ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲಾವೀಕರಣ: ಪಲಾವಿನ ವೃತ್ತಾಂತ

Last Updated 17 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದಷ್ಟೇ ಪ್ರಭಾವಶಾಲಿ ಪಲಾವೀಕರಣ. ಬಯಲುಸೀಮೆ ಜನರನ್ನು ಒಂದು ದಶಕ ಸಮ್ಮೋಹಿಸಿ, ಕಟ್ಟಕಡೆಯ ಮನುಷ್ಯನನ್ನೂ ಕಾಡಿದ ವಿದ್ಯಮಾನವಿದು. ಲಿಂಗ, ವರ್ಗ, ಜಾತಿ, ತೂಕಭೇದಗಳನ್ನು ಮೀರಿ ನಡೆದ ಅಪೂರ್ವ ಜಿಹ್ವಾ ಕ್ರಾಂತಿ.

ನಮ್ಮ ಮಧುಗಿರಿ, ಕೊರಟಗೆರೆ, ಪಾವಗಡದ ಭಾಗದಲ್ಲಿ 90ನೇ ಇಸವಿವರೆಗೂ ಚಿತ್ರಾನ್ನದ್ದೇ ಕಾರುಬಾರು. ಮನೆ ಸಮಾರಂಭವಿರಲಿ, ಸಾರ್ವಜನಿಕ ಕಾರ್ಯಕ್ರಮವೇ ಇರಲಿ ಚಿತ್ರಾನ್ನದ ಹಾಜರಿ ಕಡ್ಡಾಯ. ಆದರೆ, ಅದೆಲ್ಲಿತ್ತೋ ಕಾಣೆ. ‘ಪಲಾವ್’ ಎಂಬ ಪದಾರ್ಥ ದಿಢೀರ್ ಹಾಜರಾಯಿತು.

ಆ ದಶಕದಲ್ಲಿ ಮದುವೆ, ನಾಮಕರಣ, ಹುಟ್ಟುಕೂರಲು, ವಸಗೆ ಶಾಸ್ತ್ರ, ಪರೋವು ಮುಂತಾದ ಫಂಕ್ಷನ್‌ಗಳು ಪಲಾವಿಲ್ಲದೆ ನಡೆಯುತ್ತಲೇ ಇರಲಿಲ್ಲ ಎನ್ನಬಹುದು. ‘ಬರೋ ಸ್ವಾಮಾರ ನಾಮಕರಣ ಐತೆ, ಮರಿದಂಗ್ ಬರ‍್ರೀ’ ಎಂದು ಆಹ್ವಾನ ನೀಡುತ್ತಿದ್ದವರು ‘ಊಟುಕ್ಕೆ ಪಲಾವ್ ಮಾಡುಸ್ತಾ ಇದಿವಿ’ ಎಂದು ಟ್ಯಾಗ್‌ಲೈನ್ ಸೇರಿಸದೆ ಇರುತ್ತಿರಲಿಲ್ಲ. ಒಂದು ವೇಳೆ ಪರಪಟಾಗಿ ಅವರು ಹೇಳದಿದ್ದರೂ ಆಹ್ವಾನಿತರು ‘ಅಡುಗೆ ಏನ್ ಮಾಡುಸ್ತಿರಿ, ಚಿತ್ರಾನ್ವೋ ಪಲಾವೋ’ ಎಂದು ಕೇಳದೆ ಬಿಡುತ್ತಿರಲಿಲ್ಲ. ಉತ್ತರ ಚಿತ್ರಾನ್ನವಾದರೆ ಆಹ್ವಾನಿತರ ಮುಖ ಸಪ್ಪಗಾಗುತ್ತಿತ್ತು, ಮನೆ ಕಡೆ ತುಂಬಾ ಕೆಲಸವಿರುವುದಾಗಿ ಹೇಳಿ ‘ಆಯ್ತು ನೋಡನ’ ಎಂದು ಉದಾಸೀನ ಮಾಡುತ್ತಿದ್ದರು. ಒಂದೊಮ್ಮೆ ಉತ್ತರ ಪಲಾವ್ ಎಂದಾದರೆ ಆಹ್ವಾನಿತರು ಗೆಲುವಾಗುತ್ತಿದ್ದರು.

ಪಲಾವ್ ರೆಸಿಪಿ ಮಾಡುವ ಅಡುಗೆ ಭಟ್ಟರಿಗಂತೂ ಆ ಕಾಲದಲ್ಲಿ ವಿಶೇಷ ಆದ್ಯತೆ. ಅವರತ್ತ ಅಚ್ಚರಿಯ ನೋಟ. ಬಹುವಚನ ಸಂಬೋಧನೆ, ಕೇಳಿದಷ್ಟು ಸಂಭಾವನೆ ದೊರೆಯುತ್ತಿತ್ತು. ಪಲಾವ್ ಮಾಡಬಲ್ಲ ಭಟ್ಟರು ಭರ್ತಿ ಹತ್ತು ವರ್ಷಗಳ ಕಾಲ ನಮ್ಮ ಪ್ರಾಂತ್ಯವನ್ನು ರಾಜರಂತೆ ಅವಿಚ್ಛಿನ್ನವಾಗಿ ಆಳಿದರು. ಇತಿಹಾಸದಲ್ಲಿ ದಾಖಲಾಗಬೇಕಾದ ಅಧ್ಯಾಯವಿದು. ರಾಜರ ಹೆಗಲ ಮೇಲೆ ಗದೆ ಇದ್ದರೆ ಇವರ ಹೆಗಲ ಮೇಲೆ ಪಲಾವ್ ಮಗುಚಿಹಾಕುವ ಮಾರುದ್ದದ ಕುರ್ಪಿ. ಹೊಸಕೆರೆಯ ರಾಜಣ್ಣ, ಮದ್ಗಿರಿಯ ಗಣೇಶ್, ಕೊರಟಗೆರೆಯ ಬಸುರಾಜು ಇಂತಹ ಸೆಲಬ್ರಿಟಿ ಭಟ್ಟರ ಪೈಕಿ ಹೆಸರು ಮಾಡಿದವರು.

ಒಮ್ಮೆ ನಮ್ಮ ಪಕ್ಕದ ಮನೆಯ ಕೆಂಚಣ್ಣನ ಮನೆಯಲ್ಲಿ ವಸಗೆ ಶಾಸ್ತ್ರ. ಕೊರಟಗೆರೆಯ ಬಸುರಾಜುಗೆ ಆರ್ಡರ್ ಕೊಟ್ಟರು. ಮತ್ತು ಆ ವಿಚಾರವನ್ನು ಆದಷ್ಟೂ ಜನರಿಗೆ ತಲುಪುವಂತೆ ನೋಡಿಕೊಂಡರು. ವಸಗೆ ದಿನ ಅವನು ಬರುವುದನ್ನು ಕಾಯುವುದೇ ಕೆಲಸ. ಗಳಿಗೆಗೊಂದು ಸಲ ಹಟ್ಟಿ ಮುಂದೆ ಹೋಗುವುದು ಹಣೆ ಮೇಲೆ ಕೈಯಿಟ್ಟು ದಾರಿ ನೋಡುವುದು. ಏನೋ ಗಾಬರಿ, ಎಂಥದ್ದೋ ಚಡಪಡಿಕೆ. ‘ಎಲ್ಲಿ, ಪಲಾವ್ ಮಾಡೋರ್ ಬಂದ್ರಾ’ ಎಂಬ ನೆಂಟರ ಪ್ರಶ್ನೆ ಬೇರೆ ಈಟಿಯಂತೆ ತಿವಿಯುತ್ತಿತ್ತು.

ಅರ್ಧ ಗಂಟೆ ಕಳೆದಿರಬೇಕು. ದೂರದಲ್ಲಿ ಹೆಗಲ ಮೇಲೆ ಕುರ್ಪಿ, ಕೈಯಲ್ಲಿ ಬ್ಯಾಗು ಹಿಡಿದ ಆಕೃತಿ ಕಂಡಿತು. ಕೆಂಚಣ್ಣನ ಮನೆಯ ಎಲ್ಲರ ಮಕಗಳು ಚಕ್ಕಂತ ಬದಲಾದವು. ಮನೆಮಂದಿಯೆಲ್ಲಾ ಎದುರುಗೊಂಡರು. ಸಂಭ್ರಮಿಸಿದರು. ಬಸ್ ಲೇಟಾಯ್ತಾ ಎಂಬಿತ್ಯಾದಿ ತಲಾಕೊಂದೊಂದು ಪ್ರಶ್ನೆ ಹಾಕಿದರು. ಅವ ಗಾಂಭೀರ್ಯದಿಂದ ಪ್ಲಾಸ್ಟಿಕ್ ಚೇರಿನ ಮೇಲೆ ಕುಳಿತು ಕುರ್ಪಿ ಗೋಡೆಗಾನಿಸಿ ತಣ್ಣನೆ ನೀರು ಕೇಳಿದ. ನೀರಿನ ಜೊತೆಗೆ ಬೆಚ್ಚನೆ ಕಾಪಿಯೂ ಬಂತು. ‘ಪಲಾವ್ ಭಟ್ರು ಕೊಲ್ಟಗೆರೆಯಿಂದ ಬಂದವ್ರಂತೆ’ ಎಂಬ ಸುದ್ದಿ ಕಾಡ್ಗಿಚ್ಚಿಗಿಂತ ಫಾಸ್ಟಾಗಿ ಹರಡಿ ಅಲ್ಲಲ್ಲಿ ಕುಂತವರೆಲ್ಲಾ ಎದ್ದುಬಂದರು. ಭಟ್ಟರ ಹೆಸರನ್ನಷ್ಟೇ ಬಲ್ಲವರೂ ಸಹ ‘ಬಸ್ರಾಜಣ್ಣ ಈಗ್ ಬಂದ್ರಾ, ಚನಗಿದಿರಾ’ ಎಂದು ಜನ್ಮಜನ್ಮಾಂತರದ ಬಂಧುವೋ ಎಂಬಂತೆ ಕಕ್ಲಾತಿಯಿಂದ ಮಾತಾಡಿಸಿದರು.

ಪಲಾವ್ ಜನಪ್ರಿಯವಾಗಿದ್ದು ಎರಡು ಕಾರಣಗಳಿಗೆ. ಒಂದು ಅದಕ್ಕೆ ಹಾಕುವ ಮಸಾಲೆ ಪದಾರ್ಥಗಳಾದ ಚಕ್ಕೆ ಚೂರು, ಲವಂಗದ ಹೂವು, ಯಾಲಕ್ಕಿ ಬುಡ್ಡು, ಬಟಾಣಿ ಕಾಳು, ಆಲೂಗೆಡ್ಡೆ ಪೀಸು, ಮರಾಟಿ ಮೊಗ್ಗು, ಬ್ರೆಡ್ಡಿನ ತುಂಡು, ಡಾಲ್ಡಾ ಎಣ್ಣೆ, ಪಲಾವ್ ಎಲೆ ಇತ್ಯಾದಿಗಳ ಘಮಗುಡುವ ವಾಸನೆ. ಅದುವರೆಗೂ ಅಡುಗೆಗೆ ಹಾಕುವ ಇಂತಿಂಥಾ ಪದಾರ್ಥಗಳಿರುವುದನ್ನೇ ನಮ್ಮ ಕಡೆ ಜನ ಕೇಳಿರಲಿಲ್ಲ. ಅದರಲ್ಲಿಯೂ ಮಾವಿನ ಎಲೆಯಷ್ಟು ಉದ್ದ ಇರುತ್ತಿದ್ದ ಪಲಾವ್ ಎಲೆಯನ್ನು ಇಡಿಯಾಗಿಯೋ ಅಥವಾ ಒಂದೆರಡು ತುಂಡು ಮಾಡಿಯೋ ಹಾಕುತ್ತಿದ್ದ ವಿದ್ಯಮಾನ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಪಲಾವ್ ಜನಪ್ರಿಯವಾದ ಎರಡನೇ ಕಾರಣ- ಅದನ್ನು ಮಾಡುವ ವಿಧಾನ. ಅದರಲ್ಲಿಯೂ ಪಲಾವ್ ಮಾಡುವ ಕ್ಲೈಮ್ಯಾಕ್ಸ್ ಇದೆಯಲ್ಲಾ, ಅದು ಸೆಳೆದಷ್ಟು ಜನರನ್ನು ಬೇರಾವ ಘಟನೆಯೂ ಸೆಳೆಯುತ್ತಿರಲಿಲ್ಲ ಆಗ. ಪಲಾವ್ ಚೆನ್ನಾಗಿ ಬೆಂದ ನಂತರ ಬಾಂಡ್ಲಿಯ ಮೇಲೆ ಮುಚ್ಚಳ ಮುಚ್ಚಿ ಅದರ ಮೇಲೆ ಒಲೆಯ ಕೆಂಡವನ್ನು ಹರಡಿ ಅದರ ಮೇಲೊಂದು ಗುಂಡು ಕಲ್ಲನ್ನು ಇಡುತ್ತಿದ್ದರು. ಇದೇ ಜನಾಕರ್ಷಣೆಯ ಕೇಂದ್ರ ಬಿಂದು. ಇದನ್ನು ಗ್ರಹಿಸಿದ್ದ ಭಟ್ಟರು ಮುಚ್ಚಳದ ಮೇಲೆ ಕೆಂಡ ಹರಡುವ ಕ್ರಿಯೆಯನ್ನು ಸಾಂಗೋಪಾಂಗವಾಗಿ ನೆರವೇರಿಸುತ್ತಿದ್ದರು. ಸುತ್ತ ನಿಂತ ಮಕ್ಕಳನ್ನು ಗದರಿಸಿ ದೂರ ಸರಿಸುತ್ತಿದ್ದರು. ದೊಡ್ಡವರಿಗೂ ಒಮ್ಮೊಮ್ಮೆ ಆವಾಜ್ ಹಾಕುತ್ತಿದ್ದರು.

ಈ ಮುಚ್ಚಳದ ಮೇಲೆ ಕೆಂಡ ಹುಯ್ಯುವ ಬಗ್ಗೆ ಹತ್ತೆಂಟು ಚರ್ಚೆಗಳು ನಡೆಯುತ್ತಿದ್ದವು. ಪಲಾವಿಗೆ ಆ ರುಚಿ ಬರುವುದೇ ಕೆಂಡ ಹಾಕುವುದರಿಂದ ಎಂಬುದು ಒಂದು ವಾದವಾದರೆ, ಕೆಳಗೂ ಮೇಲೂ ಕಾವು ಕೊಟ್ರೆ ಹದವಾಗಿ ಬೇಯ್ತದೆ ಎಂಬುದು ಮತ್ತೊಂದು ವಾದ. ಕೆಂಡದ ಪ್ರಭಾವ ಎಷ್ಟಿತ್ತೆಂದರೆ ಗ್ಯಾಸ್ ಬಳಸಿ ಅಡುಗೆ ಮಾಡುವವರು ಮಿಕ್ಕೆಲ್ಲಾ ಪದಾರ್ಥಗಳ ತಯಾರಿಕೆಗೆ ಗ್ಯಾಸ್ ಬಳಸಿದರೂ ಪಲಾವಿಗೆ ಮಾತ್ರ ಮೂರು ಗುಂಡುಕಲ್ಲಿಟ್ಟು ಸೌದೆ ಒಲೆ ಹಚ್ಚುತ್ತಿದ್ದರು. ಇನ್ನು ಅಡುಗೆ ಭಟ್ಟರನ್ನು ಕರೆಸಲು ಚೈತನ್ಯವಿಲ್ಲದ ಕೆಲವರು ತಾವೇ ಪಲಾವ್ ಮಾಡಿದ ಬಗ್ಗೆ, ಹಾಗೆ ಮಾಡುವಾಗ ಸಂಭವಿಸಿದ ಘಟನಾವಳಿಗಳ ಬಗ್ಗೆ ಮೌಖಿಕ ಪರಂಪರೆಯ ಕಥೆಗಳೇ ಹುಟ್ಟಿಕೊಂಡಿದ್ದವು.

ನಮ್ಮೂರ ಪಾತಲಿಂಗಪ್ಪನದು ಅಂತಹ ಕಥೆಗಳಲ್ಲೇ ಐಕ್ಲಾಸ್ ಆದುದು. ಏನೆಂದರೆ ಮನೆಯ ಸಮಾರಂಭವೊಂದಕ್ಕೆ ಪಲಾವ್ ಮಾಡಿಸಲು ಭಟ್ಟರನ್ನು ಕರೆಯಲು ಹೋಗಿದ್ದಾನೆ. ಅವರು ಐರೇಟು ಹೇಳಿದ್ದಾರೆ. ಪಿತ್ತ ನೆತ್ತಿಗೇರಿದೆ. ‘ಮೂರಗಳು ಅನ್ನ ಬೇಯ್ಸಕೆ ಸೀಮೆಗಿಲ್ದಿರೋ ರೇಟ್ ಕೇಳ್ತಿಯಾ’ ಅಂತ ದಬಾಯಿಸಿದ್ದಾನೆ. ಭಟ್ಟರು ಕೂಲಾಗಿ ‘ಅದ್ಯಾಕಯಾ ತಿಗದಾಗ್ ಗೌರಿಬಿದ್ನೂರು ಮೆಣಸಿನಕಾಯಿ ಇಕ್ಕಂಡಂಗಾಡ್ತಿಯಾ. ನಮಗೆ ಬೇಜ್ಜಾನ್ ಆರ್ಡರ್ ಅವೆ. ಆದ್ರೆ ಕೊಡು ಇಲ್ಲಾಂದ್ರೆ ಕಳಚ್ಕೋ’ ಅಂದವ್ರೆ. ಇನ್ನಷ್ಟು ಜಗಳವಾಡಿಕೊಂಡು ಮನೆಗೆ ಬಂದವನೇ ಪಲಾವೇ ಬೇಕೆಂದು ಹಠ ಹಿಡಿದ ಮಡದಿ, ಮಕ್ಕಳ ಮೇಲೂ ರೇಗಾಡಿ ಕೊನೆಗೆ ‘ಅದೇನ್ ದೇವಲೋಕದ ಇದ್ಯೆನೇನಯಾ, ನಾನೇ ಮಾಡ್ತೀನಿ ತಗಾ’ ಅಂತ ಶಪಥ ಮಾಡಿದ್ದಾನೆ.

ಸಮಾರಂಭದ ದಿನ ಅಂತೂ ಪಲಾವ್ ತಯಾರಾಗಿದೆ. ಆದರೆ, ತಲೆಮಾರುಗಳಿಂದ ಚಿತ್ರಾನ್ನ ಮಾಡಿದ ನೆನಪಿನಿಂದಾಗಿ ಪಾತಲಿಂಗಪ್ಪ ಪಲಾವಿಗೂ ಅರಿಸಿನ ಪುಡಿ ಹಾಕಿಬಿಟ್ಟಿದ್ದಾನೆ. ಹಾಗಾಗಿ ಆ ಪದಾರ್ಥ ಅತ್ಲಾಗೆ ಪಲಾವೂ ಆಗದೆ, ಇತ್ಲಾಗೆ ಚಿತ್ರಾನ್ನವೂ ಆಗದೆ ನಡೂಮಧ್ಯ ನಿಂತಿದೆ. ಉಣ್ಣಲು ಬಂದವರು ಪಲಾವೆನಿಸಿಕೊಂಡ ಪದಾರ್ಥ ಮುತ್ತುಕದ ಎಲೆ ಮೇಲೆ ಬಿದ್ದ ತಕ್ಷಣ ಮಕಮಕ ನೋಡುತ್ತಿದ್ದರು. ಪಾತಲಿಂಗಪ್ಪನ ಸಿಟ್ಟಿಗೆ ಹೆದರಿ ಆ ಸಂದರ್ಭದಲ್ಲಿ ಸುಮ್ಮನಿದ್ದರೂ ಉಂಡೆದ್ದು ಅವರ ಮನೆ ದಾಟಿದ ಕೂಡಲೇ ಪಕಾರನೆ ನಗಾಡುತ್ತಿದ್ದರು.

ಹಳ್ಳಿಗರಲ್ಲಿ ಈ ಪಲಾವೆಂಬುದು ಒಂದು ರೀತಿ ಕೀಳರಿಮೆಯನ್ನೂ ಮೂಡಿಸಿತ್ತು ಅನಿಸುತ್ತದೆ. ಇದರ ದೆಸೆಯಿಂದ ಮನೆಗಳಲ್ಲಿ ಜಗಳಗಳೂ ನಡೆಯುತ್ತಿದ್ದವು. ಕೆಲವು ಸರೀಕರ ನಡುವೆ ಮುಸುಕಿನ ಸ್ಪರ್ಧೆಗೂ ಇದೇ ಮೂಲವಾಗಿತ್ತು. ಮಹಾಭಾರತದಲ್ಲಿ ಅಕ್ಕಿ ಮತ್ತು ಮಾಂಸದ ತುಂಡುಗಳನ್ನು ಸೇರಿಸಿ ಬೇಯಿಸುತ್ತಿದ್ದ ಪದಾರ್ಥವೊಂದರ ಪ್ರಸ್ತಾಪವಿದ್ದು ಅದೇ ಪಲಾವಿನ ಮೂಲ ಎಂದು ಗೂಗಲ್ ಮಾಮ ಹೇಳುತ್ತಾನೆ. ಮೂಲತಃ ಮಾಂಸಾಹಾರಿ ಪದಾರ್ಥವಾದ ಇದು ಅದ್ಯಾವ ಮಾಯದಲ್ಲೋ ಸಸ್ಯಾಹಾರಿಯಾಗಿಬಿಟ್ಟಿದೆ. ಬಿರಿಯಾನಿಯ ಕಸಿನ್ ಬ್ರದರ್ ತರ ಕಾಣುವ ಮತ್ತು ಮೂಗಿಗೆ ಅಡರುವ ಇದರ ಗುಣಕ್ಕೆ ಮೂಲತಃ ಮಾಂಸದಡುಗೆಯಾಗಿರುವುದೇ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT