ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹಿನಿ ಪಾಶದಲ್ಲಿ ಮಾಧ್ಯಮ!

Last Updated 19 ಜೂನ್ 2021, 19:30 IST
ಅಕ್ಷರ ಗಾತ್ರ

ಭಾರತದ ಮಾಧ್ಯಮರಂಗ ಹಿಂದೆಂದಿಗಿಂತಲೂ ಆಳವಾದ ಕೆಸರಿನ ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದೆ. ಅದು ತನ್ನನ್ನು ತಾನು ಬಿಡಿಸಿಕೊಳ್ಳಲು ಒದ್ದಾಡಿದಷ್ಟೂ ಮತ್ತಷ್ಟು ಆಳಕ್ಕೆ ಇಳಿಯುತ್ತಲೇ ಇದೆ. ಒಂದು ಕಾಲಕ್ಕೆ ಜನಸ್ನೇಹಿಯಾಗಿದ್ದ ಮಾಧ್ಯಮ ಇಂದು ತನ್ನ ಮೂಲ ಕರ್ತವ್ಯವನ್ನೇ ಮರೆತು ಈ ರೀತಿ ಭಸ್ಮಾಸುರನ ರೂಪ ತಾಳಿದ್ದಾದರೂ ಹೇಗೆ? ಭಾರತೀಯ ಮೂಲದ ಪತ್ರಕರ್ತೆಗೆ ಪುಲಿಟ್ಜರ್‌ ಪ್ರಶಸ್ತಿ ಘೋಷಣೆಯಾಗಿರುವ ಈ ಸಂದರ್ಭದಲ್ಲಿ ಹೀಗೊಂದು ಮಂಥನ...

**

ಬೆಳ್ಳಿಬೆಳಕು, ಇದು ಭರವಸೆಯ ಪ್ರತೀಕ. ಭರವಸೆ ಎಂಬುದು ಇಲ್ಲದೇ ಇದ್ದರೆ ಬದುಕೇ ದುರ್ಬರ. ಕಗ್ಗತ್ತಲಿನ ಮರೆಯಲ್ಲಿಯೂ ಬೆಳಕಿನ ಬೆಳ್ಳಿಗೆರೆಯೊಂದು ಇದ್ದೇ ಇರುತ್ತದೆ; ಮುಚ್ಚಿದ ಕಿಟಕಿಯ ಬಾಗಿಲ ಸಂದಿನ ತೆಳುವಾದ ಬಿರುಕಿನ ಮೂಲಕ ಕಾಣಸಿಗುವ ಕಿರಣದ ಕೋಲಿನಂತೆ. ಪತ್ರಿಕಾ ರಂಗದ ಸಾಧಕರಿಗೆ ದೊರೆಯುವ ಪುಲಿಟ್ಜರ್‌ ಪ್ರಶಸ್ತಿಯೂ ಅಂತಹ ಬೆಳಕಿನ ಬೆಳ್ಳಿಗೆರೆಯೇ ಆಗಿದೆ.

ಭಾರತದ ಮಾಧ್ಯಮರಂಗ ಹಿಂದೆಂದಿಗಿಂತಲೂ ಆಳವಾದ ಕೆಸರಿನ ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದೆ. ಅದು ತನ್ನನ್ನು ತಾನು ಬಿಡಿಸಿಕೊಳ್ಳಲು ಒದ್ದಾಡಿದಷ್ಟೂ ಮತ್ತಷ್ಟು ಆಳಕ್ಕೆ ಇಳಿಯುತ್ತಲಿದೆ. ಇಂತಹ ವಿಕ್ಷಿಪ್ತ ಸನ್ನಿವೇಶದಲ್ಲಿ ಭಾರತೀಯ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಪುಲಿಟ್ಜರ್‌ ಪ್ರಶಸ್ತಿಗೆ ಪಾತ್ರರಾಗಿರುವ ಸುದ್ದಿ ಬಂದಿದೆ. ಚೀನಾ ದೇಶದಲ್ಲಿ ದಸ್ತಗಿರಿ ಮಾಡಲ್ಪಟ್ಟ ಮುಸ್ಲಿಮರ ಸ್ಥಿತಿಗತಿಗಳನ್ನು ತೆರೆದಿಡುವ ತನಿಖಾ ವರದಿಗಾಗಿ ಅವರಿಗೆ ಪ್ರಶಸ್ತಿ ಒಲಿದಿದೆ. ಚೀನಾದ ಒತ್ತಡ ತಂತ್ರಕ್ಕೆ ಮಣಿಯದೇ ವರದಿ ಸಿದ್ಧಪಡಿಸುವಲ್ಲಿ ಅವರು ಮಾಡಿದ ಪ್ರಯತ್ನ ಪತ್ರಕರ್ತರಿಗೆಲ್ಲ ಮಾದರಿ.

ಭಾರತದ ಮಾಧ್ಯಮರಂಗ -ಮುದ್ರಣ ಮತ್ತು ವಿದ್ಯುನ್ಮಾನ- ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿರುವುದು ಕೇವಲ ಎರಡೂವರೆ ದಶಕಗಳ ಕಥೆಯೇನೂ ಅಲ್ಲ. ಅದಕ್ಕೂ ಮೊದಲಿನಿಂದಲೂ ಒದ್ದಾಡುವ ಪ್ರಕ್ರಿಯೆ ನಡೆಯುತ್ತಲೇ ಇದೆ. ವ್ಯತ್ಯಾಸವೇನೆಂದರೆ ಆಗೆಲ್ಲ ಪತ್ರಕರ್ತರು ಮಾತ್ರ ಆ ಕೆಸರಿನಲ್ಲಿ ಸಿಕ್ಕಿಕೊಂಡಿರುತ್ತಿದ್ದರು. ಇಂದು ಇಡೀ ಮಾಧ್ಯಮರಂಗವೇ ಅದರಲ್ಲಿ ಸಿಲುಕಿಕೊಂಡು ಬಿಡಿಸಿಕೊಳ್ಳಲು ಕೊಸರಾಡ ಬಯಸದೇ ಆನಂದಾತಿಶಯವನ್ನು ಅನುಭವಿಸುತ್ತಿದೆ.

ಹಿಂದೆಲ್ಲ ಕೆಸರಿನಲ್ಲಿ ಸಿಲುಕಿಕೊಳ್ಳುವುದು ತೀರಾ ವೈಯಕ್ತಿಕವಾಗಿರುತ್ತಿತ್ತು. ಅದಕ್ಕಿದ್ದ ಕಾರಣಗಳಲ್ಲಿ ಆರ್ಥಿಕ, ಕೌಟುಂಬಿಕ, ಚಟದಾಸ್ಯ ಪ್ರಮುಖವಾಗಿದ್ದವು. ಇದರಿಂದ ಮಾಧ್ಯಮರಂಗದ ಮೇಲೆ ಅಂತಹ ಭಯಂಕರ ಪರಿಣಾಮವೇನೂ ಆಗುತ್ತಿರಲಿಲ್ಲ. ಆದರೆ, ಇಂದು ಇಡೀ ಮಾಧ್ಯಮ ವ್ಯವಸ್ಥೆಯೇ ಕೆಸರಿನ ಗುಂಡಿಯಲ್ಲಿ ಬಿದ್ದಿರುವುದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಭೀಕರ ಪರಿಣಾಮವನ್ನು ಎದುರಿಸಬೇಕಾಗಿದೆ. ಇದಕ್ಕೆ ಕಳೆದ ಒಂದೂವರೆ ವರ್ಷದಲ್ಲಿ ಮುಂಚೂಣಿ ಮಾಧ್ಯಮ ಸಂಸ್ಥೆಗಳು -ಅಪವಾದ ಹೊರತುಪಡಿಸಿ- ಎಸಗಿದ ಅವಾಂತರಗಳಿಂದಾಗಿ ಬಹುದೊಡ್ಡ ಸಮೂಹವೊಂದು ತುತ್ತು ಅನ್ನಕ್ಕೂ ತತ್ವಾರಪಡಬೇಕಾದ ಸ್ಥಿತಿಗೆ ಸಿಲುಕಿ ಒದ್ದಾಡಿದ್ದೇ ದೊಡ್ಡ ಉದಾಹರಣೆ (ಆ ಪ್ರಮಾದಕ್ಕಾಗಿ ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ ಈಗ ಕೆಲವು ಚಾನೆಲ್‌ಗಳಿಗೆ ದಂಡ ವಿಧಿಸಿದೆ). ಈ ಸಮೂಹದ ಒದ್ದಾಟ ಮುಂಚೂಣಿ ಮಾಧ್ಯಮಗಳ ಕಣ್ಣು, ಕಿವಿಗಳಿಗೆ ಬೀಳಲೇ ಇಲ್ಲ. ಬಿದ್ದರೂ ತನ್ನ ಕೆಸರಿನ ಗುಂಡಿ ವಾಸದ ಪರಿಣಾಮವಾಗಿ ಅವಕ್ಕೆ ಜಾಣಕುರುಡು, ಕಿವುಡು ಆಕ್ರಮಿಸಿಬಿಟ್ಟಿತ್ತು.

ಯಾವಾಗ ಮಾಧ್ಯಮರಂಗಕ್ಕೂ ವಿದೇಶಿ ನೇರ ಬಂಡವಾಳ (ಪ್ರತ್ಯಕ್ಷ, ಪರೋಕ್ಷ) ಹಾಗೂ ಪ್ರಮುಖ ಉದ್ಯಮಿಗಳ ಹೂಡಿಕೆ ಆರಂಭವಾಯಿತೋ ಆಗಿನಿಂದಲೇ ಅದರ ಕೆಸರಿನ ಗುಂಡಿಯ ವಾಸದ ಸಮಯವೂ ಆರಂಭವಾಯಿತು ಎಂದು ಅಂದಾಜಿಸಬಹುದು. ವಿದೇಶಿ ಬಂಡವಾಳ ಮಾಧ್ಯಮರಂಗದಲ್ಲಿ ತೊಡಗಿಸಲ್ಪಟ್ಟರೆ ಇಂಥದೊಂದು ಸ್ಥಿತಿ ಬಂದೇ ಬರುತ್ತದೆ ಎಂದು ಅನೇಕ ಹಿರಿಯ ಪತ್ರಕರ್ತರಿಗೆ ಆಗಲೇ ಗೋಚರಿಸಿತ್ತು. ಅದನ್ನು ಅವರು ಅಂತರಂಗದಲ್ಲಿ, ಬಹಿರಂಗದಲ್ಲಿ ಹೇಳಿದ್ದರು ಕೂಡ. ಆದರೆ, ಅದನ್ನು ಕೇಳಿಸಿಕೊಳ್ಳುವ, ಎದುರಾಗಬಹುದಾದ ಪರಿಣಾಮಗಳ ಬಗೆಗೆ ಗಂಭೀರವಾಗಿ ಚರ್ಚಿಸುವ ಪ್ರಯತ್ನ ಮಾಡಿದವರೇ ಇಲ್ಲ.

ಇದಕ್ಕೊಂದು ಉದಾಹರಣೆ ‘ದಿ ಹಿಂದೂ’ ಪತ್ರಿಕೆಯ ಎನ್. ರಾಮ್ ಅವರ ಮಾತು -ಅದು 1997-98ನೇ ಇಸವಿ. ಏಷ್ಯನ್‌ ಸ್ಕೂಲ್ ಆಫ್ ಜರ್ನಲಿಸಂನ ಘಟಿಕೋತ್ಸವ ಬೆಂಗಳೂರಿನಲ್ಲಿ ನಡೆದಿತ್ತು. ಆ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿಯಾಗಿದ್ದರು. ಅಲ್ಲಿ ಅವರು ಮಾತನಾಡುತ್ತ- ಭಾರತ ಸರ್ಕಾರ ಮಾಧ್ಯಮರಂಗಕ್ಕೂ ವಿದೇಶಿ ನೇರ ಬಂಡವಾಳ ಆಹ್ವಾನಿಸುತ್ತಿದೆ. ವಿದೇಶಿ ಬಂಡವಾಳ ತನ್ನೊಂದಿಗೆ ಹಣವನ್ನಷ್ಟೇ ತರುವುದಿಲ್ಲ, ಅದು ಇಲ್ಲಿನ ಸಂಸ್ಕೃತಿ ನಾಶ ಮಾಡಬಲ್ಲ ಶಕ್ತಿಗಳನ್ನೂ ತರುತ್ತದೆ. ಆದುದರಿಂದ ಭಾರತೀಯ ಮಾಧ್ಯಮರಂಗ ವಿದೇಶಿ ನೇರ ಬಂಡವಾಳವನ್ನು ವಿರೋಧಿಸಬೇಕು ಇಲ್ಲವೇ ದೇಶದೊಳಕ್ಕೆ ಪ್ರವೇಶಿಸಿದ ಶಕ್ತಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂಬರ್ಥದ ಮಾತುಗಳನ್ನು ಹೇಳಿದ್ದರು. ಅವರ ಅಂದಿನ ಅನುಮಾನ ಇಂದು ವಾಸ್ತವವಾಗಿದೆ.

ಕೆಸರಿನ ಗುಂಡಿಗೆ ಬೀಳುವುದಕ್ಕೆ ಸಂಬಂಧಿಸಿದಂತೆ ಇದು ಒಂದು ಕಾರಣವಾದರೆ ಜನರ ಧ್ವನಿಯಾಗಿದ್ದ ಮಾಧ್ಯಮರಂಗ ಹಣದ ಹರಿವಿನ ಕಾರಣದಿಂದಾಗಿ ಮಾಧ್ಯಮೋದ್ಯಮವಾಗಿ ಬದಲಾದುದು ಮತ್ತೊಂದು ಕಾರಣ. ಹಣದ ಹರಿವು ಆರಂಭವಾದ ಸಂದರ್ಭದಲ್ಲಿ ಈ ರಂಗದಲ್ಲಿದ್ದ ಅನೇಕರು ಖುಷಿಪಟ್ಟಿದ್ದುಂಟು. ಇದಕ್ಕೆ ಕಾರಣವೂ ಇತ್ತು. ಹಿಂದೆಂದೂ ಈ ಪ್ರಮಾಣದ ಹಣದ ಹರಿವನ್ನು ಮಾಧ್ಯಮ ಕಂಡಿರಲಿಲ್ಲ. ಎಲ್ಲಿಯವರೆಗೆ ಮಾಧ್ಯಮ ‘ರಂಗ’ವಾಗಿತ್ತೋ ಅಲ್ಲಿಯವರೆಗೆ ಜನರ ನೋವಿಗೆ ಮಿಡಿವ ಸಜ್ಜಿಕೆಯಂತಿತ್ತು, ಮಿತ್ರನಾಗಿತ್ತು. ಮಾಧ್ಯಮ ‘ಉದ್ಯಮ’ ಆಗುತ್ತಿದ್ದಂತೆಯೇ ಕಾಂಚಾಣದ ಝಣತ್ಕಾರ ಥಕಥೈ ಎಂದು ರಾಕ್ಷಸ ಕುಣಿತ ಆರಂಭಿಸಿತು. ಅದರ ಫಲವಾಗಿ ಹಣವಿದ್ದವರ ಕೈಗೊಂಬೆಯಾಗುವ, ಆಡಳಿತಗಾರರನ್ನು ತಂದು ಕೂರಿಸುವ, ಕೈಗೊಂಬೆಯಾಗದವರ ಅಧಿಕಾರಕ್ಕೆ ಸಂಚಕಾರ ತರುವ ಪ್ರವೃತ್ತಿ ಮಾಧ್ಯಮೋದ್ಯಮದಲ್ಲಿ ಆರಂಭವಾಯಿತು.

ಮಾಧ್ಯಮವನ್ನು ಬಳಸಿಕೊಂಡು ತನ್ನಿಚ್ಛೆಯಂತೆ ಇತರರನ್ನು ಕುಣಿಸಲು ಪ್ರಯತ್ನಿಸುವ ಮಾಧ್ಯಮೋದ್ಯಮಿ ರುಪರ್ಟ್ ಮುರ್ದೋಕ್ ಪ್ರತಿರೂಪಗಳು ಭಾರತದಲ್ಲೂ ತಲೆ ಎತ್ತಿದವು. ಇದರ ಢಾಳುಢಾಳಾದ ಚಿತ್ರಗಳು ಇಂದು ದೇಶದ ಎಲ್ಲೆಡೆ ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿ ಗೋಚರಿಸುತ್ತಿವೆ. ಅದು ಮುದ್ರಣ ಮಾಧ್ಯಮದಲ್ಲೂ ವಿಭಿನ್ನ ರೂಪದಲ್ಲಿ ಅವತರಿಸಿದೆ. ಪರಿಣಾಮವಾಗಿ ಸುದ್ದಿ ರೂಪದ ಜಾಹೀರಾತುಗಳು, ಕಾಸಿಗಾಗಿ ಸುದ್ದಿಗಳು ಪುಟಗಳನ್ನು ಆಕ್ರಮಿಸಿ ಕುಳಿತಿವೆ. ಒಂದು ಕಾಲಕ್ಕೆ ಸಮಾಜದಲ್ಲಿ ಗೌರವ, ಹೆಮ್ಮೆಗಳನ್ನು ಗಳಿಸಿದ್ದ ಮಾಧ್ಯಮರಂಗ ಇದರಿಂದಾಗಿಯೇ ಇಂದು ಜನರ ಕಣ್ಣಿನಲ್ಲಿ ಭಯೋತ್ಪಾದಕನಾಗಿಯೋ, ಕಾಸು ಇದ್ದವರ ತಾಳಕ್ಕೆ ತಕ್ಕಂತೆ ಕುಣಿಯುವ ಕರಡಿಯಂತೆಯೋ ಗೋಚರಿಸತೊಡಗಿದೆ.

ಕಳೆದೊಂದು ವರ್ಷದಲ್ಲಿ ಸತ್ಯಕ್ಕೆ ಸಮೀಪವಾದ ಸುದ್ದಿಗಳನ್ನು ಬಿತ್ತರಿಸುವವರ ವಿರುದ್ಧ ‘ರಣಹದ್ದುಗಳು’ ಎಂಬ ಉಪಮೆ ಬಳಸುವುದನ್ನು ನೀವು ಗಮನಿಸಿರಬಹುದು. ಇದಕ್ಕೊಂದು ಹಿನ್ನೆಲೆ ಇದೆ. 1992ರಲ್ಲಿ ಸುಡಾನ್ ದೇಶದ ಭೀಕರ ಕ್ಷಾಮದ ಸಮಯದಲ್ಲಿ ಗಂಜಿ ಕೇಂದ್ರದ ಸಮೀಪ ಪುಟ್ಟ ಹುಡುಗಿಯೊಬ್ಬಳು ತೆವಳಲೂ ಆಗದ ಸ್ಥಿತಿಯಲ್ಲಿ ನೆಲಕ್ಕೆ ತಲೆಯೂರಿ ಕುಳಿತಿದ್ದು, ಅವಳ ಸಾವಿನ ನಿರೀಕ್ಷೆಯಲ್ಲಿಯೇ ಕುಳಿತ ರಣಹದ್ದಿನ ಚಿತ್ರವನ್ನು ಕ್ಲಿಕ್ಕಿಸಿದ ಕೆವಿನ್ ಕಾರ್ಟರ್‌ಗೆ ಪುಲಿಟ್ಸರ್ ಪ್ರಶಸ್ತಿ ದೊರೆತಿತ್ತು. ಆದರೆ, ಪ್ರಶಸ್ತಿ ಗಳಿಸಿದ ಕೆವಿನ್‌ಗೆ ಕ್ಷಾಮದ ದಾರುಣ ನೆನಪುಗಳಿಂದ ಕಳಚಿಕೊಳ್ಳುವುದು ಸಾಧ್ಯವೇ ಆಗಲಿಲ್ಲ. ಅವರಿಗೆ ಖಿನ್ನತೆ ಅವರಿಸಿತು. ಇದರಿಂದ ಹೊರಬರಲಾಗದೇ ಅದೇ ವರ್ಷ ಕೆವಿನ್ ಆತ್ಮಹತ್ಯೆ ಮಾಡಿಕೊಂಡರು. ಇದೇ ವಿಷಯವನ್ನು ಆಧರಿಸಿ ಛಾಯಾಚಿತ್ರದಲ್ಲಿನ ರಣಹದ್ದನ್ನೇ ಗಮನದಲ್ಲಿ ಇಟ್ಟುಕೊಂಡು, ಸತ್ಯಕ್ಕೆ ಸಮೀಪವಾದುದನ್ನು ಹೇಳಲು ಪ್ರಯತ್ನಿಸಿದವರನ್ನೆಲ್ಲ ರಣಹದ್ದುಗಳಿಗೆ ಹೋಲಿಸಿ ಹೀಯಾಳಿಸತೊಡಗಿತು ಆಡಳಿತದಲ್ಲಿರುವ ರಾಜಕೀಯ ಪಕ್ಷ. ಆ ಪಕ್ಷದ ವಕ್ತಾರರು ಹೀಯಾಳಿಸಿ ಮಾತನಾಡುವುದಕ್ಕೆ ಪ್ರಾಶಸ್ತ್ಯ ನೀಡಿ ವೀಕ್ಷಕರಿಗೆ ತೋರಿಸುವುದೂ ನಡೆಯಿತು. ಆ ಮೂಲಕ ಭಾರತೀಯ ಪತ್ರಕರ್ತರನ್ನು ಮಧ್ಯದಲ್ಲಿ ಇಟ್ಟುಕೊಂಡು ಕೆವಿನ್ ಕಾರ್ಟರ್‌ರ ಚಾರಿತ್ರ್ಯಹನನಕ್ಕೂ ಪ್ರಯತ್ನಿಸಲಾಯಿತು ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ.

ಸುದ್ದಿಯಲ್ಲದ ವಿಷಯ ಸುದ್ದಿ ರೂಪ ತಾಳಿ ಬಂದುದನ್ನು ಕಂಡಾಗ ಸಂಪಾದಕರೊಬ್ಬರು ಹೇಳುತ್ತಿದ್ದುದೇನೆಂದರೆ- ಓದುಗರಿಗೆ ಬೇಕಾದುದನ್ನು ಪತ್ರಿಕೆಗಳು (ಇದನ್ನು ನೋಡುಗರು, ಟಿವಿ ವಾಹಿನಿಗಳು ಎಂದೂ ಬದಲಾಯಿಸಿಕೊಳ್ಳಬಹುದು) ಕೊಡಬೇಕು. ನಮಗೆ ತಿಳಿಯಿತು ಎಂದು ಇಲ್ಲಸಲ್ಲದುದನ್ನೆಲ್ಲ ಪುಟಗಳಲ್ಲಿ (ಟಿವಿ ಪರದೆಯಲ್ಲಿ) ತುರುಕುವುದಲ್ಲ. ಇಷ್ಟು ಮಾತ್ರವಲ್ಲ ಓದುಗರನ್ನು ಬುದ್ಧಿಗೇಡಿಗಳು, ದಡ್ಡರು, ತಿಳಿಗೇಡಿಗಳು, ಹೆಡ್ಡರು, ಪೆದ್ದರು ಎಂದು ಯಾವತ್ತೂ ಭಾವಿಸಬಾರದು. ಅವರಿಗೂ ಪ್ರಕಟಗೊಂಡ ಸುದ್ದಿಗಳಿಗೆ ಸಂಬಂಧಿಸಿದಂತೆ ಚಿಂತನೆ ನಡೆಸುವ, ನಿಲುವುಗಳನ್ನು ತಳೆಯುವ ಅವಕಾಶ ಕಲ್ಪಿಸಬೇಕು. ಏಕೆಂದರೆ, ಓದುಗರು ನಮಗಿಂತ ಹೆಚ್ಚು ತಿಳಿದವರೋ ಇಲ್ಲವೇ ಕಡಿಮೆ ತಿಳಿವಳಿಕೆಯವರೋ ಆಗಿದ್ದಿರಲಿಕ್ಕೂ ಸಾಕು. ಅವರು ಅವರವರ ಮಟ್ಟಕ್ಕೆ ತಕ್ಕಂತೆ ಸುದ್ದಿಗಳಿಗೆ ಸಂಬಂಧಿಸಿ ಚಿಂತನೆ ನಡೆಸುವವರೇ ಆಗಿರಬಹುದು. ಪತ್ರಿಕೆಯಲ್ಲಿ ದುಡಿಯುವ ಅವಕಾಶ ನಮಗೆ ಸಿಕ್ಕಂತೆ ಅವರಿಗೆ ಸಿಕ್ಕಿರಲಿಕ್ಕಿಲ್ಲ ಅಥವಾ ನಾವು ಬರೆದಷ್ಟು ಅಚ್ಚುಕಟ್ಟಾಗಿ ಬರೆಯಲು ಇಲ್ಲವೇ ಹೇಳಲು ಅವರಿಗೆ ಬಾರದೇ ಇರಬಹುದು ಅಷ್ಟೆ ಎಂಬುದಾಗಿತ್ತು.

ಇದೇ ಮಾತನ್ನು ಇಂದು ನಾವು ‘ಓದುಗರು’ ಎಂಬ ಸ್ಥಾನದಲ್ಲಿ ‘ನೋಡುಗರು’ ಎಂದು ಬದಲಾಯಿಸಿಕೊಂಡು ಪರಾಮರ್ಶಿಸಿದಲ್ಲಿ ಮಾಧ್ಯಮೋದ್ಯಮ ಜನರ ಮೇಲೆ ಹೇಗೆ ಸವಾರಿ ಮಾಡುತ್ತಲಿದೆ ಎಂಬುದು ತಿಳಿವಿಗೆ ಬರಬಲ್ಲದು.

ಕಳೆದೊಂದು ವರ್ಷದ ಕೊರೊನಾ ಕಾಲದಲ್ಲಂತೂ ಟಿವಿ ವಾಹಿನಿಗಳು ಜನರಿಗೆ ವೈದ್ಯಕೀಯ ಮಾಹಿತಿ ಕೊಟ್ಟಿದ್ದಕ್ಕಿಂತ ಅವರನ್ನು ಹೆದರಿಸಿ ನಿಯಂತ್ರಿಸಿದ್ದೇ ಹೆಚ್ಚು. ಇದರ ಪರಿಣಾಮವಾಗಿ ಅನೇಕರು ಸುದ್ದಿವಾಹಿನಿಗಳನ್ನು ನೋಡುವುದನ್ನೇ ನಿಲ್ಲಿಸಿದ್ದುಂಟು. ಆದರೆ, ತಮ್ಮ ಕೆಟ್ಟ ಚಾಳಿಯನ್ನು ಮಾತ್ರ ಎರಡನೇ ಅಲೆಯ ನಂತರವೂ ಕೆಲವು ವಾಹಿನಿಗಳು ನಿಲ್ಲಿಸಿಲ್ಲ ಎಂಬುದೂ ಅಷ್ಟೇ ಸತ್ಯ. ಇದನ್ನು ಅವಲೋಕಿಸಿದರೆ ಜನರಿಗೆ ಸಮಗ್ರ ಮಾಹಿತಿ ಒದಗಿಸಿ ತಿಳಿವಳಿಕೆ ಉಳ್ಳವರನ್ನಾಗಿ ಮಾಡಬೇಕೆಂಬ ಉದ್ದೇಶ ಮತ್ತು ಗುರಿಯೇ ಇವಕ್ಕೆ ಇದ್ದಂತೆ ಕಾಣುವುದಿಲ್ಲ.

ಪತ್ರಕರ್ತ ಗಾಂಧಿ ಪತ್ರಿಕಾ ಕಾರ್ಯಗಳಿಗೆ ಸಂಬಂಧಿಸಿದಂತೆ ತಮ್ಮ ಆತ್ಮಕಥೆಯಲ್ಲಿ ಬರೆದಿರುವ ಕೆಲವು ಮಾತುಗಳೇನೆಂದರೆ- ‘ಯೋಚನೆ ಮಾಡದೆ, ವಿಚಾರ ಮಾಡದೆ ಬರೆದ ಒಂದು ಮಾತಾಗಲೀ, ಉದ್ದೇಶಪೂರ್ವಕವಾದ ಅತಿಶಯೋಕ್ತಿಯಾಗಲೀ ಅಥವಾ ಸುಮ್ಮನೆ ಯಾರನ್ನಾದರೂ ಸಂತೋಷಪಡಿಸುವುದಕ್ಕಾಗಲೀ ಯಾವುದನ್ನೂ ಬರೆದುದು ನೆನಪಿಲ್ಲ. ನನಗೆ ಮಾನವ ಸ್ವಭಾವದ ಬೇರೆ ಬೇರೆ ಮಾದರಿಗಳನ್ನೂ ಛಾಯೆಗಳನ್ನೂ ಅಭ್ಯಸಿಸುವ ಒಂದು ಸಾಧನವಾಯಿತು ಇಂಡಿಯನ್ ಒಪೀನಿಯನ್ ಪತ್ರಿಕೆ. ವೃತ್ತ ಪತ್ರಿಕೆ ಒಂದು ದೊಡ್ಡ ಶಕ್ತಿ. ಹತೋಟಿ ಹೊರಗಿನದಾದರೆ ಹತೋಟಿ ಇಲ್ಲದಿರುವುದಕ್ಕಿಂತ ಹೆಚ್ಚು ಅಪಾಯವಾಗುತ್ತದೆ. ಅಂಕುಶ ಒಳಗಿನಿಂದ ಬಂದಾಗ ಮಾತ್ರ ಲಾಭದಾಯಕ ಆಗಬಲ್ಲದು. ಈ ವಿಚಾರ ಸರಣಿ ಸರಿಯಾದುದಾದರೆ ಪ್ರಪಂಚದಲ್ಲಿ ಎಷ್ಟು ಪತ್ರಿಕೆಗಳು (ಇಂದು ಟಿವಿ ವಾಹಿನಿಗಳನ್ನೂ ಸೇರಿಸಬಹುದು –ಲೇಖಕ) ಈ ಪರೀಕ್ಷೆಯಲ್ಲಿ ತೇರ್ಗಡೆ ಆಗಬಲ್ಲವು? ಒಳ್ಳೆಯದು ಮತ್ತು ಕೆಟ್ಟದ್ದು ಇರುವಂತೆ ಪ್ರಯೋಜನಕರವೂ ಅಪ್ರಯೋಜಕವೂ ಆದದ್ದು ಒಟ್ಟಿಗೇ ಇರುತ್ತವೆ. ಇವುಗಳಲ್ಲಿ ಮನುಷ್ಯ ತನಗೆ ಬೇಕಾದುದನ್ನು ಆರಿಸಿಕೊಳ್ಳಬೇಕು’ ಎನ್ನುತ್ತಾರೆ.

ಒಂದು ಸಂದರ್ಭದಲ್ಲಿ ಜನಸ್ನೇಹಿಯಾಗಿದ್ದ ಮಾಧ್ಯಮ ಇಂದು ತನ್ನ ಮೂಲ ಕರ್ತವ್ಯವನ್ನು ಮರೆತು ಭಸ್ಮಾಸುರನ ರೂಪ ತಾಳಿದ್ದು, ಇತರರ ತಲೆಯ ಮೇಲೆ ಕೈಯಿಟ್ಟು ಇನ್ನಿಲ್ಲವಾಗಿಸುವ ಮಾರ್ಗದಲ್ಲಿ ನಡೆದಿದೆ. ಇದು ಇನ್ನೂ ಎಷ್ಟು ದಿನ ನಡೆಯುತ್ತದೋ ಕಾಯ್ದು ನೋಡುವುದೊಂದೇ ಜನರ ಪಾಲಿಗೆ ಉಳಿದಿರುವ ಮಾರ್ಗ ಎನ್ನಿಸುತ್ತದೆ.

ಮೇಘಾ ರಾಜಗೋಪಾಲನ್‌
ಮೇಘಾ ರಾಜಗೋಪಾಲನ್‌

ಚೀನಾ ಸರಹದ್ದಿನಲ್ಲಿ ಮೇಘಾ ಸಾಹಸ
ದಸ್ತಗಿರಿ ಮಾಡಲ್ಪಟ್ಟು ಬಂದೀಖಾನೆಯಲ್ಲಿ ಇರಿಸಲ್ಪಟ್ಟಿರುವ ಮುಸ್ಲಿಮರ ಸ್ಥಿತಿಗತಿ ಕುರಿತ ತನಿಖಾ ವರದಿಯನ್ನು ‘ಬಝ್‍ಫೀಡ್‍ ನ್ಯೂಸ್’ಗಾಗಿ ಸಿದ್ಧಪಡಿಸುವಲ್ಲಿ ಮೇಘಾ ರಾಜಗೋಪಾಲನ್‌ ನಿರತರಾಗಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆ ಅವರ ವೀಸಾವನ್ನು ರದ್ದುಪಡಿಸಿದ ಚೀನಾ, ದೇಶದಿಂದ ಹೊರಗೆ ಕಳುಹಿಸಿತು. ಆದರೆ, ಅವರು ಪ್ರಯತ್ನವನ್ನು ನಿಲ್ಲಿಸಲಿಲ್ಲ. ಚೀನಾದ ಷಿನ್‍ಜಿಯಾಂಗ್ ಪ್ರಾಂತ್ಯಕ್ಕೆ ಹೊಂದಿಕೊಂಡ ಕಜಕಸ್ತಾನ ದೇಶದಲ್ಲಿ ಆಶ್ರಯ ಪಡೆದಿರುವ ಮುಸ್ಲಿಮರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದರು. ಇಷ್ಟು ಮಾತ್ರವಲ್ಲ, ವಾಸ್ತುಶಿಲ್ಪಗಳು ಮತ್ತು ಉಪಗ್ರಹ ಚಿತ್ರಗಳನ್ನು ವಿಜ್ಞಾನ ಶಾಸ್ತ್ರೀಯವಾಗಿ ವಿಶ್ಲೇಷಿಸುವ ಪರವಾನಗಿ ಹೊಂದಿದ ವಾಸ್ತುಶಿಲ್ಪಿ ಅಲಿಸನ್ ಕಿಲ್ಲಿಂಗ್ ಮತ್ತು ದತ್ತಾಂಶಗಳನ್ನು ವಿಶ್ಲೇಷಿಸಲು ಪತ್ರಕರ್ತರಿಗೆ ತಂತ್ರಾಂಶ ರೂಪಿಸಿ ಕೊಡುವ ಕ್ರಿಸ್ಟೋ ಬಷೆಕ್‍ರನ್ನು ತಮ್ಮ ತನಿಖಾ ಪತ್ರಿಕೋದ್ಯಮಕ್ಕೆ ಸಹವರ್ತಿಗಳನ್ನಾಗಿ ಮಾಡಿಕೊಂಡು ಗುರಿ ಸಾಧಿಸಿದರು. ಅಂತಹ ಸಾಹಸಕ್ಕೀಗ ಪುಲಿಟ್ಜರ್‌ ಗರಿ ಬಂದು ಸೇರಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT