ಗುರುವಾರ , ಮೇ 13, 2021
16 °C

ಚಿರಂಜೀವಿ ಕವಿಯ ಚಿರಸ್ಮರಣೆ

ಹಂ. ಪ. ನಾಗರಾಜಯ್ಯ Updated:

ಅಕ್ಷರ ಗಾತ್ರ : | |

prajavani

ಅರವತ್ತು ವರ್ಷದ ಗೆಳೆಯ ನಿಸಾರ್ ಅಹಮದರ ಸಾವಿನ ಸುದ್ದಿ ಅಪ್ಪಳಿಸಿ ದಿಗ್ಭ್ರಾಂತನಾಗಿದ್ದೇನೆ. ನೆನಪಿನಂಗಳದಲ್ಲಿ ಅರಳಿ ನಿಂತಿರುವ ಈ ವರಕವಿಯ ಮರಣವನ್ನು ಒಪ್ಪಿಕೊಳ್ಳಲು ಹಿಂಸೆಯಾಗುತ್ತಿದೆ. ನಿಸಾರರ ನಿರ್ಮಲ ಸ್ನೇಹಭಾಗ್ಯವನ್ನು ನೆನೆಯುವಾಗ ಸ್ವರ್ಗದಲಿ ಇಂಥ ಸ್ನೇಹ ಸಿಗುವುದೇನು ಎಂಬ ವಿಸೀಯವರ ಸಾಲು ನೆನಪಾಗುತ್ತದೆ. ಭೂವಿಜ್ಞಾನ ಕಲಿತು ಬೆಳೆದ ನಿಸಾರಿಗೆ ಕನ್ನಡ ರಾಜೇಶ್ವರಿಯೂ ಕಾವ್ಯದೇವಿಯೂ ಒಲಿದದ್ದು ಸೆಂಟ್ರಲ್ ಕಾಲೇಜಿನ ಅಂಗಳದಲ್ಲಿ.,ರಾಜರತ್ನಂ ಗರಡಿಯಲ್ಲಿ. ಅಲ್ಲಿಂದ ಮುಂದೆ ಗೆಳೆಯರಾಗಿ ಸಾಹಿತಿಗಳ ಸಂಗದಲ್ಲಿ ಬೆಳೆದ ನಮಗೆ ಸಾಹಿತ್ಯವೇ ಹಬ್ಬವಾಯಿತು. ಗಾಂಧಿಬಜಾರಿನ ಪರಿಸರಕ್ಕೆ ಆತುಕೊಂಡಿದ್ದ ನಿಸಾರರಿಗೆ ಒಮ್ಮೆ ಜನ್ಮದಿನದ ಕೊಡುಗೆಯಾಗಿ ಆತನ ಕವನ ಸಂಕಲನ ಸುಮೂಹೂರ್ತ ಮುದ್ರಿಸಿ ಮಡಿಲಿಗಿಟ್ಟಾಗ ಆ ಕವಿ ಕರಗಿ ಕಾವ್ಯವಾಗಿ ಹರಿದ ಸವಿಗಳಿಗೆ ನೆನೆದು ಕಣ್ಣುಗಳು ನೀರಿನ ಬಟ್ಟಲಾಗಿವೆ.

ಕನ್ನಡ ಜನಮನವನ್ನು ಸೂರೆಗೊಂಡ ಕವಿ ಸಾಮ್ರಾಟರು ಕುವೆಂಪು ಮತ್ತು ನಿಸಾರರು ಹಾಗೂ ನಟಸಾರ್ವಭೌಮ ರಾಜಕುಮಾರ್. ಸ್ವಾರಸ್ಯವೆಂದರೆ ನಿಸಾರರು ಅವರಿಬ್ಬರ ಅಕ್ಕರೆ ಗಳಿಸಿ ಸಾಹಿತ್ಯ ಸೇತುವೆಯಾದರು. ಸನ್ಮಿತ್ರ ನಿಸಾರ್  ಗದ್ಯ-ಪದ್ಯ ಎರಡರಲ್ಲೂ ನಿಸ್ಸೀಮರಗಿದ್ದರು. ಅವರ ಭಾಷಣದಲ್ಲಿ ಗದ್ಯದ ಗತ್ತು ಮತ್ತು ವಾಚನದಲ್ಲಿ ಕಾವ್ಯದ ಸೊಗಸು ಅನುಭವವಾಗುತ್ತಿತ್ತು. ನಾನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಅವರು ಸಾಹಿತ್ಯ ಆಕಾದೆಮಿ ಅಧ್ಯಕ್ಷರಾಗಿದ್ದರು. ಕಷ್ಟದ ದಿನಗಳಲ್ಲಿ  ಅವರು ನನಗಿತ್ತ ಆಸರೆಯನ್ನು ಮರೆಯಲಾರೆ. ಅವರು ಸ್ನೇಹಮಯಿ. ಮಾತು ಒಮ್ಮೊಮ್ಮೆ ಬಿರಸು, ಆದರೆ ಮನಸು ಮೆದು. ಅವರನ್ನು ಸುಲಭವಾಗಿ ರೇಗಿಸಬಹುದಿತ್ತು ಹಾಗೂ ಇನ್ನೂ ಸುಲಭವಾಗಿ ಅಳಿಸಬಹುದಿತ್ತು. ಇತರರ ನೋವಿಗೆ ಅಂತಃಕರಣ ಒಸರುತ್ತಿತ್ತು. ನಿಸಾರರು ಭಾವಗೀತೆಗಳ ಬಾದಷಾ. ಸುಗಮ ಸಂಗೀತದ ಯುಗಪುರುಷ.  ಕನ್ನಡ ನಾಡಿನ ಉದ್ದಗಲಗಳಲ್ಲಿ ಸದಾ ನಿನದಿಸುವ ನಿತ್ಯೋತ್ಸವ ಕ್ಯಾಸೆಟ್ಟಿನ ಬಿಡುಗಡೆ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಳದಲ್ಲಿ ಹಮ್ಮಿಕೊಂಡೆವು. ಬಿಡುಗಡೆಯಾದ ಮೊದಲ ಧ್ವನಿಸುರುಳಿಯನ್ನು ನಾನು ಸ್ವೀಕರಿಸಬೇಕೆಂದು ಕರೆದು ವೇದಿಕೆಯಲ್ಲಿ ಕೈಗಿತ್ತು   “ಹಂಪನಾ ಇದು ಸುಮುಹೂರ್ತ ಕಣಯ್ಯ” ಎಂದು ಉಲಿದ ಕವಿಗೆಳೆಯನಿಗೆ ಇಂದು ಶ್ರದ್ಧಾಂಜಲಿ ಹೇಳುವಾಗ ನಾನು ಗದ್ಗದಿತನಾಗಿದ್ದೇನೆ.

ನಿತ್ಯೋತ್ಸವದ ಕವಿಗೆ ಸಾವುಂಟೆ! ನಿತ್ಯೋತ್ಸವದ ಇನಿದನಿ ನಿಲ್ಲುವುದಿಲ್ಲ. ಕನ್ನಡ ಇರುವವರೆಗೂ ಅದು ಅನುರಣಿಸತ್ತಲೇ ಇರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು