ಸಮೃದ್ಧ ವಿವರಗಳು ಸಂಯಮದ ನಿರೂಪಣೆ

7

ಸಮೃದ್ಧ ವಿವರಗಳು ಸಂಯಮದ ನಿರೂಪಣೆ

Published:
Updated:

‘ಧೂಪದ ಮಕ್ಕಳು’ 2018ರಲ್ಲಿ ‘ಛಂದ ಪುಸ್ತಕ’ ಬಹುಮಾನಕ್ಕೆ ಆಯ್ಕೆಯಾಗಿರುವ ಕಥಾಸಂಕಲನ. ಕಳೆದ ಒಂಬತ್ತು ವರ್ಷಗಳಿಂದ ‘ಛಂದ ಪುಸ್ತಕ ಬಹುಮಾನ’ದ ಮೂಲಕ ಯುವ ಕಥೆಗಾರರನ್ನು ಕನ್ನಡ ಸಾಹಿತ್ಯಲೋಕಕ್ಕೆ ಪರಿಚಯಿಸುವ ಕೆಲಸದಲ್ಲಿ ‘ಛಂದ ಪುಸ್ತಕ’ ತೊಡಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರವನ್ನು ‘ಛಂದ’ದ ಬಹುಮಾನ ಪಡೆದಿರುವ ಮೂವರು ಕಥೆಗಾರರು ಪಡೆದಿರುವುದೇ ‘ಛಂದ’ದ ಕೆಲಸಕ್ಕೆ ದೊರೆತ ಪ್ರಮಾಣಪತ್ರದಂತಿದೆ. ಈ ಹಿನ್ನೆಲೆಯೇ ‘ಧೂಪದ ಮಕ್ಕಳು’ ಸಂಕಲನದ ಕುರಿತ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ.

ಕೊಳ್ಳೇಗಾಲ ತಾಲ್ಲೂಕಿನ ಪೊನ್ನಾಚಿಯ ಸ್ವಾಮಿಯವರು ಈಗಾಗಲೇ ‘ಸಾವೊಂದನು ಬಿಟ್ಟು’ ಎನ್ನುವ ಕವನಸಂಕಲನ ಪ್ರಕಟಿಸಿದ್ದಾರೆ. ‘ಧೂಪದ ಮಕ್ಕಳು’ ಅವರ ಚೊಚ್ಚಿಲ ಕಥಾಸಂಕಲನ. ಒಂಬತ್ತು ಕಥೆಗಳ ಈ ಸಂಕಲನ ಕಥೆಗಾರರ ಸಮೃದ್ಧ ಅನುಭವಗಳ ನಿರೂಪಣೆಯಿಂದ ಗಮನಸೆಳೆಯುತ್ತದೆ. ವಸ್ತುವೈವಿಧ್ಯ ಹಾಗೂ ಕಥೆ ಹೇಳುವಲ್ಲಿನ ನಿರುಮ್ಮಳತೆ ಇಲ್ಲಿನ ಕಥೆಗಳ ವಿಶೇಷ ಗುಣಗಳು. ತಲೆಮಾರುಗಳ ನಡುವಣ ಸಂಘರ್ಷ, ರೈತಾಪಿ ಜನರ ಸಂಕಷ್ಟಗಳು, ಜನರ ಸಣ್ಣತನ ಹಾಗೂ ಉದಾತ್ತತೆ, ನಗರದ ಸೆಳೆತ, ಆಧುನಿಕತೆಯ ಕೇಡು – ಇವೆಲ್ಲ ಸಂಗತಿಗಳ ಮೂಲಕ ಸಮಕಾಲೀನ ಬದುಕನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಗಳಂತೆ ಪೊನ್ನಾಚಿಯವರ ಕಥೆಗಳು ಕಾಣಿಸುತ್ತವೆ.

ಸಂಕಲನದ ಶೀರ್ಷಿಕೆಯ ಕಥೆಯಾದ ‘ಧೂಪದ ಮಕ್ಕಳು’ ಕಥೆಗಾರರಾಗಿ ಪೊನ್ನಾಚಿಯವರ ಶಕ್ತಿ ಹಾಗೂ ಮಿತಿ ಎರಡನ್ನೂ ಸೂಚಿಸುವಂತಿದೆ. ಗಿರಿಜನ ಮಕ್ಕಳ ಬದುಕು ಕನ್ನಡ ಸಾಹಿತ್ಯಕ್ಕೆ ಅಷ್ಟೇನೂ ಪರಿಚಿತವಾದುದಲ್ಲ. ಮಹದೇಶ್ವರ ಬೆಟ್ಟದಲ್ಲಿ ಧೂಪವನ್ನು ಮಾರುವ ಹುಡುಗರ ಬದುಕಿಗೆ ಸಂಬಂಧಿಸಿದ ಕಥೆ, ರಂಗಪ್ಪ ಎನ್ನುವ ಮುಗ್ಧ ಬಾಲಕನ ಸುತ್ತ ನಡೆಯುವ ಘಟನೆಗಳ ಮೂಲಕ ಬೆಳೆಯುತ್ತದೆ. ಬೆಟ್ಟದ ಪರಿಸರ ಹಾಗೂ ಅಲ್ಲಿ ಧೂಪ ಮಾಡುವ ಹುಡುಗರ ದೈನಿಕದ ವಿವರಗಳಿಂದ ಕಥೆ ಕುತೂಹಲ ಹುಟ್ಟಿಸುತ್ತದೆ. ಗಿರಿಜನ ಹುಡುಗನ ಬದುಕಿನಲ್ಲಿ ಮೊಬೈಲ್‌ ಮೂಲಕ ಪ್ರವೇಶಿಸುವ ಆಧುನಿಕತೆ ಕಥೆಗೆ ಬೇರೊಂದೇ ಆಯಾಮ ಕೊಡುತ್ತದೆ.

ಸಮೃದ್ಧ ವಿವರಗಳ ಸಾವಧಾನದ ನಿರೂಪಣೆಯ ಮೂಲಕ ಕಥೆ ಕುತೂಹಲ ಹುಟ್ಟಿಸುತ್ತದೆ. ಆದರೆ, ಈ ಕಥೆಯ ಕೇಂದ್ರ ಯಾವುದೆನ್ನುವುದೇ ಸ್ಪಷ್ಟವಾಗುವುದಿಲ್ಲ. ನಿಜವಾದ ಕಥೆ ಆರಂಭವಾಗುವುದೇ ಮೂರು ಪುಟಗಳ ನಂತರ. ಕಥೆಯ ಭಾಗವಾಗಿ ವಿವರಗಳು ಬಳಕೆಯಾಗುವುದಕ್ಕೂ ವಿವರಗಳೇ ಕಥೆಯಾಗುವುದಕ್ಕೂ ಇರುವ ಸಾಧ್ಯತೆಗಳಿಗೆ ಉದಾಹರಣೆಯಾಗಿ ಈ ಕಥೆಯನ್ನು ಚರ್ಚಿಸಬಹುದು. ಧೂಪದ ಮಕ್ಕಳ ಈ ಕಥೆ ಇದ್ದಕ್ಕಿದ್ದಂತೆ ಲೈಂಗಿಕ ಪ್ರಕರಣವೊಂದಕ್ಕೆ ತಳಕು ಹಾಕಿಕೊಳ್ಳುವುದು ಕೂಡ ಕಥೆಯ ಕೇಂದ್ರ ಅತ್ತಿತ್ತ ಸರಿಯುವುದಕ್ಕೆ ಕಾರಣವಾಗಿದೆ. ಈ ಅತೃಪ್ತಿಯ ನಡುವೆಯೂ ಭಿನ್ನ ವಸ್ತು–ವಿವರಗಳಿಂದಾಗಿ ’ಧೂಪದ ಮಕ್ಕಳು’ ಕಥೆ ಗಮನಸೆಳೆಯುತ್ತದೆ.

ಪೊನ್ನಾಚಿಯವರ ಬಹುತೇಕ ಕಥೆಗಳಲ್ಲಿ ಆಧುನಿಕ ಜಗತ್ತಿಗೆ ತೆರೆದುಕೊಳ್ಳುತ್ತಿರುವ ಮಕ್ಕಳು ಹಾಗೂ ಹದಿಹರೆಯದ ಹುಡುಗರಿದ್ದಾರೆ. ‘ಧೂಪದ ಮಕ್ಕಳು’ ಕಥೆಗಳಲ್ಲಿ ಗಿರಿಜನ ಮಕ್ಕಳಿದ್ದರೆ, ‘ಹೀಗೊಂದು ಭೂಮಿಗೀತ’ ಕಥೆಯಲ್ಲಿ ಮಹಾಲಿಂಗನಿದ್ದಾನೆ. ರೈತನಾಗಿ ಬದುಕುವುದರಲ್ಲಿ ಯಾವುದೇ ಭವಿಷ್ಯವಿಲ್ಲವೆಂದು ನಂಬಿರುವ ಮಹಾಲಿಂಗ, ಜಮೀನು ಮಾರಿ ನಗರಕ್ಕೆ ಹೋಗಲು ತುದಿಗಾಲಲ್ಲಿ ನಿಂತಿದ್ದಾನೆ. ಆದರೆ, ಅವನ ಅಪ್ಪ ನಾಗಣ್ಣನಿಗೆ ಊರು–ಹೊಲ ಬಿಟ್ಟು ಬರಲು ಮನಸ್ಸಿಲ್ಲ. ಮಗ ಮುನಿಸಿಕೊಂಡು ಮನೆಬಿಟ್ಟಿದ್ದಾನೆ. ನಾಗಣ್ಣನಿಗೋ ತನ್ನ ಹೊಲವನ್ನು ಕಾಡುಮೃಗಗಳಿಂದ ರಕ್ಷಿಸಿಕೊಳ್ಳುವ ತುರ್ತು. ಈ ಪ್ರಯತ್ನದಲ್ಲಿ ತಂತಿಗಳಿಗೆ ವಿದ್ಯುತ್‌ ಹಾಯಿಸುತ್ತಾನೆ. ಆ ವಿದ್ಯುತ್‌ಗೆ ನಾಗಣ್ಣನ ಮಗನೇ ಮಿಕವಾಗುವುದು ಕೇವಲ ಕಾಕತಾಳೀಯವಾಗಿರದೆ, ಆಧುನಿಕತೆಯ ಕೇಡನ್ನು ಸೂಚಿಸುವಂತಿದೆ.

ಊರಿನ ಹಿತಕ್ಕೆ ಕಾರಣವಾಗಬೇಕಿದ್ದ ಶಾಲೆ ಅಜ್ಜಿಯೊಬ್ಬಳ ಶೋಷಣೆಗೆ ಕಾರಣವಾಗುವ ದುರಂತ ‘ಶಿವನಜ್ಜಿ’ ಕಥೆಯಲ್ಲಿದೆ. ಮಗ ಮತ್ತು ಸೊಸೆಯ ನಿರಾಕರಣೆಗೊಳಗಾಗಿ ಒಂಟಿಯಾಗಿ ಬದುಕುವ ಅಜ್ಜಿ, ಶಾಲೆಯ ನೆಪದಲ್ಲಿ ತನ್ನ ಭೂಮಿಯನ್ನು ಕಳೆದುಕೊಳ್ಳುತ್ತಾಳೆ. ಮೊಮ್ಮಗನ ಪ್ರೀತಿ ಕೂಡ ಅಜ್ಜಿಗೆ ದಕ್ಕುವುದಿಲ್ಲ. ಕರುಳಕುಡಿಗಳ ಪ್ರೇಮದೊಂದಿಗೆ ಆಸರೆಯಾಗಿದ್ದ ಭೂಮಿಯನ್ನೂ ಕಳೆದುಕೊಂಡ ಅಜ್ಜಿಯ ಸ್ಥಿತಿ ಊರಿನ ಕಣ್ಣಿಗೆ ಹುಚ್ಚಿನಂತೆ ಕಾಣುವ ವಿಪರ್ಯಾಸವನ್ನು ಹಾಗೂ ಮನುಷ್ಯ ಸಂಬಂಧಗಳಲ್ಲಿ ಭಾವನೆಗಳಿಗಿಂತ ದುಡ್ಡು ಮುಖ್ಯವಾಗುತ್ತಿರುವುದನ್ನು ಈ ಕಥೆ ಸೂಚಿಸುವಂತಿದೆ.

‘ಅಕ್ಕ ಅವನು ಸಿಕ್ಕಿದನೇ?’ ಆಧುನಿಕ ಸಂದರ್ಭದಲ್ಲಿ ಅಕ್ಕಮಹಾದೇವಿಯ ಕಥೆಯನ್ನು ಮರುನಿರೂಪಿಸುವ ಪ್ರಯತ್ನ. ‘ಸತ್ಯಮಂಗಲದ ಕಾಡಿನಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ’ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುವುದರೊಂದಿಗೆ ವರ್ತಮಾನದ ಅಕ್ಕನ ಕಥೆ ಓದುಗರನ್ನು ದಿಗಿಲುಬೀಳಿಸುತ್ತದೆ.

‘ಮಾಯಿ’, ‘ಸ್ವಗತ’ ಹಾಗೂ ‘ಒಂದು ವಿದಾಯ’ ಸಂಕಲನದಲ್ಲಿನ ಭಿನ್ನವಾದ ಕಥೆಗಳು. ಈ ಕಥೆಗಳು ನಗರದ ಪರಿವೇಷದಲ್ಲಿ ನಡೆದರೆ, ಉಳಿದ ಕಥೆಗಳ ಹಿನ್ನೆಲೆಯಲ್ಲಿರುವುದು ಗ್ರಾಮೀಣ ಭಿತ್ತಿ. ಮೂರೂ ಕಥೆಗಳು ಬೇರೆ ಬೇರೆ ಕಾರಣಗಳಿಗಾಗಿ ಗಮನಸೆಳೆಯುತ್ತವೆ. ಹಳ್ಳಿಯಿಂದ ಬಂದ ಹುಡುಗನೊಬ್ಬ ನಗರದಲ್ಲಿ ಅನುಭವಿಸುವ ಕ್ರೌರ್ಯದ ಕಥೆ ‘ಮಾಯಿ’ಯಲ್ಲಿದೆ. ಹಳ್ಳಿಗೆ ಮರಳಬೇಕೆಂದರೆ ಅಲ್ಲಿ ಬದುಕು ಕಾಣಿಸುವುದಿಲ್ಲ; ನಗರದಲ್ಲಿ ಗೌರವಯುತವಾದ ನೌಕರಿಯೊಂದನ್ನು ಪಡೆದುಕೊಳ್ಳಲು ಅಗತ್ಯವಾದ ವಿದ್ಯೆಯಿಲ್ಲ. ಈ ತ್ರಿಶಂಕು ಪರಿಸ್ಥಿತಿಯಲ್ಲಿ ತಲ್ಲಣಿಸುವ ಹುಡುಗರ ಕಥೆಯನ್ನು ‘ಮಾಯಿ’ ತಣ್ಣಗೆ ಕಟ್ಟಿಕೊಡುತ್ತದೆ.

‘ಒಂದು ವಿದಾಯ’ ಕಥೆ ಮಾಜಿ ಪ್ರೇಮಿಗಳಿಬ್ಬರ ಭೇಟಿಯ ಒಂದು ನವಿರು ಕ್ಷಣವನ್ನು ಹಿಡಿಯುವ ಉತ್ಸಾಹವನ್ನೂ ವಿಷಾದವನ್ನೂ ಒಳಗೊಂಡಿದೆ. ಇವೆರಡಕ್ಕಿಂತಲೂ ಭಿನ್ನವಾದ ‘ಸ್ವಗತ’ ತನ್ನಲ್ಲಿನ ಬಿಡುಗಡೆಯ ಗುಣದಿಂದಾಗಿ ಹೆಚ್ಚು ಆಪ್ತವೆನ್ನಿಸುತ್ತದೆ. ಪಾತ್ರಗಳ ಸ್ವಗತದ ಮೂಲಕ ಕುಟುಂಬವೊಂದರ ಕ್ಷೋಭೆಯ ಚಿತ್ರಣ ಅನಾವರಣಗೊಳ್ಳುತ್ತದೆ. ನಿರೂಪಕನ ಕಣ್ಣಿನ ಮೂಲಕ, ಈ ಎಲ್ಲ ಪಾತ್ರಗಳು ಒಟ್ಟುಗೂಡಿದಾಗ ರೂಪುಗೊಳ್ಳುವ ಕ್ಷಣವೊಂದರಲ್ಲಿ ಸಾಧ್ಯವಾಗುವ ನಿರಾಳತೆಯ ಭಾವ ಕಥೆಯನ್ನು ಬೇರೊಂದು ಮಗ್ಗುಲಿಗೆ ಒಯ್ಯುತ್ತದೆ. ಶಿಲ್ಪ ಹಾಗೂ ತಂತ್ರ ಎರಡೂ ಯಶಸ್ವಿಯಾಗಿರುವ ಕಥೆಯಿದು.

ಮಹದೇಶ್ವರ ತಪ್ಪಲಿನ ಕಥೆಗಳನ್ನು ಹೇಳುವಾಗಲೂ ಪೊನ್ನಾಚಿಯವರು ಅಲ್ಲಿನ ಭಾಷೆಯನ್ನು ಪೂರ್ಣರೂಪದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸದಿರುವುದು ಕುತೂಹಲಕರವಾಗಿದೆ. ನಗರ ಹಾಗೂ ನಗರದ ತುಣುಕುಗಳಂತೆಯೇ ಕಾಣಿಸುವ ಹಳ್ಳಿಗಳ ನಡುವೆ ಜೀಕುತ್ತಿರುವ ಕಥೆಗಾಳಾಗಿ ಪೊನ್ನಾಚಿಯವರ ಕಥೆಗಳು ಕಾಣಿಸುತ್ತವೆ. ಹಳ್ಳಿಯ ಬಗೆಗಿನ ಅತಿಪ್ರೀತಿ ಅಥವಾ ನಗರದ ಕುರಿತ ನಿರಾಕರಣೆ ಇಲ್ಲದಿರುವುದು ಕಥೆಗಳ ವಿಶೇಷವಾಗಿದೆ. ಯಾವುದಾದರೊಂದು ತೀರ್ಮಾನವನ್ನು ಪೊನ್ನಾಚಿಯವರು ಸ್ಪಷ್ಟವಾಗಿ ಹೇಳುವುದಿಲ್ಲ. ಇದರಿಂದಾಗಿ ಅವರ ಅನುಭವಗಳು ಕಥೆಯ ಚೌಕಟ್ಟನ್ನು ದಾಟಿ ಓದುಗರೊಳಗೂ ಬೆಳೆಯತೊಡಗುತ್ತವೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !