ಈ ಶಾರ್ಕ್‌ಗೆ ಒಂಟಿಯಾಗಿರುವುದೇ ಇಷ್ಟ

7

ಈ ಶಾರ್ಕ್‌ಗೆ ಒಂಟಿಯಾಗಿರುವುದೇ ಇಷ್ಟ

Published:
Updated:
Deccan Herald

ಶಾರ್ಕ್‌ಗಳು ನೋಡಲು ಸುಂದರವಾಗಿದ್ದರೂ ಭಯ ಹುಟ್ಟಿಸುತ್ತವೆ. ಕಾರಣ ಅದರ ಆಕ್ರಮಣಕಾರಿ ಸ್ವಭಾವ ಮತ್ತು ಕ್ರೂರ ವರ್ತನೆ. ಆದರೆ ಕೆಲವು ಶಾರ್ಕ್‌ ಪ್ರಭೇದಗಳು ತುಂಬಾ ಭಿನ್ನವಾಗಿರುತ್ತವೆ. ಅವುಗಳ ದೇಹ ರಚನೆಯೇ ಗಮನ ಸೆಳೆಯುತ್ತದೆ. ಕೆಲವಂತೂ ವಿಕಾರವಾಗಿ ಇರುತ್ತವೆ. ಅಂತಹ ಶಾರ್ಕ್‌ಗಳಲ್ಲಿ  ಫಾಲ್ಸ್‌ ಕ್ಯಾಟ್‌ಶಾರ್ಕ್‌ (False Catshark) ಕೂಡ ಒಂದು. ಇಂದಿನ ಮತ್ಸ್ಯ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಸೂಯುಡೊಟ್ರಿಯಾಕಿಸ್ ಮೈಕ್ರೊಡಾನ್. ಇದನ್ನು ಸೋಪಾ ಶಾರ್ಕ್‌ ಎಂದೂ ಕರೆಯಲಾಗುತ್ತದೆ. 

ಇದು ದೊಡ್ಡ ಗಾತ್ರದ ಮೀನು. ದೇಹವು  ಗಾಢ ಕಂದು ಮತ್ತು ತಿಳಿ ಬೂದು ಬಣ್ಣದಿಂದ ಕೂಡಿರುತ್ತದೆ. ಚರ್ಮ ಸುಕ್ಕುಗಟ್ಟಿರುತ್ತದೆ. ಇತರೆ ಮತ್ಸ್ಯಗಳಿಗೆ ಹೊಲಿಸಿದರೆ ಇದರ ಬಾಲ ತುಂಬಾ ಚಿಕ್ಕದಾಗಿರುತ್ತದೆ. ಮುಖದ ಕೆಳಭಾಗ ಚಪ್ಪಟೆಯಾಕಾರದಲ್ಲಿದ್ದರೆ, ಮೇಲ್ಭಾಗ ನೀಳವಾಗಿರುತ್ತದೆ.  ಮೂಗಿನ ಭಾಗ ಚೂಪಾಗಿದ್ದು, ಪಕ್ಕದಲ್ಲಿ ಎರಡು ರಂಧ್ರಗಳಿರುತ್ತವೆ. ಇದರ ಕಣ್ಣುಗಳ ಆಕಾರ ಮತ್ತು ಬಣ್ಣ, ಬೆಕ್ಕಿನ ‌ಕಣ್ಣುಗಳನ್ನೇ ಹೋಲುತ್ತದೆ. ಅಂಕುಡೊಂಕಾಗಿ ತಿರುಗುವುದರಿಂದ ದೈತ್ಯ ಗಾತ್ರದ ಹಾವಿನಂತೆಯೇ ಕಾಣಿಸುತ್ತದೆ. ಬಾಲದ ಮೇಲೂ ರೆಕ್ಕೆ ಇರುತ್ತದೆ.

ಅಮೆರಿಕ, ಮೆಕ್ಸಿಕೊ, ಕ್ಯೂಬಾ, ಬ್ರೆಜಿಲ್‌, ಫ್ರಾನ್ಸ್‌, ಐಸ್‌ಲ್ಯಾಂಡ್‌, ಜಪಾನ್‌, ಚೀನಾ, ಅಟ್ಲಾಂಟಿಕ್ ಸಾಗರ, ಆಸ್ಟ್ರೇಲಿಯಾ, ಮಡಗಾಸ್ಕರ್‌, ಇಂಡೊನೇಷ್ಯಾ, ತೈವಾನ್‌, ನ್ಯೂಜಿಲೆಂಡ್, ಪೆಸಿಫಿಕ್‌ ಸೇರಿದಂತೆ ಭಾರತ ವಾಯವ್ಯ ಪ್ರದೇಶಗಳಲ್ಲಿರುವ ನದಿ, ಸರೋವರ ಮತ್ತು ಸಮುದ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ಇದು ನೋಡಲು ವಿಕಾರವಾಗಿ ಕಾಣಿಸಿದರೂ ಆಕ್ರಮಣಕಾರಿ ಪ್ರವೃತ್ತಿ ತೋರಿಸುವುದಿಲ್ಲ. ಇದು ಬಹುತೇಕ ಸಮಯ ನೀರಿನ ಆಳದಲ್ಲಿ ಜೀವಿಸುತ್ತದೆ. ಸದಾ ಒಂಟಿಯಾಗಿ ಜೀವಿಸಲು ಇಷ್ಟಪಡುತ್ತದೆ. ಗುಂಪಿನಲ್ಲಿ ಕಾಣಿಸಿಕೊಳ್ಳವುದು ಅಪರೂಪ. ಇದರ ದೇಹದ ಶೇ 25ರಷ್ಟು ಭಾಗ ತೈಲದಂತಹ ದ್ರವಗಳಿಂದ ಕೂಡಿರುತ್ತದೆ.‌ ಯಕೃತ್‌ ಭಾಗವು ವಿಶಾಲವಾಗಿರುತ್ತದೆ. ಕೆಲವೊಮ್ಮೆ ತೆವಳುತ್ತಾ ಈಜುತ್ತದೆ. 500ರ ರಿಂದ 1000 ಮೀಟರ್‌ ಆಳದಲ್ಲಿ ಇದು ಕಂಡು ಬರುತ್ತದೆ. ದೇಹದ ಗಾತ್ರ ತುಂಬಾ ದೊಡ್ಡದಾಗಿರುವುದರಿಂದ ಇತರ ಜಲಚರಗಳು ಇದನ್ನು ಬೇಟೆಯಾಡಲು ಹೋಗುವುದಿಲ್ಲ. ‌

ಆಹಾರ: ಇದರ ಮೃದುವಾದ ಸ್ನಾಯು, ಈಜು ರೆಕ್ಕೆ ಮತ್ತು ಸುಕ್ಕುಗಟ್ಟಿದ ಸ್ನಾಯುಗಳನ್ನು ಹೊಂದಿರುವುದರಿಂದ ವೇಗವಾಗಿ ಈಜಲು ಸಾಧ್ಯವಾಗುವುದಿಲ್ಲ. ಆದರೆ, ಬೇಟೆಯಾಡುವಾಗ ಜಾಣತನ ಪ್ರದರ್ಶಿಸುತ್ತದೆ. ಅಗಲವಾದ ಬಾಯಿಯನ್ನು ಹೊಂದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ಸೇವಿಸಲು ಸಾಧ್ಯವಾಗುತ್ತದೆ. ಸಣ್ಣ ಮೀನುಗಳ ಗುಂಪನ್ನು ಒಂದೇ ಬಾರಿಗೆ ತಿನ್ನುತ್ತದೆ. ಹಾವು, ಸಿಗಡಿ, ಸಣ್ಣ ಶಾರ್ಕ್‌ಗಳನ್ನು ತಿಂದು ಜೀವಿಸುತ್ತದೆ.

ಬರಹ ಇಷ್ಟವಾಯಿತೆ?

 • 23

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !