾಗಿದ್ದ ಅಪ್ಪ ಅಂದು ಮಗಳಿಗೆ ಸಾಲಿ ಕಲಿಸಲು ಹೈರಾಣಾಗಿದ್ದು ಅಷ್ಟಿಷ್ಟಲ್ಲ. ತಳವಾರ ಹುಡುಗಿಯೊಬ್ಬಳು ಎಸ್ಸೆಸ್ಸೆಲ್ಸಿಪಾಸಾಗಿ ಗೌಡ–ಕುಲಕರ್ಣಿ, ಪುರೋಹಿತರು ಹುಬ್ಬೇರಿಸುವಂತೆ ಮಾಡಿ ಕಾರಕೂನಕಿ ನೌಕರಿ ಮಾಡುವ ಮೊದಲ ಮಹಿಳೆಯಾಗಿದ್ದಳು. ನೌಕರಿ ಮಾಡುತ್ತಲೆ ಬಿ.ಎ, ಬಿಎಡ್ ಮುಗಿಸಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ನಂತರ ಪ್ರಾಚಾರ್ಯರಾಗಿ ಸಂಸಾರಿಕ ಬದುಕಿನಲ್ಲಿ ಹಲವು ಏರಿಳಿತಗಳನ್ನು ಕಂಡರೂ ಧೃತಿಗೆಡದಂತೆ ಬದುಕಿದ್ದ ಇವರಿಗೆ ಬರಹವೇ ಎಲ್ಲ ಅವಘಡಗಳಿಂದ ಬಚಾವ್ ಆಗುವ ಅಸ್ತ್ರವಾಗಿತ್ತು. ಅಷ್ಟೇನು ಹೇಳಿಕೊಳ್ಳುವ ಸಾಹಿತ್ಯಕ ಪರಿಸರವಿಲ್ಲದ ಈ ನಾಡಿನಲ್ಲಿ ಅಕ್ಷರ ಕೈಂಕರ್ಯದ ಒಂಟಿ ಸಲಗವಾಗಿಯೇ ಮುನ್ನಡೆದರು. 1968ರಲ್ಲೇ ‘ತಾವರೆ ಹೂ’ ಮೊದಲ ಕಾದಂಬರಿ ಮೂಲಕ ಕಾಲಿಟ್ಟು 22 ಕಾದಂಬರಿ, 50ಕ್ಕೂ ಮಿಕ್ಕು ಕಥೆಗಳು, 12 ನಾಟಕಗಳು ಒಂದು ಸಂಶೋಧನಾ ಕೃತಿ, ಒಂದು ಸಂಪಾದಿತ ಕೃತಿಗಳನ್ನು ರಚಿಸಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮದೆ ಛಾಪು ಮೂಡಿಸಿದ್ದರು.

ದೊಡ್ಡ ಕುಂಕುಮ, ಗಾಢ ಲಿಫ್‌ಸ್ಟಿಕ್‌, ರೇಷ್ಮೆ ಸೀರೆ, ಅದಕ್ಕೊಪ್ಪುವ ಕುಪ್ಪಸ, ಚಪ್ಪಲಿ ತೊಟ್ಟು ಸೈಕಲ್ ರಿಕ್ಷಾದಲ್ಲಿ ಎದೆ ಸೆಟಿಸಿ ಕುಳಿತು ಬರುವ ತುಂಬು ಕಳೆಯ ಗಟ್ಟಿಗಿತ್ತಿ ಹೆಣ್ಮಗಳು ಯಾರಾದರೂ ಇದ್ದರೆ ಅವರು ಕೇವಲ ಗೀತಾ. ಈ ಮೊಘಲಾಯಿ ಏರಿಯಾದಲ್ಲಿ ಜಮೀನ್ದಾರಿ ವ್ಯವಸ್ಥೆಯ ಹಸಿ ಹಸಿ ಬದುಕನ್ನು ಬೆತ್ತಲೆಗೊಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನೇರಾನೇರ ಬರಹ ಮತ್ತು ತನಗಿಷ್ಟ ಬಂದಂತೆ ಬದುಕು ಕಟ್ಟಿಕೊಂಡದ್ದಕ್ಕಾಗಿಯೇ ಅಂದು ಅವರು ಉಳ್ಳವರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಛಲಗಾರ್ತಿ ಗೀತಾ ಕ್ಯಾರೆ ಅನ್ನಲಿಲ್ಲ. ಅಂತೆಯೇ ಅವರ ‘ದುಮ್ಮಸ್ಸು’, ‘ದಂಗೆ’, ‘ಹಸಿಮಾಂಸ ಮತ್ತು ಹದ್ದುಗಳು’, ‘ಮಾಪೂರತಾಯಿ ಮಕ್ಕಳು’, ‘ನೀಲಗಂಗಾ’, ‘ಬದುಕು’ ಕಾದಂಬರಿಯ ಮಹಿಳೆಯರು ತುಂಬಾ ಗಟ್ಟಿಗಿತ್ತಿಯರಾಗಿ ಮೂಡಿ ನಿಂತಿದ್ದಾರೆ. ದುಮ್ಮಸ್ಸು ಕಾದಂಬರಿಯ ‘ಸೋನಿ’, ದಂಗೆ ಕಾದಂಬರಿಯ ‘ದುರ್ಗಿ’, ಬದುಕು ಕಾದಂಬರಿಯ ‘ಕಾಶಮ್ಮ’ ಇವರು ಕನ್ನಡ ಸಾಹಿತ್ಯಲೋಕದಲ್ಲಿ ಅಚ್ಚಳಿಯದೆ ನಿಂತು ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೆ ಇರುತ್ತಾರೆ. ಇವರುಗಳು ಕನ್ನಡ ಏಕೆ, ಭಾರತದ ಯಾವುದೇ ಪ್ರದೇಶಗಳಲ್ಲಿ ಇರಬಹುದಾದ ಸ್ತ್ರೀರೂಪಗಳಾಗಿ ಗಮನ ಸೆಳೆಯುತ್ತಾರೆ. ದೇವದಾಸಿಯರ ಬದುಕಿನ ನೆಗ್ಗಲು ಮುಳ್ಳುಗಳನ್ನು ಅದೆಷ್ಟು ಹರಿತವಾಗಿ ತೆರೆದಿಟ್ಟರೆಂದರೆ ಅವು ಆ ವ್ಯವಸ್ಥೆಯನ್ನು ನಿರ್ಮಾಣ ಮಾಡಿದವರ ಕಣ್ಣಿಗೆ ನೇರವಾಗಿ ನಾಟುವಂತಿದ್ದವು. ಗೀತಾರಿಗೆ ಬರಹ ಖಯಾಲಿ ಅಲ್ಲ. ತನ್ನ ನಾಡ ದಲಿತ ಲೋಕದ ಅದರಲ್ಲಿಯೂ ಸರ್ವಂದದಲ್ಲೂ ಶೋಷಿತರಾದ ಮಹಿಳೆಯರ ರೋದನವನ್ನು ತೋಡುವ ಪಾತಾಳಗಂಗೆಯಾಗಿತ್ತು.

ಗೀತಾ ಬಳಸಿದ ಜವಾರಿ ಭಾಷೆಯೇ ಅಂದು ಅನೇಕರಲ್ಲಿ ಎದೆ ನಡುಕ ಹುಟ್ಟಿಸಿದ್ದು ಸುಳ್ಳಲ್ಲ. ಅದನ್ನು ತೀರ ಅಶ್ಲೀಲವೆಂದು, ಅಸಹನೀಯ ಎಂದು ಮೂಗು ಮುರಿದವರಿಗೇನೂ ಕಡಿಮೆ ಇಲ್ಲ. ಒಮ್ಮೆ ಕಲಬುರ್ಗಿಯಲ್ಲಿ ಅವರ ಕೃತಿಗಳ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ವಿಮರ್ಶಕರೊಬ್ಬರು ಗೀತಾ ಅವರ ಕೃತಿಗಳಲ್ಲಿ ವಾಸ್ತವ ಇರಬಹುದಾದರೂ ಇಂಥ ಕೃತಿಗಳನ್ನು ಶಾಲಾ, ಕಾಲೇಜುಗಳ ಮಕ್ಕಳಿಗೂ ಬೋಧಿಸುವುದು ತುಂಬಾ ಕಷ್ಟ. ಮುಜುಗರ ಉಂಟು ಮಾಡುತ್ತದೆ ಎಂದು ಟಿಪ್ಪಣಿ ಮಾಡಿದರು. ಎದುರುಗಡೆ ಕುಳಿತಿದ್ದ ಲೇಖಕಿ ‘ಅಯ್ಯೋ ನಿಮಗೆ ಇದನ್ನು ಓದುವುದೇ ಇಷ್ಟ ತ್ರಾಸ ಆಗತಿರಬೇಕಾದರೆ ಅದನ್ನು ಹೂಬಾಹೂಬ್ ಬದುಕಿದ ಜನರ ಸಂಕಟದ ಬಗೆಗೆ ಅರಿವಿದೆಯೇ’ ಎಂದು ಸವಾಲು ಹಾಕಿ ತಮ್ಮ ಬರಹದ ಬಗೆಗಿನ ಬದ್ಧತೆಯನ್ನು ಎತ್ತಿ ಹಿಡಿದಿದ್ದರು. ಮುಂದೆ ಅದೇ ಕೃತಿಗಳಿಗೆ ಹತ್ತಾರು ಪ್ರಶಸ್ತಿಗಳು ಬಂದಾಗ ಮೂಕವಿಸ್ಮಿತರಾದರು.

ಸಾಹಿತ್ಯಕ ಪರಿಸರ, ಗಾಡ್ ಫಾದರ್‌ಗಳ ಆಸರೆ ಇಲ್ಲದೆ ತನ್ನ ಪಾಡಿಗೆ ತಾನು ‘ಕೂಡಲಸಂಗಮದೇವಾ ನಿಮಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂಬಂತೆ ಬರೆದ ಗೀತಾ ಯಾವತ್ತೂ ಪದವಿ, ಪ್ರಶಸ್ತಿಗಳಿಗಾಗಿ ತಲೆ ಕೆಡಿಸಿಕೊಂಡವರಲ್ಲ. ಅದಕ್ಕೇ ಇರಬೇಕು. ಕೇಂದ್ರ ಸಾಹಿತ್ಯ ಅಕಾಡೆಮಿ, ನಾಡೋಜ, ಗೌರವ ಡಾಕ್ಟರೇಟ್, ಅತ್ತಿಮಬ್ಬೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷಗಿರಿ ಇತ್ಯಾದಿ ಪ್ರಶಸ್ತಿ, ಪದವಿಗಳು ಅವರ ಬೆನ್ನು ಹತ್ತಿ ಬಂದವು. ದಟ್ಟ ಖಹಿಸದಿಯ ನಡುವೆ ಥೇಟ್ ಸಜ್ಜೆಯದಂಟಿನಂತೆ ಎದೆ ಸೆಟೆಸಿ ನಿಂತ ಅರ್ಥಪೂರ್ಣ ಪೂರ್ಣ ‘ಬದುಕಿನ’ ಒಡತಿ ಗೀತಾ ಈಗ ಬರೀ ನೆನಪು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT