ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ | ಭಾರತದ ವಿವೇಕ: ಆನಂದದರ್ಶನ

Last Updated 10 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಈಗಷ್ಟೆ ನಾವು ಭಾರತದ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಹಳೆಯ ಸಾಧನೆಗಳನ್ನು ಮೆಲುಕು ಹಾಕುತ್ತಿದ್ದೇವೆ; ಹೊಸ ಸಂಕಲ್ಪಗಳನ್ನು ಗಟ್ಟಿಮಾಡಿಕೊಳ್ಳುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನಾವು ಮರೆಯಬಾರದ ಹೆಸರು: ಆನಂದ ಕುಮಾರಸ್ವಾಮಿ (1877–1947). ಇದು ವ್ಯಕ್ತಿಯೊಬ್ಬರ ಹೆಸರಷ್ಟೆ ಅಲ್ಲ, ಇದೊಂದು ತತ್ತ್ವವೇ ಹೌದು. ಪ್ರಾಚೀನ–ನವೀನಗಳ ಸೇತುವೆ; ಪೂರ್ವ–ಪಶ್ಚಿಮಗಳ ಸಂಗಮದ ತತ್ತ್ವ ಅದು. ಮಾತ್ರವಲ್ಲ, ಭಾರತೀಯತೆ–ಅಭಾರತೀಯತೆಗಳ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಿಕೊಟ್ಟ ತತ್ತ್ವ.

ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಆನಂದ ಕುಮಾರಸ್ವಾಮಿ ಅಮೆರಿಕೆಯಲ್ಲಿದ್ದರು. ಆಗ ಭಾರತೀಯರಿಗೆ ಸಂದೇಶವೊಂದನ್ನು ಕೊಡುವಂತೆ ಅವರನ್ನು ಆಪ್ತರು ಕೇಳಿದರು. ಅಂದು ಅವರು ಕೊಟ್ಟ ಸಂದೇಶ ಅದು ಸ್ವಾತಂತ್ರ್ಯೋತ್ಸವದ ಅಮೃತೋತ್ಸವದ ಇಂದಿನ ಸಂದರ್ಭದಲ್ಲೂ ಸಲ್ಲುತ್ತದೆ:

‘Be yourself. Follow Mahatma Gandhi, Bharatan Kumarappa, D. V. Gundappa, Abul Kalam Azad, Abdul Gaffar Khan, and Sri Ramana Maharshi. Co-operate with such men as the Earl of Portsmouth, George Bourne, Wilfred Wellock, Jean Giono, and Fernando Nobre. Why consider the inferior Philosophers? Be not deceived: evil communications corrupt good manners.’

‘ನೀವು ನೀವಾಗಿರಿ’ ಇದು ಕುಮಾರಸ್ವಾಮಿ ಅವರು ಹೇಳಿದ ಮೊದಲ ಮಾತು. ನಾವು ಯಾರನ್ನು ಅನುಸರಿಸಬೇಕೆಂದು ಅವರು ಸೂಚಿಸಿರುವ ಪಟ್ಟಿಯೂ ಗಮನಾರ್ಹವಾಗಿದೆ. ಎರಡನೆಯ ಪಂಕ್ತಿಯನ್ನು ಸದ್ಯಕ್ಕೆ ಬಿಡೋಣ; ಪ್ರಥಮ ಪಂಕ್ತಿಯನ್ನಷ್ಟೆ ನೋಡೋಣ: ಮಹಾತ್ಮ ಗಾಂಧಿ, ಭರತನ್‌ ಕುಮಾರಪ್ಪ, ಡಿ. ವಿ. ಗುಂಡಪ್ಪ, ಅಬುಲ್‌ ಕಲಾಮ್‌ ಅಜಾದ್‌, ಅಬ್ದುಲ್‌ ಗಫಾರ್‌ ಖಾನ್‌ ಮತ್ತು ಶ್ರೀ ರಮಣ ಮಹರ್ಷಿ – ಇವರನ್ನು ಅನುಸರಿಸಿ ಎನ್ನುತ್ತಿದ್ದಾರೆ, ಕುಮಾರಸ್ವಾಮಿ. ಕಡಿಮೆ ದರ್ಜೆಯ, ಎಂದರೆ ಅಧಮರಾದ ತತ್ತ್ವಜ್ಞರನ್ನು ಲೆಕ್ಕಿಸಬೇಡಿ ಎಂಬ ಬುದ್ಧಿಯ ಮಾತನ್ನು ಹೇಳುತ್ತಿದ್ದಾರೆ. ಮೋಸ ಹೋಗದಿರಿ: ಕೇಡಿನ ಸಂಪರ್ಕದಿಂದ ಒಳಿತು ಕೂಡ ಕೆಟ್ಟುಹೋಗುತ್ತದೆ ಎಂದೂ ಎಚ್ಚರಿಸುತ್ತಿದ್ದಾರೆ.

ಕುಮಾರಸ್ವಾಮಿ ಉಲ್ಲೇಖಿಸಿರುವವರಲ್ಲಿ ಇಬ್ಬರನ್ನು ಸದ್ಯಕ್ಕೆ ಗಮನಿಸಿದರೆ, ರಾಷ್ಟ್ರನಿರ್ಮಾಣದಲ್ಲಿ ನಮಗೆ ವ್ಯಕ್ತಿಗಳು ಹೇಗೆ ಮಾರ್ಗದರ್ಶಕರಾಗಿ ಒದಗಬೇಕು ಎಂಬುದರ ಸೂಕ್ಷ್ಮ ತಿಳಿಯುತ್ತದೆ. ಮಹಾತ್ಮ ಗಾಂಧೀಜಿ. ಈ ಹೆಸರನ್ನು ಹೇಳಿದ್ದಾರೆ ಎಂಬ ಕಾರಣದಿಂದಲೇ ಕೆಲವರು ಕುಮಾರಸ್ವಾಮಿ ಅವರನ್ನು ಕುರಿತು ಸುಲಭದಲ್ಲಿ ಒಂದು ತೀರ್ಮಾನಕ್ಕೆ ತಲುಪುತ್ತಾರೆನ್ನುವುದು ಸುಳ್ಳಲ್ಲ. ಆದರೆ ಕುಮಾರಸ್ವಾಮಿ ಅವರು ತಮ್ಮ ಸಮಕಾಲೀನರನ್ನು ಹೇಗೆ ವಿಮರ್ಶಿಸಿದ್ದಾರೆ ಎಂಬುದನ್ನು ನಾವು ಗಮನಿಸಬೇಕಾಗುತ್ತದೆ. ಗಾಂಧಿಯವರ ಹಿರಿಮೆಯ ಜೊತೆಜೊತೆಗೆ ಅವರ ದೌರ್ಬಲ್ಯಗಳನ್ನೂ ನೇರವಾಗಿಯೇ ಹೇಳಿದವರು ಕುಮಾರಸ್ವಾಮಿ. ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಎಂಬುದಕ್ಕೆ ಮಾದರಿ ಎಂದು ಗಾಂಧಿಯವರನ್ನು ಪ್ರಶಂಸಿಸಿದರು; ಆದರೆ ಕಲೆಯ ಬಗ್ಗೆ ಗಾಂಧಿಯವರ ಅಭಿಪ್ರಾಯಗಳನ್ನು ಉಗ್ರವಾಗಿ ಖಂಡಿಸಿದರು. ‘ಮಹಾತ್ಮ‘ ಎಂಬ ಒಂದು ಪ್ರಬಂಧವನ್ನೇ ಬರೆದಿದ್ದಾರೆ, ಕುಮಾರಸ್ವಾಮಿ.

ಡಿ. ವಿ. ಗುಂಡಪ್ಪನವರು, ಎಂದರೆ ಡಿವಿಜಿಯವರನ್ನು ಎಲ್ಲೋ ದೂರದ ಅಮೆರಿಕೆಯಲ್ಲಿದ್ದ ಕುಮಾರಸ್ವಾಮಿ ಉಲ್ಲೇಖಿಸಿರುವುದು ಗಮನಾರ್ಹ. ಡಿವಿಜಿಯವರು ಕಗ್ಗದ ಕವಿಗಳಾಗಿ, ಸಾಹಿತಿಗಳಾಗಿ ಮಾತ್ರವೇ ಹೆಚ್ಚು ಪರಿಚಿತರು. ಅವರ ಕಾರ್ಯಕ್ಷೇತ್ರವಾದರೂ ಕರ್ನಾಟಕ, ಅದರಲ್ಲೂ ಬೆಂಗಳೂರು ಕೇಂದ್ರಸ್ಥಾನ; ದಿಟ, ಅವರ ಚಿಂತನೆಯ ಬೀಸು ವಿಶ್ವವ್ಯಾಪಕವಾಗಿತ್ತು. ಅವರು ಶ್ರೇಷ್ಠ ರಾಜನೀತಿತಜ್ಞರಾಗಿದ್ದರು; ರಾಜಕಾರಣಿಯಾಗಿಯೂ ಅವರ ಕೊಡುಗೆ ಅನನ್ಯವಾಗಿತ್ತು. ರಾಷ್ಟ್ರಕ, ಎಂದರೆ ‘ಸಿಟಿಜನ್‌’ನ ಕರ್ವವ್ಯ–ಹಕ್ಕುಗಳ ಸೂತ್ರಗಳನ್ನು ಸ್ಪಷ್ಟವಾಗಿ ಕಾಣಿಸಿದವರು.ಅವರೊಬ್ಬ ವಿಶ್ವಸ್ತರದ ರಾಜಕೀಯ ಚಿಂತಕರಾಗಿದ್ದರು ಎಂಬುದು ಅವರ ಇಂಗ್ಲಿಷ್‌ ಬರಹಗಳನ್ನು ಗಮನಿಸಿದರೆ ತಿಳಿಯುತ್ತದೆ. ವಿಶೇಷ ಎಂದರೆ ಕುಮಾರಸ್ವಾಮಿ ಅವರು, ಆ ಕಾಲದಲ್ಲಿಯೇ, ಅಷ್ಟು ದೂರದಿಂದಲೇ, ಡಿವಿಜಿಯವರ ಸತ್ತ್ವವನ್ನು ಗುರುತಿಸಿದ್ದು; ಅವರನ್ನು ನಮ್ಮ ಆದರ್ಶಪುರುಷರ ಸಾಲಿನಲ್ಲಿ ಪ್ರತಿಷ್ಠಾಪಿಸಿದ್ದು.

ಕುಮಾರಸ್ವಾಮಿ ಅವರ ವೈಶ್ವಿಕದೃಷ್ಟಿಗೆ ಈ ಎರಡು ಉಲ್ಲೇಖಗಳು ಸಾಕಲ್ಲವೆ?

‘ನೀವು ನೀವಾಗಿರಿ’ ಎಂದ ಕುಮಾರಸ್ವಾಮಿ, ‘ನಮ್ಮತನ’ದ ಲಕ್ಷಣವನ್ನು ನಿರೂಪಿಸಲು ಮೊದಲು ಕಲೆಯ ಮೂಲತತ್ತ್ವಗಳನ್ನು ಆರಿಸಿಕೊಂಡರು. ಕಲೆಗೂ ಜೀವನಕ್ಕೂ ರಾಷ್ಟ್ರನಿರ್ಮಾಣಕ್ಕೂ ಅಧ್ಯಾತ್ಮಕ್ಕೂ ಆನಂದಕ್ಕೂ ಇರುವ ಸಂಬಂಧಗಳನ್ನು ಹಲವು ನೆಲೆಗಳಲ್ಲಿ ಸ್ಥಾಪಿಸಿದರು. ’ರಾಷ್ಟ್ರವೊಂದರ ನಿರ್ಮಾಣವಾಗುವುದು ಕವಿ ಮತ್ತು ಕಲಾವಿದರಿಂದಲೇ ಹೊರತು ಉದ್ಯಮಿಗಳು ಮತ್ತು ರಾಜಕಾರಣಿಗಳಿಂದಲ್ಲ‘ ಎಂದ ಅವರು ಕಲೆಯನ್ನೂ ಕಲಾವಿದರನ್ನೂ ನಿರ್ವಚಿಸಿದ ರೀತಿಯೂ ಅನನ್ಯವಾಗಿದೆ. ಕಲೆಯನ್ನು ಧಾರ್ಮಿಕ ಕಲಾಪ ಎಂದೇ ಸಮೀಕರಿಸಿದರು. ‘ಕಲಾವಿದನಲ್ಲದವನಿಗೆ ಯಾವುದೇ ಸಾಮಾಜಿಕ ಅಂತಸ್ತನ್ನು ಪಡೆಯುವ ಹಕ್ಕೇ ಇಲ್ಲ’ ಎಂದು ಕಂಠೋಕ್ತವಾಗಿ ಸಾರಿದರು. ಮಾತ್ರವಲ್ಲ, ಕಲಾವಿದ ಯಾರು ಎಂಬುದನ್ನು ಸ್ಪಷ್ಟಪಡಿಸಲು ಅವರು ಮರೆಯಲಿಲ್ಲ. ಬಡಗಿ, ಚಿತ್ರಕಾರ, ವಕೀಲ, ರೈತ, ಪುರೋಹಿತ – ಹೀಗೆ ಎಲ್ಲ ವೃತ್ತಿಪರರೂ ಕಲಾವಿದರೇ ಹೌದು; ಅವರವರ ಸ್ವಭಾವಕ್ಕೆ ತಕ್ಕಂತೆ ಕರ್ತವ್ಯಗಳನ್ನು ನಿರ್ವಹಿಸುವುದೇ ದಿಟವಾದ ಕಲೆ; ಸಮಾಜದ ಏಳಿಗೆಯಲ್ಲೂ ತನ್ನ ಏಳಿಗೆಯಲ್ಲೂ ಹೀಗೆ ‘ಕಲಾವಿದ’ನಾಗದೆ ಕರ್ತವ್ಯಮುಖನಾಗದ ವ್ಯಕ್ತಿ ಅವನೊಬ್ಬ ಮೈಗಳ್ಳನಷ್ಟೆ ಎಂದು ಘೋಷಿಸಿದರು.

ಕುಮಾರಸ್ವಾಮಿ ಅವರು ಭೌತಿಕವಾಗಿ ನಮ್ಮನ್ನಗಲಿ ಎಪ್ಪತ್ತೈದು ವರ್ಷಗಳಾಗಿವೆ (ಸೆಪ್ಟೆಂಬರ್‌ 9, 1947); ಅವರ ಹಲವು ಬರಹಗಳು ನೂರು ವರ್ಷಗಳನ್ನು ಕಂಡಿವೆ. ಹೀಗಿದ್ದರೂ ಅವರ ಚಿಂತನೆಗಳ ಪ್ರಸ್ತುತತೆ ಕಡಿಮೆಯಾಗಿಲ್ಲ; ಅಷ್ಟೇಕೆ, ಅಂದಿಗಿಂತಲೂ ಇಂದು ಹೆಚ್ಚು ಅನಿವಾರ್ಯವಾಗಿವೆ. ಆದರೆ ಇನ್ನೂ ಅವರ ಕೃತಿಗಳ ಸಮಗ್ರ ಅಧ್ಯಯನ ನಡೆದಿಲ್ಲ ಎಂಬ ಕೊರಗು ಕೂಡ ಕಾಡುತ್ತಿದೆ. ವಿಶ್ವದಲ್ಲಿ ಭಾರತೀಯ ಕಲೆಗೆ ಯೋಗ್ಯಸ್ಥಾನವೊಂದು ದೊರೆಯಲು ಅವರ ಪ್ರತಿಪಾದನೆಗಳೇ ಪ್ರಮುಖ ಕಾರಣ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಅವರು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಪಾಲ್ಗೊಂಡಿದ್ದವರು. ಸ್ವದೇಶಿಯ ಕಲ್ಪನೆಯನ್ನು ಅವರು ಗಾಂಧಿಯವರಿಗಿಂತಲೂ ಮೊದಲೇ ಪ್ರತಿಪಾದಿಸಿದವರು. ಭಾರತೀಯ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ ಅಗ್ರಚಿಂತಕರಲ್ಲಿ ಅವರೂ ಒಬ್ಬರು. ಖನಿಜಶಾಸ್ತ್ರ, ಕಲೆ, ಅಧ್ಯಾತ್ಮ, – ಈ ಮೂರು ನೆಲೆಗಳಲ್ಲಿ ಅವರು ಮಾಡಿದ ಕೃಷಿ ಅಪೂರ್ವವಾದುದು. ಒಬ್ಬ ಮನುಷ್ಯ ಒಂದು ಜೀವಿತಾವಿಧಿಯಲ್ಲಿ ಇಷ್ಟೆಲ್ಲ ಸಾಧಿಸಲು ಸಾಧ್ಯವೆ ಎನ್ನುವಷ್ಟು ಅಗಾಧವೂ ಆಳವೂ ಆದ ನೂರಾರು ಪ್ರೌಢ ಪ್ರಬಂಧಗಳನ್ನು ರಚಿಸಿದ ಕೀರ್ತಿ ಕುಮಾರಸ್ವಾಮಿ ಅವರದ್ದು. ‘ಕುಮಾರಸ್ವಾಮಿ ಅವರ ಸಿದ್ಧಿ–ಸಾಧನೆಗಳನ್ನು ವರ್ಣಿಸಲು ಪದಗಳು ಸೋಲುತ್ತವೆ’ ಎಂದು ಉದ್ಗರಿಸಿದ ರವೀಂದ್ರನಾಥ ಟ್ಯಾಗೋರ್‌ ಅವರ ಮಾತು ಸ್ಮರಣೀಯ.

ನಾವಿಂದು ಧಾರ್ಮಿಕತೆಯಿಂದ ವಿಮುಖರಾಗುತ್ತಿರುವುದೇ ಆಧುನಿಕ ಜಗತ್ತಿನ ಎಲ್ಲ ಸಮಸ್ಯೆಗಳ ಮೂಲ ಎಂದು ಇತಿಹಾಸತಜ್ಞ ವಿಲ್‌ ಡ್ಯುರೆಂಟ್‌ ನೊಂದುಕೊಂಡಿದ್ದಾರೆ. ಧಾರ್ಮಿಕತೆ ಎಂದರೆ ಏನು, ಅದು ನಮ್ಮ ಜೀವನದಿಂದ ಹೇಗೆ ವಿಮುಖವಾಗಿದೆ ಎಂಬ ಅರಿವು ಮೂಡಬೇಕಾದರೆ ಕುಮಾರಸ್ವಾಮಿ ಅವರ ಬರಹಗಳೇ ನಮಗೆ ಶರಣ್ಯ. ಧಾರ್ಮಿಕತೆಗೂ ಜೀವನಕ್ಕೂ ಇರುವ ನಂಟಿನ ಬಗ್ಗೆ ನಮ್ಮ ಕಾಲದಲ್ಲಿ ಅವರಷ್ಟು ಸ್ಪಷ್ಟವಾಗಿ ಹೇಳಿದವರು ಮತ್ತೊಬ್ಬರಿಲ್ಲ ಎಂದರೆ ಅದೇನೂ ತಪ್ಪಾಗದು. ಆಧುನಿಕ ಜಗತ್ತು ದಾರಿದೀಪವಾಗಿ ಆರಿಸಿಕೊಂಡಿರುವ ‘ಆದರ್ಶ’ಗಳು ಹೇಗೆ ಕೇಡಿನ ಸಂತತಿಗಳಾಗಿವೆ ಎಂಬದುನ್ನು ಅವರು ಎಳೆ ಎಳೆಯಾಗಿ ತೋರಿಸಿಕೊಟ್ಟಿದ್ದಾರೆ. ‘ನಗರಗಳ ನಿರ್ಮಾಣ ಎಂದರೆ ಕೊಳಚೆಪ್ರದೇಶಗಳ ಸೃಷ್ಟಿಯಲ್ಲ’ ಎಂದರು. ‘ಯಾವುದೇ ವಸ್ತುಗಳ ಉತ್ಪಾದನೆ ಬಳಕೆಗೆ ಒದಗಬೇಕೆ ವಿನಾ ದುಡ್ಡಿನ ಲಾಭಕ್ಕಾಗಿ ಅಲ್ಲ‘ ಎಂದರು.

ಕುಮಾರಸ್ವಾಮಿ ಅವರ ಪ್ರಸ್ತುತತೆಯ ಬಗ್ಗೆ ಕೊನೆಯ ಮಾತೊಂದನ್ನು ಹೇಳಬಹುದು. ಈಗಷ್ಟೆ ಗಣೇಶನ ಹಬ್ಬ ಮುಗಿದಿದೆ. ಪ್ರತಿ ವರ್ಷವೂ ಈ ಹಬ್ಬದ ಸಂದರ್ಭದಲ್ಲಿ ಕೆಲವರು ಗಣಪತಿಯ ಕಲ್ಪನೆಯಲ್ಲಿ ಕಾಣುವ ’ಅಸಂಗತ‘ಗಳ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಲೇ ಇರುತ್ತಾರೆ. ಇಂಥ ಬಾಲಿಶ ಮಾತುಗಳಿಗೆ ಉತ್ತರ ಕುಮಾರಸ್ವಾಮಿ ಅವರ ಚಿಂತನೆಯಲ್ಲಿದೆ. ಪರಂಪರೆಯನ್ನು ಹೇಗೆ ನೋಡಬೇಕು, ಅದು ಮಾತನಾಡುವ ಭಾಷೆ ಯಾವುದು ಎಂದು ತಿಳಿಸಿಕೊಟ್ಟ ದಾರ್ಶನಿಕರು ಅವರು. ‘ಪಶ್ಚಿಮದ ದುರಹಂಕಾರದ ಎದುರಿಗೆ ಇವತ್ತು ನಮಗೆ ಹೆಚ್ಚು ಪ್ರಸ್ತುತವಾಗಬಲ್ಲ ಚಿಂತಕ ಆನಂದ ಕುಮಾರಸ್ವಾಮಿ’ ಎಂಬ ಡಿ. ಆರ್‌. ನಾಗರಾಜ್‌ ಅವರ ಮಾತು ಇಲ್ಲಿ ಉಲ್ಲೇಖಾರ್ಹ. ಅಂದು ಪಾಶ್ಚಾತ್ಯರಿಗೆ ಕುಮಾರಸ್ವಾಮಿ ನಿರೂಪಿಸಿದ ಭಾರತೀಯತೆಯ ಅರಿವು ಇಂದು ಪಶ್ಚಿಮಬುದ್ಧಿಯ ’ಭಾರತೀಯ’ರಿಗೂ ಬೇಕಾಗಿದೆಯೆನ್ನಿ!

(ಆನಂದ ಕುಮಾರಸ್ವಾಮಿ ಕುರಿತ ಸಂವಾದ ಕಾರ್ಯಕ್ರಮ ಇದೇ 16ರಂದು ಬೆಂಗಳೂರಿನ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌’ನಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT