ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪು ಗುಡುಗಿದ್ದಕ್ಕೆ ಬೆದರಿದ್ದ ಮುಖ್ಯಮಂತ್ರಿ!

ಬೆಳಗಾವಿಯೊಂದಿಗೆ ಪಾಟೀಲ ಪುಟ್ಟಪ್ಪ ಅವಿನಾಭಾವ ನಂಟು
Last Updated 17 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಹಿರಿಯ ಪತ್ರಕರ್ತ, ಕನ್ನಡಪರ ಹೋರಾಟಗಾರ ಮತ್ತು ಲೇಖಕ ಡಾ.ಪಾಟೀಲ ಪುಟ್ಟಪ್ಪ ಅವರು ಗಡಿ ನಾಡು ಬೆಳಗಾವಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

ಇಲ್ಲಿನ ಕನ್ನಡ ಹೋರಾಟಗಾರರು, ಸಾಹಿತಿಗಳೊಂದಿಗೆ ಆಪ್ತ ಒಡನಾಟ ಹೊಂದಿದ್ದರು. ಗಡಿ, ಭಾಷೆ ವಿಷಯದಲ್ಲಿ ತಗಾದೆ ತೆಗೆಯುತ್ತಿದ್ದವರಿಗೆ ಮೊನಚು ಮಾತುಗಳಿಂದ ‘ಬಿಸಿ’ ಮುಟ್ಟಿಸುತ್ತಿದ್ದರು.

ಹಿಂದಿನಿಂದಲೂ ಅವರಿಗೆ ಕುಂದಾನಗರಿಯ ಬಗ್ಗೆ ವಿಶೇಷವಾದ ಪ್ರೀತಿ. ಅಂತೆಯೇ ಇಲ್ಲಿನವರೂ ಅವರನ್ನು ಗೌರವದಿಂದ ಕಾಣುತ್ತಿದ್ದರು. ಅವರು ಹುಬ್ಬಳ್ಳಿ–ಧಾರವಾಡದವರಾದರೂ ಇಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಕಾರಣಗಳಿಂದಾಗಿ ಬೆಳಗಾವಿಗೆ ಭೇಟಿ ನೀಡುವ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಮಹಾರಾಷ್ಟ್ರ ಏಕೀಕರಣ ಸಮಿತಿಯವರೋ (ಎಂಇಎಸ್), ಶಿವಸೇನೆಯವರೋ ಅಥವಾ ನೆರೆ ರಾಜ್ಯದವರೋ ನಾಡಿನ ವಿರುದ್ಧ ಮಾತನಾಡಿದರೆ ಹುಬ್ಬಳ್ಳಿ–ಧಾರವಾಡದಿಂದಲೇ ಗುಡುಗುತ್ತಿದ್ದರು. ಬೆಳಗಾವಿ ವಿಭಜನೆಗೂ ಅವರು ವಿರೋಧ ದಾಖಲಿಸಿದ್ದರು.

ಸಮ್ಮೇಳನಾಧ್ಯಕ್ಷರಾಗಿದ್ದರು

2003ರಲ್ಲಿ ಇಲ್ಲಿ ನಡೆದಿದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ‘ಆಗ ಅವರು ಪ್ರದರ್ಶಿಸಿದ್ದ ದಿಟ್ಟತೆಯನ್ನು ಮರೆಯುವಂತಿಲ್ಲ. ಅವರು ಮಾತನಾಡುವಾಗ, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬೆಂಬಲಿಗರೊಂದಿಗೆ ವೇದಿಕೆಯಿಂದ ತೆರಳುತ್ತಿದ್ದರು. ಇದನ್ನು ಗಮನಿಸಿದ ಪಾಪು, ಮುಖ್ಯಮಂತ್ರಿ ವಿರುದ್ಧವೇ ಗುಡುಗಿದ್ದರು. ಇದರಿಂದ ಬೆದರಿದ ಕೃಷ್ಣ ಮತ್ತೆ ಬಂದು ಆಸೀನರಾಗಿದ್ದರು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೆನೆದರು.

‘1982ರ ಮೇ 16ರಂದು ಗೋಕಾಕ ಚಳವಳಿ ಈಗಿನ ಗಾಂಧಿ ಭವನವಿರುವ ಖಾಲಿ ಜಾಗದಲ್ಲಿ ನಡೆದಿತ್ತು. ಪಾಪು ನೇತೃತ್ವ ವಹಿಸಿ, ಕನ್ನಡದ ಮೇರು ಚಲನಚಿತ್ರ ನಟ ಡಾ.ರಾಜ್‌ಕುಮಾರ್‌ ಅವರನ್ನು ಕರೆಸಿದ್ದರು. ನಂತರ ಚಳವಳಿ ರಾಜ್ಯದಾದ್ಯಂತ ಪಸರಿಸಿತ್ತು. ನಾವಾಗ ಜಿಮ್ಖಾನಾ ಹಾಕಿ, ಕುರ್ಚಿಗಳನ್ನಿಡುವ ಕೆಲಸ ಮಾಡಿದ್ದೆವು. ಇದರೊಂದಿಗೆ ಕನ್ನಡ ಚಳವಳಿಗೆ ಧುಮುಕಿದ್ದೆವು. ಪಾಪು ಸ್ಫೂರ್ತಿಯಾಗಿದ್ದರು’ ಎಂದು ತಿಳಿಸಿದರು.

ಕಾವಲು ನಾಯಿಯೇ ಎಂದಿದ್ದರು

1985ರಲ್ಲಿ ಕನ್ನಡ ಕಾವಲು ಸಮಿತಿಯ 2ನೇ ಅಧ್ಯಕ್ಷರಾಗಿ ಪುಟ್ಟಪ್ಪ ನೇಮಕವಾಗಿದ್ದರು. ಗಡಿ, ಭಾಷೆ ವಿವಾದ ಉತ್ತುಂಗದಲ್ಲಿದ್ದ ಸಂದರ್ಭವದು. ನಗರಪಾಲಿಕೆಯಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಬೆಂಬಲಿತರು ಅಧಿಕಾರದಲ್ಲಿದ್ದರು. ಪಾಲಿಕೆಗೆ ಬಂದಿದ್ದ ಪುಟ್ಟಪ್ಪ ಅವರನ್ನು ಎಂಇಎಸ್‌ನವರು ಅವಮಾನಿಸಿದ್ದರು. ಅವರನ್ನು ಎಂಇಎಸ್‌ನವರು ಹಾಗೂ ಶಿವಸೇನೆಯವರು ‘ಕನ್ನಡದ ಕಾವಲು ನಾಯಿ’ ಎಂದು ಟೀಕಿಸಿದ್ದರು. ಹೌದು, ಕನ್ನಡದ ವಿಷಯದಲ್ಲಿ ನಾನು ಕಾವಲು ನಾಯಿಯೇ ಎಂದು ಪುಟ್ಟಪ್ಪ ಹೆಮ್ಮೆಯಿಂದ ಹೇಳಿಕೊಂಡಿದ್ದರು ಎಂದು ಸ್ಮರಿಸುತ್ತಾರೆ ಕನ್ನಡ ಹೋರಾಟಗಾರರು.

1986ರಲ್ಲಿ ಉಚಗಾಂವ ವಿಧಾನಸಭಾ ಕ್ಷೇತ್ರದಿಂದ ಎಂಇಎಸ್ ಬೆಂಬಲಿತ ಬಿ.ಐ. ಪಾಟೀಲ ಶಾಸಕರಾಗಿದ್ದರು. ಅವರ ಮನೆ ಇದ್ದ ಕೆ.ಎಚ್. ಕಂಗ್ರಾಳಿಯಲ್ಲಿ ಮರಾಠಿ ಶಾಲೆ ಆವರಣದಲ್ಲೇ ಕನ್ನಡ ಶಾಲೆ ಆರಂಭಿಸಲು ಪಾಪು ಕಾರಣರಾದರು. ಹಲವು ವರ್ಷಗಳವರಗೆ ನಾವು ಹೋರಾಟ ನಡೆಸಿದ ಪರಿಣಾಮ ಶಾಲೆ ಸ್ವಂತ ಕಟ್ಟಡ ಕಂಡುಕೊಂಡಿತು ಎಂದು ಚಂದರಗಿ ಸ್ಮರಿಸಿದರು.

1943ರಲ್ಲಿ ಅವರು ಕಾನೂನು ಪದವಿ ಪಡೆದದ್ದು ಇಲ್ಲೇ. ಅವರ ಜೀವನಚರಿತ್ರೆ ‘ನಾನು ಪಾಟೀಲ ಪುಟ್ಟಪ್ಪ’ ನಿರೂಪಿಸಿರುವವರು ಬೆಳಗಾವಿಯವರೇ ಆದ ಸಾಹಿತಿ ಡಾ.ಸರಜೂ ಕಾಟ್ಕರ್‌.

ಹಲವು ಕಾರ್ಯಕ್ರಮಗಳಲ್ಲಿ

* 2011ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಮಂತ್ರಿ ಇದ್ದಾಗ ನಡೆದಿದ್ದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಪು ನಾಡು, ನುಡಿ ಬಗ್ಗೆ ಮಾತನಾಡಿದ್ದರು.

* ಬೆಳಗಾವಿ ವಿಭಜಿಸದಂತೆ ಆಗ್ರಹಿಸಿ 2017ರ ಡಿ.20ರಂದು ನಡೆದಿದ್ದ ಸ್ವಾಮೀಜಿಗಳು ಮತ್ತು ಮುಖಂಡರ ಸಭೆಯಲ್ಲಿ ಪಾಲ್ಗೊಂಡು, ‘ಜಿಲ್ಲೆ ವಿಭಜಿಸಬಾರದು. ಇದು, ಎಲ್ಲರೂ ಕೂಡಿ ಹೋಗುವ ಮಾದರಿ ಜಿಲ್ಲೆಯಾಗಿರಲಿ. ದುಡುಕಿ ಕನ್ನಡ ದುರ್ಬಲಗೊಳಿಸಿ ಮರಾಠಿ ಪ್ರಾಬಲ್ಯಕ್ಕೆ ಅವಕಾಶ ಕೊಡಬಾರದು’ ಎಂದಿದ್ದರು.

* ‌2016ರ ಡಿ. 8ರಂದು ನಡೆದಿದ್ದ ಡಾ.ಶಿವಬಸವ ಸ್ವಾಮೀಜಿ ಅವರ 127ನೇ ಜಯಂತಿಯಲ್ಲಿ ಪಾಲ್ಗೊಂಡಿದ್ದರು.

* 2018ರ ಆ. 1ರಂದು ಅಥಣಿಯ ವಿಮೋಚನಾ ಸಂಸ್ಥೆಯಿಂದ ಲಿಂ.ಮಹಾಂತ ಶಿವಯೋಗಿಗಳ ಸ್ಮರಣೋತ್ಸವ ಮತ್ತು ಜನ್ಮದಿನೋತ್ಸವ ಅಂಗವಾಗಿ ಅಥಣಿ ತಾಲ್ಲೂಕಿನ ಮಲಾಬಾದದ ವಿಮೋಚನಾ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

* 2019ರ ಏಪ್ರಿಲ್‌ ಮೊದಲ ವಾರದಲ್ಲಿ ಹಿರಿಯ ಕವಿ ಬಿ.ಎ. ಸನದಿ ಅವರ ಕುಟುಂಬದವರಿಗೆ ಶಿಂದೋಳ್ಳಿಯಲ್ಲಿ ಸಾಂತ್ವನ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT