ಸೋಮವಾರ, ಮಾರ್ಚ್ 30, 2020
19 °C
yakshagana-alva's

ತೆಂಕು-ಬಡಗು ಯಕ್ಷನೃತ್ಯದ ಬೆಡಗು

ಟಿ.ಎ.ಎನ್. ಖಂಡಿಗೆ Updated:

ಅಕ್ಷರ ಗಾತ್ರ : | |

ಯಕ್ಷಗಾನ

ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ, ಯಕ್ಷಗಾನದ ಸ್ವರೂಪ, ತೆಂಕು-ಬಡಗುಗಳ ಆಹಾರ್ಯ ಸಾತ್ವಿಕ ಮತ್ತು ಆಂಗಿಕಗಳಲ್ಲಿರುವ ವ್ಯತ್ಯಾಸಗಳನ್ನು ಗುರುತಿಸಿ, ಆಸ್ವಾದಿಸುವ ದೃಷ್ಟಿಯಿಂದ ಇತ್ತೀಚಿಗೆ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ ತೆಂಕು-ಬಡಗು ನೃತ್ಯ ವೈಭವ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿತ್ತು. ಇದನ್ನು ಸಂಯೋಜನೆ ಮಾಡಿದವರು ಹಿರಿಯ ಯಕ್ಷಗಾನ ಕಲಾವಿದ ಮತ್ತು ಸಂಘಟಕರಾದ ಬೆಳುವಾಯಿ ದೇವಾನಂದ ಭಟ್ಟರು.

ಈ ನೃತ್ಯದ ಮೊದಲ ಭಾಗದಲ್ಲಿ ತೆಂಕು-ಬಡಗು ಪುಂಡು ವೇಷ, ಎರಡನೆಯ ಭಾಗದಲ್ಲಿ ತೆಂಕು ಬಡಗು ಸ್ತ್ರೀವೇಷ ಮತ್ತು ಕೊನೆಯ ಭಾಗದಲ್ಲಿ ಪುಂಡು ವೇಷ ಮತ್ತು ಸ್ತ್ರೀವೇಷಗಳ ಸಂಯೋಜಿತ ನೃತ್ಯ.

ಪುಂಡುವೇಷವು (ತೆಂಕು-ಬಡಗು) ವೀರ ಮತ್ತು ಅದ್ಭುತ ರಸಗಳಲ್ಲಿ ಮತ್ತು ಸ್ತ್ರೀವೇಷ ಮತ್ತು ಪುಂಡು-ಸ್ತ್ರೀ ಸಂಯೋಜಿತ ನೃತ್ಯಗಳು ಶೃಂಗಾರ ರಸದಲ್ಲಿ ಅತ್ಯಂತ ಮನೋಜ್ಞವಾಗಿ ಅಭಿವ್ಯಕ್ತಗೊಂಡಿತ್ತು. ತೆಂಕಿನ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿ ಕಟ್ಟೆ ಮತ್ತು ಯುವ ಪ್ರತಿಭೆ ಅಮೃತ ಅಡಿಗ ಪಾಣಾಜೆಯವರ ಕಂಠಶ್ರೀಯ ಸಾಥ್‌ ಇತ್ತು. ಬಡಗಿನ ಪ್ರಸಿದ್ಧ ಭಾಗವತರಾದ ಚಂದ್ರಕಾಂತ್ ರಾವ್ ಮೂಡುಬೆಳ್ಳೆಯವರ ಬಡಗಿನ ಸಂಪ್ರದಾಯಿಕ ಹಾಡುಗಾರಿಕೆ ನಡೆಯ ಪರಿಣಾಮ ರಮಣೀಯತೆಯನ್ನು ಉಂಟು ಮಾಡಿತು.

ತೆಂಕು ಬಡಗಿನ ಚೆಂಡೆ ಮದ್ದಳೆ ಮತ್ತು ಚಕ್ರತಾಳದಲ್ಲಿ ಪದ್ಮನಾಭ ಉಪಾಧ್ಯಾಯ , ಚೈತನ್ಯ ಕೃಷ್ಣ ಪದ್ಯಾಣ, ಗುರುಪ್ರಸಾದ್ ಬೊಳಿಂಜಡ್ಕ, ದೇವಾನಂದ್ ಭಟ್ ಬೆಳುವಾಯಿ, ರವಿಪ್ರಸಾದ್ ಶೆಟ್ಟಿ, ಉದಯ ಪಾಡ್ಕರ್, ಶಶಿ ಆಚಾರ್ಯ, ಸೃಜನ್ ಹಾಲಾಡಿ ಮತ್ತು ಸವಿನಯ ನೆಲ್ಲಿತೀರ್ಥ ಇವರ ತಂಡ ನಾದ ಲೋಕವನ್ನೇ ಸೃಷ್ಟಿಸಿತು. ಇವರ ಚೆಂಡೆ ಮದ್ದಳೆಯ ಅಮೂರ್ತವಾದ ಲಯದ ಗತ್ತುಗಾರಿಕೆ ಶ್ರಾವ್ಯದಿಂದ ಚಾಕ್ಷುಷಕ್ಕೆ ಇಳಿದ ಅನುಭವವಾಯಿತು. ಇದರ ಜೊತೆಗೆ ನಾರಾಯಣ ಸ್ವಾಮಿ ಮೈಸೂರು ಅವರ ವಯೋಲಿನ್ ಮತ್ತು ಪಾಂಡುರಂಗ ಪಡ್ಡಂ ಅವರ ಕೊಳಲು ಈ ನೃತ್ಯ ವೈಭವಕ್ಕೆ ಹೊಸ ಸೇರ್ಪಡೆಯಾಗಿತ್ತು. ಹಾಡುಗಾರಿಕೆಯ ಮಧ್ಯಮಧ್ಯದ ಖಾಲಿ ಜಾಗವನ್ನು ಇವರ ವಯೋಲಿನ್ ಮತ್ತು ಕೊಳಲು ಜಾಚಿತ್ಯ ಪೂರ್ಣವಾಗಿ ತುಂಬಿಕೊಟ್ಟಿತ್ತು. ಇದಲ್ಲದೆ ಅದ್ಬುತ ಮತ್ತು ಶೃಂಗಾರ ರಸದ ಅಭಿವ್ಯಕ್ತಿಗೆ ಇದು ತುಂಬಾ ಸಹಕರಿಸಿತು.

ಒಂದು ವಿಭಾಗದ ನೃತ್ಯ ಮುಗಿದಾಗ ಇನ್ನೊಂದು ವಿಭಾಗದ ಕಲಾವಿದರು ಕಾಲವಿಳಂಬವಿಲ್ಲದೆ ವೇದಿಕೆ ಪ್ರವೇಶಿಸುತ್ತಿದ್ದರು. ಈ ನಿರಂತರತೆಯನ್ನು ಕಾರ್ಯಕ್ರಮದ ಕೊನೆಯವರೆಗೂ ಕಾಯ್ದುಕೊಂಡು ಬರಲಾಗಿತ್ತು. ಕ್ರಿಯೆಯ ಈ ತೀವ್ರತೆಯೇ ಈ ನೃತ್ಯ ವೈಭವವನ್ನು ಸಜೀವವಾಗಿಸಿತ್ತು. ಆದರೆ ಮುಮ್ಮೇಳದ ಕಲಾವಿದರು ಸಂಘಟಿತ ಮತ್ತು ಸಹಕಾರ ತತ್ವದ ಕಡೆಗೆ ಸ್ವಲ್ಪ ಗಮನ ನೀಡುತ್ತಿದ್ದರೆ ನೃತ್ಯ ವೈಭವ ಇನ್ನೂ ಕಳೆಗಟ್ಟುತ್ತಿತ್ತು.

ಮುಮ್ಮೇಳದಲ್ಲಿ ಭಾಗವಹಿಸಿದ ಹೆಚ್ಚಿನ ಕಲಾವಿದರು ಪ್ರಸಿದ್ಧ ವೃತ್ತಿ ಕಲಾವಿದರಾಗಿದ್ದರು. ತೆಂಕು ಮತ್ತು ಬಡಗಿನ ಪುಂಡುವೇಷಗಳಲ್ಲಿ ಚಂದ್ರಶೇಖರ್ ಧರ್ಮಸ್ಥಳ, ರಾಕೇಶ್ ರೈ ಅಡ್ಕ, ಲೋಕೇಶ್ ಮುಚ್ಚೂರು, ಶಿವರಾಜ, ಚಂದ್ರಹಾಸ ಗೌಡ, ಹರೀಶ್ ಗುಪ್ತ, ದಿನೇಶ್ ಕನ್ನಾರ್, ಭರತ್‍ರಾಜ್ ಪರ್ಕಳ, ತಮ್ಮ ಅಭಿನಯ ಸಾಮರ್ಥ್ಯವನ್ನೂ ಸಮರ್ಥವಾಗಿ ತೋರಿಸಿದ್ದಾರೆ. ತೆಂಕು-ಬಡಗಿನ ಸ್ತ್ರೀವೇಷದಲ್ಲಿ ಅಕ್ಷಯ ಮಾರ್ನಾಡು, ರಕ್ಷಿತ್ ಪಡ್ರೆ, ಅಶ್ವತ್ಥ ಬಜ್ಪೆ, ಪ್ರಶಾಂತ್ ನೆಲ್ಯಾಡಿ, ಸುಧೀರ್ ಉಪ್ಪೂರು, ಉಮೇಶ್ ಶಂಕರನಾರಾಯಣ, ರಾಜೇಶ್ ನಿಟ್ಟೆ ಮತ್ತು ಹರೀಶ್ ಬೆಳ್ಳಾರೆ ಇವರ ಮನಮೋಹನ ನೃತ್ಯ ಶೃಂಗಾರ ರಸದ ಸಿದ್ಧಿಯನ್ನುಂಟು ಮಾಡಿತು.

ಎರಡು ದಿನಗಳಲ್ಲಿ ನಾಲ್ಕು ಪ್ರದರ್ಶನಗಳನ್ನು ಕಂಡ ಈ ನೃತ್ಯ ವೈಭವವನ್ನು ಆಳ್ವಾಸ್ ಹೈಸ್ಕೂಲ್ ಮತ್ತು ಆಳ್ವಾಸ್ ಪದವಿಪೂರ್ವ ಕಾಲೇಜಿನ ಸುಮಾರು ಹದಿಮೂರು ಸಾವಿರ ವಿದ್ಯಾರ್ಥಿಗಳು ಕಣ್ಮನ ತುಂಬಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)