ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷ ಗಾನ ಲೀಲಾವಳಿ ಪುಸ್ತಕ ಒಳನೋಟ: ಲೀಲಾವತಿ ಬೈಪಾಡಿತ್ತಾಯ ಅವರ ಆತ್ಮಕಥನ

Last Updated 19 ಮಾರ್ಚ್ 2022, 19:15 IST
ಅಕ್ಷರ ಗಾತ್ರ

ಈ ಆತ್ಮಕಥೆಯ ಮುನ್ನುಡಿಯಲ್ಲಿ ಲಕ್ಷ್ಮೀಶ ತೋಳ್ಪಾಡಿ ಅವರು ಒಂದು ಮಾತು ಹೇಳಿದ್ದಾರೆ: (ಮಹಿಳೆಯೊಬ್ಬಳು) ‘ಒಂದು ಯಕ್ಷಗಾನ ಆಟ ನೋಡಿದರೆ ಪ್ರಾಯಶ್ಚಿತ್ತವೆಂಬಂತೆ ಏಳು ರಂಗಪೂಜೆಗಳನ್ನು ನೋಡಬೇಕೆಂಬ ಕಾಲದಲ್ಲಿ ಯಕ್ಷರಂಗ ಪ್ರವೇಶ ಮಾಡಿದ ಲೀಲಮ್ಮ, 'ರಂಗ-ಪೂಜೆ' ಎಂಬ ಪರಿಕಲ್ಪನೆಯನ್ನೇ ಬದಲಿಸುವುದಕ್ಕೆ -ಯಕ್ಷ ವೇದಿಕೆಯಲ್ಲಿ ನಡೆಯುವ ಕಲಾ ವ್ಯವಹಾರವೂ ಪೂಜೆಯೇ ಎಂಬ ಭಾವನೆಯುಂಟಾಗುವುದಕ್ಕೆ- ಕಾರಣಕರ್ತ ರಾದವರಲ್ಲಿ ಓರ್ವರಾದರು! ಯಕ್ಷಮೇಳಗಳ ತಿರುಗಾಟದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಭಾಗವತರೆಂಬ ಇತಿಹಾಸವನ್ನು ಲೀಲಮ್ಮ ಸೃಷ್ಟಿಸಿದರು - ಹೀಗೊಂದು ಇತಿಹಾಸ ಸೃಷ್ಟಿಸುತ್ತಿದ್ದೇನೆ ಎಂಬ ಅರಿವಿಲ್ಲದೆ!’

ಇದೊಂದು ಪ್ಯಾರಾ ಸಾಕು ಈ ಪುಸ್ತಕದ ಮಹತ್ವವನ್ನು ತಿಳಿಸಲು. ಅಷ್ಟೇ ಅಲ್ಲ, ಈ ವಾಕ್ಯಗಳಲ್ಲಿ ಒಂದು ಜೀವನಶೈಲಿ ಮತ್ತು ಕಲಾರಾಧನೆಯ ಪರಿಪೂರ್ಣ ವ್ಯಾಖ್ಯಾನವೇ ಇದೆ! ವಿದ್ಯಾರಶ್ಮಿ ಪೆಲತ್ತಡ್ಕ ಅತ್ಯಂತ ಸಂಭ್ರಮ, ನಿಷ್ಠೆಯಿಂದ ಈ ಪುಸ್ತಕವನ್ನು ರಚಿಸಿದ್ದಾರೆ. ಅದಕ್ಕಾಗಿ ಅವರಿಗೆ ಮೊದಲು ವಂದನೆ ಹೇಳಬೇಕು.

ಯಕ್ಷಗಾನ ಭಾಗವತಿಕೆ ‘ಗಂಡುಮೆಟ್ಟಿನ ಕಲೆ’ ಎಂದು ಪುರುಷರು ಎದೆತಟ್ಟಿ ಹೇಳಿಕೊಳ್ಳುವ ಸಮಯದಲ್ಲಿ ಲೀಲಾವತಿ ಬೈಪಾಡಿತ್ತಾಯ ಅವರು ಭಾಗವತಿಕೆಯನ್ನು ಕರಗತ ಮಾಡಿಕೊಂಡು ಸೈ ಅನ್ನಿಸಿಕೊಂಡಿದ್ದಲ್ಲದೆ ಊರಿಂದೂರಿಗೆ ಮೇಳದ ಜೊತೆಯೇ ಪ್ರಯಾಣಿಸಿದ ಏಕೈಕ ಮಹಿಳೆ ಎನ್ನುವ ವೈಶಿಷ್ಟ್ಯವನ್ನೂ ಗಳಿಸಿಕೊಂಡವರು. ‘ಹೆಣ್ಣುಮಗಳು ಭಾಗವತಿಕೆ ಮಾಡ್ತಾರಂತೆ’ ಎನ್ನುವ ಸೆನ್ಸೇಷನ್ ಹುಟ್ಟುಹಾಕಿದವರು. ಅವರ ಭಾಗವತಿಕೆಗೆ ಜನ ಹೇಗೆ ಕಿಕ್ಕಿರಿಯುತ್ತಿದ್ದರೆಂದರೆ ಕೂರಲು ಜಾಗವಿಲ್ಲದೆ ಟೆಂಟ್ ಬಿಚ್ಚಿಸಿ ಜಾಗ ಮಾಡಿಕೊಡಬೇಕಾಗುತ್ತಿತ್ತು! ಹೀಗೆ ಲೀಲಾವತಿ ಅವರ ಬದುಕು ವಿಶೇಷಗಳ ಸರಮಾಲೆ.

ಲೀಲಾವತಿ ಅವರು ಸಾರ್ಥಕ ದಾಂಪತ್ಯ ಬದುಕನ್ನೂ ನಡೆಸಿ, ಮಕ್ಕಳಿಗೆ ಉತ್ತಮ ತಾಯಿಯಾಗಿಯೂ ಆದರ್ಶಪ್ರಾಯರಾದರು. ಹಾಗಾಗಿ ವೃತ್ತಿಯೋ ವೈಯಕ್ತಿಕ ಬದುಕೋ ಎರಡರಲ್ಲಿ ಒಂದನ್ನು ಆರಿಸಿಕೋ ಎನ್ನುವ ಇವತ್ತಿನ ಯುಗದ ದ್ವಂದ್ವ ಅವರನ್ನು ಅವತ್ತು ಕಾಡಲೇ ಇಲ್ಲ. ಅವರಿಗೆ ವೃತ್ತಿ ಮತ್ತು ಬದುಕು ಒಂದೇ ಆಗಿತ್ತು.

ಲೀಲಾವತಿಯವರು ಭಾಗವತಿಕೆಯನ್ನು ಟೋಕನ್ ಆಗಿ ಅಂದರೆ ಮೇಲುಮೇಲಕ್ಕೆ ಖಯಾಲಿಗೆ ಮಾಡಿದವರಲ್ಲ; ಅವರು ಪಕ್ಕಾ ವೃತ್ತಿಪರರಾಗಿ ಯಕ್ಷಗಾನದ ದೊಡ್ಡ ಹೆಸರುಗಳಾದ ಬಲಿಪರು, ಮಂಡೆಚ್ಚರು, ಅಗರಿ ಶ್ರೀನಿವಾಸ ಭಾಗವತರು, ಕಡತೋಕ ಮಂಜುನಾಥ ಭಾಗವತರು, ದಿವಾಣರು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ನೆಡ್ಲೆ ನರಸಿಂಹ ಭಟ್ಟರಂತಹ ಘಟಾನುಘಟಿ ಹಿಮ್ಮೇಳಗಳ ಜೊತೆ ಒಡನಾಡಿದರು. ಅವರ ಭಾಗವತಿಕೆಗೆ ಕುಣಿದ ಮೇರು ಕಲಾವಿದರಲ್ಲಿ ಶೇಣಿ ಗೋಪಾಲಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಮಲ್ಪೆ ಶಂಕರ ನಾರಾಯಣ ಸಾಮಗ, ವಾಸುದೇವ ಸಾಮಗ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್ ಮೊದಲಾದವರಿದ್ದರು ಎಂದರೆ ಲೀಲಾವತಿ ಅವರ ಪ್ರತಿಭೆಗೆ ಬೇರೆ ಸಾಕ್ಷಿ ಬೇಕಿಲ್ಲ.

ಅಷ್ಟೆಲ್ಲ ಪೌರಾಣಿಕ, ಸಾಮಾಜಿಕ ಕಥೆಗಳನ್ನು ರಂಗದ ಮೇಲೆ ನಿರೂಪಿಸಿದ ಲೀಲಾವತಿಯವರು ತಮ್ಮ ಸ್ವಂತದ ಕಥೆಯನ್ನು ಹೇಳಲು ಹಿಂಜರಿದರು, ತಮ್ಮ ಸ್ವಂತ ಕಷ್ಟ ಸುಖಗಳನ್ನು ಯಾವತ್ತೂ ಎಲ್ಲಿಯೂ ಬಿಚ್ಚಿಟ್ಟವರಲ್ಲ ಎನ್ನುವ ಸಂಗತಿಯನ್ನು ವಿದ್ಯಾರಶ್ಮಿ ಹೇಳಿದ್ದಾರೆ. ಹಾಗಾಗಿ ಈ ಆತ್ಮಕಥನ ನಿರೂಪಣೆ ತಮಗೆ ಅಷ್ಟು ಸುಲಭವಾದದ್ದೇನೂ ಆಗಿರಲಿಲ್ಲ ಎನ್ನುವುದನ್ನೂ ದಾಖಲಿಸುತ್ತಾರೆ. ಅದಕ್ಕಾಗಿ ತಾವು ಪಟ್ಟ ಪಾಡನ್ನೂ ಹೇಳಿದ್ದಾರೆ. ಈ ಕಥನ ಪೂರ್ಣಗೊಳ್ಳಲು ಹಲವಾರು ವರ್ಷಗಳೇ ಹಿಡಿದಿವೆ.

ಕಥನದ ಉದ್ದಕ್ಕೂ ಲೀಲಾವತಿಯವರ ಪತಿ ಹರಿನಾರಾಯಣ ಬೈಪಾಡಿತ್ತಾಯ ಅವರ ಚಿತ್ರಣವೂ ಸೊಗಸಾಗಿ ಮೂಡಿಬಂದಿದೆ. ಅರಿಕೆಯಲ್ಲಿ ನಿರೂಪಕಿ, ‘ಸ್ತ್ರೀಯೊಬ್ಬಳು ಅಂತಹ ಪರಿಸರದಲ್ಲಿ ಈ ಬಗೆಯ ಸಾಧನೆಯ ಮಾಡುವಲ್ಲಿ ಕಾರಣಕರ್ತರಾಗಿ ಬೆನ್ನೆಲುಬಾಗಿ ನಿಂತ ಅವರಿಗೆ ಒಬ್ಬ ಮಹಿಳೆಯಾಗಿಯೂ ನನ್ನ ನಮನ’ ಎಂದು ಹೇಳಿದಾಗ ಓದುಗರಾದ ನಾವೂ ತಲೆಬಾಗಿಸುತ್ತೇವೆ. ನಿಜ ಹೇಳಬೇಕೆಂದರೆ ಒಂದು ಆತ್ಮಕಥನವನ್ನು ಹೇಗೆ ರಚಿಸಬೇಕೆನ್ನುವುದಕ್ಕೆ ಮಾದರಿಯಂತಿದೆ ಈ ಪುಸ್ತಕ.

ಕನ್ನಡದಲ್ಲಿ ಜೀವನ ಚರಿತ್ರೆಗಳಿಗೆ ನೂರು ವರ್ಷಗಳ ಇತಿಹಾಸವಿದೆ. ಮಹಿಳೆಯರ ಜೀವನಚರಿತ್ರೆಗಳಿಗೆ ಅಷ್ಟಿಲ್ಲ. ಎಷ್ಟೋ ಮಹಿಳೆಯರ ಅಸಾಧಾರಣ ಜೀವನ ಚರಿತ್ರೆಗಳು ಕಾಲದ ಮುಸುಕಿನಲ್ಲಿ ಹಾಗೇ ಸರಿದುಹೋಗಿವೆ. ಮಹಿಳೆಯರು ತಾವೇ ಬರೆದ ಆತ್ಮಕಥೆಗಳು ಇತ್ತೀಚಿನ ವಿದ್ಯಮಾನ. ತಮ್ಮ ಬಗ್ಗೆ ತಾವೇ ಹೇಳಲು ಸಂಕೋಚಪಟ್ಟುಕೊಳ್ಳುವ ಮಹಿಳೆಯರ ಬಗ್ಗೆ ಇತರರು ಬರೆದು ದಾಖಲಿಸುವುದು ಕೂಡ ಈಚೆಗೆ ಹೆಚ್ಚುತ್ತಿರುವ ಸಂಗತಿ. ಮಹಿಳೆಯರ ಜೀವನಚರಿತ್ರೆಗಳಾಗಲೀ ಆತ್ಮಕಥೆಗಳಾಗಲೀ ಕನ್ನಡದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಇಲ್ಲ. ಇದ್ದವುಗಳ ಬಗ್ಗೆಯೂ ಹೆಚ್ಚು ಚರ್ಚೆ ಆಗಿಲ್ಲ.

ನಾಟಕ ಕ್ಷೇತ್ರದ ಭಾರ್ಗವಿ ನಾರಾಯಣ್ ಅವರ ‘ನಾನು ಭಾರ್ಗವಿ’ ಮತ್ತು ಡಾ. ವಿಜಯಾ ಅವರ ‘ಕುದಿ ಎಸರು’ ಆತ್ಮಕಥೆಗಳಿಗೆ ಪ್ರಶಸ್ತಿ ಲಭಿಸಿದ್ದು ಪ್ರಮುಖ ಸಂಗತಿ. ಹಾಗೆಯೇ ವೃತ್ತಿರಂಗಭೂಮಿಯ ಹಲವರ ಜೀವನ ಚರಿತ್ರೆಗಳನ್ನು ಇತರರು ಬರೆದರು. ಬಿ.ಜಯಶ್ರೀ ಅವರ ಬದುಕು, ಹಲವಾರು ಚಲನಚಿತ್ರ ಕಲಾವಿದೆಯರ, ಸಂಗೀತಗಾರ್ತಿಯರ ಬದುಕಿನ ಕುರಿತು ಗ್ರಂಥಗಳು ಬಂದಿವೆ. ಅದರಲ್ಲಿ ಲೀಲಾವತಿ ಅವರ ಆತ್ಮಕಥೆಗೆ ವಿಶಿಷ್ಟ ಸ್ಥಾನ ದೊರೆಯಲು ಕಾರಣ ಅವರ ಬದುಕು ಅನೇಕ ಪ್ರಥಮಗಳ ದಾಖಲೆ ಆಗಿರುವುದಕ್ಕಾಗಿ. ಆದರೂ ಅವರ ಬಗ್ಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ.

ಮುಖ್ಯವಾಗಿ ಸ್ವತಂತ್ರ ಅಸ್ತಿತ್ವದ, ವೃತ್ತಿಪರ ಕಲಾವಿದೆಯೊಬ್ಬರ ಅನುಭವಗಳು ಮುಂದಿನ ಪೀಳಿಗೆಗೆ ಮಾದರಿಯಾಗಿವೆ. ಎಲ್ಲಿಯೂ ಲೀಲಾವತಿಯವರು ತಮ್ಮ ಕಷ್ಟ ಸುಖಗಳನ್ನು ದೊಡ್ಡದಾಗಿ ಬಿಂಬಿಸಿಲ್ಲ. ಸಹಜವಾಗಿ ಆತ್ಮೀಯರೊಡನೆ ಮಾತನಾಡುವಂತೆ ನಿರೂಪಿಸಿದ್ದಾರೆ. ಉದಾಹರಣೆಗೆ, ತಾವು ಭಾಗವತಿಕೆ ಮಾಡಲು ನಿರ್ಧರಿಸಿದ ಕಾರಣವನ್ನು ಸರಳವಾಗಿ ಬಡತನ ಎಂದು ಹೇಳುತ್ತಾರೆ.

ಬರೀ ಪುರುಷರಿರುವ ಮೇಳದಲ್ಲಿ ಮಹಿಳೆಯೊಬ್ಬಳು ಕಲಾವಿದೆ ಇದ್ದಾಗ ಅವಳಿಗಾಗಿ ಯಾವುದೇ ವಿಶೇಷ ಸೌಲಭ್ಯಗಳನ್ನು ಕೊಡುತ್ತಿರಲಿಲ್ಲವಾದರೂ ಲೀಲಾವತಿಯವರು ಅದನ್ನೆಲ್ಲ ದೊಡ್ಡ ವಿಷಯವೆಂದು ಕಿಸಿಬಿಸಿ ಮಾಡಿದವರೇ ಅಲ್ಲ. ಚಳಿಗಾಲದ ಸಮಯದಲ್ಲಿ ಪದ ಹೇಳುವುದು ಕಷ್ಟ. ಬೆಳಗಿನ ಹೊತ್ತಿನಲ್ಲಿ ತಲೆಯ ಮೇಲೆ ಇಬ್ಬನಿ ಬೀಳುತ್ತಿದ್ದರೂ ಹಾಗೆಯೇ ಪದ ಹೇಳುತ್ತಿದ್ದರಂತೆ. ಪುರುಷ ಭಾಗವತರು ಮುಂಡಾಸು ಕಟ್ಟಿಕೊಂಡರೆ, ಇವರು ಸ್ಕಾರ್ಫ್ ಕಟ್ಟಿಕೊಳ್ಳುತ್ತಾ ಶೀತದಿಂದ ರಕ್ಷಿಸಿಕೊಳ್ಳುತ್ತಿದ್ದರಂತೆ. ಇಂತಹ ರಸವತ್ತಾದ ವಿವರಗಳ ರಸಪಾಕ ಈ ಹೊತ್ತಿಗೆ.

ಪುಸ್ತಕದ ಕೊನೆಯಲ್ಲಿ ಲೀಲಾವತಿ ಅವರಿಗೆ ವೈಯಕ್ತಿಕವಾಗಿ ಸಂದ ಪ್ರಶಸ್ತಿ, ಗೌರವಗಳ ಪಟ್ಟಿ ಮತ್ತು ಹರಿನಾರಾಯಣ–ಲೀಲಾವತಿ ದಂಪತಿಗೆ ಸಂದ ಸನ್ಮಾನಗಳ ಪಟ್ಟಿಯನ್ನು ನೀಡಲಾಗಿದೆ. ಆಸಕ್ತಿಕರ ಚಿತ್ರಗಳಿವೆ. ಕನ್ನಡದ ಮಹಿಳಾ (ಪುರುಷರ ಕೂಡ) ಆತ್ಮಕಥೆಗಳ ಸಾಲಿನಲ್ಲಿ ಇದು ಮಹತ್ವದ ಸ್ಥಾನ ಪಡೆದಿದೆ.

****

ಕೃತಿ: ಯಕ್ಷ ಗಾನ ಲೀಲಾವಳಿ

ಯಕ್ಷಗಾನದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರ ಆತ್ಮಕಥನ

ನಿರೂಪಣೆ: ವಿದ್ಯಾರಶ್ಮಿ ಪೆಲತ್ತಡ್ಕ

ಪ್ರಕಾಶನ: ಅಭಿನವ

ಸಂ: 9448804905

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT