ನಾನು‌ ಮತ್ತು ಹಸಿರು ಯಾಣ!

7
sadashiva soraturu

ನಾನು‌ ಮತ್ತು ಹಸಿರು ಯಾಣ!

Published:
Updated:

ಸಂತೆ, ಸಂಬಳ, ಶ್ಯಾಪಿಂಗು, ಸಂಸಾರ, ಹೆಣಗಾಟ, ನೌಕರಿ ಮುಂತಾದವುಗಳ ಮಧ್ಯೆ ಕಳೆದು ಹೋಗಿ ತೀರ ಬೋರ್ ಅನಿಸಿದಾಗ ಬ್ಯಾಗಿನಲ್ಲಿ ಒಂದು ಜೊತೆ ಬಟ್ಟೆ ಮತ್ತು ಕ್ಯಾಮೆರಾ ಇಟ್ಟುಕೊಂಡು ಒಬ್ಬನೇ ಎಲ್ಲಾದರೂ ದೂರ ಹೊರಟು ಬಿಡುತ್ತೇನೆ.

ವಾರಗಟ್ಟಲೆ ಒಂಟಿಯಾಗಿ ಒಂದಿಷ್ಟು ತಿರುಗಾಡಿ ಕೊಂಡು ಬರುವ ಅವಕಾಶವದು. ಯಾರನ್ನೂ ಜೊತೆ ಕಟ್ಟಿಕೊಳ್ಳದೆ ಏಕಾಂಗಿಯಾಗಿ ಹೊರಟು ಬಿಡುತ್ತೇನೆ. ನಾನು ನನ್ನೊಳಗೆ ಮಾತಾಡಿಕೊಳ್ಳಲಿಕ್ಕೆ ನನಗೆ ಇದಕ್ಕಿಂತ ಸರಿಯಾದ ಆಯ್ಕೆ ಸಿಕ್ಕಿಲ್ಲ.

ತೀರಾ ಇತ್ತೀಚಿಗೆ ನಾ ಹೋಗಿದ್ದು ಯಾಣಕ್ಕೆ! ಅದೊಂದು ಪೂರ್ತಿ ರಾತ್ರಿಯ ಪಯಣ. ಕಿಟಕಿಯಾಚೆಯ ಗಾಳಿ, ರೈಲಿನ ಬ್ರಾಂಡೆಡ್ ಸದ್ದು, ಕಪ್ಪನೆಯ ರಾತ್ರಿ, ಅದರ ಮಧ್ಯೆಯೂ ಕಾಣಿಸುವ ತರತರಹದ ಬದುಕು ಇವೆಲ್ಲವುಗಳೊಂದಿಗೆ ನಾನು ಮಾತಿಗಿಳಿಯುತ್ತಿದ್ದೆ. ಕಿವಿಯಲ್ಲಿ ಜಯಂತ್ ಕಾಯ್ಕಿಣಿಯವರ ಹಾಡುಗಳು! ಅದ್ಭುತ ಏಕಾಂತವೊಂದನ್ನು ಸಾಧಿಸಿದೆ. ಸ್ವರ್ಗ ನನ್ನ ಜೇಬಿನಲ್ಲಿತ್ತು.

ಬೆಂಗಳೂರಿನಿಂದ ಹುಬ್ಬಳ್ಳಿ ತಲುಪಿ. ಅಲ್ಲಿಂದ ಶಿರಸಿಗೆ ಹೋಗಿ ಸೇರಿಕೊಂಡಾಗ ಬೆಳಗಾಗಿತ್ತು. ಅಲ್ಲಿಂದ ಟ್ಯಾಕ್ಸಿ ಹಿಡಿದು ಯಾಣದ ಕಡೆ ಹೊರಟೆ. ಹಸಿರಿನ ಮಧ್ಯೆ ವೇಗದ ಪ್ರಯಾಣ. ಮನಸ್ಸಿನಲ್ಲಿ ಕುಣಿತ.‌ ನನ್ನ ಪಾಲಿಗೆ ಬೆಂಗಳೂರು ಮರೆತು ಯಾವ ಕಾಲವಾಯಿತೊ!?ಈಗ ನನಗೆ ಯಾವುದರ ನೆನಪು ಕೂಡ ಸುಳಿಯುತ್ತಿಲ್ಲ. ಅದೊಂದು ಆ ಕ್ಷಣಕ್ಕೆ ಬೇಕಾದ ಸರಿಯಾದ ಮರೆವು!

ಯಾಣದ ಬೆಟ್ಟದ ಬುಡ ತಲುಪಿದಾಗ ಏರು ಬಿಸಿಲು. ಆದರೂ ನಸುಕಿನಲ್ಲಿ ಬೀಸುವಂತಹ ತಂಗಾಳಿ. ತಣ್ಣನೆಯ ವಾತಾವರಣ. ರಾತ್ರಿ ಎಂಟರ ಹೊತ್ತಿಗೆ ಬರಲು ಟ್ಯಾಕ್ಸಿಯವನಿಗೆ ಹೇಳಿ ಕಳುಹಿಸಿದೆ. ಈಗ ನಾನು ಮತ್ತು ಹಸಿರು ಯಾಣ. ಕಾಡಿನ ಮಧ್ಯೆದಲ್ಲಿರುವ ಎರಡು ಬಂಡೆಗಳಿಗೆ ಯಾಣ ಪ್ರಸಿದ್ಧಿ. ಬೆಟ್ಟದಲ್ಲಿ ಮಾಡಿರುವ ಕಾಲು ಹಾದಿಯಲ್ಲಿ ನಡೆದುಕೊಂಡೇ ಹೋಗಬೇಕು. ಸುಮಾರು ಎರಡು ಕಿಲೋಮೀಟರ್‌ನಷ್ಟು ದೂರ ಸಾಗಬೇಕು. ಕಾಡಿನ‌ ಮಧ್ಯೆ ನಡೆಯುವ ಸೊಗಸೇ ಬೇರೆ! ಅಷ್ಟಷ್ಟೇ ದೂರದಲ್ಲಿ ಎಡಭಾಗಕ್ಕೆ ಸುರಿಯುವ ಸಣ್ಣಸಣ್ಣ ಜಲಪಾತಗಳು. ಜಡ್ಡುಗಟ್ಟಿದ ನಗರದಂತಹ ಮನಸನ್ನು ಆ ನೀರಿನಲ್ಲಿ ತೊಳೆದುಕೊಂಡೆ. ಮನಸಿಗೆ ನವಿರಾದ ಹಸಿರು ಮೆತ್ತಿಕೊಂಡೆ. ಎ.ಸಿ. ರೂಮಿನಲ್ಲಿ ಅವಿತಂತೆ ಕೂತುಕೊಂಡಿದ್ದ ಬೆವರು ಕಿತ್ತು ಬರತೊಡಗಿತು. ದೇಹ ಹಗುರ, ಹಗುರ!

ನನ್ನ ಮುಂದೆ ನೀನೆಷ್ಟು ಸಣ್ಣವನು ನೋಡು ಅನ್ನುವಂತೆ ನಿಂತಿದ್ದ ಎರಡು ಬೃಹತ್ ಬಂಡೆಗಳು ಕರೆಯುತ್ತಿದ್ದವು. ಬೆಟ್ಟದ ಕಾಡು ಹಾದಿ, ಹರಿಯುವ ಝರಿ, ಗಾಳಿ ಇವೆಲ್ಲವುಗಳ ಮಧ್ಯೆ ನಾನೊಂದು ಚೆಂದದ ಲಹರಿಗೆ ಬಿದ್ದೆ. ನನ್ನಷ್ಟಕ್ಕೆ ನಾನೇ ಅದೆಷ್ಟು ಮಾತಾಡಿಕೊಂಡೆ! ಹೊರಗೂ ಪ್ರವಾಸ; ನನ್ನೊಳಗೂ ಪ್ರವಾಸ! ಮೋಹಿನಿ ಶಿಖರ ಮತ್ತು ಭೈರವೇಶ್ವರ ಶಿಖರಗಳಂತೆ ಅವುಗಳ ಹೆಸರು.

ಆಕಾಶ ಮುಟ್ಟುವಂತಿದ್ದ ಆ ಬಂಡೆಯೂ ತನ್ನ ಬುಡದಲ್ಲಿ ಖಾಲಿಖಾಲಿ. ನನ್ನ ಕೂಗಿಗೆ ಅದು‌ ಮರು ಉತ್ತರಿಸುವ ಅದರ ಸೌಜನ್ಯಕ್ಕೆ ಖುಷಿಯಾಯಿತು. ಹೀಗೆ ಎಲ್ಲವನ್ನೂ ಇಂಚಿಂಚು ಬಗೆದು ಬಗೆದು ಅನುಭವಿಸಿದೆ. ಕೆಳಗಿಳಿದು ಬಂದಾಗ ಗಂಟೆ ಎಂಟು ದಾಟಿತ್ತು. ಶಿರಸಿಯಡೆಗೆ ನಡೆದೆ; ನಾಳೆಯ ದಿನದ ಅಲೆತದ ಲೆಕ್ಕಾಚಾರ ಹಾಕುತ್ತಾ!!

–ಸದಾಶಿವ್ ಸೊರಟೂರು, ದೊಡ್ಡಬೊಮ್ಮನಹಳ್ಳಿ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !