ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಕೃ– ಹಳ್ಳಿ ಹಾಡುಗಳ ಭಂಡಾರ

Last Updated 18 ಫೆಬ್ರುವರಿ 2019, 12:22 IST
ಅಕ್ಷರ ಗಾತ್ರ

ಕ.ರಾ. ಕೃಷ್ಣಸ್ವಾಮಿ ಅಧ್ಯಯನಕಾರರಿಗೆ ‘ಕರಾಕೃ’ ಎಂದೇ ಪರಿಚಿತ. ಕೇವಲ ಆಸಕ್ತಿಯನ್ನೇ ಮೂಲ ಶಕ್ತಿಯನ್ನಾಗಿಸಿಕೊಂಡು ಹಳ್ಳಿಹಾಡುಗಳನ್ನು ಸಂಗ್ರಹಿಸಲು ಹೊರಟ ಈ ಧೀರ ನಮಗೆ ಕೊಟ್ಟಿದ್ದು ಅಪಾರ. 60 ವರ್ಷದ ಹಿಂದೆ ಯಾವ ಹುದ್ದೆ, ಹಣಕಾಸಿನ ನಿರೀಕ್ಷೆಯೂ ಇರದೆ ಹಳ್ಳಿಗಾಡುಗಳನ್ನು ಸುತ್ತಿ, ಹೊಲ, ಮನೆ ಕೆಲಸದಲ್ಲಿ ದಣಿದು ಬಂದವರ ಮನ ಒಲಿಸಿ, ಎಣ್ಣೆದೀಪದ ಮಂದಬೆಳಕು, ಹೊಗೆಯ ಹಿಂಸೆಗಳಲ್ಲದೆ, ಒತ್ತರಿಸಿಬರೋ ನಿದ್ದೆಯ ನಡುವೆಯೂ ಕೂತು ಅವರು ಹಾಡಿದ್ದನ್ನೆಲ್ಲಾ ಚಕಚಕ ಬರೆದುಕೊಳ್ಳುವುದು ಸಾಧಾರಣ ಶ್ರಮದ ಕೆಲಸವೇನೂ ಆಗಿರಲಿಲ್ಲ.

ಇಂದು ಜಾನಪದ ಓದುವವರು ಹುದ್ದೆಗಳ ಮೇಲೇ ಕಣ್ಣಿಟ್ಟಿರುತ್ತಾರೆ. ಹುದ್ದೆಯಲ್ಲಿ ಕೂತವರು ಜಾನಪದ ಸಂಗ್ರಹ ತಮ್ಮಂತಹ ವಿದ್ವಾಂಸರಿಗೆ ತಕ್ಕುದಲ್ಲ ಎಂದು ಭಾವಿಸುತ್ತಾರೆ ಅಥವಾ ಅಷ್ಟೆಲ್ಲಾ ಶ್ರಮ ಮೂರ್ಖತನದ್ದು ಎಂದು ತಂಪಾದ ದಾರಿ ಕಂಡುಕೊಳ್ಳುತ್ತಾರೆ. ಮುಂದೊಂದು ದಿನ ಈ ನಾಡಿನಲ್ಲಿ ಜಾನಪದಕ್ಕೇ ಒಂದು ವಿಶ್ವವಿದ್ಯಾಲಯ ಆಗುತ್ತದೆ ಎಂದು ಆ ಕಾಲದ ಯಾವ ಹಿರಿಯರೂ ಊಹೆ ಮಾಡಿಕೊಂಡಿರಲಿಲ್ಲ. ಅವರೆಲ್ಲಾ ಸಾಹಿತ್ಯ ಕ್ಷೇತ್ರದ ದಿಗ್ಗಜರೇ; ಮಧುರಚೆನ್ನ, ಬೇಂದ್ರೆ, ಸಿಂಪಿ, ಮಾಸ್ತಿ, ಬೆಟಗೇರಿ, ಗೊರೂರು... ಒಬ್ಬರೇ, ಇಬ್ಬರೇ! ಇವರೆಲ್ಲರಿಗೂ ಪೂರ್ವದಲ್ಲೇ ಕೆಲಸ ಮಾಡಿದ ಎಂ.ಎಲ್. ಶ್ರೀಕಂಠೇಶಗೌಡ, ಹನುಮಂತೇಗೌಡರ ಬರಹ, ಮಾತುಗಳಿಂದ ಆಕರ್ಷಿತರಾಗಿ ತಮ್ಮದೂ ಅಳಿಲುಸೇವೆ ಎಂದು ನುಡಿ ರಕ್ಷಣೆಗೆ ಇಳಿದ ಹಲಸಂಗಿಯ ಮಾದಣ್ಣ ಓಲೆಕಾರರಂತಹ ಹಲವರೂ ಇದ್ದಾರೆ.

ಇವರ‍್ಯಾರಿಗೂ ಜಾನಪದ ಕುರಿತ ಯಾವುದೇ ಕ್ರಮಬದ್ಧ ಶಿಕ್ಷಣವಿರಲಿಲ್ಲ. ಅದು ನಮ್ಮ ಅನಕ್ಷರಸ್ಥ ಹಳ್ಳಿಗರ ಜ್ಞಾನ ಸಂಪತ್ತು, ದೇಸಿ ಸಂಸ್ಕೃತಿಯನ್ನು ಗೌರವಿಸುವುದು, ರಕ್ಷಿಸುವುದು, ಪರಕೀಯರಿಂದ ಈ ದೇಶವನ್ನು ನಮ್ಮದನ್ನಾಗಿ ಮಾಡಿಕೊಳ್ಳುವುದಷ್ಟೇ ಪ್ರಮುಖವಾದುದೆಂದೇ ಇವರು ಭಾವಿಸಿದ್ದರು. ಕರಾಕೃ ಅವರ ಕಾಲಮಾನಕ್ಕೆ ಜಾನಪದಕ್ಕೆ ಸಂಬಂಧಿಸಿ ಒಂದಿಷ್ಟು ಉತ್ತೇಜನಕಾರಿ ಕೆಲಸಗಳಿಗೆ ಅಡಿಗಲ್ಲು ಬಿದ್ದಿತ್ತು: ದೇಜಗೌ, ಹಾಮಾನಾರಂತಹ ಪ್ರಾಜ್ಞರು ಮೈಸೂರು ವಿವಿಯಲ್ಲಿ ಜಾನಪದ ಬೋಧನೆ ಪ್ರಾರಂಭಿಸಿದ್ದರು. ಅಂತಹ ಹೊತ್ತಿನಲ್ಲಿ ಜೀಶಂಪ, ನಾಗೇಗೌಡ, ತಿಪ್ಪೇಸ್ವಾಮಿ... ಅಂತಹ ಪರಿಚಿತರ, ಒಡನಾಡಿಗಳ ಆಸಕ್ತಿ, ಆಕರ್ಷಣೆಯಿಂದ ಕರಾಕೃ ತಾವೂ ಜಾನಪದದ ಸಂಗ್ರಹಕ್ಕಿಳಿದರು.

ಕರಾಕೃ ಹುಟ್ಟಿದ್ದು ಚನ್ನರಾಯಪಟ್ಟಣ ತಾಲ್ಲೂಕಿನ ಕದಬಳ್ಳಿಯಲ್ಲಿ. ಆ ಊರ ಪಟೇಲರಾಗಿದ್ದ ರಾಮೇಗೌಡ ಮತ್ತು ಚನ್ನಮ್ಮ ಅವರ ಐವರು ಮಕ್ಕಳಲ್ಲಿ ಹಿರಿಯನೇ ಕೆ.ಆರ್. ಕೃಷ್ಣಸ್ವಾಮಿ. ನೂರು ಎಕರೆಯಷ್ಟು ಜಮೀನುದಾರರಾಗಿದ್ದ ರಾಮೇಗೌಡರು ಕೃಷ್ಣಸ್ವಾಮಿಯನ್ನು ಇಂಟರ್‌ಮೀಡಿಯಟ್ ಓದಲೆಂದು ಕಳಿಸಿದ್ದು ಮೈಸೂರಿನ ಪ್ರಸಿದ್ಧ ಹಾರ್ಡ್‌ವಿಕ್ ಶಾಲೆಗೆ.

ಆದರೆ, ಸ್ವಾಮಿ ತಲೆಗೆ ಹತ್ತಿದ್ದು ಹಳ್ಳೀ ಹಾಡುಗಳು! ಓದಿಗೆ ಕೈ ಮುಗಿದು ಹಳ್ಳಿಗಳ ಸುತ್ತಲು ಹೊರಟರು. ನಮ್ಮ ತಾಯಿ ‘ಏನೋ, ಓದೋದು ಬಿಟ್ಟು, ಜೀವನ ಹಾಳು ಮಾಡಿಕೊಂಡೆ’ ಅಂದ್ರು. ನಾನು,‘ಹೋಗಮ್ಮಾ, ಎಲ್ಲರೂ ಓದ್ತಾರೆ. ನಾನು ಹಳ್ಳಿಹಾಡು ಸಂಗ್ರಹಿಸಿ, ಪುಸ್ತಕ ಮಾಡ್ತೀನಿ’ ಅಂದೆ ಎಂಬ ಪೀಠಿಕೆಯೊಂದಿಗೆ, ತಮ್ಮ ಸಂಗ್ರಹ ಕಾರ್ಯವನ್ನು ನೆನಪಿಸಿಕೊಳ್ಳುತ್ತಾರೆ.

‘ನಮ್ಮೂರಲ್ಲಿ ಹಾಡ್ತಾ ಇದ್ದ ಕೆರೆಮುಂದಲ ತಿಮ್ಮಕ್ಕ, ಕಿರಿಸಾವೆ ನಂಜಯ್ಯ... ಇವರೆಲ್ಲರ ಪ್ರಭಾವ ನನಗೆ ಆಯ್ತು. ನಮ್ಮೂರನ್ನು ಕುರಿತು ‘ಕಾವೇಟಿ ರಂಗ’ ಅನ್ನೋ ದೊಡ್ಡ ಸಚಿತ್ರ ಪುಸ್ತಕಾನೇ ಪ್ರಕಟಿಸಿದ್ದೆ. 40 ವರ್ಷದ ಹಿಂದೇನೇ. ದಾವಣಗೆರೇಲಿ ಕ್ಯಾಂಪ್ ಮಾಡಿದ್ದಾಗ ಉಚ್ಚಂಗಿ ಎಲಿಸವ್ವನ ಬಗ್ಗೆ ಗೊತ್ತಾಯಿತು. ಅಲ್ಲಿಗೆ ನಡೆದುಕೊಂಡು ಹೋಗಿ, ಕಾಳಿಂಗರಾಯನ ಕಾವ್ಯಾನ ನಾಲ್ಕು ದಿನ ಬರಕೊಂಡೆ. ಅಂದಾಜು ಪುಟ ಬರೆಯೋಕೆ ಸಾಕಾಗಿ ಹೋಯಿತು. ಕಣ್ಣಲ್ಲಿ ನೀರು ಬಂತು! ಕಲಾವಿದ ತಿಪ್ಪೇಸ್ವಾಮೀನೂ ಜತೆ ಇದ್ದರು. ಚಿತ್ರಗಳನ್ನೂ ಬರೆದುಕೊಟ್ಟಿದ್ದಾರೆ.

ಹರ್ತಿಕೋಟೇಲಿ ತಿಪ್ಪೇಸ್ವಾಮಿ ಮನೇಲಿದ್ದುಕೊಂಡು, ಚಿತ್ರದುರ್ಗದ ಕಡೆ ಹೋಗಿ ‘ಚಿತ್ರಕಲ್ಲು ಮದಕರಿ’ ಅನ್ನೋ ಸಚಿತ್ರ ಪುಸ್ತಕಾನೂ ಮಾಡಿದೆ. ಅಲಿಗೆಯಲ್ಲಿ (ಕುಪ್ಪಳಿ) ಇದ್ದುಕೊಂಡು ಮಲೆನಾಡಿನ ಹಾಡುಗಳ ಸಂಕಲನ ಮಾಡಿದೆ. ಪೂರ್ಣಚಂದ್ರ ತೇಜಸ್ವಿಯಿಂದ ಅಲಿಗೆ ಸಂಪರ್ಕ ಆಯಿತು. ಅಲಿಗೆ ಪುಟ್ಟಯ್ಯ ನಾಯಕರು ‘ಏನಪ್ಪಾ ಇಲ್ಲೆಲ್ಲಾ ಬಂದು ಸಂಗ್ರಹ ಮಾಡ್ತೀಯಲ್ಲ! ನೀನು ಬೈಲುಸೀಮೆ ಹುಡುಗ ಇದೆಲ್ಲಾ ಮಾಡೋದು ನನಗೆ ಪುಣ್ಯ! ಮಾಡಪ್ಪಾ ನೀನು...’ ಅಂತ ಬೇರೆ ಬೇರೆ ಕಡೆ ಕಳಿಸಿಕೊಟ್ಟರು. ಒಂದು ತಿಂಗಳು ಅವರ ಮನೇಲಿದ್ದೆ. ನನ್ನ ಜತೇಲಿ ಬಿ. ಕೇಸರಿಸಿಂಗ್ ಬಂದಿದ್ದರು. ಅವರು ತೆಗೆದ ಛಾಯಾಚಿತ್ರಗಳನ್ನು ಆರ್.ಎಸ್.ಎನ್. ಅವರಿಂದ ರೇಖಾಚಿತ್ರಗಳನ್ನು ಬರೆಸಿ, ಪುಸ್ತಕದಲ್ಲಿ ಹಾಕಿದ್ದೇನೆ. ಕಡಿದಾಳು ಶಾಮಣ್ಣ ಮನೆಗೂ ಹೋಗಿ ಅಲ್ಲೂ ಕೆಲವನ್ನು ಸಂಗ್ರಹಿಸಿದೆ. ನಮ್ಮೂರಲ್ಲಿದ್ದಾಗ ಕೈಲೇ ಬರೆದುಕೊಳ್ಳುತ್ತಿದ್ದೆ.

ಮಲೆನಾಡಿಗೆ ಹೋದಾಗ ಟೇಪ್ ರೆಕಾರ್ಡರ್ ತಗೊಂಡಿದ್ದೆ. ನಾನು ಪ್ರಕಟಿಸಿದ್ದ ‘ಜೇನಹನಿಗಳು’, ‘ಜನಪದ ಪ್ರೇಮಗೀತೆಗಳು’ ಎಂಬ ಸಂಗ್ರಹಗಳನ್ನು ಮಂಡ್ಯ ವಿದ್ಯಾಧಿಕಾರಿಯಾಗಿದ್ದ ಕೆ. ಬಸವಯ್ಯ, 1966ರಲ್ಲಿ ನಾಗಮಂಗಲ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್. ಪೇಟೆ ಹೈಸ್ಕೂಲ್‌ಗಳಿಗೆ ಹತ್ತು ಸಾವಿರ ರೂಪಾಯಿಂತೆ, ಮಿಡ್ಲ್‌ಸ್ಕೂಲ್‌ಗೆ ಐದು ಸಾವಿರದಂತೆ ಸರಬರಾಜು ಆದೇಶ ಮಾಡಿದ್ದರು. ಸುಮಾರು ಎರಡು ಲಕ್ಷ ಹಣವೂ ಬಂದಿತ್ತು., ನಿತ್ಯವೂ ಮನಿ ಆರ್ಡರ್ ಬರ‍್ತಿತ್ತು. ಆಗಿನ್ನೂ ಕೆ.ವಿ. ಶಂಕರೇಗೌಡ ಶಿಕ್ಷಣ ಸಚಿವರಾಗಿರಲಿಲ್ಲ. 1967ರಲ್ಲಿ ಆದರು. ಆದರೂ, ಅವರೇ ಈ ಆದೇಶ ಮಾಡಿರೋದೂಂತ ಅಸೆಂಬ್ಲೇಲಿ ಗಲಾಟೆ ಆಯ್ತು. ಪುಸ್ತಕಗಳಲ್ಲಿರುವ ಚಿತ್ರಗಳು ಅಶ್ಲೀಲವಾಗಿವೆ. ವಾಪಸು ಪಡೀಬೇಕು- ಅಂತ. ಶಂಕರೇಗೌಡರು ನಮ್ಮ ಮನೇಗೆ ಬಂದಿದ್ದಾಗ, ‘ನೀನು ಇಷ್ಟು ಕೆಲಸ ಮಾಡಿದ್ದೀಯ. ನಿಮ್ಮ ‘ಜನಪದ ಅಕಾಡೆಮಿ’ಗೆ ವಾರ್ಷಿಕ ಗ್ರಾಂಟ್ ಕೊಡುಸ್ತೀನಿ. ಸಾಹಿತ್ಯ ಪರಿಷತ್ತಿಗೆ ಕೊಟ್ಟಹಾಗೆ...’ ಅಂತ ಅಂದಿದ್ದರು. ಆದರೆ, ಅವರ ಮೇಲೆ ಆಕ್ಷೇಪ ಬಂದದ್ದರಿಂದ ಪುಸ್ತಕ ಖರೀದಿಗೆ ಸ್ಟೇ ಕೊಟ್ಟರು. ಗ್ರಾಂಟೂ ಬರಲಿಲ್ಲ. ಅವತ್ತು ಅಸೆಂಬ್ಲೇಲಿ ಗಲಾಟೆ ಆದಾಗ ನಾನೂ ಅಲ್ಲಿ ಮೇಲೆ ಕೂತು ಕೇಳಿಸಿಕೊಂಡಿದ್ದೆ. ಶಂಕರೇಗೌಡರು ಬಲವಾಗಿ ಸಮರ್ಥಿಸಿಕೊಂಡಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಇದಿನಬ್ಬ ಸಹ ನಮ್ಮ ಪರವಾಗಿ ವಾದಿಸಿದ್ದರು. ತಂದೆ- ತಾಯಿ ಕೊಟ್ಟ ಹಣದಿಂದ ಮೈಸೂರಲ್ಲಿ (ತಾಯಿ,ತಂಗಿ, ತಮ್ಮಿಂದಿರ ಜತೆ) ಇದ್ದೆ. ಸರ್ಕಾರದಲ್ಲಿ ಹೀಗೆ ಆದ್ದರಿಂದ ಬೆಂಗಳೂರು ಕಡೆ ಬಂದೆ...’

ಕರಾಕೃ ಅವರ 25ಕ್ಕೂ ಹೆಚ್ಚು ಸಂಗ್ರಹಗಳಿಗೆ ವೈವಿಧ್ಯತೆಯಿಂದಷ್ಟೇ ಅಲ್ಲದೆ ಕಾಲಘಟ್ಟದ ದೃಷ್ಟಿಯಿಂದಲೂ ವಿಶೇಷ ಸ್ಥಾನವಿದೆ. ಅವರ, ಮತಿಘಟ್ಟ ಕೃಷ್ಣಮೂರ್ತಿ ಅಂತಹವರ ಸಂಗ್ರಹದ ಅನೇಕ ಗೀತೆಗಳು ಇಂದೂ ಬಹಳಷ್ಟು ಗಾಯಕರಲ್ಲಿ ಮತ್ತೆ ಮತ್ತೆ ಹಾಡಿಕೆಗೆ ಬರುತ್ತಿವೆ. ಆದರೆ, ಆ ಸಂಗ್ರಹಗಳ ಬಹುದೊಡ್ಡ ಕೊರತೆ ಎಂದರೆ ಆ ಹಾಡುಗಳ ಹಿನ್ನೆಲೆ ಮಾಹಿತಿಯೇ ನಮಗೆ ಸಿಗುವುದಿಲ್ಲ. ಅಂದರೆ ವ್ಯಕ್ತಿಗೆ ಗುರುತು, ವಿಳಾಸಾದಿಗಳು ಇದ್ದಂತೆ ಹಾಡುಗಳಿಗೂ ಇರುತ್ತದೆ. ಹಾಡಿದವರು ಹೆಂಗಸರೋ, ಗಂಡಸರೋ, ಯಾವ ಸಂದರ್ಭದಲ್ಲಿ? ವಾದ್ಯಗಳಿದ್ದವೇ? ಹಾಡಿದ್ದು ಕುಳಿತೋ, ಕೆಲಸ ಮಾಡುತ್ತಲೋ? ಕುಣಿತ ಮಾಡುತ್ತಲೋ...? ಇತ್ಯಾದಿ ಪೂರಕ ಮಾಹಿತಿ ದಾಖಲಿಸಿರದಿದ್ದರೆ ಅದು ವೈಜ್ಞಾನಿಕ ದಾಖಲೆ ಆಗುವುದಿಲ್ಲ. ಆ ಹಾಡನ್ನು ಕುರಿತು ಸರಿಯಾದ ಅಧ್ಯಯನ ಮಾಡುವುದೂ ಸಾಧ್ಯವಾಗುವುದಿಲ್ಲ.

ಜಾನಪದ ಕುರಿತ ವ್ಯವಸ್ಥಿತ ಅಧ್ಯಯನ ಹೆಚ್ಚಾಗುತ್ತಿದ್ದಂತೆ, ಹಳಬರ ಸಂಗ್ರಹಗಳಲ್ಲಿನ ಕೊರತೆಗಳ ಕಟುವಿಮರ್ಶೆಯಿಂದಾಗಿ ಹಳಬರನ್ನು ನಿರ್ಲಕ್ಷಿಸುವುದೂ ಹೆಚ್ಚಾಯಿತು. ಆಧುನಿಕ ತರಬೇತಿ, ಇರದ ಕರಾಕೃ ಅಂತಹವರು ‘ವಿದ್ವಾಂಸ’ರೊಂದಿಗೆ ಸ್ಪರ್ಧಿಸಲಾರದೆ, ಬೇರೆ ವೃತ್ತಿಯನ್ನೂ ಹಿಡಿಯಲಾರದೆ ತೊಂದರೆಗೆ ಸಿಕ್ಕಿದ್ದೂ ಆಯಿತು. ಕರಾಕೃ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲವೆಂಬ ನೋವು ಅವರಿಗೆ ಸಹಜವಾಗಿಯೇ ಇದೆ. ಇವರ ಅಕಾಡೆಮಿಗಾಗಿ ಸರ್ಕಾರ ಮಂಜೂರು ಮಾಡಿದ್ದ ಜಾಗ ಹಣದ ಕೊರತೆ ಮತ್ತು ಕೆಲವರ ಹುನ್ನಾರದಿಂದ ಖಾಸಗಿಯವರ ಹೆಸರಿಗೂ ಆದದ್ದನ್ನು ಅವರು ನೋವಿನಿಂದ ಸ್ಮರಿಸುತ್ತಾರೆ. ಹೀಗಾಗಿ, ದಶಕಗಳಿಂದ ಕೂಡಿಟ್ಟಿದ್ದ ಅವರ ಸಂಗ್ರಹದ ಹಸ್ತಪ್ರತಿಗಳು, ಧ್ವನಿಮುದ್ರಿಕೆಗಳು, ಆರ್.ಎಸ್. ನಾಯ್ಡು ಮೊದಲಾದವರ ಅಪರೂಪದ ಚಿತ್ರಕೃತಿಗಳು, ಶಿಲ್ಪಕಲಾ ಕೃತಿಗಳು ಅವರ ಮನೆಯಲ್ಲಿ ಹಾಳಾಗುವ ಸ್ಥಿತಿಯಲ್ಲಿವೆ.

ಈಗಲಾದರೂ ಸರ್ಕಾರ ಮನಸ್ಸು ಮಾಡಿ ಕಲಾಗ್ರಾಮದಲ್ಲಿ ಸಂಗ್ರಹಿಸಿಟ್ಟರೆ ಅಧ್ಯಯನಕಾರರಿಗೆ ಬಹಳ ಉಪಯೋಗವಾಗುತ್ತದೆ. ಕರಾಕೃ ಅವರಿಗೂ ಈ ಇಳಿವಯಸ್ಸಿನಲ್ಲಿ ಒಂದಿಷ್ಟು ನೆಮ್ಮದಿಯಾಗುತ್ತದೆ. ಇದು ತುರ್ತಾಗಿ ಆಗಬೇಕಾದ ಕಾರ್ಯ. ಕರಾಕೃ ಎನ್ನುವ ಹಿರಿಯರು ಪುರಾತನರಂತೆ ಎಂದೋ ಇದ್ದವರು ಎಂಬ ಭಾವವನ್ನು ತೊಡೆದುಹಾಕಿ 85ರ ಸನಿಹದ ಅವರು ನಮ್ಮೊಡನೆ ಇದ್ದಾರೆ ಎಂಬ ಪ್ರೀತಿ, ಗೌರವವನ್ನು ತೋರುವ ಕಾರ್ಯ ಮಾಡಬೇಕಾದುದು ಅಕಾಡೆಮಿ, ಪರಿಷತ್ತು, ಅಧ್ಯಯನಕಾರರು ಹಾಗೂ ನಾಗರಿಕರ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT