ಬುಧವಾರ, ಸೆಪ್ಟೆಂಬರ್ 23, 2020
20 °C

ಸಂವಾದ: ಸಹೃದಯರ ಸ್ಪಂದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಊಹೆಯ ಮುಸುಕಿನಲ್ಲಿ...

ಷ. ಶೆಟ್ಟರ್ ಬರೆದ ‘ಕುಪಣ ಎಂಬೋ ಕೊಪ್ಪಳ’ ಲೇಖನಕ್ಕೆ (ಭಾ.ಪು. ಫೆ.2) ಪ್ರತಿಕ್ರಿಯೆ: ಲೇಖಕರು ಕೊಪ್ಪಳಕ್ಕೆ ಕುಪನ ಎಂಬ ಸ್ಥಳನಾಮರೂಪ ಇದ್ದುದಾಗಿ ಭಾವಿಸಿ ಲೇಖನ ಬರೆಯುತ್ತ ಹೋಗಿದ್ದಾರೆ. ಆದರೆ ಶೀರ್ಷಿಕೆಯಲ್ಲಿ ಮಾತ್ರ ‘ಕುಪನ’ ಎಂಬುದಕ್ಕೆ ಬದಲಾಗಿ ‘ಕುಪಣ’ ಎಂಬ ರೂಪ ಬಳಸಿದ್ದಾರೆ. ಲೇಖನದಲ್ಲಿ ‘ಕುಪನದ ದಾನಿಗಳು’ ಎಂಬ ಉಪಶೀರ್ಷಿಕೆಯ ಭಾಗದಲ್ಲಿ ಕುಪನ ಎಂಬುದು ವ್ಯಕ್ತಿನಾಮವಾಗಿದ್ದುದರ ಶಾಸನಗಳ ಮೂರು ಉದಾಹರಣೆಗಳನ್ನು ಕೊಟ್ಟಿದ್ದಾರೆ. ಅಂದರೆ ಕುಪನ ಹೆಸರಿನ ಮೂವರು ಬೌದ್ಧರ ವಿವರಗಳನ್ನು ಕೊಟ್ಟಿದ್ದಾರೆ. ಆದರೆ ಆ ಶಾಸನಗಳು ಯಾರ ಮತ್ತು ಯಾವ ಕಾಲದವು ಎಂಬುದನ್ನು ಅವರು ಹೇಳಿರುವುದಿಲ್ಲ. ಕುಪನ ಎಂಬುದು ಸ್ಥಳನಾಮ ಕೂಡ ಆಗಿತ್ತು ಎಂಬುದಕ್ಕೆ ಯಾವ ಉದಾಹರಣೆಯನ್ನೂ ಅವರು ಕೊಟ್ಟಿರುವುದಿಲ್ಲ. ವ್ಯಕ್ತಿನಾಮವಾಗಿದ್ದ ಕುಪನ ಸ್ಥಳನಾಮವಾಗಿ ಕಂಡಿದ್ದು ಹೇಗೆ ಎಂಬ ಬಗ್ಗೆ ಅವರ ಲೇಖನದಲ್ಲಿ ಉತ್ತರವಿಲ್ಲ. ‘ಕುಪಣ’ ಎಂಬ ಶಬ್ದವೇ ಇರುವ ಪ್ರಾಕೃತ ಶಾಸನಗಳು ಇದ್ದಿದ್ದರೆ ಅವನ್ನು ಉಲ್ಲೇಖಿಸಬೇಕಾಗಿತ್ತು.

ಈಗ ತಿಳಿದಿರುವಂತೆ ಕೊಪ್ಪಳದ ಅತ್ಯಂತ ಪ್ರಾಚೀನ ಶಬ್ದರೂಪ ಕುಪಣ. ಇದು ಕ್ರಿ.ಶ. 4ನೆಯ ಶತಮಾನದ ಪೂರ್ವಾರ್ಧಕಾಲದ ಕದಂಬರ ಮಯೂರವರ್ಮನ (ಚಿತ್ರದುರ್ಗದ ಬಳಿಯ) ಚಂದ್ರವಳ್ಳಿಯ ಶಾಸನದಲ್ಲಿ ಮೊತ್ತಮೊದಲ ಬಾರಿಗೆ ಕಾಣಸಿಗುತ್ತದೆ. ಆ ಶಾಸನದ ಅಂತ್ಯದಲ್ಲಿ ಕುಪಣದ ಚಮ ಎಂಬುವನನ್ನು ‘ಕುಪಣಚಮ’ ಎಂಬುದಾಗಿ ಹೆಸರಿಸಿದೆ. ಅಲ್ಲಿ ಕುಪಣ ಎಂಬುದು ಕೊಪ್ಪಳದ ಸ್ಥಳನಾಮ ಎಂಬುದು ಸ್ಪಷ್ಟವಾಗಿದೆ. (ಈ ಶಾಸನದ ಮರುಪರಿಶೀಲನೆಯ ನನ್ನ ಲೇಖನ 1984ರ ಜುಲೈ–ಡಿಸೆಂಬರ್‌ನ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬಂದಿದೆ). ಈ ಕುಪಣವೇ ಮುಂದಿನ ಶತಮಾನಗಳಲ್ಲಿ ಕೊಪಣ, ಕೊಪ್ಪಣ, ಕೊಪ್ಪಳ ಇಂಥ ರೂಪಗಳನ್ನು ಪಡೆಯುತ್ತ ಬಂದಿದೆ. (ಅಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಕೊಪ್ಪಳದ ಸ್ಥಳನಾಮ ನಿಷ್ಪತ್ತಿ ಕುರಿತ ನನ್ನ ಲೇಖನವಿದೆ). ಚಂದ್ರವಳ್ಳಿ ಶಾಸನದಲ್ಲೇ ಮೊತ್ತಮೊದಲ ಬಾರಿಗೆ ಕುಪಣ ಶಬ್ದ ಬಂದಿರುವುದನ್ನು ಶೆಟ್ಟರ್ ಅವರು ಉಲ್ಲೇಖಿಸಬೇಕಾಗಿತ್ತು. ಆದರೆ ಅವರು ಯಾಕೆ ಹಾಗೆ ಮಾಡಲಿಲ್ಲವೋ ಆಶ್ಚರ್ಯವಾಗುತ್ತದೆ.

ಉದಾಹರಣೆಗಳಲ್ಲಿ– ಅವರು ಕೊಟ್ಟಿರುವ ಕೆಲವು ಶಬ್ದರೂಪಗಳು ಗೊಂದಲಕಾರಿ. ಖಜನಕರ, ಖಜನಾಕರ, ಖಜನಕಾರ ಈ ಮೂರು ರೂಪಗಳಲ್ಲಿ ಯಾವುದು ಸರಿ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಇದರ ಜೊತೆಗೆ ಖಜನಕಾರ ಎಂಬುದಕ್ಕೆ ಭಂಡಾರಿ ಅಥವಾ ಖಜಾನೆ ಅಧಿಕಾರಿ ಎಂದು ಅರ್ಥಮಾಡಬಹುದು ಎಂದು ಅವರು ಬರೆಯುತ್ತಾರೆ. ಹಾಗೆಯೇ, ‘ಈ ಸ್ಥಳವು ಖಜಾನೆಯ ಕೇಂದ್ರವಾಗಿದ್ದು ಇಲ್ಲಿ ಸ್ಪಷ್ಟವಾಗುತ್ತದೆ’ ಎಂದು ಅವರ ಊಹಾರ್ಥವನ್ನು ಸ್ಥಾಯಿಗೊಳಿಸಲು ಯತ್ನಿಸುತ್ತಾರೆ. ಪ್ರಾಕೃತದ ‘ಖಜನ’ ಎಂಬುದು ಅರೇಬಿಕ್ ಪರ್ಷಿಯನ್ ಮೂಲದ ‘ಖಜಾನಾ’ ಎಂಬ ಶಬ್ದವನ್ನು ಹೋಲುವುದರಿಂದ ಅವರು ಅದಕ್ಕೆ ಖಜಾನೆ ಎಂದು ಅರ್ಥಮಾಡಿರುವ ಸಾಧ್ಯತೆ ಕಾಣುತ್ತದೆ. ಆ ಶಬ್ದದ ಅರ್ಥ ಇನ್ನೂ ತಿಳಿಯಬೇಕಾಗಿದೆ. ಆ ಅರ್ಥದ ಶಬ್ದ ಪ್ರಾಕೃತ ಶಬ್ದಕೋಶದಲ್ಲಿಲ್ಲ ಎಂಬುದನ್ನು ಅವರು ಎದ್ದುಕಾಣದಂತೆ ಊಹೆಯ ಮುಸುಕಿನಲ್ಲಿ ಮರೆಮಾಡಿದ್ದಾರೆ. (ನೋಡಿ: ‘ಪಾಇಅ ಸದ್ದ ಮಹಣ್ಣವೋ’ ಎಂಬ ದೊಡ್ಡ ಪ್ರಾಕೃತ ಶಬ್ದಕೋಶದ ಅನುವಾದ, ಡಾ.ಆರ್. ಲಕ್ಷ್ಮೀನಾರಾಯಣ, ಪ್ರಕಟಣೆ: ಕುವೆಂಪು ಭಾಷಾಭಾರತಿ)

ಡಾ.ಬಿ. ರಾಜಶೇಖರಪ್ಪ, ಚಿತ್ರದುರ್ಗ

***

ಎಲ್ಲರನ್ನೂ ಒಳಗೊಂಡಿದೆ...

ನಟರಾಜ್ ಹುಳಿಯಾರ್ ಬರೆದ ‘ಸಾಹಿತ್ಯವು ಸಾಮಾನ್ಯರ ಸಖ ಆಗಿದೆಯೆ?’ ಎಂಬ ಲೇಖನ ಓದಿದೆ (ಭಾ.ಪು. ಫೆ. 2). ಆ ಬರಹಕ್ಕೆ ಈ ಪ್ರತಿಕ್ರಿಯೆ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ‘ಬೌದ್ಧಿಕ ವಾತಾವರಣವನ್ನು ಸೃಷ್ಟಿಸಲಾಗದ, ಕೊನೆಯ ಪಕ್ಷ ಸ್ವಾಭಿಮಾನವೂ ಇಲ್ಲದ ಇಂಥ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಗಂಭೀರ ಪ್ರಶ್ನೆಗಳನ್ನಾಗಲೀ ಗಂಭೀರ ಬೌದ್ಧಿಕ ನೆಲೆಯಲ್ಲಿ ಚರ್ಚಿಸುವುದು ನಿರೀಕ್ಷಿಸುವುದು ಕಷ್ಟ’ ಎಂದು ಹೇಳಿದ್ದಾರೆ. ಲೇಖಕರು ಹೇಳಿರುವಂತೆ ಯಾವುದೇ ಸಮ್ಮೇಳನಗಳಿಂದ ಎಲ್ಲವೂ ಪೂರ್ಣವಾಗಿ ಆಗುತ್ತದೆ ಎಂದು ಹೇಳಲಾಗದಿದ್ದರೂ ಏನೂ ಆಗಿಲ್ಲವೆಂಬುದು ಪರಂಪರೆಯ, ವಾಸ್ತವದ ಬಗೆಗಿನ ಅವಜ್ಞೆಯನ್ನು ಸೂಚಿಸುತ್ತದೆ. ಪ್ರಜಾಸತ್ತಾತ್ಮಕವಾದ ಕನ್ನಡ ಸಾಹಿತ್ಯ ಪರಿಷತ್ತು ಹಲವು ಸಂಗತಿಗಳಿಗೆ ಮೊದಲಿನಿಂದಲೂ ಮುಖಾಮುಖಿಯಾಗುತ್ತಾ ಬಂದಿದೆ.

ಸಮ್ಮೇಳನವನ್ನು ವಿರೋಧಿಸಿ ಬಂಡಾಯ ಸಂಘಟನೆ ಪರ್ಯಾಯ ಸಮ್ಮೇಳನ ಏರ್ಪಡಿಸಿದ ಸಂದರ್ಭದಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಅವರು ಬಂಡಾಯ ಸಂಘಟನೆಯನ್ನು ಪರಿಷತ್ತಿಗೆ ಕರೆದು ಸಂವಾದ ಮತ್ತು ವಿಚಾರ ಸಂಕಿರಣಕ್ಕೆ ವೇದಿಕೆ ಕಲ್ಪಿಸಿದ್ದು ಪರಿಷತ್ತು ಎಲ್ಲರನ್ನೂ ಒಳಗೊಳ್ಳುತ್ತದೆಯೆಂಬುದಕ್ಕೆ ಒಂದು ಉದಾಹರಣೆ. ಸಮ್ಮೇಳನದ ಪ್ರಧಾನ ವೇದಿಕೆಯಲ್ಲದೆ ಸಮಾನಾಂತರ ವೇದಿಕೆಯಲ್ಲಿ ಸಮಕಾಲೀನ ಸಮಸ್ಯೆಗಳ ಕುರಿತು ಗಂಭೀರವಾಗಿ ಚರ್ಚಿಸಿದೆ. ನೆಲ- ಜಲ- ನಾಡು– ನುಡಿ ಮಾತ್ರವಲ್ಲದೆ ಚಳವಳಿ, ದಲಿತ ಸಾಹಿತ್ಯ, ರೈತರ ಸಮಸ್ಯೆ, ಉದ್ಯಮ, ಉದ್ಯೋಗ, ತಂತ್ರಜ್ಞಾನ ಮೊದಲಾದ ಸಂಗತಿಗಳ ಕುರಿತು ಚರ್ಚೆಗಳಾಗಿವೆ.

ಇಂದು ಮೊಬೈಲು, ಫೇಸ್‌ಬುಕ್ಕುಗಳಲ್ಲಿ ಮುಳುಗಿ ಜನರೊಂದಿಗೆ ಸಂವಾದವೇ ದೂರವಾಗುತ್ತಿರುವ ಸಂದರ್ಭದಲ್ಲಿ ಸಮ್ಮೇಳನಗಳು ಎಂದಿಗಿಂತಲೂ ಹೆಚ್ಚು ಅವಶ್ಯಕ. ಇದು ಸಹಸ್ರಾರು ಜನರು ಸೇರುವ ಸಂಭ್ರಮಿಸುವ, ಚಿಂತಿಸುವ, ಅನುಸಂಧಾನ ಮಾಡುವ ಸಮ್ಮೇಳನ.

ಖಾಸಗಿಯಾಗಿ ಏರ್ಪಡಿಸುವ ಜೈಪುರ ಮೊದಲಾದ ಸಾಹಿತ್ಯ ಉತ್ಸವಗಳು ಒಂದು ಗುಂಪಿನವರಿಗೆ ಮಾತ್ರ ಸೀಮಿತವಾದರೆ ಸಾಹಿತ್ಯ ಪರಿಷತ್ತು ಆಯೋಜಿಸುವ ಸಮ್ಮೇಳನಗಳು ಎಲ್ಲರನ್ನೂ ಒಳಗೊಳ್ಳುವುದಾಗಿದೆ. ಜೈಪುರ ಉತ್ಸವಗಳು ಕಲೋನಿಯಲ್, ಆಂಗ್ಲ ವ್ಯಾಮೋಹದಿಂದಾಗಿ ಸ್ಥಳೀಯತೆಯಿಂದ ದೂರವಾದರೆ ಪರಿಷತ್ತಿನ ಸಮ್ಮೇಳನಗಳು ಸ್ಥಳೀಯತೆಯ ಮೂಲಕ ಜನಪ್ರಿಯವಾಗಿವೆ.

 ಡಾ. ರುದ್ರೇಶ್ ಅದರಂಗಿ, ಬೆಂಗಳೂರು

ಮಾಹಿತಿ ಬೇಕು

ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ‘ಕುಪಣ ಎಂಬೋ ಕೊಪ್ಪಳ’ (ಲೇ: ಷ. ಶೆಟ್ಟರ್) ಲೇಖನಕ್ಕೆ ಪ್ರತಿಕ್ರಿಯೆ. ‘ಇಸಲ’ ಕನ್ನಡದ್ದಲ್ಲ, ಪ್ರಾಕೃತದ್ದು ಎಂದು ಸಾಗುವ ಲೇಖನದಲ್ಲಿ ಕೊಪ್ಪಳದ ಬಗೆಗೆ ವಿವರಗಳಿವೆ. ‘ಇಸಲ’ದ ಬಗೆಗೆ ಏನೂ ಇಲ್ಲ. ಕುಪಣದಂತೆ ಇಷ್ಟೊಂದು ದೀರ್ಘಕಾಲ ಒಂದೇ ಹೆಸರಿನಿಂದ ಕರೆಸಿಕೊಂಡ ಇನ್ನೊಂದು ಸ್ಥಳವು ಕರ್ನಾಟಕದಲ್ಲಿ ಇದೆಯೇ ಎಂಬ ಕುತೂಹಲ...’ ಎಂದು ಲೇಖನ ಮುಕ್ತಾಯವಾಗುತ್ತದೆ. ಅಲ್ಲಿಂದ ನನ್ನ ಕುತೂಹಲ ಪ್ರಾರಂಭವಾಗುತ್ತದೆ.

ಶಿರಸಿಯಿಂದ ಏಳು ಕಿ.ಮಿ. ದೂರದಲ್ಲಿ ‘ಇಸಲೂರು/ಇಸಳೂರು’ ಎಂಬ ಊರು ಇದೆ. ಇದನ್ನು ಇಸಲೂರು ಪೇಟೆ ಎಂದು ಸುತ್ತಮುತ್ತಲ ಗ್ರಾಮದವರು ಕರೆಯುವ ವಾಡಿಕೆ ಇತ್ತು. ಹಿಂದೆ ಇದು ಶಿರಸಿಗಿಂತ ಪ್ರಮುಖ ಸ್ಥಳವಾಗಿತ್ತು ಎಂದು ಹೇಳಲಾಗುತ್ತದೆ. ಬಯಲುಸೀಮೆ ಜನರಿಗೆ ಇದು ಮಲೆನಾಡಿನ ಹೆಬ್ಬಾಗಿಲು.

ಅಂದಿನ ಕಾಲದಲ್ಲಿ ಬಯಲು ಸೀಮೆಯಿಂದ ಬಂದು ಇಲ್ಲಿ ಅಡಿಕೆ, ಏಲಕ್ಕಿ, ಕಾಳುಮೆಣಸು ಇತ್ಯಾದಿಗಳನ್ನು ಖರೀದಿಸಿ ತಮ್ಮ ಕಾಳುಕಡಿಯನ್ನು ಇಲ್ಲಿ ಮಾರುತ್ತಿದ್ದರು. ಹೀಗಾಗಿ ಇದು ಇಸಲೂರ ಪೇಟೆ ಎನ್ನಿಸಿಕೊಂಡಿತ್ತು. ಇಲ್ಲಿ ಒಂದು ಧರ್ಮಶಾಲೆಯೂ ಇತ್ತಂತೆ. ಈಗಲೂ, ಹಾವೇರಿ ಜಿಲ್ಲೆಯ ವೈಷ್ಣವ ಮಠದಿಂದ ಕಾಲು ನಡಿಗೆ ಸೇವೆ ಮಾಡುವ ವೈಷ್ಣವ ಸಂಪ್ರದಾಯದವರು ಸೋಂದಾ ಮಠಕ್ಕೆ ಹೋಗುವಾಗ ರಾತ್ರಿಯನ್ನು ಇಸಲೂರಿನಲ್ಲೇ ಕಳೆದು, ಮರುದಿವಸ ಮುಂದುವರೆಯುವ ಸಂಪ್ರದಾಯ ಇದೆ. ನಾನು ಅವರನ್ನು ಮಾತನಾಡಿಸಿ ಖಾತ್ರಿ ಮಾಡಿಕೊಂಡಿದ್ದೇನೆ. ಇಸಲೂರಿನಲ್ಲಿ, ಇರುವ ದೊಡ್ಡದಾದ ಕೆರೆ ಧರ್ಮಾನದಿಯ ಮೂಲಸ್ಥಾನ. ಇಸಲೂರ ಕುರಿತು ಶೆಟ್ಟರ್ ಅವರಿಂದ ವಿಶೇಷ ಮಾಹಿತಿ ಸಿಗಲೆಂದು ಆಶಿಸುತ್ತೇನೆ.

ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

***

ಆಧಾರವಿಲ್ಲ

ಕುಪನ ಹೆಸರನ್ನು ಕೊಪ್ಪಳಕ್ಕೆ ಹೊಂದಾಣಿಕೆ ಮಾಡಿರುವಲ್ಲಿ ಲೇಖಕರು ಕೊಟ್ಟಿರುವ ಶಾಸನಗಳಲ್ಲಿ ಯಾವುದೇ ಆಧಾರವಿಲ್ಲ. ಅಲ್ಲಿ ಕುಪನ ಪದ ಒಂದು ಊರಿನ ಹೆಸರಾಗಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಕುಪನ ಒಂದು ಹೆಸರಾಗಿ ಬೌದ್ಧ ಪಳೆಯುಳಿಕೆಯಿರುವ ಕಾಶ್ಮೀರಕ್ಕೆ ಸೇರಿದ ನೀಲಮತ ಗ್ರಂಥದಲ್ಲಿ ಸಿಗುತ್ತದೆ. ಇನ್ನು, ‘ಖಜನ’ ಅರೇಬಿಕ್ ಅಥವಾ ಪರ್ಷಿಯನ್ ಮೂಲದ್ದಾಗಿದ್ದು ಅದು ಸಣ್ಣತಿ ಶಾಸನ ಅಥವಾ ಅದಕ್ಕೂ ಹಿಂದೆ ಬಳಕೆಯಾಗಿಲ್ಲ. ಆದ್ದರಿಂದ ಕುಪನ, ಕೊಪ್ಪಳವಲ್ಲ. ಟಾಲೆಮಿಯ ‘ಎ ಗೈಡ್ ಟು ಜಿಯೋಗ್ರಫಿಯಲ್ಲಿ’ ಕರ್ನಾಟಕದ ಬನೌಸಿ (ಬನವಾಸಿ) ಇಂಡೆ (ಇಂಡಿ), ಸಿರಿಯಲಗ (ಚಿಮ್ಮಲಗಿ), ಕಲುಗೇರಿಸ್ (ಕಲ್ಲಗೇರಿ), ಮೊದಗಲ್ಲು (ಮುದಗಲ್ಲು), ಪರ್ತಿಗಾಲ (ಹತ್ತರಕಿ ಹಾಳ್) ಹೆಸರುಗಳಿದ್ದು ಕಳೆದ 2000 ವರ್ಷಗಳಿಂದ ಇವು ಉಳಿದಿವೆ ಎನ್ನಬಹುದು.

ಎನ್.ಶಂಕರಪ್ಪ, ತೋರಣಗಲ್ಲು

***

ಸಮಯೋಚಿತ

‘ಸಾಹಿತ್ಯವು ಸಾಮಾನ್ಯರ ಸಖ ಆಗಿದೆಯೇ’ (ಲೇ: ನಟರಾಜ ಹುಳಿಯಾರ್) ಲೇಖನ ಸಮಯೋಚಿತ ಹಾಗೂ ಅರ್ಥಗರ್ಭಿತ. ಸಾಹಿತ್ಯ ಸಮ್ಮೇಳನಗಳಿಗೆ ತಜ್ಞರನ್ನು ಕರೆಸಿ, ಭಾಷಾಲೋಕ, ಜನ ಸಾಹಿತ್ಯವನ್ನು ಬಿಂಬಿಸುವ ವಿಚಾರಗಳ ಮಂಡನೆಯಾಗಬೇಕು. ಅಂದರೆ ಜನಪದ ಸಾಹಿತ್ಯ - ಸಂಸ್ಕೃತಿಗೆ ಅವಕಾಶ ದೊರೆತರೆ ಸಾಹಿತ್ಯ ಸಮ್ಮೇಳನಗಳು ಶ್ರೀಮಂತವಾಗುತ್ತವೆ ಎಂಬುದು ನನ್ನ ಅಭಿಪ್ರಾಯ.

ಪ್ರಭಾವತಿ ಎಂ. ಮುತ್ತೀನ, ಹುಬ್ಬಳ್ಳಿ

***

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು