ಶುಕ್ರವಾರ, ಮಾರ್ಚ್ 5, 2021
17 °C

ಮಹಾಯುದ್ಧವೆಂಬ ದುಃಸ್ವಪ್ನ

ಪ್ರೇಮಕುಮಾರ್‌ ಹರಿಯಬ್ಬೆ Updated:

ಅಕ್ಷರ ಗಾತ್ರ : | |

ಎರಡನೆ ಮಹಾಯುದ್ಧದ (1939) ಸಂದರ್ಭ. ಮಧ್ಯ ಕೇರಳದ ಕುಟ್ಟನಾಡ್‌ ಸುತ್ತಲಿನ ಪ್ರದೇಶದ ನೂರಾರು ಯುವಕರು ಸೇನೆಗೆ ಸೇರಿ ಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಒಬ್ಬೊಬ್ಬರಾಗಿ ಯುದ್ಧಕ್ಕೆ ಬಲಿಯಾಗುತ್ತಿದ್ದಾರೆ. ಅವರ ಸಾವಿನ ಮಾಹಿತಿ ಹೊತ್ತ ಟೆಲಿಗ್ರಾಂಗಳು ನಿತ್ಯ ಬರುತ್ತಿವೆ. ಅವನ್ನೆಲ್ಲ ವಿಲೇ ಮಾಡಿ ದಣಿದಿದ್ದಾನೆ ಈ ಪೋಸ್ಟ್‌ಮನ್‌. ವಿಲೇ ಮಾಡಿದಂತೆಲ್ಲ ಹೊಸದಾಗಿ ಟೆಲಿಗ್ರಾಂಗಳು ಬರುತ್ತಲೇ ಇವೆ. ಸತ್ತ ಸೈನಿಕರ ಕುಟುಂಬಗಳ ನೋವು, ಸಂಕಟಗಳಿಗೆ ಸಾಕ್ಷಿಯಾಗುತ್ತ ಅವನು ಹತಾಶನಾಗಿದ್ದಾನೆ. 

ಈ ಪೋಸ್ಟ್‌ಮನ್‌ ಮಾಜಿ ಸೈನಿಕ. ಮೊದಲ ಮಹಾಯುದ್ಧದಲ್ಲಿ ಕಾಲು ಊನಗೊಂಡು ನಿವೃತ್ತನಾದವನು. ಅವನ ಇಬ್ಬರು ಮಕ್ಕಳು ಈಗ ಯುದ್ಧದಲ್ಲಿ ಸತ್ತ ಸುದ್ದಿ ಹೊತ್ತು ತಂದ ಟೆಲಿಗ್ರಾಂಗಳು ಬಂದಿವೆ. ಅವಿನ್ನೂ ಅವನ ಚೀಲದಲ್ಲಿಯೇ ಇವೆ. ಮಕ್ಕಳ ಯೋಗಕ್ಷೇಮ ಕುರಿತು ಸದಾ ಚಿಂತಿಸುವ, ಅವರಿಗಾಗಿ ಪ್ರಾರ್ಥಿಸುವ ಪತ್ನಿಗೆ ಮಕ್ಕಳ ಸಾವಿನ ಸುದ್ದಿ ಹೇಳುವ ಧೈರ್ಯ ಅವನಿಗಿಲ್ಲ. ಹಾಗೇ ತನ್ನ ಬಳಿ ಇರುವ ಹತ್ತಾರು ಟೆಲಿಗ್ರಾಂಗಳನ್ನು ವಿಲೇ ಮಾಡಲೂ ಹಿಂಜರಿಕೆ. ಅವನ ತಲೆ ಗೊಂದಲದ ಗೂಡಾಗಿದೆ.

ಈ ಮನಕಲಕುವ ಪ್ರಸಂಗ ಬರುವುದು ಕೇರಳದ ಪ್ರಸಿದ್ಧ ಸಾಹಿತಿ ದಿವಂಗತ ತಕಳಿ ಶಿವಶಂಕರ ಪಿಳ್ಳೈ ಅವರ ಕಯಾರ್‌ ಕಾದಂಬರಿಯಲ್ಲಿ. ಪ್ರಪಂಚ ಕಂಡ ಎರಡು ಮಹಾಯುದ್ಧಗಳು ಮುಗಿದು ಹಲವು ದಶಕಗಳು ಕಳೆದಿವೆ. ಈ ಯುದ್ಧಗಳಲ್ಲಿ ಮಕ್ಕಳು, ಸಂಬಂಧಿಗಳನ್ನು ಕಳೆದುಕೊಂಡ ಕುಟುಂಬಗಳು ತಮ್ಮ ನೋವು, ಸಂಕಟಗಳನ್ನು ಮರೆತಿರಬಹುದು. ಕೆಲವರನ್ನು ಅವು ಕೆಟ್ಟ ಕನಸಿನಂತೆ ಕಾಡುತ್ತಲೂ ಇರಬಹುದು. ಎರಡೂ ಮಹಾಯುದ್ಧಗಳು ಲಕ್ಷಾಂತರ ಜನರನ್ನು ಬಲಿ ಪಡೆದಿವೆ. ಕೆಲ ದೇಶಗಳಲ್ಲಿ ಯುದ್ಧದ ಕುರುಹುಗಳು ಇಂದಿಗೂ ಕಾಣಬಹುದು.

ಕುಟ್ಟನಾಡ್‌ನ 650ಕ್ಕೂ ಹೆಚ್ಚು ಸೈನಿಕರು ಎರಡನೆ ಮಹಾ ಯುದ್ಧದಲ್ಲಿ ಮೃತಪಟ್ಟಿದ್ದರಂತೆ. ಈ ಸಂಗತಿ ತಕಳಿ ಅವರನ್ನು ಬಹುವಾಗಿ ಕಾಡಿರಬಹುದು. ಅವರು ಕಯಾರ್‌ ಕಾದಂಬರಿ ಬರೆದದ್ದು 1978ರಲ್ಲಿ. ಅದು ನಾಲ್ಕು ದಶಕಗಳ ನಂತರ ಭಯಾನಕಂ (2017) ಹೆಸರಿನಲ್ಲಿ ಸಿನಿಮಾ ಆಗಿದೆ. ಈ ಸಿನಿಮಾ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದು ಸಿನಿಮಾಸಕ್ತರ ಗಮನ ಸೆಳೆದಿದೆಯಲ್ಲದೆ ಗೋವಾ ಮತ್ತಿತರ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.

‘ಭಯಾನಕಂ’ ಎರಡನೆ ಮಹಾಯುದ್ಧದ ಪರಿಣಾಮಗಳನ್ನು ಸೂಕ್ಷ್ಮವಾಗಿ, ಕಲಾತ್ಮಕವಾಗಿ ಕಟ್ಟಿಕೊಡುವ ಸಿನಿಮಾ. ಜೈರಾಜ್‌ ಇದರ ನಿರ್ದೇಶಕರು. ತಕಳಿ ಅವರ ಕಥೆಗೆ ಚಿತ್ರಕಥೆ ಬರೆದು ತೆರೆಗೆ ಸೊಗಸಾಗಿ ಅಳವಡಿಸಿದ್ದಾರೆ. ಏಳೆಂಟು ದಶಕಗಳ ಹಿಂದಿನ ಕೇರಳ ಹೇಗಿತ್ತು ಎನ್ನುವುದಕ್ಕೆ ಈ ಸಿನಿಮಾ ಕೆಲಮಟ್ಟಿಗೆ ದಾಖಲೆಯೂ ಆಗುತ್ತದೆ. ಮಳೆ, ಹಿನ್ನೀರು ಪ್ರದೇಶದ ಅಗಾಧತೆಯನ್ನು ದೊಡ್ಡ ತೆರೆಯ ಮೇಲೆ ನೋಡಬೇಕು. ಭಯಾನಕಂ ಎರಡನೇ ಮಹಾಯುದ್ಧದಲ್ಲಿ ಹುತಾತ್ಮರಾದವರಿಗೆ ಮತ್ತು ತಕಳಿ ಅವರಿಗೆ ಸಲ್ಲಿಸುವ ಭಾವಪೂರ್ಣ ಶ್ರದ್ಧಾಂಜಲಿ. ಮಳೆ, ಪ್ರವಾಹ, ಹಿನ್ನೀರು, ಕಾಡು, ಕಡಲುಗಳು ಮಲಯಾಳ ಸಿನಿಮಾ ನಿರ್ದೇಶಕರ ಪಾಲಿಗೆ ವರವಿದ್ದಂತೆ. ಜೈರಾಜ್‌ ತಕಳಿಯವರ ಕಥೆಯನ್ನು ಹೇಳುವುದರ ಜತೆಗೆ  ಹಿನ್ನೀರು ಪ್ರದೇಶದಲ್ಲಿ ಬದುಕು ಕಟ್ಟಿಕೊಂಡ ಜನ ಸಾಮಾನ್ಯರ ಬವಣೆಗಳ ಮೇಲೂ ಬೆಳಕು ಚೆಲ್ಲಿದ್ದಾರೆ.

ಕುಟ್ಟನಾಡ್‌ ಜನರಿಗೆ ಪೋಸ್ಟ್‌ಮನ್‌ ಬಂದನೆಂದರೆ ಏನೋ ಸಂಭ್ರಮ. ಸೇನೆಯಲ್ಲಿರುವ ಮಕ್ಕಳ ಯೋಗಕ್ಷೇಮದ ಮಾಹಿತಿ ಮತ್ತು ಅವರು ಕಳುಹಿಸಿದ ಹಣವನ್ನು ತಂದು ಕೊಡುತ್ತಾನೆಂಬ ಖುಷಿ. ವಿಳಾಸದಾರರನ್ನು ಹುಡುಕಿಕೊಂಡು ಹೋಗಿ ಪತ್ರ, ಮನಿಯಾರ್ಡರ್‌ಗಳನ್ನು ವಿಲೇ ಮಾಡುವ ಅವನಿಗೆ ಹಳ್ಳಿಗಳ ಸಮಸ್ತರ ಪರಿಚಯವಿದೆ. ಸೇನೆಯಲ್ಲಿರುವ ಮಗನೊ, ಮೊಮ್ಮಗನೊ ಬರೆದ ಪತ್ರ, ಕಳುಹಿಸಿದ 6 ರೂ ಹಣ ಪಡೆಯುವಾಗ ಅವರು ಅನುಭವಿಸುವ ಸಂತಸ, ನೆಮ್ಮದಿಯ ಭಾವಗಳಿಗೆ ಅವನು ಸಾಕ್ಷಿ.

ಈ ಪೋಸ್ಟ್‌ಮನ್‌ಗೆ ಯುದ್ಧದ ಪರಿಣಾಮಗಳು, ಸೈನಿಕರ ಕಷ್ಟಗಳೂ ಗೊತ್ತು. ಸೈನ್ಯಕ್ಕೆ ಸೇರುವ ಯುವಕರ ಬಡತನದ ಅರಿವಿದೆ. ಇಷ್ಟಾದರೂ ಸೇನೆ ಸೇರಲು ಸಾಲುಗಟ್ಟಿ ನಿಲ್ಲುವ ಯುವಕರ ಉತ್ಸಾಹ ಕಂಡು ಮರುಗುತ್ತಾನೆ. ಸೇನೆಗೆ ಸೇರುವುದೆಂದರೆ ಬಲಿಗೆ ಸಿದ್ಧವಾದಂತೆ ಎಂದೂ ಗೊಣಗಿಕೊಳ್ಳುತ್ತಾನೆ. ಸೈನಿಕರ ಸ್ಥಿತಿಗತಿಗಳು ಈಗ ಸ್ವಲ್ಪ ಬದಲಾಗಿರಬಹುದು. ಆದರೂ ಅವರು ದೇಶಕ್ಕಾಗಿ ಬಲಿಯಾಗಲು ಸಿದ್ಧರಾದವರೇ. ‌

ಸಿನಿಮಾ ಆರಂಭವಾಗುವುದು ನಿವೃತ್ತ ಸೈನಿಕ ಪೋಸ್ಟ್‌ಮನ್‌ ಕೆಲಸಕ್ಕೆ ಸೇರಿ ಕುಟ್ಟನಾಡ್‌ಗೆ ಬರುವುದರೊಂದಿಗೆ. ದೋಣಿಯಲ್ಲಿ ಕೂತು ತಾನೇ ಹುಟ್ಟು ಹಾಕಿಕೊಂಡು ವಿಳಾಸದಾರರಿಗೆ ಪತ್ರಗಳು, ಮನಿಯಾರ್ಡರ್‌ಗಳನ್ನು ವಿಲೇ ಮಾಡುತ್ತ ಸಂತೋಷವಾಗಿದ್ದಾನೆ.  ಕಂಡ ಕೂಡಲೇ ಜನರು ಅವನನ್ನು ಸುತ್ತುವರಿಯುತ್ತಾರೆ. ಪತ್ರವನ್ನೊ, ಹಣವನ್ನೊ ಪಡೆದು ಉಪಕೃತ ಭಾವದಲ್ಲಿ ಅವನನ್ನು ಸತ್ಕರಿಸುತ್ತಾರೆ. ಅನಕ್ಷರಸ್ಥರು ಅವನಿಂದ ಪತ್ರ ಓದಿಸಿ ಸಂತೋಷಪಡುತ್ತಾರೆ. ಸೇನೆಯಲ್ಲಿರುವ ಮೊಮ್ಮಗ ಯಾವಾಗ ಬರುತ್ತಾನೆಂದು ಪದೇ ಪದೇ ಹಣ್ಣು ಮುದುಕನ ಪ್ರಶ್ನೆಗೆ ಬೇಸರಿಸಿಕೊಳ್ಳದೆ ಮೊಮ್ಮಗ ಬರುತ್ತಾನೆ ಎಂಬ ಉತ್ತರ ಹೇಳುತ್ತಾನೆ. ಓಣಂ ಹಬ್ಬದ ನಂತರ ಮಳೆ ಆರಂಭವಾಗುತ್ತದೆ. ಅದರ ಬೆನ್ನಿಗೆ ಎರಡನೆ ಮಹಾಯುದ್ಧ ಆರಂಭವಾಗುತ್ತದೆ. ನಂತರ ಅವನ ದಿನಚರಿ ಬದಲಾಗುತ್ತ ಹೋಗುತ್ತದೆ. ಯುದ್ಧ ತೀವ್ರಗೊಂಡ ನಂತರ ಕುಟ್ಟನಾಡ್‌ ಜನರಲ್ಲಿ ಆತಂಕ ಹೆಚ್ಚುತ್ತ ಹೋಗುತ್ತದೆ. ಪೋಸ್ಟ್‌ಮನ್‌ನನ್ನು ನೋಡುವ ಪರಿ ಬದಲಾಗುತ್ತದೆ. ಅವನು ಮನೆ ಬಳಿ ಬರುವುದೇ ಬೇಡ ಎಂದು ಬಯಸುತ್ತಾರೆ. ಸಾವಿನ ಸುದ್ದಿ ತರುವ ಅಪಶಕುನ ಎಂದೇ ಭಾವಿಸುತ್ತಾರೆ. ಅವನು ಮನಿಯಾರ್ಡರ್‌ ತಂದಿದ್ದರೂ ಟೆಲಿಗ್ರಾಂ ತಂದಿದ್ದಾನೆ ಎಂದು ಭಾವಿಸುತ್ತಾರೆ. ಕೆಲವರು ಅವನ ಮೇಲೆ ಹಲ್ಲೆ ಮಾಡುತ್ತಾರೆ.

ದಿನವಿಡೀ ಟೆಲಿಗ್ರಾಂಗಳನ್ನು ವಿಲೇ ಮಾಡಿದರೂ ಅವು ಮುಗಿಯುವುದೇ ಇಲ್ಲ. ಕೊನೆ ಕೊನೆಗೆ ಯಂತ್ರದಂತೆ ಕೆಲಸ ಮಾಡುತ್ತ ಹತಾಶನಾಗಿ ಬಿಡುತ್ತಾನೆ. ಸತ್ತ ಸೈನಿಕರ ಕುಟುಂಬಗಳ ಸಂಕಟಗಳು ನೆನಪಾಗಿ ಊಟ, ನಿದ್ದೆಗಳಿಂದ ದೂರವಾಗುತ್ತ ಹೋಗುತ್ತಾನೆ. ಪತ್ನಿ ಗೌರಿ ಕುಂಜಮ್ಮೆ ಸಕಾರಾತ್ಮಕ ಮನಸ್ಸಿನವಳು. ಗಂಡನ ಮುಖದಲ್ಲಿ ಕಾಣುವ ಹತಾಶೆ, ನೋವು ಅವಳಿಗೆ ಅರ್ಥವಾಗದು. ಇದರ ನಡುವೆ ಒಬ್ಬ ಮಗನ ಸಾವಿನ ಟೆಲಿಗ್ರಾಂ ಬರುತ್ತದೆ. ಕೆಲ ದಿನಗಳ ನಂತರ ಇನ್ನೊಬ್ಬನದು. ಕುಟ್ಟನಾಡ್‌ನ ಬಹುತೇಕ ಮನೆಗಳಲ್ಲಿ ಸೂತಕದ ಛಾಯೆ. ಸ್ವಂತ ಮಕ್ಕಳನ್ನು ಕಳೆದುಕೊಂಡ ಅವನೂ ದುಃಖದಲ್ಲಿದ್ದಾನೆ. ಆದರೆ ಅದನ್ನು ಪತ್ನಿಗೆ ಹೇಳುವ ಶಕ್ತಿ ಅವನಿಗಿಲ್ಲ. ರಾತ್ರಿ ಮನೆಯಲ್ಲಿ ಉಣ್ಣಲು ಕೂತರೆ ಅನ್ನ ಇಳಿಯದು. ಕಣ್ಣು ಮುಚ್ಚಿದರೆ ನಿದ್ದೆ ಸುಳಿಯದು. ಸತ್ತ ಸೈನಿಕರ ಅಪ್ಪನೊ, ಅಮ್ಮನೊ, ಅಣ್ಣ ತಮ್ಮಂದಿರೊ, ಹೆಂಡತಿ, ಮಕ್ಕಳ ಮುಖವೇ ಎದುರಾಗುತ್ತದೆ.

ಒಂದು ಇಳಿಸಂಜೆ ನಡು ಹಿನ್ನೀರಲ್ಲಿ ದೋಣಿಯಲ್ಲಿ ಕೂತು ಚೀಲದಲ್ಲಿರುವ ಟೆಲಿಗ್ರಾಂಗಳನ್ನು ತೆಗೆದು ಮತ್ತೆ ಮತ್ತೆ ನೋಡುತ್ತಾನೆ. ಅವನ್ನೆಲ್ಲ ವಿಲೇ ಮಾಡಿ ಹತ್ತಾರು ಕುಟುಂಬಗಳನ್ನು ದುಃಖಕ್ಕೆ ದೂಡುವ ಬದಲು, ಯುದ್ಧ ಮುಗಿದ ಮೇಲೆ ಎಲ್ಲರೂ ಊರಿಗೆ ಬರುತ್ತಾರೆಂಬ ನಿರೀಕ್ಷೆಯಲ್ಲಿ ಅವರನ್ನು ಉಳಿಸುವುದೇ ಸರಿ ಎಂದು ಅನ್ನಿಸಿಬಿಡುತ್ತದೆ. ಮೊದಲು ತನ್ನ ಮಕ್ಕಳ ಸಾವಿನ ಟೆಲಿಗ್ರಾಂಗಳನ್ನು ಪುಟ್ಟ ದೋಣಿಯನ್ನಾಗಿ ಮಾಡಿ ನೀರಿನಲ್ಲಿ ತೇಲಿ ಬಿಡುತ್ತಾನೆ. ನಂತರ ಒಂದಾದ ಮೇಲೊಂದು ದೋಣಿಗಳನ್ನು ತೇಲಿ ಬಿಟ್ಟು ನಿರಾಳನಾಗುತ್ತಾನೆ.

ತಕಳಿಯವರ ಕಥೆ ಸಿನಿಮಾ ಆಗುವ ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆಗಳನ್ನು ಕಂಡಿದೆ. ಯುದ್ಧದ ಪರೋಕ್ಷ ಪರಿಣಾಮಗಳನ್ನಷ್ಟೆ ಸೂಕ್ಷ್ಮವಾಗಿ ಹೇಳುತ್ತ ನೋಡುಗರನ್ನು ಭಯಾನಕಂ ತನ್ನತ್ತ ಸೆಳೆದುಕೊಳ್ಳುತ್ತದೆ. ಪೋಸ್ಟ್‌ಮನ್‌ ಆಗಿ ನಟ ರೆಂಜಿ ಪಣಿಕ್ಕರ್‌ ಹತ್ತಾರು ಬಡ ಕುಟುಂಬಗಳ ನೋವು ಸಂಕಟಗಳನ್ನು ಆವಾಹಿಸಿಕೊಂಡವರಂತೆ ವಿಜೃಂಭಿಸಿದ್ದಾರೆ. ಪೋಸ್ಟ್‌ಮನ್‌ ಪತ್ನಿಯಾಗಿ ಆಶಾ ಶರತ್‌ ನಟಿಸಿದ್ದಾರೆ. ಉಳಿದ ಪಾತ್ರಗಳಿಗೆ ಸ್ಥಳೀಯರನ್ನೇ ಜೈರಾಜ್‌ ಬಳಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಒಂದೇ ಒಂದು ಕಮಷಿರ್ಯಲ್‌ ಅಂಶವಿಲ್ಲ. ದೊಡ್ಡ ಬಜೆಟ್ಟಿನದೂ ಅಲ್ಲ. ಮಹಾ ಯುದ್ಧ ಕಾಲದ ಜನರ ನೋವು ನಲಿವುಗಳನ್ನು ಕೇರಳದ ನಿಸರ್ಗದ ಹಿನ್ನೆಲೆಯಲ್ಲಿ ಅತ್ಯಂತ ಆಪ್ತವಾಗಿ ಕಟ್ಟಿಕೊಡುವ ಸಿನಿಮಾ ಆಗಿ ಭಯಾನಕಂ ಇಷ್ಟವಾಗುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.