ಕಂಡ ಕನಸು ಹಂಗ ಉಳೀತು!

7
maduve-keerthi

ಕಂಡ ಕನಸು ಹಂಗ ಉಳೀತು!

Published:
Updated:

ನಾನು ಪಿಯುಸಿ ಪರೀಕ್ಷೆ ಬರೆದ ಹದಿನೈದು ದಿನಕಾ ನನ್ನ ಲಗ್ನ ನಿಶ್ಚಯ ಆಗಿತ್ತು. ಲಗ್ನದ ತಯಾರಿ ನಡೆದು, ಲಗ್ನಪತ್ರ ಹಂಚು ಕಾಲಕ್ ನನಗ ಆರಾಮ್ ಇಲ್ಲದಂಗ ಆಯ್ತು.

ನಮ್ಮಪ್ಪ  ಮಿಲ್ಟ್ರಿನಲ್ಲಿದ್ರು. ಅವರ ಮಗಳಾಗಿ ನಾನು ಲಗ್ನದ ದಿನ ಕೈತುಂಬಾ ಮದರಂಗಿ ಹಚ್ಚಿಕೊಂಡು, ವಿಶೇಷ ಕೇಶಾಲಂಕಾರ ಮಾಡ್ಕೊಂಡ್, ಸೂಟು–ಬೂಟು ಹಾಕೊಂಡ ಸಂಗಾತಿಗೂಡ ಹೂವಿನ ಮಂಟಪದಾಗ ನಮ್ಮಂದಿ ಮಕ್ಳಗೂಡ ಮಿಂಚಬೇಕು ಅನ್ನೋ ಕನಸ ಕಂಡಿದ್ದೆ. ಗುಲಾಬಿ ಹೂವಿನ್ಯಾಗ ಶೃಂಗಾರ ಮಾಡಿದ ಕಾರಿನಾಗ ಓಡಾಡ್ಬೇಕಂತ ಆಸೆ ಇತ್ತು.

ಆದ್ರ ನನ್ ಸಣ್ಣವ್ವ (ಚಿಕ್ಕಮ್ಮ) ಕನಿಷ್ಠ ಕೇಶಾಲಂಕಾರ ಮಾಡಿಕೊಳ್ಳಲಾರದಷ್ಟ್‌ ನೆತ್ತಿ ಮ್ಯಾಗ ಎಣ್ಣಿ ಹಚ್ಚಿ ಎರೆದ್ಲು. ನಮ್ಮಪ್ಪ ಪ್ರಯಾಣಕ ಮಂದಿಮಕ್ಳು ಹಿಡಿಸುವಷ್ಟು ಬಾಡಿಗಿ ಟ್ರಕ್ ಮಾಡಿದ್ರು. ಮಂದಿ ಭಾಳಾಗಿದ್ರಿಂದ ನಾನು ಮತ್ತು ನನ್ ಗೆಳೆತ್ಯಾರು ಡ್ರೈವರ್ ಕ್ಯಾಬಿನ್‌ನಾಗಿದ್ದ ಲಗೇಜ್ ಕ್ಯಾರಿಯರ್‌ನ್ಯಾಗ ಕುಂತ್ ಲಗ್ನಕ ರಾಮೇಶ್ವರ ಮಠಕ ಬಂದ್ವಿ. ನನ್ನ ಕಾರಿನ ಕನಸು ಭಗ್ನಾತ್. ಸಂಪ್ರದಾಯದಂಗ ಹಿರ‍್ಯಾರು ನನ್ನ ಮತ್ತು ನನ್ನ ಸಂಗಾತಿಯಿಂದ ತಾಳಿ ಮತ್ತು ಕರಿಮಣಿ ಪೋಣಿಸುವ ಕಾರ್ಯ ಮಾಡಿದ್ರು. ಮಠದ ಆವರಣದಾಗ ನಮ್ಮಿಬ್ರಿಗೂ ಅರಿಶಿನ ಹಚ್ಚಿ, ನೆತ್ತಿ ಮ್ಯಾಲ ಎಣ್ಣಿ ಹಾಕಿ ಎರಿದ್ರು. ಸಾಧರಣ ಹೆಣಲಾಕಿ (ಸರಳ ಜಡೆ), ನೆದರ್ ಹತ್ತುತ್ತೆ ಅಂತ ಗಲ್ಲದ ಮ್ಯಾಲ ನಾಕಾಣೆಯಷ್ಟು ದೊಡ್ಡದಾಗಿ ಕಾಡಿಗಿ ಹಚ್ಚಿಬಿಟ್ರು!. ಸೂಟು–ಬೂಟು ಹಾಕ್ಕೊಳ್ಳಾಕ ಒಲ್ಲೆಂದ ನನ್ನ ಸಂಗಾತಿ ನಮ್ಮಪ್ಪನ ಬಲವಂತಕ್ಕ ಸಫಾರಿ ತೊಟ್ರು. ಲಗ್ನದ ಬಗ್ಗೆ ನಾ ಕಂಡ ಕನಸು ಹಂಗ ಉಳುದ್ರೂ ಲಗ್ನ ಎಲ್ಲರಿಗೂ ಖುಷಿ ಕೊಡ್ತು ಅನ್ನೋ ಸಮಾಧಾನ ಆಯಿತು. ಮತ್ತದ ಟ್ರಕ್‌ನ್ಯಾಗ ವಾಪಸ್ ಮನೆ ಸೇರಿದ್ವಿ.


–ಕೀರ್ತಿ ಬಸಪ್ಪ ಲಗಳಿ, ಬಾಗಲಕೋಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !