ರಾತ್ರಿ ಕಪ್ಪಿನ ಪಾಠಗಳು...

7

ರಾತ್ರಿ ಕಪ್ಪಿನ ಪಾಠಗಳು...

Published:
Updated:

ಕನಿಷ್ಠ ತಿಂಗಳಿಗೊಮ್ಮೆಯಾದರೂ ನನ್ನ ಪಾಲಿಗೆ ರಾತ್ರಿ ಪ್ರಯಾಣ ಕಾದಿರುತ್ತದೆ. ಸೂರ್ಯ ಮುಳುಗುವ ಹೊತ್ತಿಗೆ ಬ್ಯಾಗ್ ಏರಿಸಿಕೊಂಡು ಹೊರಟುಬಿಡಬೇಕು. ಇಷ್ಟ–ಕಷ್ಟಗಳನ್ನು ಕಟ್ಟಿಟ್ಟು ಹೊರಡಲೇಬೇಕು. ರಾತ್ರಿ ಪ್ರಯಾಣ ಶುರು ಮಾಡಿ ಹತ್ತಾರು ವರ್ಷಗಳೇ ಕಳೆದರೂ ಪ್ರತಿ ಬಾರಿಯೂ ಒಂದು ತಣ್ಣನೆಯ ವಿಷಾದ, ಬದುಕು ಇಷ್ಟೇ ಎಂಬ ಪಾಠ ಕಾದಿರುತ್ತದೆ! ಹಗಲಿನಲ್ಲಿ ಬಾಳು ಎಷ್ಟೇ ಲಕಲಕ ಹೊಳೆದರೂ ರಾತ್ರಿಯ ಕತ್ತಲಲ್ಲಿ ಬಾಲ ಮುದುರಿಕೊಂಡು ಬಿದ್ದುಕೊಳ್ಳಬೇಕಾದ ಅನಿವಾರ್ಯತೆ. ಅವುಗಳ ಮಧ್ಯೆ ನಾನು ದೂರದ ಊರು ಸೇರಬೇಕಾದ ಜರೂರು.

ರಾತ್ರಿ ಪಯಣಕ್ಕೆ ನಾನು ಆಯ್ದುಕೊಳ್ಳುವ ಕಿಟಕಿ ಪಕ್ಕದ ಸೀಟು ನನ್ನ ಪಾಲಿಗೊಂದು ದೊಡ್ಡ ಪುಸ್ತಕ. ಪ್ರತಿ ಬಾರಿಯೂ ಹೊಸಹೊಸ ಪುಸ್ತಕಗಳು ದಕ್ಕುತ್ತವೆ– ಓದಿ ಮುಗಿಯದಷ್ಟು ಪುಟಗಳು, ಪಾಠಗಳು! ನನಗೆ ಹೆಚ್ಚು ಕಾಡುವುದು ನಗರದ ರಾತ್ರಿಗಳು. ನಗರದ ಪಾಲಿಗೆ ಮಲಗುವ ರಾತ್ರಿಗಳು ಇದ್ದರೂ ಬೆಂಗಳೂರಿನ ಮೆಜೆಸ್ಟಿಕ್‌ನಂತಹ ಕಡೆ ಮಲಗದೇ ಇರುವ ರಾತ್ರಿಗಳೂ ಇವೆ. ಮಲಗಿರುವ ರಾತ್ರಿಯ ನಗರ ನನಗೆ ಪೂರ್ಣ ಬೆತ್ತಲೆಯಾಗಿ ಕಂಡು ಒಂದು ಸಣ್ಣ ಅಸಹ್ಯ ಮೂಡಿಸುತ್ತದೆ.

ಹಗಲಿನಲ್ಲಿ ಹದಿನಾರರ ತರುಣಿಯಂತೆ ಬೀಗಿದ ಇದೆಲ್ಲಾ ರಾತ್ರಿ ಹೊತ್ತಿಗೆ ಸಾವ ಹಾಸಿಗೆಯಲ್ಲಿನ ಮುದುಕಿ! ಮನುಷ್ಯ ಎಂಥವನೇ ಆಗಿರಲಿ ರಾತ್ರಿಗೆ ಅವನಿಗೊಂದು ಜಾಗ ಬೇಕು ಸಣ್ಣ ನಿದ್ದೆಗೆ. ನಗರಗಳು ರಾತ್ರಿಯ ಹೊತ್ತಿನಲ್ಲಿ ಕೆಲವರ ಪಾಲಿಗೆ ‌ಫುಟ್‌ಪಾತ್‌ಗಳನ್ನು, ಹೋಟೆಲ್ ಮೂಲೆಗಳನ್ನು, ಬಸ್‌ ನಿಲ್ದಾಣದ ಅಂಚಿನ ಜಾಗಗಳನ್ನು ಬಿಟ್ಟುಕೊಡುತ್ತವೆ. ಅಲ್ಲಿ ರಾತ್ರಿಗಳನ್ನು ಕಳೆಯುವವರು, ಕಿಟಕಿಯ ಮೂಲಕ ನಮ್ಮಂತವರ ಕಣ್ಣಿಗೆ ಬಿದ್ದು ಕಾಡುತ್ತಾರೆ.

ಹೊಲಗಳ ಮಧ್ಯೆ, ಮರಗಳ ಮಧ್ಯೆ ಮಲಗಿರುವ ಹಳ್ಳಿಗಳ ಮುಂದೆ ಹಾದು ಹೋಗುವಾಗ ಒಂದು ನಿಡುಸುಯ್ಯುವಿಕೆ ನನ್ನನ್ನು ತಾಕುತ್ತದೆ. ಅಲ್ಲಿ ಅದು ನಗರಕ್ಕಿಂತ ಭಿನ್ನ! ನಗರದ ರಾತ್ರಿಯಲ್ಲಿ ಕೇಳಿ ಬರುವ ಆಸೆಬುರುಕುತನ, ಕುತಂತ್ರದ ಉಸಿರು ಇಲ್ಲಿಲ್ಲ. ಒಂದು ಸಣ್ಣ ನೆಮ್ಮದಿ ಮತ್ತು ಅದರ ಮಗ್ಗುಲಲ್ಲೇ ವೃದ್ಧ ಜೀವಗಳು ಕಣ್ಣಿನಲ್ಲಿ ಮಕ್ಕಳ ಬಗೆಗೆ ಆಸೆ ತುಂಬಿಕೊಂಡು ನಿದ್ದೆ ದೂರವಿಟ್ಟು ಕಾದು ಕುಳಿತ ಸದ್ದು ಕೇಳಿಸುತ್ತದೆ. ಅಪರಾತ್ರಿಯಲ್ಲೂ ಹಿರಿಯ ಜೀವಗಳು ಕೇರಿಗಳಲ್ಲಿ ಕಾಣಿಸುತ್ತವೆ. ರೈತ ಹೊಲದಲ್ಲಿ ನೀರು ಕಟ್ಟುತ್ತಾನೆ. ದುಡಿದು ಬಂದ ಹೆಣ್ಣು ದೇಹಗಳು ನೆಲವನ್ನು  ತಬ್ಬಿಕೊಂಡು ಹಿತವಾದ ನಿದ್ದೆಗೆ ಜಾರುತ್ತವೆ.  ಬೆಳೆಗಳು ಮಾಡಿದ ಮೋಸ, ತೀರದ ಸಾಲಗಳು, ಇನ್ನೂ ಉಳಿದಿರುವ ಜಾತಿಯ ವಾಸನೆ ಎಲ್ಲವೂ ಮನಸ್ಸಿಗೆ ತಾಕುತ್ತಲೇ ಇರುತ್ತವೆ.‌

ನಾ ಕೂತ ಬಸ್ಸೋ ರೈಲೋ ಸಾಗಿದಂತೆಲ್ಲಾ ರಾತ್ರಿ ಎಂಬ ಮಾಯಾವಿ ಹೀಗೆ ಬದುಕನ್ನು ತೋರಿಸುತ್ತದೆ. ಊರು ಸೇರುವ ಹೊತ್ತಿಗೆ ಮಾಯಾವಿ ಮೆಲ್ಲನೆ ಮರೆಯಾಗುತ್ತದೆ. ಹಗಲೆಂಬ ಸೋಗಲಾಡಿ ಇಷ್ಟಿಷ್ಟೇ ಬೆಳಕು ಹರಿಸುತ್ತಾ ಕ್ರಮೇಣ ಬೆಳ್ಳಗೆ ರಾಚುತ್ತದೆ. ಮತ್ತೆ ತೋರ್ಪಡಿಕೆಯ ಜಗತ್ತು ಕದ ತೆರೆದುಕೊಳ್ಳುತ್ತದೆ. ಮತ್ತೆ ಬಣ್ಣಗಳು, ಮತ್ತೆ ನಟನೆಗಳು.‌ ಹಗಲಿನ ಈ ನಗುವ ಮುಖದ ಹಿಂದೆ ರಾತ್ರಿಯು ಅಡಗಿಸಿಕೊಂಡ ವಿಲಕ್ಷಣ ಪಾಠ ನನಗೆ ಕಾಣಿಸುತ್ತದೆ. ಪ್ರತಿ ರಾತ್ರಿಯ ಪಯಣವೂ ನನಗೊಂದು ಆಧ್ಯಾತ್ಮ ದರ್ಶನ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !