ಸೋಮವಾರ, ಮಾರ್ಚ್ 30, 2020
19 °C

ಯಕ್ಷಲೋಕದಲ್ಲಿ ‘ಪೂರ್ವಿ ಕಲ್ಯಾಣಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳಷ್ಟೇ ಸಾಮಾಜಿಕ ಪ್ರಸಂಗಗಳು ಸದ್ದು ಮಾಡುತ್ತದೆ. ಮುಖ್ಯವಾಗಿ ವೃತ್ತಿಪರ ಡೇರೆಮೇಳಗಳು ಪ್ರತಿವರ್ಷ ಇಂಥ ನೂತನ ಪ್ರಸಂಗಗಳನ್ನು ಆಡಿತೋರಿಸುತ್ತವೆ. ಸಾಮಾಜಿಕ ಮೌಲ್ಯವನ್ನು ಯಕ್ಷಗಾನದ ಚೌಕಟ್ಟಿನೊಳಗೆ ಸಾರುವ ಹೊಸಪ್ರಸಂಗಗಳು ಒಂದರ್ಥದಲ್ಲಿ ಹೊಸ ಪ್ರೇಕ್ಷಕನೊಬ್ಬ ನೈಜ ಯಕ್ಷಗಾನದ ಅಭಿಮಾನಿಯಾಗುವಲ್ಲಿ ಸೇತುವೆಯಂತೆ ಕೆಲಸಮಾಡುತ್ತವೆ.

ಮೂಲತಃ ಬ್ಯಾಂಕಿಂಗ್ ಕ್ಷೇತ್ರದ ಮಣೂರು ವಾಸುದೇವಮಯ್ಯ ಸಾಮಾಜಿಕ ಪ್ರಸಂಗಗಳ ಕಥಾರಚನೆಗಾರರಾಗಿ ಯಶಸ್ಸು ಕಂಡವರು. ಅವರ ಈ ಹಿಂದಿನ ಕಥೆಗಳಾದ ‘ಇಂದ್ರನಾಗ’ ಮತ್ತು ‘ದೇವಗಂಗೆ’ ಬೆಳ್ಳಿಹಬ್ಬವನ್ನೂ ಹಾಗೂ ಪುಷ್ಪ ಸಿಂಧೂರಿ ವಜ್ರ ಮಹೋತ್ಸವ ಪ್ರದರ್ಶಗಳನ್ನು ಕಂಡ ಸಾಧನೆ ಮಾಡಿವೆ. 

ಹೆಸರಾಂತ  ಯುವಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರ ನಿರ್ದೇಶನ, ಎಂ.ಕೆ ರಮೇಶ್ ಆಚಾರ್ಯ ಪದ್ಯಸಾಹಿತ್ಯ ಮತ್ತು ರಮೇಶ್ ಬೇಗಾರ್ ಅವರ ರಂಗ ಸಂಯೋಜನೆಯನ್ನು ‘ಪೂರ್ವಿ ಕಲ್ಯಾಣ’ ಹೊಂದಿದೆ.

ಸಿಂಹಾಸನಕ್ಕಾಗಿ ಮನುಷ್ಯನ ದಾಹ ಇಂದು ನಿನ್ನೆಯದಲ್ಲ. ಪ್ರಪಂಚದ ಬೃಹತ್ ಕೃತಿಗಳೆಲ್ಲಾ ಈ ವಿಷಯವನ್ನು ಬೇರೆ ಬೇರೆ ಮಾದರಿಯಲ್ಲಿ ಚಿತ್ರಿಸಿವೆ. ಪೂರ್ವಿ ಕಲ್ಯಾಣಿಯಲ್ಲಿ ಸಿಂಹಾಸನದ ಸುತ್ತ ನಡೆವ ಕಥೆ ಇದೆ. ಈ ರಾಜಕೀಯ ಕಾರಣಗಳಿಗೆ ಸ್ತ್ರೀಯರ ಬದುಕು ಮತ್ತು ಬವಣೆ ಹೇಗೆ ಮುಖಾಮುಖಿಯಾಗುತ್ತವೆ ಎಂಬುದನ್ನು ಈ ಪ್ರಸಂಗ ಹೇಳಲಿದೆ.

ಯಕ್ಷಗಾನದ ತಾರಾಮೌಲ್ಯದ ಸ್ತ್ರೀಪಾತ್ರಧಾರಿಗಳಲ್ಲಿ ಒಬ್ಬರಾದ ಯಲಗುಪ್ಪ ಸುಬ್ರಮಣ್ಯ ಅವರು ಹಲವು ತಿರುವುಗಳಿಗೆ ಮುಖಾಮುಖಿಯಾಗುವ ಕಥಾ ನಾಯಕಿ ಕಲ್ಯಾಣಿಯಾಗಿ ಬಣ್ಣ ಹಚ್ಚಲಿದ್ದಾರೆ.

ಸಾಮಾಜಿಕ ಪ್ರಸಂಗಗಳ ಪ್ರಧಾನ ದ್ರವ್ಯ ಹಾಸ್ಯರಸ. ಪೂರ್ವಿಕಲ್ಯಾಣಿ ಪ್ರಸಂಗದಲ್ಲಿ ಕಥೆಯ ಮುಖ್ಯಕೊಂಡಿಯಾಗಿ ಬುದ್ಧಿವಂತ ಬೋಬಯ್ಯ ಎಂಬ ಹಾಸ್ಯಪಾತ್ರವಿದ್ದು, ಅದನ್ನು ಮತ್ತೊಬ್ಬ ಸ್ಟಾರ್ ಕಲಾವಿದ ಮೂರೂರು ರಮೇಶ್‍ಬಂಡಾರಿಯವರು ನಿರ್ವಹಿಸಲಿದ್ದಾರೆ. ಇವರೊಂದಿಗೆ ರವೀಂದ್ರ ದೇವಾಡಿಗ ಸಿದ್ಧನ ಪಾತ್ರದೊಂದಿಗೆ ಸಾಥ್‍ನೀಡಲಿದ್ದಾರೆ.

ಮಹತ್ವದ ಮತ್ತು ಕುಟಿಲತನದ ಖಳ ಪಾತ್ರ ಚಾಮುಂಡರಾಯನಾಗಿ ಮೇಳದ ಪ್ರಧಾನ ಕಲಾವಿದ (ಎರಡನೇ ವೇಷಧಾರಿ) ಥಂಡಿಮನೆ ಶ್ರೀಪಾದ ಭಟ್ ಕಾಣಿಸಿಕೊಳ್ಳಲಿದ್ದಾರೆ. ಕಡಬಾಳು ಉದಯ ಹೆಗಡೆ ಕಥಾನಾಯಕ ವಿಶ್ವಪ್ರತಾಪನಾಗಿ ಕಾಣಿಸಿಕೊಂಡರೆ ಯುವ ಜನರ ನೆಚ್ಚಿನ ಕಿರಾಡಿ ಪ್ರಕಾಶ ಧೀರಮತಿ ಪಾತ್ರದಲ್ಲಿಯೂ, ತೊಂಭಟ್ಟು ವಿಶ್ವನಾಥ ಆಚಾರ್ಯ ಚಾರುಕೀರ್ತಿಯಾಗಿ ರಂಗವೇರಲಿದ್ದಾರೆ. ಮಾಗೋಡು ಅಣ್ಣಪ್ಪ, ಹೆನ್ನಾಬೈಲು ಸಂಜೀವ ಶೆಟ್ಟಿ, ವಿಜಯಗಾಣಿಗ, ರಮೇಶ ಸೀತೂರು,ಆನಂದ ಭಟ್, ಪ್ರಣವ ಭಟ್, ಆದಿತ್ಯ ಭಟ್, ಉಮೇಶ್ ತೋಟಾಡಿ ಮುಂತಾದ ಯುವ ಪ್ರತಿಭಾವಂತರ ತಾರಾಗಣವನ್ನು ಪೂರ್ವಿಕಲ್ಯಾಣಿಯಲ್ಲಿ ನೋಡಬಹುದಾಗಿದೆ. ಜನ್ಸಾಲೆ, ಬ್ರಹ್ಮೂರು, ಸುನೀಲ್, ಸುಜನ್, ಪ್ರಸನ್ನ ಮತ್ತು ಭಾಸ್ಕರ ಇವರ ಹಿಮ್ಮೇಳವನ್ನು ಪ್ರದರ್ಶನ ಒಳಗೊಂಡಿದೆ.

ಶ್ರೀ ಪೆರ್ಡೂರು ಮೇಳ ಇದೇ ಜುಲೈ 28 ರ ಶನಿವಾರ ರಾತ್ರಿ 10 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ವಾಸುದೇವಮಯ್ಯ ಇವರ ನಾಲ್ಕನೇ ಕೃತಿ ‘ಪೂರ್ವಿ ಕಲ್ಯಾಣಿ’ ಯನ್ನು ಪ್ರದರ್ಶಿಸಲಿದೆ.

**

ಯಕ್ಷಗಾನ: ಪೂರ್ವಿಕಲ್ಯಾಣಿ ಯಕ್ಷಗಾನ

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ ರಸ್ತೆ

ಸಮಯ: ಇಂದು ರಾತ್ರಿ 10 ಗಂಟೆಗೆ

ಪ್ರಸ್ತುತಿ: ಪೆರ್ಡೂರು ಮೇಳ

ಸಂಪರ್ಕ: 9448101708

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)