ಶನಿವಾರ, ಅಕ್ಟೋಬರ್ 16, 2021
29 °C

ಪುಸ್ತಕ ವಿಮರ್ಶೆ: ಪ್ರಾದೇಶಿಕತೆಯ ದಟ್ಟ ಚಿತ್ರಣ

ಕೇಶವ ಶರ್ಮ ಕೆ. Updated:

ಅಕ್ಷರ ಗಾತ್ರ : | |

Prajavani

‘ಬಯಲರಸಿ ಹೊರಟವಳು’ ಛಾಯಾಭಟ್ ಅವರು ಬರೆದ ಕತೆಗಳ ಸಂಕಲನ. ಇದಕ್ಕೆ ಛಂದ ಪುಸ್ತಕ ಬಹುಮಾನವೂ ದೊರೆತಿದೆ. ಈ ಸಂಕಲನದಲ್ಲಿ ಒಟ್ಟು ಹತ್ತು ಕತೆಗಳು ಇವೆ. ಅವುಗಳು ಒಂದು ದೃಷ್ಟಿಯಿಂದ ಪ್ರದೇಶ ಮತ್ತು ಅದರ ಚರಿತ್ರೆಯನ್ನು ಹೇಳುತ್ತವೆ. ಪ್ರದೇಶ ಮತ್ತು ಅದರ ಸಮಸ್ಯೆಗಳನ್ನು ಕತೆಗಾರ್ತಿ ಇಲ್ಲಿ ಅತ್ಯಂತ ಸೂಕ್ಷ್ಮವಾಗಿ ಎತ್ತಿಕೊಂಡಿದ್ದಾರೆ.

ವಾಸ್ತವವಾಗಿ ಈವತ್ತು ನಮ್ಮ ಎದುರು ನಾನಾ ನಮೂನೆಯ ಪ್ರಶ್ನೆಗಳು ಇವೆ. ಅವುಗಳನ್ನು ನೋಡಲು ನಮಗೆ ಸಮಾಜವಿಜ್ಞಾನ ಮತ್ತು ಚರಿತ್ರೆಯು ಹೇಗೆ ಅನುಕೂಲವನ್ನು ಮಾಡಿಕೊಡುತ್ತವೆಯೋ ಹಾಗೆಯೇ ಕಥನಗಳೂ ಸಹಾಯವನ್ನು ಮಾಡುತ್ತವೆ. ಇಲ್ಲಿನ ಕತೆಗಳಿಗೂ ಅಂತಹ ಗುಣವಿದೆ. ವಾಸ್ತವ ಮಾರ್ಗವನ್ನು ಅವುಗಳು ಅನುಸರಿಸಿವೆ. ಸಂಕಲನದ ಮೊದಲ ಕತೆ ಮನುಷ್ಯ ಮತ್ತು ನಿಸರ್ಗದ ಸಂಬಂಧವನ್ನು ನಿರೂಪಿಸುತ್ತದೆ. ಒಂದು ಹುಣಿಸೆ ಮರವು ಇದರಲ್ಲಿ ಕೇಂದ್ರ ಪಾತ್ರವನ್ನು ವಹಿಸಿದ್ದು ಗಮನಾರ್ಹ. ಈ ಕತೆಯಲ್ಲಿ ನೆರೆ ಮತ್ತು ಅದರ ನಡುವೆ ಸಿಕ್ಕಿ ಹಾಕಿಕೊಂಡ ಮನುಷ್ಯರ ಜೀವನ ಕ್ರಮವೂ ಮುಖ್ಯವಾಗಿದೆ. ಇದು ಈ ಸಂಕಲನದ ಮುಖ್ಯ ಕತೆಯೂ ಹೌದು.

ಈ ಸಂಕಲನದ ಮತ್ತೊಂದು ಕತೆ ‘ಕೋಲ್ಮಿಂಚು’. ಇದರಲ್ಲಿಯೂ ಪಲ್ಲಟವಾಗುತ್ತಿರುವ ಸಮಾಜ ಮತ್ತು ಪರಿಸರದ ಚಿತ್ರಣವಿದೆ. ಈಗಲೂ ನಮ್ಮ ಗ್ರಾಮ ಜಗತ್ತು ಹೇಗೆ ಇದೆ ಎಂದು ಹೇಳುವುದು ಮಾತ್ರವಲ್ಲ, ಅಲ್ಲಿನ ಮನುಷ್ಯರ ಕಷ್ಟಗಳು ಹೇಗೆ ಇರುತ್ತವೆ ಎನ್ನುವುದನ್ನು ಇದು ಹೇಳುತ್ತದೆ. ದಟ್ಟ ಕಾಡಿನ ಚಿತ್ರಣದಿಂದ ಈ ಕತೆ ಪ್ರಾರಂಭವಾಗುತ್ತದೆ. ಅದರ ವರ್ಣನೆಯೇ ನಮ್ಮ ಗಮನವನ್ನು ಸೆಳೆಯುತ್ತದೆ.

ಚಾರಿತ್ರಿಕ ವ್ಯಂಗ್ಯ ಎಂದರೆ ನಮ್ಮ ಹಳ್ಳಿಗಳಿಗೆ ಈವತ್ತು ಕೂಡಾ ಅನೇಕ ಸವಲತ್ತುಗಳು ಸಿಕ್ಕಿಲ್ಲ. ಮುಂಡಗೋಡು, ಜೋಯಿಡಾ ಪ್ರದೇಶಗಳು ಇದಕ್ಕೆ ದ್ಯೋತಕ. ಇವು ಉತ್ತರ ಕನ್ನಡಕ್ಕೆ ಸೇರಿದ ಪ್ರದೇಶಗಳು. ಇಲ್ಲಿ ಸರ್ಕಾರವು ತಿರುಗಿ ನೋಡಿದ ಹಾಗೆ ಕಾಣುವುದಿಲ್ಲ. ಅದನ್ನೇ ನಾವು ಕತೆಯ ವಿನ್ಯಾಸದಲ್ಲಿ ನೋಡುತ್ತೇವೆ. ನಿತ್ಯದ ಜೀವನವು ಒಂದು ಹಂತದಲ್ಲಿ ಚರಿತ್ರೆಯೂ ಆಗುತ್ತದೆ ಎನ್ನುವ ಸೂಚನೆಯನ್ನು ಈ ಕತೆಗಳು ನಿರೂಪಿಸುತ್ತವೆ.

ನಿರ್ದಿಷ್ಟವಾದ ಪ್ರದೇಶ, ಅಲ್ಲಿನ ನಿತ್ಯದ ಜೀವನ ಹಾಗೂ ಅವೇ ಚರಿತ್ರೆಯಾಗುವ ವಿಧಾನ ಛಾಯಾ ಭಟ್ ಕತೆಗಳ ಲಕ್ಷಣ. ಚರಿತ್ರೆ ಎಂದರೆ ಅದು ದೊಡ್ಡ ಮನುಷ್ಯರದ್ದೇ ಆಗಬೇಕಾಗಿಲ್ಲ. ಸಾಮಾನ್ಯರೂ ಚರಿತ್ರೆಯ ಭಾಗವೇ ಆಗಿರುತ್ತಾರೆ. ಅದರ ಜೊತೆಗೆ ಸಾಹಿತ್ಯ ಮತ್ತು ಚರಿತ್ರೆಯ ಪ್ರಶ್ನೆಗೆ ಒಂದು ದ್ವಂದ್ವಾತ್ಮಕ ಸಂಬಂಧವಿದೆ ಎನ್ನುವುದನ್ನು ಮರೆಯಬಾರದು. ಆದ್ದರಿಂದ ಈವತ್ತು ಅನೇಕ ಕತೆಗಾರರು ಸಾಹಿತ್ಯ ಮತ್ತು ಚರಿತ್ರೆ ಕುರಿತಾದ ಕಥನವನ್ನು ವಿವಿಧ ನೆಲೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಚರಿತ್ರೆ ಮತ್ತು ಅದರ ಬರವಣಿಗೆ ಎನ್ನುವುದು ಹೇಗೆ ನಮಗೆ ಒಂದು ಕಥನದಂತೆ ಕಾಣುತ್ತದೆಯೋ ಅದೇ ರೀತಿಯಲ್ಲಿ ಕಥನವು ನಮಗೆ ಚರಿತ್ರೆಯ ಥರ ಕಾಣುತ್ತದೆ. ಇಲ್ಲಿನ ಕತೆಗಳಿಗೆ ಈ ಬಗೆಯ ಆವರಣವೂ ಇದೆ. ‘ಬಯಲರಸಿ ಹೊರಟವಳು’ ಕತೆಯು ಈ ಕಾರಣದಿಂದ ಮುಖ್ಯವಾಗಿದೆ. ಕಥನ ಮತ್ತು ಅದರ ಆವರಣವು ಉತ್ತರಕನ್ನಡ ಜಿಲ್ಲೆಯ ಸಮಸ್ಯೆಯನ್ನು ಹೇಳುತ್ತಿದೆ. ಈ ಕಥನಗಳಿಗೆ ತಂತ್ರಗಳು ಮುಖ್ಯವಾಗಿಲ್ಲ. ಹೀಗಾಗಿ ಇಲ್ಲಿನ ಕಥನಗಳು ಶೈಲಿಯ ಮಾದಕತೆಗೆ ಮಾರು ಹೋಗಿಲ್ಲ. ನಿರೂಪಣೆ ಮತ್ತು ಅದರ ತಂತ್ರಗಳನ್ನು ಮಾತ್ರವೇ ಅವಲಂಬಿಸಿಲ್ಲ.

ಒಂದು ತಲೆಮಾರಿನವರು ಮತ್ತೊಂದು ತಲೆಮಾರಿನವರನ್ನು ಹೇಗೆ ನೋಡುತ್ತಾರೆ ಎನ್ನುವುದು ‘ತೊಟ್ಟು ಕಳಚಿದ ಹೂವು’ ಕತೆಯ ಪ್ರಮುಖ ಪ್ರಶ್ನೆ. ಅದನ್ನು ಅತ್ತೆ ಮತ್ತು ಸೊಸೆಯರ ಸಂಬಂಧದ ಮೂಲಕ ಕತೆಗಾರ್ತಿ ವಿವರಿಸುತ್ತಾರೆ. ನಗರ ಮತ್ತು ಅಲ್ಲಿನ ಮನುಷ್ಯರು ಹಾಗೂ ಹಳ್ಳಿಗಳ ಜೊತೆಗೆ ಇರುವ ಸಂಬಂಧವನ್ನು ‘ಸುಳಿ’ ಕತೆಯು ಹೇಳುತ್ತದೆ. ‘ಶುಭ್ರಜೋತ್ಸ್ನೇ’ ಕತೆ ಕೂಡಾ ಇದನ್ನೇ ಹೇಳುತ್ತದೆ.

ಇಲ್ಲಿನ ಕತೆಗಳನ್ನು ಓದುವಾಗ ಒಂದು ಒಳ್ಳೆಯ ಅನುಭವವಾಗುತ್ತದೆ. ಸಂಕಲನದ ಎಲ್ಲಾ ಕತೆಗಳು ಚೆನ್ನಾಗಿವೆ ಎಂದು ಅರ್ಥವಲ್ಲ. ಹಾಗೆ ಇರಲು ಸಾಧ್ಯವೇ ಇಲ್ಲ. ಕೆಲವು ಕಡೆಗೆ ತುಂಬಾ ವಿವರಣೆಗಳು ಬರುತ್ತವೆ. ಅವುಗಳು ಅಗತ್ಯವಿಲ್ಲ ಎಂದು ಅನಿಸುತ್ತದೆ. ‘ಆ ಕಡು ಕಪ್ಪು ಕಣ್ಣುಗಳು’ ಇದಕ್ಕೆ ಉದಾಹರಣೆ ಆಗಿದೆ. ವಿವರಗಳ ಸೊಕ್ಕು ಜಾಸ್ತಿಯಾದರೆ ಆಶಯಗಳ ಅಂಶವು ಕಡಿಮೆಯಾಗುತ್ತದೆ. ಈ ಸಮಸ್ಯೆಯನ್ನು ಇಲ್ಲಿನ ಕೆಲವು ಕತೆಗಳಲ್ಲಿ ಕಾಣುತ್ತೇವೆ. ಒಂದು ಪ್ರಶ್ನೆಯನ್ನು ನಾವು ಗಮನಿಸಬೇಕು: ಈವತ್ತು ಬರೆಯುವವರ ಕಥನದ ಕ್ರಮ ಮತ್ತು ಅವರು ಎತ್ತಿಕೊಳ್ಳುವ ಸಮಸ್ಯೆಗಳು ಹಿಂದಿನ ಕ್ರಮದಂತೆ ಇಲ್ಲ. ಒಂದು ಹೊಸತನ ಕಾಣುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.