ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮದ ‘ಜಿಹಾದ್‌’ಗೆ ಎಲ್ಲಿದೆ ಮುಲಾಮು?

Last Updated 26 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬರೋಬ್ಬರಿ 30 ವರ್ಷಗಳ ಹಿಂದಿನ ಮಾತು. ಅದು 1990ರ ಸೆಪ್ಟೆಂಬರ್‌ ಸಮಯ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬೆಂಬಲ ಯಾಚಿಸಲು ಎಲ್‌.ಕೆ. ಅಡ್ವಾಣಿಯವರು ‘ರಥಯಾತ್ರೆ’ಯನ್ನು ಆರಂಭಿಸಿದ್ದರು. ರಥವಾಗಿ ರೂಪಾಂತರ ಹೊಂದಿದ ಆ ಟೊಯೊಟಾ ಮಿನಿ ಬಸ್‌ ಸಂಚರಿಸಿದ ಒಂಬತ್ತೂ ರಾಜ್ಯಗಳಲ್ಲಿ ಕೋಮು ಗಲಭೆಗಳು ಭುಗಿಲೆದ್ದಿದ್ದವು. ಆ ಗಲಭೆಗಳು ಅಪಾರ ಸಾವು–ನೋವಿಗೂ ಕಾರಣವಾಗಿದ್ದವು. ದೇಶದ 39 ನಗರ/ಪಟ್ಟಣಗಳಲ್ಲಿ ಒಟ್ಟಾರೆ 275 ಮಂದಿ ಜೀವ ಕಳೆದುಕೊಂಡಿದ್ದರು.

ಕರ್ನಾಟಕದಲ್ಲಿ ಈ ಯಾತ್ರೆ ಬೀದರ್‌ ಮೂಲಕ ಮಾತ್ರ ಹಾದುಹೋಗಿತ್ತು. ಆದರೆ, ರಾಜ್ಯದಲ್ಲಿ ನಡೆದ ಗಲಭೆಗಳಲ್ಲಿ 40 ಜನ –ಅದರಲ್ಲೂ ರಾಜ್ಯದ ದಕ್ಷಿಣ ಭಾಗದಲ್ಲಿ 33 ಮಂದಿ– ಅಸುನೀಗಿದ್ದರು. ಮೊದಲ ಬಾರಿಗೆ ಕೋಮು ದಳ್ಳುರಿ ಹಳ್ಳಿಗಳಿಗೂ ಹಬ್ಬಿತ್ತು. ಚನ್ನಪಟ್ಟಣದ ಹಾಡಿಯೊಂದು ಗಲಭೆಯಲ್ಲಿ ಹೊತ್ತಿಕೊಂಡ ಬೆಂಕಿಯಲ್ಲಿ ದಹಿಸಿಹೋಗಿತ್ತು. ‘ಗೊಂಬೆಗಳ ಪಟ್ಟಣ’ದಲ್ಲೂ ಕರ್ಫ್ಯೂ ಜಾರಿಗೊಳಿಸಲಾಗಿತ್ತು.

ಇಬ್ಬರು ಯುವ ವರದಿಗಾರರು –ಇಬ್ಬರೂ ಬಾಲ್ಯದ ಸ್ನೇಹಿತರು ಮತ್ತು ಆಗಷ್ಟೇ ವೃತ್ತಿಜೀವನವನ್ನು ಆರಂಭಿಸಿದವರು– ಚನ್ನಪಟ್ಟಣದ ಆ ಘಟನೆಯ ಕುರಿತು ವರದಿ ಮಾಡಲು ಬೆಂಗಳೂರಿನಿಂದ ಹೋಗಿದ್ದರು.

ಆ ವರದಿಗಾರರನ್ನು ಕಾಡುತ್ತಿದ್ದ ಒಂದು ದೊಡ್ಡಪ್ರಶ್ನೆ ಏನೆಂದರೆ: ‘ಗಲಭೆಗೆ ಬಲಿಪಶುವಾದ ವ್ಯಕ್ತಿಗಳ ನೈಜ ಹೆಸರುಗಳನ್ನು ಬರೆದು, ಅವರು ಯಾವ ಧರ್ಮಕ್ಕೆ ಸೇರಿದ್ದರು ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕೇ’ ಎನ್ನುವುದು. ಆಗಿನ ಸಂದರ್ಭದಲ್ಲಿ ಯಾವ ಕಾರಣಕ್ಕೂ ಸಮುದಾಯಗಳನ್ನು ಹೆಸರಿಸಬಾರದು ಎಂಬ ಸಂಪ್ರದಾಯವನ್ನು ಪತ್ರಿಕೆಗಳು ಪಾಲಿಸಿಕೊಂಡು ಬಂದಿದ್ದವು. ಹಾನಿಯನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸುವುದು ಹಾಗೂ ಉಳಿದ ಸ್ಥಳಗಳಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳುವುದು ಇದರ ಹಿಂದಿನ ಉದ್ದೇಶವಾಗಿತ್ತು.

ಆಗ, ಉಳಿದ ಮಾಧ್ಯಮಗಳು ಸಾವನ್ನಪ್ಪಿದವರ ಯಾರ ಹೆಸರನ್ನೂ ಕೊಡಲಿಲ್ಲ. ಆದರೆ, ಆ ಇಬ್ಬರೂ ವರದಿಗಾರರು ವಿಶಿಷ್ಟ ಹಾದಿಯೊಂದನ್ನು ಹಿಡಿದರು. ಜೀವತೆತ್ತ ಪ್ರತಿಯೊಬ್ಬ ವ್ಯಕ್ತಿಗೂ ಒಂದು ಮುಸ್ಲಿಂ ಹಾಗೂ ಮತ್ತೊಂದು ಹಿಂದೂ ಹೆಸರನ್ನು ಇವರು ಕೊಟ್ಟರು. ಯಾವುದೇ ಭಾಷೆ ಮಾತನಾಡಲಿ, ಎಂತಹದ್ದೇ ಬಟ್ಟೆಯನ್ನು ಧರಿಸಲಿ, ಆಹಾರ ಪದ್ಧತಿಯೂ ಹೇಗೇ ಇರಲಿ, ನಂಬಿಕೆಗಳು ಏನೇ ಆಗಿರಲಿ, ಯಾವುದೇ ದೇವರನ್ನು ಪ್ರಾರ್ಥಿಸಲಿ, ಪ್ರತಿಯೊಬ್ಬ ಮನುಷ್ಯನ ಜೀವವೂ ಅಮೂಲ್ಯ ಎನ್ನುವುದು ಆ ಯುವ ವರದಿಗಾರರ ನಂಬಿಕೆಯಾಗಿತ್ತು.

***

ಮೂವತ್ತು ವರ್ಷಗಳ ಬಳಿಕ ಈಗ ಅದೇ ಸೆಪ್ಟೆಂಬರ್‌ ತಿಂಗಳು. ಅಂದಿನ ಆ ಯುವ ವರದಿಗಾರರಲ್ಲಿ ಒಬ್ಬರದು ಈಗ ಕನ್ನಡದ ಟಿವಿ ಸುದ್ದಿವಾಹಿನಿಯೊಂದರ ಚಿರಪರಿಚಿತ ಮುಖ. ಅದೇ ಇನ್ನೊಬ್ಬ ವರದಿಗಾರ, ಈ ಬರಹದ ಲೇಖಕ.

ಈ ಮೂರು ದಶಕಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳು ಆಗಿವೆ.

# ಆಗ ಸರ್ಕಾರಿ ಸ್ವಾಮ್ಯದ ದೂರದರ್ಶನ ಒಂದೇ ಇತ್ತು. ಈಗ 900ಕ್ಕಿಂತ ಅಧಿಕ ಖಾಸಗಿ ಚಾನೆಲ್‌ಗಳಿವೆ; ಈ ಪೈಕಿ ಅರ್ಧಕ್ಕಿಂತ ಹೆಚ್ಚು ಸುದ್ದಿ ಚಾನೆಲ್‌ಗಳು. ದೇಶದ 20 ಕೋಟಿಗಿಂತಲೂ ಅಧಿಕ ಮನೆಗಳಿಗೆ ಟಿವಿ ಕೇಬಲ್‌ ಅಥವಾ ಸ್ಯಾಟಲೈಟ್‌ ಸಂಪರ್ಕವಿದೆ.

# ಕನ್ನಡ ಪತ್ರಿಕೋದ್ಯಮದ ಮುಖ್ಯವಾಹಿನಿಯಲ್ಲಿ ಆಗ ಕೇವಲ ನಾಲ್ಕು ಪತ್ರಿಕೆಗಳು ಇದ್ದವು ಮತ್ತು ಅವುಗಳು ಕೇವಲ ಮೂರು ನಗರಗಳಲ್ಲಿ ಮುದ್ರಣಗೊಳ್ಳುತ್ತಿದ್ದವು. ಆ ಎಲ್ಲ ಪತ್ರಿಕೆಗಳ ಒಟ್ಟು ಪ್ರಸರಣ ಸಂಖ್ಯೆ ಕೇವಲ ಐದು ಲಕ್ಷದಷ್ಟಿತ್ತು. ಈಗ ಮುಖ್ಯವಾಹಿನಿಯಲ್ಲಿರುವ ಪತ್ರಿಕೆಗಳ ಸಂಖ್ಯೆ ಹತ್ತಕ್ಕೆ ಏರಿದ್ದು, ರಾಜ್ಯದ ಹಲವು ಕೇಂದ್ರಗಳಿಂದ ಅವುಗಳು ಮುದ್ರಣವಾಗುತ್ತವೆ. ಆಗಿನ ಪತ್ರಿಕೆಗಳ ಪ್ರಸರಣ ಸಂಖ್ಯೆಗೆ ಹೋಲಿಸಿದರೆ ಈಗಿನವುಗಳ ಪ್ರಸರಣ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ.

# ಆಗ ಗೊತ್ತಿದ್ದ ಮೂಲಗಳಿಂದ ದಿನಕ್ಕೆ ಒಂದೆರಡು ಬಾರಿ ಸುದ್ದಿಗಳನ್ನು ತಿಳಿದುಕೊಳ್ಳುತ್ತಿದ್ದೆವು. ಈಗ ಎಲ್ಲಿಯೇ ಇರಲಿ, ಯಾವುದೇ ಸಮಯ ಆಗಿರಲಿ, ಒಬ್ಬರೇ ಇರಲಿ ಅಥವಾ ಸ್ನೇಹಿತರ ಜತೆಗಿರಲಿ ಸುದ್ದಿಯ ಪ್ರವಾಹ ನಿರಂತರವಾಗಿರುತ್ತದೆ. ದೇಶದಲ್ಲಿ ಈಗ ನೂರು ಕೋಟಿಗೂ ಅಧಿಕ ಮೊಬೈಲ್‌ ಫೋನ್‌ಗಳಿದ್ದು, ಅದರಲ್ಲಿ ಅರ್ಧದಷ್ಟು ಸಾಮಾಜಿಕ ಮಾಧ್ಯಮಗಳ ಗಾಳಕ್ಕೆ ಸಿಲುಕಿವೆ.

ಆದರೆ, ಈ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಘಟಿಸಿದ ಬಹುದೊಡ್ಡ ಬದಲಾವಣೆ ಎಂದರೆ, ಸಮಾಜದಲ್ಲಿ ತನ್ನ ಪಾತ್ರ ಏನು ಎಂಬ ವಿಷಯವಾಗಿ ಮಾಧ್ಯಮದ ದೃಷ್ಟಿಕೋನವು ಪಲ್ಲಟಗೊಂಡಿರುವುದು.

ಮಾಧ್ಯಮ ಈಗ ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಸ್ವತಂತ್ರ ವೀಕ್ಷಕನಾಗಷ್ಟೇ ಉಳಿದಿಲ್ಲ; ಬದಲಾಗಿ ಸಕ್ರಿಯ ಪಾಲುದಾರನೂ ಆಗಿಬಿಟ್ಟಿದೆ. ಅದೀಗ ಶಾಂತವಾದ ಹಾಗೂ ಯಾವುದೇ ವಿಷಯದ ಎಲ್ಲ ಮಗ್ಗುಲುಗಳ ಮೇಲೂ ಬೆಳಕು ಚೆಲ್ಲುವಂತಹ ಮಾಹಿತಿಯನ್ನಷ್ಟೇ ನೀಡಿ, ವಿಷಯದ ಕುರಿತು ಯಾವ ನಿಲುವನ್ನು ತಾಳಬೇಕು ಎನ್ನುವುದನ್ನು ಆ ಮಾಹಿತಿ ಪಡೆದವನಿಗೇ ಬಿಡುತ್ತಿಲ್ಲ. ಗಾಯಕ್ಕೆ ಮುಲಾಮು ಸವರುವಂತಹ ಕೆಲಸವನ್ನೂ ಅದು ಮಾಡುತ್ತಿಲ್ಲ. ಅದರ ಬದಲು, ಉರಿಯುವ ಬೆಂಕಿಗೆ ತುಪ್ಪ ಸುರಿಯುವಲ್ಲಿ, ಹಳೆಯ ಗಾಯಗಳನ್ನು ಕೆರೆಯುವಲ್ಲಿ ನಿರತವಾಗಿದೆ. ಪಕ್ಷಪಾತ ಧೋರಣೆ ಅನುಸರಿಸುವಲ್ಲಿ ಅದಕ್ಕೆ ಅಂಜಿಕೆಯಿಲ್ಲ; ಗುರುತುಗಳನ್ನು ಬಿಟ್ಟುಕೊಡುವಲ್ಲಿ ಯಾವ ಅಳುಕೂ ಇಲ್ಲ.

ವಾಸ್ತವವಾಗಿ, ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಿಂತ ನಿರ್ದಿಷ್ಟ ಸಮುದಾಯವನ್ನು ಹೆಸರಿಸಿ, ಅದರ ಮೇಲೆ ದಾಳಿ ನಡೆಸುವುದರಲ್ಲಿಯೇ ಈಗಿನ ಮಾಧ್ಯಮ ಖುಷಿ ಅನುಭವಿಸುತ್ತಿದೆ. ಏಕೆಂದರೆ, ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ, ಅದೂ ಬಹುಸಂಖ್ಯಾತ ರಾಜಕೀಯವು ಉಚ್ಛ್ರಾಯ ಸ್ಥಿತಿಯನ್ನು ತಲುಪಿರುವ ಈ ಸನ್ನಿವೇಶದಲ್ಲಿ, ತನ್ನೆಲ್ಲ ಪಾಪಗಳಿಗೆ ರಾಜಕೀಯ, ನ್ಯಾಯಿಕ, ಅಧಿಕಾರಿ ವರ್ಗ ಹಾಗೂ ಪೊಲೀಸ್‌ ವ್ಯವಸ್ಥೆ – ಹೀಗೆ ಎಲ್ಲ ಕಡೆಯಿಂದಲೂ ಬೆಂಬಲ, ಜನಪ್ರಿಯತೆ ಸಿಗುತ್ತದೆ ಎನ್ನುವುದು ಅದಕ್ಕೆ ಗೊತ್ತು. ಮುಕ್ತ ಮಾರುಕಟ್ಟೆಯಲ್ಲಿ ಅದು ರುಚಿಹೀನವೇ ಆಗಿರಲಿ ಅಥವಾ ಕಳಪೆಯೇ ಆಗಿರಲಿ, ಯಾವುದೇ ಸರಕನ್ನು ಮಾರಲು ನಿಂತರೂ ಅದಕ್ಕೆ ಗ್ರಾಹಕರು ಇರುತ್ತಾರೆ ಎಂಬುದೂ ಅದಕ್ಕೆ ಗೊತ್ತು.

ಹೌದು, ತಳ ಸೇರಲು ನಡೆದಿರುವ ರೇಸ್‌ ಈಗಿನದು.

ಮುಸ್ಲಿಂ ವಿದ್ಯಾರ್ಥಿಗಳು ಆಡಳಿತಶಾಹಿಯೊಳಗೆ ‘ನುಸುಳುವಂತೆ’ ಮಾಡಲು ‘ಯುಪಿಎಸ್‌ಸಿ ಜಿಹಾದ್‌’ ನಡೆಸಲಾಗುತ್ತಿದೆ ಎಂದು ಹಿಂದಿ ಟಿವಿ ಚಾನೆಲ್‌ವೊಂದು ಪ್ರಚೋದನೆ ನೀಡುವಂತಹ ‘ಷೋ’ ಪ್ರಸಾರ ಮಾಡಿದ್ದು ಇಂತಹ ರೇಸ್‌ನ ಭಾಗವೇ ಆಗಿದೆ. ಈ ವಿಷಯದಲ್ಲಿ ಕೊನೆಗೆ ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶ ಅನಿವಾರ್ಯವಾಯಿತು. ಪೀಠದಲ್ಲಿದ್ದ ಒಬ್ಬ ನ್ಯಾಯಮೂರ್ತಿಯವರು, ‘ಇದೊಂದು ವ್ಯವಸ್ಥಿತ ದಾಳಿಯಾಗಿದ್ದು, ಆ ಟಿವಿ ಕಾರ್ಯಕ್ರಮವನ್ನು ವೀಕ್ಷಿಸಲು ತುಂಬಾ ಖೇದವಾಗುತ್ತದೆ’ ಎಂದರೆ, ಇನ್ನೊಬ್ಬ ನ್ಯಾಯಮೂರ್ತಿಯವರು, ‘ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದು ಇಲ್ಲಿ ಎದ್ದು ಕಾಣುತ್ತದೆ’ ಎಂದಿದ್ದರು.

‘ಮಾಧ್ಯಮದ ಸ್ವಾತಂತ್ರ್ಯವನ್ನು ಗೌರವಿಸುತ್ತಲೇ ಸಂದೇಶವೊಂದನ್ನು ನೀಡುತ್ತಿದ್ದೇವೆ. ಯಾವುದೇ ಸಮುದಾಯವೂ ಹೀಗೆ ಮಾಧ್ಯಮದಿಂದ ದಾಳಿಗೆ ಒಳಗಾಗಬಾರದು’ ಎಂದಿದ್ದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ‘ಇಡೀ ಸಮುದಾಯವನ್ನು ಹೀಗೆ ಗುರಿಯಾಗಿಸಲು ನಾವು ಮಾಧ್ಯಮಕ್ಕೆ ಅವಕಾಶ ಕೊಡಬೇಕೇ’ ಎಂದೂ ಪ್ರಶ್ನಿಸಿದ್ದರು.

ಮೂವತ್ತು ವರ್ಷಗಳ ಹಿಂದೆ ಚನ್ನಪಟ್ಟಣದ ಘಟನೆಯ ವರದಿಗೆ ತೆರಳಿದ್ದ ಆ ಸಣ್ಣ ವಯಸ್ಸಿನ ವರದಿಗಾರರಿಗೆ ಪತ್ರಿಕೋದ್ಯಮದ ಹೊಣೆಯನ್ನು ನೆನಪಿಸಲು ಸುಪ್ರೀಂ ಕೋರ್ಟ್‌ನ ಅಗತ್ಯವೇನೂ ಕಾಡಿರಲಿಲ್ಲ.

***

ಮಾಧ್ಯಮಗಳು ಕೋಮು ಬಣ್ಣವನ್ನು ಬಳಿದುಕೊಂಡಿದ್ದು ಹೊಸ ಬೆಳವಣಿಗೆ ಏನೂ ಅಲ್ಲ. ಮೂರು ದಶಕಗಳ ಹಿಂದಿನಿಂದಲೂ –ಅಂದರೆ 1991ರಲ್ಲಿ ದೇಶ ಜಾಗತೀಕರಣಕ್ಕೆ ತೆರೆದುಕೊಂಡು ಬಂಡವಾಳ ಮತ್ತು ತಂತ್ರಜ್ಞಾನ ಸುಲಭವಾಗಿ ಹರಿದುಬರಲು ಆರಂಭಿಸಿದ ದಿನಗಳಿಂದಲೂ– ಈ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ರಾಜಕೀಯ ಹಾಗೂ ಸೈದ್ಧಾಂತಿಕ ಧ್ಯೇಯೋದ್ದೇಶ ಹೊಂದಿದವರು ಮಾಲೀಕರಾಗಿ, ಸಂಪಾದಕರಾಗಿ ಪತ್ರಿಕಾ ವೃತ್ತಿಯಲ್ಲಿ ತೂರಿಬರಲು ಶುರುವಾದ ಕಾಲಘಟ್ಟ ಅದು. ಆದರೆ, ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹಿಂದೆಂದೂ ಕಂಡರಿಯದಷ್ಟು ದೊಡ್ಡ ಪ್ರಮಾಣದಲ್ಲಿ, ವೇಗವಾಗಿ ಮತ್ತು ವ್ಯಾಪಕವಾಗಿ ಆ ಕೆಲಸ ಆಗುತ್ತಿದೆ.

ಕೊರೊನಾವೈರಸ್‌ನಂತಹ ದೊಡ್ಡ ಮಾನವ ಬಿಕ್ಕಟ್ಟನ್ನೂ ಅದು ಬಿಟ್ಟಿಲ್ಲ.

ಮಾರ್ಚ್ 25ರಂದು ಕೇವಲ 4 ಗಂಟೆಗಳ ಮುನ್ಸೂಚನೆಯೊಂದಿಗೆ ಲಾಕ್‌ಡೌನ್ ಘೋಷಿಸಿದಾಗ, ಅದು ಕಾರ್ಮಿಕರ ಭಾರೀ ವಲಸೆಗೆ ನಾಂದಿ ಹಾಡಿತು. ಧಾವಂತದಿಂದ ಲಕ್ಷಾಂತರ ಮಂದಿ ನಡೆದುಕೊಂಡೇ ಮನೆಯತ್ತ ಹೊರಟ ನೋಟಗಳು ಪೂರ್ವಸಿದ್ಧತೆಯ ವೈಫಲ್ಯವನ್ನು ಎತ್ತಿ ತೋರುತ್ತಿದ್ದವು. ಆಗ, ದೆಹಲಿಯಲ್ಲಿ ತಬ್ಲಿಗ್‌ ಜಮಾತ್‌ನಿಂದ ನಡೆದಿದ್ದ ಧಾರ್ಮಿಕ ಸಭೆಯನ್ನೇ ಸಾಂಕ್ರಾಮಿಕ ಹರಡಲು ಕಾರಣ ಎನ್ನುವಂತೆ ಬಿಂಬಿಸಲಾಯಿತು.

# ಹಿಂದಿ ಟಿವಿ ಚಾನೆಲ್‌ವೊಂದರ ಕಾರ್ಯಕ್ರಮಗಳ ಶೀರ್ಷಿಕೆಗಳು ಹೀಗಿದ್ದವು: ‘ಕೊರೊನಾ ಜಿಹಾದ್‌ ಸೇ ದೇಶ್‌ ಬಚಾವೊ (ಕೊರೊನಾ ಜಿಹಾದ್‌ನಿಂದ ದೇಶ ಉಳಿಸಿ) ಮತ್ತು ‘ಧರ್ಮ್‌ ಕೆ ನಾಮ್‌ ಪರ್‌ ಜಾನ್‌ ಲೇವಾ ಅಧರ್ಮ್‌’ (ಧರ್ಮದ ಹೆಸರಿನಲ್ಲಿ ಜೀವ ತೆಗೆಯುವುದು ಅಧರ್ಮ).

# ಮುಸ್ಲಿಮರು ಪ್ರಾರ್ಥನೆಯ ಸಂದರ್ಭದಲ್ಲಿ ಧರಿಸುವ ಟೋಪಿಯ ಚಿತ್ರವನ್ನು ತೋರಿಸಿದ ಮಾಧ್ಯಮ ಸಂಸ್ಥೆಯೊಂದು ದೇಶದ ಶೇ 60ರಷ್ಟು ಪ್ರಕರಣಗಳಿಗೆ ತಬ್ಲಿಗ್‌ ಕಾರ್ಯಕ್ರಮವೇ ಕಾರಣವೆಂದು ಮಾಹಿತಿ ನೀಡಿತ್ತು.

# ಪ್ರಮುಖ ಹಿಂದಿ ಪತ್ರಿಕೆಯೊಂದು ಇದೇ ವಿಷಯಕ್ಕೆ ಸಂಬಂಧಿಸಿದಂತೆ 15 ದಿನಗಳಲ್ಲಿ 156 ವರದಿಗಳನ್ನು ಮಾಡಿತ್ತು. ಈ ವಿಷಯವಾಗಿ ಎಂಟು ಸಂಪಾದಕೀಯಗಳು ಹಾಗೂ ಐದು ಕಾರ್ಟೂನ್‌ಗಳು ಸಹ ಅದರಲ್ಲಿ ಪ್ರಕಟವಾಗಿದ್ದವು. ಎಲ್ಲವೂ ಮುಸ್ಲಿಮರನ್ನೇ ಕೇಂದ್ರೀಕರಿಸಿದ್ದವು.

# ಹ್ಯಾಷ್‌ಟ್ಯಾಗ್‌ #Coronajihad ಎನ್ನುವುದು ನಾಲ್ಕೇ ದಿನಗಳಲ್ಲಿ ಮೂರು ಲಕ್ಷ ಬಾರಿ ಟ್ವೀಟ್‌ ಆಗಿತ್ತು. ಅದರಲ್ಲಿ ‘single-source’ (ಏಕೈಕ ಮೂಲ) ಎಂಬ ನುಡಿಗಟ್ಟನ್ನು ಬಳಸುವ ಮೂಲಕ ಮುಸ್ಲಿಮರತ್ತ ಬೊಟ್ಟುಮಾಡಿ ತೋರಿಸಲಾಗಿತ್ತು.

‘ತಬ್ಲಿಗ್‌ ಪ್ರಕರಣ’ ನಡೆದ ಸಂದರ್ಭದಲ್ಲಿಯೇ ನಂಜನಗೂಡಿನ ಔಷಧಿ ಫ್ಯಾಕ್ಟರಿ –ಅದು ದೆಹಲಿಯ ಮಾಧ್ಯಮ ಸಂಸ್ಥೆಯೊಂದರ ಒಡತಿಯ ಗಂಡನಿಗೆ ಸೇರಿದ್ದು– ಮೈಸೂರು ಜಿಲ್ಲೆಯಲ್ಲಿ ಶೇಕಡ 82ರಷ್ಟು ಪ್ರಕರಣಗಳಿಗೆ ಕಾರಣವಾಗಿತ್ತು. ಆದರೆ, ತಬ್ಲಿಗ್‌ ಜಮಾತ್‌ ಪ್ರಕರಣವನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮ ಯಾವ ಕನ್ನಡಕ ಹಾಕಿಕೊಂಡು ನೋಡಿತ್ತೋ ಅದೇ ಕನ್ನಡಕವನ್ನು ಹಾಕಿಕೊಂಡು ನಂಜನಗೂಡಿನ ಪ್ರಕರಣದ ತನಿಖೆಗೆ ಇಳಿಯಲಿಲ್ಲ.

ಬಾಂಬೆ ಹೈಕೋರ್ಟ್‌ ಕಳೆದ ತಿಂಗಳು ನೀಡಿದ ತನ್ನ ತೀರ್ಪಿನಲ್ಲಿ, ‘ತಬ್ಲಿಗ್‌ ಸಮಾವೇಶದಲ್ಲಿ ಪಾಲ್ಗೊಂಡವರು ವ್ಯವಸ್ಥಿತ ಅಪಪ್ರಚಾರದ ಪರಿಣಾಮವಾಗಿ ‘ಹರಕೆಯ ಕುರಿಗಳಾದರು’ ಎಂದು ಹೇಳಿತು. ಮುಸ್ಲಿಮರ ವಿರುದ್ಧ ದುರುದ್ದೇಶ ಹಾಗೂ ಪೂರ್ವಗ್ರಹದಿಂದ ನಡೆದ ಈ ಅಪಪ್ರಚಾರ ಮತ್ತು ನಿಂದನೆಯ ಕುರಿತು ಇಡೀ ದೇಶದಲ್ಲಿ ಮೂರು ಇಂಗ್ಲಿಷ್‌ ಪತ್ರಿಕೆಗಳು ಮಾತ್ರ ಸಂಪಾದಕೀಯ ಬರೆದಿದ್ದು ಆಶ್ಚರ್ಯದ ಸಂಗತಿ ಏನಲ್ಲ. ಸದಾ ಅಬ್ಬರಿಸುವ ಟಿವಿಗಳು ಸಹ ಈ ವಿಷಯದಲ್ಲಿ ಮೌನವಾಗಿದ್ದವು.

ಅದೇ ಮೂವತ್ತು ವರ್ಷಗಳ ಹಿಂದೆ ಚನ್ನಪಟ್ಟಣದಲ್ಲಿ ಗಾಳಿಸುದ್ದಿಗೆ ಕಿವಿಗೊಡದಂತೆ ಯುವ ವರದಿಗಾರರಿಗೆ ಎಚ್ಚರಿಸಲು ಹೈಕೋರ್ಟ್‌ನ ಅಗತ್ಯವೇನೂ ಕಾಡಿರಲಿಲ್ಲ.

***

ಇದೇ ಕಥೆ ಪ್ರತೀ ದಿನ, ಪ್ರತೀ ರಾತ್ರಿ, ಪ್ರತೀ ಭಾಷೆ ಹಾಗೂ ಮಾಧ್ಯಮದ ಪ್ರತಿಯೊಂದು ವೇದಿಕೆಯಲ್ಲೂ –ಮುದ್ರಣ, ಎಲೆಕ್ಟ್ರಾನಿಕ್‌ ಮತ್ತು ಡಿಜಿಟಲ್‌– ಪುನರಾವರ್ತನೆ ಆಗುತ್ತಲೇ ಇರುತ್ತದೆ; ಕೊನೆಯೇ ಇಲ್ಲದಂತೆ.

# ಈ ವರ್ಷದ ಜನವರಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದ ಬಳಿ ‘ಜೀವಂತ ಬಾಂಬ್‌’ ಪತ್ತೆಯಾಯಿತು. ತರಬೇತಿ ಹೊಂದಿದ ಅಂತರರಾಷ್ಟ್ರೀಯ ಭಯೋತ್ಪಾದಕರ ಗುಂಪು ಇದರ ಹಿಂದಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಈ ರೀತಿಯ ಆಕ್ರೋಶ ಹೊರಹೊಮ್ಮಿದೆ ಎಂಬ ನಿರ್ಣಯಕ್ಕೆ ಬರಲು ಕನ್ನಡದ ಬಹುತೇಕ ಮಾಧ್ಯಮಗಳಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಆದರೆ, ಆದಿತ್ಯ ರಾವ್‌ ಎಂಬಾತ ಆರೋಪಿ ಎನ್ನುವುದು ಗೊತ್ತಾದಾಗ ಅವುಗಳೆಲ್ಲ ಮೌನ ತಾಳಿದವು.

# ಗೋರಖಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು–ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಕ್ಕಳ ಚಿಕಿತ್ಸೆಗಾಗಿ ಸ್ವಂತ ಖರ್ಚಿನಲ್ಲಿ ಆಕ್ಸಿಜನ್‌ ಸಿಲೆಂಡರ್‌ಗಳನ್ನು ತಂದವರು ಮಕ್ಕಳ ವೈದ್ಯ ಡಾ. ಕಫೀಲ್‌ ಖಾನ್‌. ‘ಪ್ರಚೋದನಕಾರಿ ಭಾಷಣ’ದ ಕಾರಣಕ್ಕಾಗಿ ಅವರನ್ನು ಮೇಲಿಂದ ಮೇಲೆ ಜೈಲಿಗೆ ತಳ್ಳಲಾಯಿತು. ಕೋರ್ಟ್‌ ಆದೇಶದ ಮೂಲಕ ಆಗಸ್ಟ್‌ನಲ್ಲಿ ಅವರು ಬಿಡುಗಡೆ ಹೊಂದಿದಾಗ ಎಂಟು ಇಂಗ್ಲಿಷ್‌ ಪತ್ರಿಕೆಗಳಲ್ಲಿ ಸಂಪಾದಕೀಯವೇನೋ ಪ್ರಕಟವಾಯಿತು. ಅದರಲ್ಲಿ ಆರು ಪತ್ರಿಕೆಗಳು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಗೋರಖಪುರದ ಹಿಂದಿನ ಸಂಸದರಾಗಿದ್ದ ಯೋಗಿ ಆದಿತ್ಯನಾಥ ಅವರ ಹೆಸರನ್ನು ಪ್ರಸ್ತಾಪಿಸಲೇ ಇಲ್ಲ.

# ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ವಾಂಸ ಹಾಗೂ ವಿದ್ಯಾರ್ಥಿ ಹೋರಾಟಗಾರ ಡಾ. ಉಮರ್‌ ಖಾಲಿದ್‌ ಅವರನ್ನು ‘ಪ್ರಚೋದನಕಾರಿ ಭಾಷಣ’ದ ಮೂಲಕ ದೆಹಲಿ ಗಲಭೆಗೆ ಕಾರಣವಾದ ಆರೋಪದ ಮೇಲೆ ಈಚೆಗೆ ಬಂಧಿಸಲಾಗಿದೆ. ನೈಜ ಸಂಗತಿ ಏನೆಂದರೆ, ಅವರ 17 ನಿಮಿಷಗಳ ಭಾಷಣದ 20 ಸೆಕೆಂಡುಗಳನ್ನಷ್ಟೇ ಟಿವಿ ಚಾನೆಲ್‌ಗಳು ಆಯ್ದುಕೊಂಡು ಬಿತ್ತರಿಸಿದ್ದು. ತಮ್ಮ ಭಾಷಣದ ಉದ್ದಕ್ಕೂ ಅವರು ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದರು. ‘ಗೋಲಿ ಮಾರೋ’ ಎಂದಿದ್ದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾತ್ರ ಯಾರಿಗೂ ನೆನಪಾಗಲಿಲ್ಲ.

ಮಾಧ್ಯಮದ ಇಂತಹ ಅತಿರೇಕಗಳ ಪಟ್ಟಿ ದೊಡ್ಡದಿದೆ ಮತ್ತು ಭವ್ಯ ಇತಿಹಾಸ ಹೊಂದಿರುವ ಭಾರತೀಯ ಮಾಧ್ಯಮ ರಂಗಕ್ಕೆ ಇದು ಶೋಭೆ ತರುವಂಥದ್ದಲ್ಲ. 200 ವರ್ಷಗಳಷ್ಟು ದೀರ್ಘ ಚರಿತ್ರೆಯನ್ನು ಹೊಂದಿರುವ ಭಾರತೀಯ ಮಾಧ್ಯಮ, ಮೊದಲು ಸ್ವಾತಂತ್ರ್ಯ ಚಳವಳಿಯೊಂದಿಗೆ ಗುರುತಿಸಿಕೊಂಡಿತ್ತು. 1947ರ ಬಳಿಕ ರಾಷ್ಟ್ರಕಟ್ಟುವ ಕಾಯಕದಲ್ಲಿ ಕೈಜೋಡಿಸಿತ್ತು. ಎಲ್ಲ ಕಾಲದಲ್ಲೂ ಸಾರ್ವಜನಿಕ ಸೇವೆಯೇ ಅದರ ಧ್ಯೇಯವಾಗಿತ್ತು. ಆದರೆ, ಜಾಗತೀಕರಣದ ನಂತರದ ಅವಧಿಯಲ್ಲಿ ಅಂತಹ ಧ್ಯೇಯಗಳು ನೇಪಥ್ಯಕ್ಕೆ ಸರಿದಿದ್ದು, ಲಾಭವೊಂದೇ ಅದಕ್ಕೆ ಮುಖ್ಯವಾಗಿದೆ.

ದೇಶದ ಸುಳ್ಳು ಸುದ್ದಿಗಳ ರಾಜಧಾನಿ ಎನಿಸಿರುವ ಕರ್ನಾಟಕದಲ್ಲಿ ಸಮಸ್ಯೆ ತುಂಬಾ ಗಂಭೀರವಾಗಿದೆ. ಟಿಪ್ಪು ಸುಲ್ತಾನ್‌ನಿಂದ ಈದ್ಗಾ ಮೈದಾನದವರೆಗೆ ಪ್ರತಿಯೊಂದು ವಿಷಯದಲ್ಲೂ ಸುಳ್ಳು ಇಲ್ಲವೆ ತಿರುಚಿದ ಮಾಹಿತಿಯನ್ನು ಇಲ್ಲಿನ ಮಾಧ್ಯಮ ನೀಡುತ್ತಲೇ ಬಂದಿದೆ. ಅದರಲ್ಲಿ ಶಾಸಕರು ಹಾಗೂ ಸಂಸದರ ಪಾತ್ರವೂ ಇದೆ. ಇದೆಲ್ಲದರ ಪರಿಣಾಮವಾಗಿಯೇ ದಕ್ಷಿಣದಲ್ಲಿ ಬಿಜೆಪಿಗೆ ಕರ್ನಾಟಕ (ದಕ್ಷಿಣದಲ್ಲಿ ಬಿಜೆಪಿಗೆ ಅಧಿಕಾರ ಕೊಟ್ಟ ಏಕೈಕ ರಾಜ್ಯ) ದಿಡ್ಡಿಬಾಗಿಲನ್ನು ತೆರೆಯಿತು. ಅದರಲ್ಲಿ ಆಶ್ಚರ್ಯಪಡುವಂಥದ್ದು ಏನೂ ಇಲ್ಲ.

ಮಾಧ್ಯಮ ಎನ್ನುವುದು ಈಗ ಬಹುಸಂಖ್ಯಾತ ರಾಜಕೀಯದ ತುತ್ತೂರಿಯಾಗಿದೆ. ರಾಜಕೀಯ ವ್ಯವಸ್ಥೆಯೊಂದಿಗೆ ಒಂದಾಗಿ ದೇಶದ 18 ಕೋಟಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರ ರೀತಿಯಲ್ಲಿ ಕಾಣುವಂತೆ ಮಾಡುತ್ತಿದೆ. ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದತಿ ಇರಬಹುದು, ತ್ರಿವಳಿ ತಲಾಖ್‌ ನೀಡುವ ಪರಿಪಾಟವನ್ನು ಅಪರಾಧವೆಂದು ಘೋಷಿಸುವುದೇ ಆಗಿರಬಹುದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಡೆದ ಭೂಮಿಪೂಜೆ ನೆರವೇರಿದ್ದೇ ಇರಬಹುದು, ಮಸೀದಿಯಿಂದ ಬೆಳಗಿನ ಹೊತ್ತು ಕೇಳಿಬರುವ ಆಜಾನ್‌ನ ಅಲೆಯೇ ಆಗಿರಬಹುದು... ಮುಸ್ಲಿಮರ ವಿರುದ್ಧದ ಕಥೆ ಕಟ್ಟುವಲ್ಲಿ ಮಾಧ್ಯಮವೀಗ ರಾಜಕೀಯ ಕೈಗೊಂಬೆಯಾಗಿದೆ.

ಮಾಧ್ಯಮದ ಈ ಕೋಮುವಾದೀಕರಣ ಮತ್ತು ರಾಜಕೀಯ–ಕಾರ್ಪೊರೇಟ್‌ ಮಾಲೀಕತ್ವ ಎಲ್ಲಿ ಈ ಕ್ಷೇತ್ರವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳನ್ನು ಕಳೆದುಕೊಂಡ ಬಂಜರುಭೂಮಿ ಆಗುವುದೋ ಎನ್ನುವ ಭಯವನ್ನು ಹುಟ್ಟಿಸಿದೆ. ಸೈದ್ಧಾಂತಿಕ ಧ್ಯೇಯಗಳನ್ನು ಹೊಂದಿ, ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡ ಮಾಧ್ಯಮ ಈಗ ಸುದ್ದಿ ಹಾಗೂ ಅಭಿಮತಗಳನ್ನಷ್ಟೇ ನೀಡುವ ಸಾಧನವಾಗಿ ಉಳಿದಿಲ್ಲ. ಬದಲಾಗಿ ಗ್ರಾಹಕರ ಬ್ರೈನ್‌ವಾಶ್‌ ಮಾಡುವ, ಭೀತಿಯನ್ನು ಉಂಟುಮಾಡುವ, ದ್ವೇಷವನ್ನು ಹರಡುವ, ಅಷ್ಟೇ ಏಕೆ, ಎಲ್ಲವನ್ನೂ ಒಪ್ಪುವಂತೆಯೂ ಮಾಡುವ ಅಸ್ತ್ರವಾಗಿದೆ.

ರಾಜಕೀಯ ಕಾರಣಗಳಿಗಾಗಿ, ಆರ್ಥಿಕ ಲಾಭವನ್ನೂ ಮಾಡಿಕೊಂಡು, ತನ್ನ ವೇದಿಕೆಯಲ್ಲಿ ಫೇಸ್‌ಬುಕ್‌ ದ್ವೇಷ ಭಾಷಣಗಳಿಗೂ ಅವಕಾಶವನ್ನು ನೀಡಿದೆ ಎಂಬ ಸಂಗತಿಯನ್ನು ವಿದೇಶಿ ಮಾಧ್ಯಮ ಇತ್ತೀಚೆಗಷ್ಟೇ ಬಹಿರಂಗಪಡಿಸಿದೆ. ಸಮಸ್ಯೆಯ ಬೇರುಗಳು ಎಷ್ಟು ಆಳಕ್ಕೆ ಇಳಿದಿವೆ ಎನ್ನುವುದು ಅರ್ಥವಾಯಿತಲ್ಲ?

ಮಾಧ್ಯಮದ ಇಂದಿನ ಸ್ಥಿತಿ ಸುದ್ದಿಮನೆಗಳಲ್ಲಿ ಹೆಚ್ಚಿನ ವೈವಿಧ್ಯ ಬೇಕಾಗಿರುವುದನ್ನು ಒತ್ತಿ ಹೇಳುತ್ತದೆ. ಒಂದೇ ಸಮುದಾಯಕ್ಕೆ ಸೇರಿದ, ಒಂದೇ ಬಗೆಯ ಸಿದ್ಧಾಂತವನ್ನು ಹೊಂದಿದ ಸಂಪಾದಕರು ಹಾಗೂ ವರದಿಗಾರರು ಎಲ್ಲೆಡೆ ತುಂಬಿ ಹೋಗಿದ್ದಾರೆ. ಯಾವುದು ಸುದ್ದಿ ಎಂಬುದನ್ನು ಸೋಸಿನೋಡುವ ಕಟ್ಟುನಿಟ್ಟಿನ ವ್ಯವಸ್ಥೆ ತುರ್ತಾಗಿ ಬೇಕಾಗಿದೆ. ವಾಟ್ಸ್‌ಆ್ಯಪ್‌, ಪತ್ರಿಕೆ ಹಾಗೂ ಟಿವಿಗಳಲ್ಲಿ ನಾವು ಪಡೆಯುವ ಮಾಹಿತಿಯಲ್ಲಿ ಭಿನ್ನತೆಯು ಎದ್ದುಕಾಣಬೇಕಿದೆ. ಮಾಧ್ಯಮ ರಂಗಕ್ಕೆ ನುಗ್ಗುವ ಹೊಸನೀರಿನಲ್ಲೂ ಮೌಲ್ಯಗಳ ಗಂಧವನ್ನು ಅದ್ದಬೇಕಿದೆ.

ಸುದ್ದಿ ಗ್ರಾಹಕರು ಸಹ ತಮಗೆ ಏನು ಬೇಕು ಎಂಬುದನ್ನು ಒತ್ತಿಹೇಳುವ ಅಗತ್ಯವಿದೆ. ಸುದ್ದಿಯೇನು ಮನರಂಜನೆಯಲ್ಲ. ಅದು ಗ್ರಾಹಕನನ್ನು ರಂಜಿಸಬೇಕಿಲ್ಲ. ಕಚಗುಳಿ ಇಡುವುದೂ ಅದರ ಕೆಲಸವಲ್ಲ. ಆದರೆ, ಗ್ರಾಹಕರು ಇಂತಹ ‘ಮಸಾಲಾ’ ಸುದ್ದಿಯನ್ನೇ ಬಯಸಿದರೆ, ಮಾಧ್ಯಮ ಅಂತಹ ಅನಾರೋಗ್ಯಕಾರಿ ‘ಆಹಾರ’ವನ್ನೇ ಪೂರೈಸುತ್ತಾ ಹೋಗುತ್ತದೆ. ಒಂದು ಕಾಲದಲ್ಲಿ ‘ಖಡ್ಗಕ್ಕಿಂತ ಲೇಖನಿ ಹರಿತ’ ಎಂಬ ಮಾತು ಹೇಳಲಾಗುತ್ತಿತ್ತು. ನೀವು ಬಳಸಲು ಇಚ್ಛಿಸಿದರೆ, ಸೋಷಿಯಲ್‌ ಮೀಡಿಯಾದ ಈ ಕಾಲದಲ್ಲಿ ಖಡ್ಗ ಮತ್ತು ಪೆನ್ನಿಗಿಂತ ಹೆಬ್ಬೆರಳು ಹೆಚ್ಚು ಹರಿತವಾಗಿದೆ.

‘ರಥಯಾತ್ರೆ’ ನಡೆಸಿ 30 ವರ್ಷಗಳ ಬಳಿಕ ಅಡ್ವಾಣಿ ಅವರು, ಇದೇ 30ರಂದು ತೀರ್ಪು (ಬಾಬ್ರಿ ಮಸೀದಿ ನೆಲಸಮಗೊಳಿಸಿದ ಪ್ರಕರಣ) ಆಲಿಸಲು ಸಿಬಿಐ ಕೋರ್ಟ್‌ನಲ್ಲಿ ಹಾಜರಿರಲಿದ್ದಾರೆ. ಮಾಜಿ ಪತ್ರಕರ್ತರೂ ಆಗಿರುವ ಅವರು, ತುರ್ತು ಪರಿಸ್ಥಿತಿ ಮುಗಿದ ಬಳಿಕ, ‘ಇಂದಿರಾ ಗಾಂಧಿಯವರು ಮಾಧ್ಯಮಕ್ಕೆ ಬಾಗಿ ನಿಲ್ಲಲು ಹೇಳಿದರೆ, ಅದು ತೆವಳಲು ಆರಂಭಿಸಿತು’ ಎಂದಿದ್ದರು. ಮೋದಿ ಅವರ ಆಡಳಿತದ ಈ ಕಾಲದಲ್ಲಿ ದೇಶದ ಸಾಮಾಜಿಕ ತಂತುಗಳನ್ನೇ ತುಂಡರಿಸುವ ಕೆಲಸವನ್ನು ಮಾಧ್ಯಮ ಮಾಡುತ್ತಿದೆ ಎಂದು ಒಪ್ಪಿಕೊಳ್ಳುವ ಮೊದಲ ವ್ಯಕ್ತಿಯೂ ಅಡ್ವಾಣಿಯವರೇ ಆಗಿರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT