ಗುರುವಾರ , ಫೆಬ್ರವರಿ 25, 2021
18 °C

ನೀಲಕಂಠನ ಮೂಷಿಕ ಬೇಟೆ

ಕೆ.ಎಸ್.ರಾಜಾರಾಮ್ Updated:

ಅಕ್ಷರ ಗಾತ್ರ : | |

Deccan Herald

ಆಕರ್ಷಕ ಪಕ್ಷಿಗಳಲ್ಲಿ ಒಂದಾದ ನೀಲಕಂಠ ‘ಇಂಡಿಯನ್ ರೊಲರ್’ ಎಂದೇ ಪ್ರಚಲಿತ.  Coracias benghalensis ಎಂಬುದು ಇದರ ವೈಜ್ಞಾನಿಕ ಹೆಸರು. ಭಾರತ, ಇಂಡೋಚೀನಾ, ಏಷಿಯಾದ ಅನೇಕ ಉಷ್ಣ ಪ್ರದೇಶ, ಇರಾಕ್ ಮುಂತಾದೆಲ್ಲಡೆ ಜೀವಿಸುವ ಇವುಗಳ ತಲೆಯ ಮೇಲಣ ಹಾಗೂ ಕೆಳ ಮೈಮೇಲಿನ ಕಡುನೀಲ ವರ್ಣ ಅತ್ಯಂತ ಆಕರ್ಷಕ.

ಹತ್ತು ಇಂಚು ಉದ್ದದ ಇವು, ವಿದ್ಯುತ್, ಟೆಲಿಫೋನ್ ತಂತಿಗಳ ಅಥವಾ ಒಣಮರದ ರೆಂಬೆಯ ತುದಿಯಲ್ಲಿ ಕುಳಿತು ಬೇಟೆಗಾಗಿ ಹೊಂಚುಹಾಕಿ, ನೆಲದ ಮೇಲೆ ಹರಿದಾಡುವ ‘ಗ್ರಾಸ್ ಹಾಪರ್’, ಹುಳ– ಹಪ್ಪಟೆ, ಇಲಿಮರಿ, ಪುಟ್ಟ ಹಾವು, ಇತ್ಯಾದಿಗಳೆಡೆ ಗುರಿಯಿಟ್ಟು ಮೇಲಿನಿಂದ ರಭಸದಿಂದ ಹಾರಿಬಂದು ಚಕ್ಕನೆ ಕೊಕ್ಕಿಗೆ ಸಿಕ್ಕಿಸಿ ಹಾರಿಹೋಗಿ ಒಂದೆಡೆ ಕುಳಿತು ನಿಧಾನವಾಗಿ ಅದನ್ನು ಕೊಕ್ಕಿನಲ್ಲೇ ಹಾರಿಸಿ, ತಿರುಗಿಸಿ ನುಂಗಲು ಹದಮಾಡುವುದು, ಬಲು ಅಕರ್ಷಣೀಯ. ಗಂಡು ಹಕ್ಕಿಯಾದರೆ ತಿರು -ತಿರುಗಿ ಸರ್ಕಸ್ ಮಾದರಿಯಲ್ಲಿ (ಆಕ್ರೋಬ್ಯಾಟಿಕ್) ರೆಕ್ಕೆ ಮಡಚಿ ಸುತ್ತುತ್ತಾ ಧಾವಿಸುವುದುಂಟು.

ಈ ಚಿತ್ರವನ್ನು ತಿಪ್ಪಗೊಂಡನ ಹಳ್ಳಿಯ ಹಸಿರು ಹುಲ್ಲುಗಾವಲು ಪ್ರದೇಶದಲ್ಲಿ ಒಂದು ಮುಂಜಾನೆ ಕ್ಯಾಮೆರಾದಲ್ಲಿ ಸೆರೆಹಿಡಿದಿರುವವರು, ಕೆಂಗೇರಿ ಉಪನಗರದ ಜ್ಞಾನಭಾರತಿ ಬಡಾವಣೆಯ ನಿವಾಸಿ ಮಂಜುನಾಥ ಎನ್‌.ಎಂ. ಅವರು ಟೆಕ್ಸ್ ಟ್ರಾನ್ ಇಂಡಿಯಾ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಡಿಸೈನ್ ಎಂಜಿನಿಯರ್. ಐದು ವರ್ಷಗಳಿಂದ ವನ್ಯಜೀವಿ, ಲ್ಯಾಂಡ್ ಸ್ಕೇಪ್ ಛಾಯಾಗ್ರಹಣದಲ್ಲಿ ಆಸಕ್ತರಾಗಿರುವ ಅವರು ಬಳಸಿದ ಕ್ಯಾಮೆರಾ, ಕೆನಾನ್ 1 ಡಿ ಮಾರ್ಕ್ III, ಜೊತೆಗೆ 150 – 600 ಎಂ.ಎಂ.ಜೂಂ ಲೆನ್ಸ್. ಅವರ ಎಕ್ಸ್ಪೋಷರ್‌ ವಿವರ ಇಂತಿವೆ : 600 ಎಂ.ಎಂ. ಫೋಕಲ್ ಲೆಂಗ್ತ್‌ನ ಜೂಂ, ಅಪರ್ಚರ್ ಎಫ್ 7.1 , ಶಟರ್ ವೇಗ 1/ 2000 ಸೆಕೆಂಡ್ ಹಾಗೂ ಐ.ಎಸ್.ಒ 1600, ಅಳವಡಿಸಲಾಗಿದೆ. ಫ್ಲಾಶ್ ಮತ್ತು ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದಲ್ಲಿನ ಕೆಲವು ತಾಂತ್ರಿಕ ಮತ್ತು ಕಲಾತ್ಮಕ ಅಂಶಗಳ ಅನುಸಂಧಾನವನ್ನು ಈ ಕೆಳಗಿನಂತೆ ಗಮನಿಸಬಹುದು:

* ಆಗಷ್ಟೇ ಬೇಟೆಯನ್ನು ಕೊಕ್ಕಿನಲ್ಲಿ ಕಚ್ಚಿ, ಹಾರಿಬಂದು ಎತ್ತರದ ಮುಳ್ಳಿನ ಮರದ ಮೇಲೆ ಕುಳಿತ ಹಕ್ಕಿಯನ್ನು ದೂರದಿಂದ ತ್ವರಿತವಾಗಿ ಸೆರೆಹಿಡಿಯುವುವಲ್ಲಿ ಛಾಯಾಚಿತ್ರಕಾರರು ಇಲ್ಲಿ ಸಫಲರಾಗಿದ್ದಾರೆ.

* ದೃಶ್ಯಕ್ಕೆ ತಕ್ಕುದಾದ ಚಲನೆಯನ್ನು ಸ್ತಿರಗೊಳಿಸುವ (ಫ್ರೀಜ಼್) ಅತಿ ಹೆಚ್ಚಿನ ಶಟರ್ ವೇಗ, ಮುಖ್ಯ ವಸ್ತುವನ್ನು ಕೇಂದ್ರೀಕರಿಸಿ ಹಿನ್ನೆಲೆಯನ್ನು ಮಂದಗೊಳಿಸಿರುವ ಫೋಕಸ್ಸಿನ ಸಂಕುಚಿತ ಸಂಗಮವಲಯಕ್ಕೆ (ನ್ಯಾರೋ ಡೆಪ್ತ್ ಆಫ್ ಫೀಲ್ಡ್) ಸಹಕಾರಿಯಾದ ಹಿಗ್ಗಿಸಿರುವ ಅಪರ್ಚರ್ ಮತ್ತು ಆ ಎರಡೂ ಎಕ್ಸ್‌ಪೋಷರ್ ಅಂಶಗಳಿಗೆ ಹೊಂದಿಕೊಳ್ಳುವ ಐ.ಎಸ್.ಒ ಅಳವಡಿಸಿರುವುದು ಸೂಕ್ತ. ಇದಕ್ಕೇ ‘ಎಕ್ಸ್‌ಪೋಷರ್‌ ತ್ರಿಕೋನ’ ( ಎಕ್ಸ್ ಪೋಶರ್ ಟ್ರಯಾಂಗಲ್) ಎಂದೂ ಕರೆಯುವುದುಂಟು.

* ಇತರ ಅಂಶಗಳನ್ನು ಗಮನಿಸಿದಾಗ, ಥಟ್ಟನೆ ಕಾಣಿಸುವುದು ಪಕ್ಷಿಯ ಸಹಜವಾದ ದೈನಂದಿನ ತಾಜಾ ಆಹಾರದ ಬೇಟೆಯನ್ನು ಗಿಟ್ಟಿಸಿಕೊಂಡ ಅನುಭವ. ಭಾವನಾತ್ಮಕವಾಗಿ ಕೊಕ್ಕಿನಲ್ಲಿ ಇನ್ನೂ ವಿಲ ವಿಲನೆ ಹೆಣಗಾಡುತ್ತಿರುವ ಆ ಪುಟ್ಟ ಮರಿಯ ಪಾಡು ನೋಡುಗನ ಮನ ಕಲಕದಿರದು. ಅಂತೆಯೇ, ಆಹಾರ- ಸರಪಳಿಯ (ಫುಡ್ ಚೈನ್) ಸೂಕ್ಷ್ಮತೆಯನ್ನೂ, ಅನಿವಾರ್ಯತೆಯನ್ನೂ ಈ ಚಿತ್ರ ಎತ್ತಿ ತೋರಿಸುತ್ತಿದೆ.

* ಕಲಾತ್ಮಕ ಅವಲೋಕನದಲ್ಲಿ, ಮೂರು ಅಂಶಗಳನ್ನು ಉಲ್ಲೇಖಿಸಿ ಛಾಯಾಚಿತ್ರಕಾರರ ಪರಿಣಿತಿಯನ್ನು ದಾಖಲಿಸಬಹುದು. ಮುಖ್ಯವಾಗಿ ಚಲನೆಯನ್ನು ಸೂಸುವ ಓರೆಯಾದ ಚಿತ್ರ ಸಂಯೋಜನೆ (ಡಯಾಗೊನಾಲ್ ಕಾಂಪೋಸಿಷನ್)‌. ನೋಡುಗನ ದೃಷ್ಟಿಯು ಹಕ್ಕಿಯ ಹಿಂಬದಿಯ ರೆಕ್ಕೆಯ ತುದಿಯಿಂದ ಬಿರುಕಣ್ಣು ಬಿಟ್ಟುಕೊಂಡು ಕೊಕ್ಕಿನಲ್ಲಿ ಕಚ್ಚಿಹಿಡಿದ ಬೇಟೆಯವರೆಗೆ ಚೌಕಟ್ಟಿನ ಕೆಳಭಾಗದ ಎಡ ಮೂಲೆಯಿಂದ ಮೇಲ್ಭಾಗದ ಬಲ ಮೂಲೆಯೆಡೆಗೆ ಸಾಗುವಂತಿರುವುದು. ಹಕ್ಕಿಗೆ ಆಧಾರವಾದ ಓರೆಯಾದ ಮುಳ್ಳಿನ ಮರದ ರೆಂಬೆಯೂ ಅದಕ್ಕೆ ಪೂರಕವೇ ಆಗಿದೆ.

* ಮತ್ತೊಂದು ಅಂಶ, ಮುಖ್ಯ ವಸ್ತುವಿನ ಸಮರ್ಪಕವಾದ ಫೋಕಸ್ ಮತ್ತು ಸಹಜವಾದ ಪರಿಸರದ ಹಿನ್ನೆಲೆಯ ಹಸಿರು ಪ್ರದೇಶವೆಂಬುದನ್ನು ತೋರಿಸುವಷ್ಟು ಅಲ್ಲಿನ ಗಿಡ ಮರಗಳನ್ನು ಮಂದಗೊಳಿಸಿರುವುದು (ಔಟ್ ಆಫ್ ಫೋಕಸ್). ಮೂರನೆಯದಾಗಿ, ಇಡೀ ಚಿತ್ರಣವೇ ವರ್ಣಸಾಮರಸ್ಯ (ಟೋನಲ್ ಹಾರ್ಮನಿ) ಹೊಂದಿರುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು