ಶುಕ್ರವಾರ, ಏಪ್ರಿಲ್ 10, 2020
19 °C

ಬಾಳ ಸಂಗಾತಿಯ ಹುಡುಕಾಟದಲ್ಲಿ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸಿಂಡ್ರೆಲಾ ಕಥೆ ಕೇಳಿ ಬೆಳೆದ ನಾನು ಮದುವೆ ಬಗ್ಗೆ ಹಲವಾರು ಕನಸುಗಳನ್ನು ಕಾಣತೊಡಗಿದೆ. ಒಬ್ಬ ರಾಜಕುಮಾರ ಬಂದು ನನ್ನ ಕೈ ಹಿಡೀತಾನೆ. ತನ್ನ ಅರಮನೆಯಲ್ಲಿ ರಾಣಿ ಹಾಗೆ ನೋಡ್ಕೋತಾನೆ. ಅಲ್ಲಿ ನಮ್ಮಿಬರದ್ದೆ ಒಂದು ಪುಟ್ಟ ಸಾಮ್ರಾಜ್ಯ. ಹೀಗೆ ಏನೇನೋ ಹುಚ್ಚು ಕಲ್ಪನೆ.

ಯಾವಾಗ ವಯಸ್ಸು 20 ದಾಟಿತೋ ಶುರು ಆಯ್ತು ನೋಡಿ, ನನಗೆ ವರ ಹುಡುಕೋ ಕೆಲಸ. ಮೊದಮೊದಲು ನನಗೆ ಸಂಕೋಚ, ಒಂಥರ ಭಯ, ಇಷ್ಟು ಬೇಗ ಮದುವೆ ಆಗಬೇಕಾ ಅನ್ನೋ ಗೊಂದಲ. ಹೇಗೋ ಮನೆಯವರ ಒತ್ತಡಕ್ಕೆ ಮಣಿದು ಹುಡುಗನ ಕಡೆಯವರನ್ನ ನೋಡಲು ಒಪ್ಪಿಗೆ ಕೊಟ್ಟೆ.

ಇನ್ನೇನು ಎಲ್ಲ ಸರಿಯಾಯಿತು ಅನ್ನೋದ್ರಲ್ಲಿ ವರನ ತಂದೆ ಫೋನ್ ಮಾಡಿ ಜಾತಕ ಕೂಡಿಬರುತಿಲ್ಲ ಅಂತ ಹೇಳಿದರು. ನನಗೆ ವಿಚಿತ್ರ ಅನಿಸಿತು, ಮದುವೆ ಎಂದರೆ ಎರಡು ಹೃದಯಗಳ ಮಿಲನ ಅಂದುಕೊಂಡಿದ್ದೆ. ಆದರೆ ನಾವು ಹುಟ್ಟಿದ ರಾಶಿ ನಕ್ಷತ್ರಗಳು ಅಷ್ಟೊಂದು ಪ್ರಾಮುಖ್ಯ ಅಂತ ಊಹಿಸಿರಲಿಲ್ಲ. ಹೀಗೆ ಕೆಲವೊಂದು ಒಳ್ಳೆ ಸಂಬಂಧಗಳು ಜಾತಕ ಫಲ ಕೂಡಲಿಲ್ಲವೆಂದು ಕೈಚೆಲ್ಲಿ ಹೋದವು. ಸಾಮಾಜಿಕ ಹಾಗೂ ಆರ್ಥಿಕ ನೆಲೆಗಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ನನ್ನ ವರಾನ್ವೇಷಣೆ ಇನ್ನೂ ಕುಂಟುತ್ತ ಸಾಗುತಲೇ ಇದೆ. ಒಂದು ಹೆಣ್ಣಿಗೆ ಒಂದು ಗಂಡು ಎಂದು ದೇವರು ನಿಶ್ವಯಿಸಿರುತ್ತಾನೆ ಅನ್ನೋ ನಂಬಿಕೆ ಮೇಲೆ ಮುಂದಿನ ಹುಡುಕಾಟ, ಮತ್ತದೇ ಜಂಜಾಟ. 

ಇದೆಲ್ಲದರ ನಡುವೆ ನನಗೆ ನಾನೇ ಎಷ್ಟೋ ಸಲ ಕೇಳಿಕೊಳ್ಳುವ ಪ್ರಶ್ನೆ, ಸಿಂಡ್ರೆಲಾ ಕಥೆ ಕೇವಲ, ಒಂದು ಕಾಲ್ಪನಿಕವಾ ಅಥವಾ ನಾವು ಸೃಷ್ಟಿಸಿರುವ ಜಾತಕ, ಸಾಮಾಜಿಕ ಹಾಗೂ ಆರ್ಥಿಕ ಕಟ್ಟುಪಾಡುಗಳ ನಡುವೆ ಮದುವೆಯೂ ಎರಡು ಮುಗ್ಧ ಮನಸ್ಸುಗಳನ್ನು ಒಟ್ಟುಗೂಡಿಸುವ ಸೇತುವೆ ಎಂದು ಮರೆತಿರುವೆವಾ...!

ಶುಭ, ಬೆಂಗಳೂರು

***

ಬ್ರಹ್ಮನ ಗಂಟು

ಓದು ಮುಗಿಸಿ ಸರ್ಕಾರಿ ಕೆಲಸಕ್ಕೆ ಸೇರಿದ್ದು ಆಯಿತು. ನನ್ನ ಪಾಲಿನ ಜವಾಬ್ದಾರಿ ಎಂಬಂತೆ ಒಂದು ಸಹೋದರಿಗೆ ಮದುವೆ ಮುಗಿಸಿದಾಗ ನನ್ನ ಕೂಪನ್ ಮೇಲೆ ಬಿತ್ತು. ಅಂದಿನಿಂದ ನನ್ನ ತಂದೆ ತಾಯಿ ಹೆಣ್ಣು ನೋಡುವ ಕಾಯಕ ಶುರುವಿಟ್ಟು ಕೊಂಡರು. ‘ದೂರದ ಬಾಗಲಕೋಟೆಯಲ್ಲಿ ಸರ್ಕಾರಿ ಶಿಕ್ಷಕಿಯಾಗಿದ್ದಾಳೆ, ಚೆಂದದ ಹುಡುಗಿ, ಸಂಪ್ರದಾಯಸ್ಥ ಕುಟುಂಬ, ಮದುವೆ ಆಗುತ್ತೀಯಾ?’ ಎಂದು ಈ  ಹುಡುಗಿಯ ಬಗ್ಗೆ ಕೇಳಿದವರು 8 ಜನ.

ಇಷ್ಟೊಂದು ಜನರಿಂದ ಕೇಳಿದ ಮೇಲೆ ಅಂತೂ ಆ ಹುಡುಗಿಯ ಫೋಟೊ, ಜಾತಕ ತರಿಸಿಕೊಂಡೆ. ಆ ಹುಡುಗಿ ನನ್ನ ಕನಸಿನ ಕನ್ಯೆಯ ಪಡಿಯಚ್ಚು. ನನ್ನ ಜಾತಕ ಕಳೆದು ಹೋಗಿ ಹಲವಾರು ವರುಷಗಳೇ  ಕಳೆದಿದ್ದವು. ಮದುವೆ  ವಿಚಾರ ಬಂದಾಗ ವಷ೯ದ ಹಿಂದೆ ಅಪ್ಪ ‘ಮಗಾ ನೀನು ಸೋಮವಾರ 8 ಗಂಟೆಗೆ ಹುಟ್ಟಿದ್ದೀಯಾ’ ಅಂದರು. ಅದರ ಪ್ರಕಾರ ನನ್ನ 29 ವಯಸ್ಸಿಗೆ ಜಾತಕ ಬರೆಸಲಾಯಿತು. ನನ್ನ ತಾಯಿ ಇದೆ  ಜಾತಕ ತೆಗೆದುಕೊಂಡು ಜೋಯೀಸರ ಹತ್ತಿರ ವಿಚಾರಿಸಲಾಗಿ, ಆ ಮಹಾಶಯರು ‘ಊಹಂ.. ಮದುವೆ ಸಾಧ್ಯವೇ ಇಲ್ಲ, ಒಂದಕ್ಕೊಂದು ತಾಳ ಮೇಳವೇ ಇಲ್ಲ’ ಎಂದರು.

ಎದೆಯಲಿ ಚಿಗುರಿದ ನನ್ನ ಬಯಕೆ ಕಮರಿತು. ಮತ್ತೆ ಬೇರೇ ಬೇರೇ ಹುಡುಗಿಯರ ಫೋಟೊ ಜಾತಕ ಏನೇ ಬಂದರು ಎಲ್ಲಾ ನೆಪಮಾತ್ರದಿಂದ ತಪ್ಪಿ ಹೋಯಿತು. ನನಗೂ ಸುಸ್ತಾಗಿ 8 ತಿಂಗಳ ಕೊನೆಗೆ ಪ್ರಥಮ ಬಾರಿ ಒಲಿದ ಹೆಣ್ಣಿನ ಮನೆಗೆ ಫೋನಾಯಿಸಿದೆ. ಅವರೂ ಸಹ ಏನೇ ಪ್ರಯತ್ನಿಸಿದರು ಗಂಡು ಹೊಂದದೆ ಸುಸ್ತಾಗಿದ್ದರು.ಇಬ್ಬರ ಮನೆಯವರೂ ಸೇರಿ ದೇವರಲ್ಲಿ ಪ್ರಸಾದ ಕೇಳಲಾಗಿ ಅರೆ ಘಳಿಗೆಯಲ್ಲೇ ಮಾತೆ ಮಹಾಲಕ್ಷ್ಮಿಯ ಅನುಮತಿ ದೊರೆತು, ಕಮರಿದ ಆಸೆ ಚಿಗುರಿತು. ಕನಸಿನ ಕನ್ಯೆಯು ಜೊತೆಯಾದಳು. 

ಪರಮೇಶ್ವರ ನಾಯ್ಕ, ಮುರುಡೇಶ್ವರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)