ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಕನ್ನಡ ಹಾದಿಯ ಗತಿಬಿಂಬ–ರೈತನ ಸ್ಥಿತಿಯ ಪ್ರತಿಬಿಂಬ

Last Updated 20 ನವೆಂಬರ್ 2021, 21:45 IST
ಅಕ್ಷರ ಗಾತ್ರ

ಕೃಷ್ಣಮೂರ್ತಿ ಹನೂರರ ‘ಹರನೆಂಬುದೇ ಸತ್ಯ’ ಕೃತಿಯು ಹಳಗನ್ನಡ ನಡುಗನ್ನಡ ಕುರಿತು ಹನ್ನೊಂದು ಲೇಖನಗಳನ್ನು ಹೊಂದಿದೆ. ಹಳಗನ್ನಡ, ನಡುಗನ್ನಡವೆಂಬ ವಿಭಾಗಕ್ರಮ ಅಧ್ಯಯನ ದೃಷ್ಟಿಯಿಂದ ಮಾಡಿಕೊಂಡಿರುವಂಥದು. ಪಂಪ ಹೇಳುವಂತೆ ಕಾವ್ಯವು ‘ನಿಚ್ಚಂ ಪೊಸತರ್ಣವಂಬೊಲ್ ಅತಿ ಗಂಭೀರಂ’. ಜಗತ್ತಿನ ಎಲ್ಲಾ ಉತ್ತಮ ಸಾಹಿತ್ಯಕ್ಕೂ ಇದು ಅನ್ವಯವಾಗುತ್ತದೆ.

ಶ್ರೇಷ್ಠ ಸಾಹಿತ್ಯವು ತನ್ನ ಸಾರ್ವತ್ರಿಕ, ಸಾರ್ವಕಾಲಿಕ ಮತ್ತು ತತ್ಕಾಲೀನತೆಯ ಗುಣಗಳಿಂದ ಎಂದಿಗೂ ಪ್ರಸ್ತುತವಾಗಿರುತ್ತದೆ. ಅದನ್ನು ಕಾಲದಿಂದ ಕಾಲಕ್ಕೆ ಬೇರೆ ಬೇರೆ ರೀತಿಯಲ್ಲಿ ಓದಿಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಹಳಗನ್ನಡ ನಡುಗನ್ನಡ ಕಾವ್ಯಗಳ ಅಧ್ಯಯನ ನಿರರ್ಥಕ ಎಂಬ ಭಾವನೆ ಇದೆ. ಜತೆಗೆ ಅದರ ಕಥೆಯನ್ನೋ ಸಾರಾಂಶವನ್ನೋ ವಿವರಿಸುವ ಪದ್ಧತಿಯೂ ಇದೆ. ಆದರೆ, ಹೊಸಗನ್ನಡ ಕಾವ್ಯ ಮತ್ತು ಇತರ ಸಾಹಿತ್ಯ ಪ್ರಕಾರಗಳನ್ನು ಅಧ್ಯಯನ ಮಾಡುವಂತೆಯೇ ಅವುಗಳನ್ನೂ ಅಧ್ಯಯನ ಮಾಡಬೇಕಿದೆ. ಆಗ ಮಾನವನ ಬದುಕಿನ ವಿನ್ಯಾಸಗಳು, ಬೆಳೆದು ಬಂದ ಬಗೆಗಳ ಸ್ವರೂಪ ತಿಳಿಯುತ್ತದೆ.

ಹನೂರರ ಲೇಖನಗಳನ್ನು ಗಮನಿಸಿದರೆ ಇದೊಂದು ಸಾಂಸ್ಕೃತಿಕ ಅಧ್ಯಯನವೆಂಬುದು ಗಮನಕ್ಕೆ ಬರುತ್ತದೆ. ಪಂಪನ ಆದಿಪುರಾಣವನ್ನು ಅಧ್ಯಯನ ಮಾಡುವಾಗ ಅದರ ರಚನಾ ವಿನ್ಯಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಂಸ್ಕೃತಿಕ ಪರಿಸರವನ್ನು ವಿಶ್ಲೇಷಿಸಲಾಗಿದೆ. ಆದಿಪುರಾಣದ ಶೈಲಿ, ರೂಪ, ವಸ್ತು, ಶಿಲ್ಪ, ತಂತ್ರ ಎಲ್ಲವೂ ಅವುಗಳ ಅವಿನಾಭಾವ ಸಂಬಂಧಗಳೊಂದಿಗೆ ಹೆಣೆಯಲ್ಪಟ್ಟಿರುವುದನ್ನು ಗುರುತಿಸಿ, ಅದರ ಹಿನ್ನೆಲೆಯ ಕಥನವನ್ನೂ ವಿಶ್ಲೇಷಿಸಿ, ಅದರ ಸಾಂಸ್ಕೃತಿಕ ವಿವರಗಳನ್ನು ಚರ್ಚಿಸುವ ಕ್ರಮ ಅನನ್ಯವಾಗಿದೆ.

ಹನೂರರು ಮೂಲತಃ ಸಂಸ್ಕೃತಿ ಅಧ್ಯಯನಕಾರರು. ಕನ್ನಡ ಕಾವ್ಯಗಳನ್ನು ಚಿಂತನೆಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ಕನ್ನಡ ಸಂಸ್ಕೃತಿಯ ಚಿಂತನಧಾರೆಯ ಸ್ವರೂಪವನ್ನು ಓದುಗರಿಗೆ ಮನವರಿಕೆ ಮಾಡಕೊಡುವ ವಿದ್ವತ್‍ಪೂರ್ಣ ಕ್ರಮವನ್ನು ಇಲ್ಲಿ ಅನುಸರಿಸಿದ್ದಾರೆ. ಕಾವ್ಯ ಪಠ್ಯದ ಒಡಲಿನಿಂದ ವಿಮರ್ಶೆಯ ಮಾನದಂಡಗಳನ್ನು ರೂಪಿಸಿಕೊಂಡು ಜನಪದ ಪುರಾಣಗಳು, ಧರ್ಮ, ತತ್ವಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ಮನಃಶಾಸ್ತ್ರಗಳನ್ನು ಅಗತ್ಯಕ್ಕೆ ಅನುಗುಣವಾಗಿ ಅನ್ವಯಿಸಿ, ವಿಶ್ಲೇಷಿಸಿ ಕಾವ್ಯಗಳ ಒಳನೋಟಗಳನ್ನು ಶೋಧಿಸುತ್ತಾರೆ. ಇದರಿಂದಾಗಿ ಇಲ್ಲಿನ ಲೇಖನಗಳಲ್ಲಿ ಸಾಂಸ್ಕೃತಿಕ ಅಧ್ಯಯನದ ಸ್ವರೂಪ ತಾನಾಗಿಯೇ ಬಂದಿದೆ.

ಪಂಪ, ರನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ, ಚಾಮರಸರನ್ನು ಅಧ್ಯಯನ ಮಾಡುವಾಗ, ದಾಸಸಾಹಿತ್ಯ, ರಾಮಾಯಣದ ಕುರಿತು ಮಾತನಾಡುವಾಗ ರಸಗ್ರಹಣ, ಕಥಾ ಸಾರಾಂಶ, ಪಾತ್ರಗಳ ವಿವರಣೆಗೆ ತೊಡಗದೆ ಆ ಕೃತಿಗಳ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮಹತ್ವವನ್ನು ವಿಶ್ಲೇಷಿಸುವ ಕ್ರಮವೇ ಇಲ್ಲಿ ಮುಖ್ಯವಾಗಿದೆ. ಈ ಲೇಖನಗಳು ಕನ್ನಡ ಕಾವ್ಯ ಮೀಮಾಂಸೆಯಯನ್ನು ಕಟ್ಟಿಕೊಳ್ಳಲು ನೆರವಾಗುವ ಮಾರ್ಗಗಳಿಗೆ ಸೂತ್ರಗಳನ್ನೊಳಗೊಂಡಿವೆ.

ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು ಮಯೂರ ಮಾಸಪತ್ರಿಕೆಯಲ್ಲಿ ಪ್ರತೀ ತಿಂಗಳು ‘ನಿಚ್ಚಂ ಪೊಸತು’ ಮಾಲಿಕೆಯಲ್ಲಿ ಪ್ರಕಟವಾಗುತ್ತಿದ್ದ ಈ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇದರೊಂದಿಗೆ ಸವಿತಾ ನಾಗಭೂಷಣ ಅವರು ಬರೆದಿರುವ ‘ಕಡೇ ಮಾತು’ ಎಂಬ ಕವನ ಸಂಕಲನವನ್ನು ಮುದ್ರಿಸಿ ಉಚಿತವಾಗಿ ಕೊಟ್ಟಿದ್ದಾರೆ.

‘ಕಡೇ ಮಾತು’ ರೈತಗೀತ ಸಂಕಲನ. ರೈತರ ಕಷ್ಟ, ಆತಂಕ, ಹತಾಶೆ, ಕಣ್ಣೀರು ಹಾಗೂ ನೋವಿನ ಅನುಭವಗಳು ಇಲ್ಲಿ ಲಯಬದ್ಧ ಭಾಷೆಯಲ್ಲಿ ಅಭಿವ್ಯಕ್ತವಾಗಿವೆ. ಅನುಭವದ ತೀವ್ರತೆ ಹೆಚ್ಚಾದಷ್ಟು ಲಯ ಹೆಚ್ಚು ವಿಶಿಷ್ಟವೂ ನಿಶ್ಚಿತವೂ ಆಗುತ್ತದೆ. ಇಲ್ಲಿನ ಕವನಗಳಲ್ಲಿ ರೈತರ ಬದುಕಿನ ಅನುಭವಗಳು ಕವಿಯ ಅನುಭವಗಳಾಗಿ, ಗೀತಗಳಾಗಿ ರೂಪು ಪಡೆದಿವೆ.

ರೈತರ ದೈನಂದಿನ ಕಷ್ಟಗಳು, ಪ್ರಕೃತಿಯೊಂದಿಗೆ ಅವರ ಒಡನಾಟ, ಅದು ಮನುಷ್ಯನ ಬದುಕಿಗೆ ನೆರವಾಗುವ ಪರಿ, ಪ್ರಕೃತಿಗೂ ರೈತನಿಗೂ ಇರುವ ಸಂಬಂಧದ ಸ್ವರೂಪ, ಆಳುವ ವರ್ಗದವರು ಜಾರಿಗೆ ತರುವ ರೈತ ವಿರೋಧಿ ಕಾನೂನುಗಳು, ಬಿತ್ತುವ ಬೀಜದಿಂದ ಮಾರುಕಟ್ಟೆಯವರೆಗಿನ ಪರದಾಡುವ ಪರಿಸ್ಥಿತಿ – ಎಲ್ಲವೂ ಇಲ್ಲಿನ ಕವಿತೆಗಳ ವಸ್ತುಗಳಾಗಿವೆ.

‘ಎರಡು ಬೆಳೆಗಳು’, ‘ಜಾಗತಿಕ ಹೊಸ್ತಿಲಲ್ಲಿ ನಿಂತಿರುವ ರೈತನಿಗೊಂದು ಕಿವಿಮಾತು’ ಮುಂತಾದ ಕವಿತೆಗಳು ರೈತರ ಸಂಕಷ್ಟವನ್ನು ಸಶಕ್ತವಾಗಿ ಅನಾವರಣಗೊಳಿಸಿವೆ. ‘ಹೇಳು...’ ಎಂಬ ಕವಿತೆಯು ಕೆಲವು ತಿಂಗಳ ಹಿಂದೆ ನಡೆದ ರೈತ ಚಳವಳಿಯಲ್ಲಿ ದೆಹಲಿ ಪ್ರವೇಶಿಸದಂತೆ ಕಬ್ಬಿಣದ ಬೇಲಿಯನ್ನು ನಿರ್ಮಿಸಿದ್ದನ್ನು ವಿಷಾದದಿಂದ ಹೇಳುತ್ತದೆ. ಪ್ರಜೆಗಳೇ ಪ್ರಭುಗಳು ಎಂದು ಹೇಳಲಾಗುತ್ತದೆ. ಅನ್ನ ನೀಡುವ ರೈತರಾದ ಪ್ರಜೆಗಳು ತಮ್ಮಿಂದಲೇ ಆಯ್ಕೆ ಮಾಡಿದ ನಾಯಕನನ್ನು ಕಾಣಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರ ಬಗ್ಗೆ ಇಲ್ಲಿ ವ್ಯಕ್ತವಾಗಿರುವ ವಿಷಾದ ಪರಿಣಾಮಕಾರಿಯಾಗಿದೆ.

ಇಲ್ಲಿನ ಅನೇಕ ಕವಿತೆಗಳಲ್ಲಿ ಅಂತಹ ಸಂವಹನ ಸಾಧ್ಯವಾಗದ ಸಿಟ್ಟು, ವಿಷಾದ, ನೋವು ಅಸಹಾಯಕತೆಗಳು ಮಡುಗಟ್ಟಿವೆ. ಈ ಗೀತಗಳನ್ನು ಜನಪದ ಗತ್ತು ಮತ್ತು ಮಟ್ಟುಗಳಿಂದ ಹಾಡಬೇಕು. ನಿಶ್ಶಬ್ದದ ಬದಲು ಗಟ್ಟಿಯಾಗಿ ಓದಿಕೊಳ್ಳಬೇಕು, ಇಲ್ಲವೇ ಹಾಡಬೇಕು. ಆಗ ಅವುಗಳ ಆಶಯ ಪರಿಣಾಮಕಾರಿಯಾಗಿ ಸಂವಹನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT