ಶಾಸ್ತ್ರೀಯ ಶೈಲಿಯ ರಸ; ಫ್ಯೂಜನ್‌ನ ‘ರಭಸ’

7
ಮರಳಿ ಬಾರದ ಲೋಕಕ್ಕೆ ಹೊರಟ ಬಾಲಭಾಸ್ಕರ

ಶಾಸ್ತ್ರೀಯ ಶೈಲಿಯ ರಸ; ಫ್ಯೂಜನ್‌ನ ‘ರಭಸ’

Published:
Updated:

ಪುಟ್ಟಪರ್ತಿಯ ಸತ್ಯಸಾಯಿ ಬಾಬಾ ಆಶ್ರಮದ ಪ್ರಶಾಂತಿ ನಿಲಯ; 2017ರ ಸೆಪ್ಟೆಂಬರ್‌ 4ರಂದು ನಡೆದ ಸಂಗೀತ ಕಾರ್ಯಕ್ರಮ. ಸಂಜೆಯ ಮೋಹಕ ವಾತಾವರಣದಲ್ಲಿ ವೇದಿಕೆ ಏರಿದವರು ನಗುಮುಖದ ಯುವ ಕಲಾವಿದ. ಕರ್ನಾಟಕ ಸಂಗೀತ ಶೈಲಿಯ ಪಿಟೀಲು ಕಛೇರಿ ಎಂದರೆ ಸಹವಾದನಕ್ಕೆ ಮೃದಂಗ, ಘಟಂ ಮತ್ತು ಮೋರ್ಸಿಂಗ್‌ ಮಾತ್ರ ಇರಬಹುದೆಂದು ನಿರೀಕ್ಷಿಸಿದವರಿಗೆ ಅಲ್ಲಿ ಅಚ್ಚರಿ ಕಾದಿತ್ತು. ವೇದಿಕೆ ಮೇಲೆ ಕೀ ಬೋರ್ಡ್‌, ಎಲೆಕ್ಟ್ರಿಕ್‌ ಗಿಟಾರ್‌ ಮುಂತಾದ ‘ಹೆಚ್ಚುವರಿ’ ವಾದ್ಯಗಳೂ ಇದ್ದವು. ಕಛೇರಿ ಆರಂಭಗೊಂಡ ನಂತರ ಎಲ್ಲದರ ನಾದವೂ ಮಿಳಿತಗೊಂಡು ಸು(ಸ್ವ)ರಲೋಕ ಸೃಷ್ಟಿಯಾಗಿತ್ತು.

ಇದಕ್ಕೂ ಎರಡು ವರ್ಷಗಳ ಹಿಂದೆ... ಡಿಸೆಂಬರ್‌ನಲ್ಲಿ ನಡೆದಿದ್ದ ಬೆಂಗಳೂರು ಗಣೇಶೋತ್ಸವದ ರಸ ಸಂಜೆ. ಅಂದು ಕೂಡ ವೇದಿಕೆಯಲ್ಲಿದ್ದದ್ದು ಅದೇ ನಗುಮುಖದ ಕಲಾವಿದ. ಇಲ್ಲಿ ಪಿಟೀಲು ಫ್ಯೂಜನ್ ಕಾರ್ಯಕ್ರಮ ನಡೆದಿತ್ತು. ಶರ್ಟ್ ಮತ್ತು ಅಲ್ಲಲ್ಲಿ ‘ಪ್ಯಾಚ್‌ ವರ್ಕ್‌’ ಮಾಡಿದ್ದ ಪ್ಯಾಂಟ್‌ ಧರಿಸಿ ಬಂದಿದ್ದ ಆ ಕಲಾವಿದೆ ವೇದಿಕೆಯಿಡೀ ಓಡಾಡಿ ಪಿಟೀಲು ನುಡಿಸಿದರು. ಮ್ಯಾಂಡೊಲಿನ್‌, ಡ್ರಮ್ಸ್‌, ಬಾಸ್ ಗಿಟಾರ್‌ ಮುಂತಾದ ವಾದ್ಯಗಳ ಸಮ್ಮಿಲನದಲ್ಲಿ ಮೂಡಿದ್ದು ಅಮೋಘ ಸಂಗೀತ ಕಾರ್ಯಕ್ರಮ.

‘ಎನ್ನುಯಿರೆ...ಎನ್ನುಯಿರೆ...’ ಎಂಬ ಹಾಡನ್ನು ಮೂಲವಾಗಿರಿಸಿಕೊಂಡು ವಿವಿಧ ಹಾಡುಗಳು ಅಲ್ಲಿ ತೇಲಿ ಬಂದಿದ್ದವು. ಪಿಟೀಲನ್ನು ತೋಳಲ್ಲೇರಿಸಿಕೊಂಡು ಸಭಿಕರ ನಡುವೆಯೂ ಓಡಾಡಿದ ಕಲಾವಿದ, ಹಿರಿಯರ ಸಾಲಿನತ್ತ ಹೋದಾಗ ‘ಕನಸಲೂ ನೀನೇ ಮನಸಲೂ ನೀನೆ...’ ಹಾಡನ್ನು ನುಡಿಸಿದರೆ, ಯುವ ಸಮುದಾಯದ ಬಳಿ ತಲುಪಿದಾಗ ‘ಅನಿಸುತಿದೆ ಯಾಕೋ ಇಂದು...’ ಹಾಡಿನ ಮೂಲಕ ಕಚಗುಳಿ ಇಟ್ಟರು.

ಶಾಸ್ತ್ರೀಯ ಪ್ರಾಕಾರದ ಜೊತೆಯಲ್ಲಿ ಪಾಶ್ಚಾತ್ಯ ಸಂಗೀತ ಶೈಲಿಯಲ್ಲೂ ಪ್ರಾವೀಣ್ಯ ಹೊಂದಿದ್ದ, ಈ ಕಾರಣದಿಂದಲೇ ಎಲ್ಲ ವರ್ಗದ ಶ್ರೋತೃಗಳನ್ನು ರಂಜಿಸುತ್ತಿದ್ದ ಬಾಲಭಾಸ್ಕರ ಎಂಬ ಆ ಕಲಾವಿದ ಈಗ ಮರಳಿ ಬಾರದ ಸ್ವರಲೋಕದಲ್ಲಿ ಲೀನರಾಗಿದ್ದಾರೆ. ಮದುವೆಯಾಗಿ ದಶಕದ ನಂತರ ಜನಿಸಿದ ಮಗುವಿಗಾಗಿ ಹೊತ್ತ ಹರಕೆ ತೀರಿಸಿ ಬರುತ್ತಿದ್ದಾಗ ಮಗು ಮತ್ತು ಬಾಲಭಾಸ್ಕರ ಅವರ ಪ್ರಾಣವನ್ನು ಕಾರು ಅಪಘಾತ ಅಪಹರಿಸಿತ್ತು. ಅವರ ಸಾವು, ಸಂಗೀತ ಆಸ್ವಾದಕರ ಮನದಲ್ಲಿ ಮೊಳಗಿಸಿದ ವಿಷಾದ ಗೀತೆಯ ನೋವು ಶೀಘ್ರದಲ್ಲಿ ಮಾಯದು.

ಸಂಗೀತದ ಮನೆತನದ ಕುಡಿ

ಶಾಸ್ತ್ರೀಯ ಸಂಗೀತ ಮೊಳಗುತ್ತಿದ್ದ ಮನೆತನದಲ್ಲಿಜನಿಸಿದ ಬಾಲಭಾಸ್ಕರ ಪಿಟೀಲಿನ ತಂತಿಗಳನ್ನು ಮೀಟಲು ಶುರು ಮಾಡಿದ್ದು ಮೂರನೇ ವಯಸ್ಸಿನಲ್ಲಿ. ಅಜ್ಜ, ನಾಗಸ್ವರ ಕಲಾವಿದ ವಿದ್ವಾನ್‌ ಭಾಸ್ಕರ ಪಣಿಕ್ಕರ್‌. ಮಾವ, ಖ್ಯಾತ ಪಿಟೀಲು ವಾದಕ ಬಿ.ಶಶಿಕುಮಾರ್‌. ಬಾಲಭಾಸ್ಕರ ಅವರಿಗೆ ಮಾವನೇ ಗುರು. ಅವರ ಬಳಿ ಸಪ್ತಸ್ವರಗಳನ್ನು ಕಲಿತ ಭಾಸ್ಕರ ಅಪಘಾತಕ್ಕೆ ಈಡಾಗುವ ವರೆಗೂ ಪಿಟೀಲಿನ ಸಂಗ ತೊರೆಯಲಿಲ್ಲ.

ನಿರಂತರ ಅಭ್ಯಾಸ ಮತ್ತು ಎತ್ತರಕ್ಕೇರಿದಷ್ಟೂ ಹೆಚ್ಚಾದ ವಿದೇಯ ಭಾವವೇ ಅವರನ್ನು ಪಿಟೀಲು ಸಾಮ್ರಾಟನನ್ನಾಗಿ ಮಾಡಿದ್ದು. ಚಿನ್‌ ರೆಸ್ಟ್‌ಗೆ (ಪಿಟೀಲಿಗೆ ಗಲ್ಲ ಒತ್ತುವ ಜಾಗ) ಈ ತಂತಿವಾದ್ಯವನ್ನು ತಾಗಿಸಿಟ್ಟು ಭಾವಲೋಕದಲ್ಲಿ ಮುಳುಗಿದರೆಂದರೆ ಭಾಸ್ಕರ ಸೃಷ್ಟಿಸುವ ನಾದ ತರಂಗಗಳಿಗೆ ಮಾರುಹೋಗದ ಶ್ರೋತೃಗಳೇ ಇಲ್ಲ. ಇಷ್ಟು ಸುಲಲಿತವಾಗಿ ಸ್ವರಗಳನ್ನು ನುಡಿಸಲು ಹೇಗೆ ಸಾಧ್ಯ ಎಂದು ಯಾರಾದರೂ ಕೇಳಿದರೆ, ‘ನಾನು ಪಿಟೀಲಿಗೆ ಹೆದರುವುದಿಲ್ಲ’ ಎಂಬುದು ಅವರ ಹಾಸ್ಯಭರಿತ ಜವಾಬು.

ವಿಭಿನ್ನ ನಡೆ, ಭಿನ್ನ ಭಾವ

ಬಾಲಭಾಸ್ಕರ ಅವರದು ಪ್ರಯೋಗಶೀಲ ಮನಸ್ಸು. ಈ ಕಾರಣಕ್ಕೇ ಅವರಿಗೆ ಸಣ್ಣ ವಯಸ್ಸಿನಲ್ಲೇ ದೊಡ್ಡ ಹೆಸರು ಮಾಡಲು ಸಾಧ್ಯವಾಯಿತು. ಸಾಂಪ್ರದಾಯಿಕ ಶೈಲಿಯ, ಕೇವಲ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಅಂಟಿಕೊಳ್ಳದೆ ಭಿನ್ನ ದಾರಿಯಲ್ಲಿ ನಡೆದ ಅವರು ಶಾಸ್ತ್ರೀಯ ಸಂಗೀತ ಮತ್ತು ಫ್ಯೂಜನ್ ಸಂಗೀತವನ್ನು ಸಮನಾಗಿ ಪ್ರೀತಿಸಿದರು. ಆದರೆ ವ್ಯಕ್ತಿತ್ವದ ಮೇಲೆ ಎರಡೂ ಶೈಲಿಗಳ ಪ್ರಭಾವ ಆಗದಂತೆ ಅಂತರ ಕಾಪಾಡಿಕೊಂಡರು. 


ಬಾಲ ಭಾಸ್ಕರ್‌

ಶಾಸ್ತ್ರೀಯ ಕಛೇರಿಯಲ್ಲಿ ಬಿಳಿ ಪಂಚೆ, ಬಿಳಿ ಶರ್ಟ್ ಅಥವಾ ಜುಬ್ಬ, ಶಲ್ಯ ಧರಿಸುತ್ತಿದ್ದ ಅವರು ಜಗಮಗಿಸುವ, ರಂಗುರಂಗಿನ ಫ್ಯೂಜನ್ ವೇದಿಕೆಗಳಲ್ಲಿ ಆಧುನಿಕ ಶೈಲಿಯ ಪೋಷಾಕಿನಲ್ಲಿ ಬೆಳಗಿದರು. ತಂತಿಗಳ ಮೀಟುವಿಕೆಯಲ್ಲಿಯೂ ಆಯಾ ಸಂಪ್ರದಾಯಕ್ಕೆ ತಕ್ಕ ಶೈಲಿಯನ್ನು ಅನುಸರಿಸಿದರು.

ಶಾಸ್ತ್ರೀಯ ಕಛೇರಿಗಳಲ್ಲಿ ಶುದ್ಧಸ್ವರಗಳು ಮೇಳೈಸಿದರೆ, ಇತರ ಕಚೇರಿಗಳಲ್ಲಿ ಚೌಕಟ್ಟು ಮೀರಿಯೂ ಸ್ವರಗಳು ಅಲೆಯಾಡಿದವು. ಈ ಕಾರಣದಿಂದಾಗಿ ಅವರಿಗೆ ಎರಡೂ ಪ್ರಕಾರದ ಪ್ರಖ್ಯಾತ ಕಲಾವಿದರ ಕಚೇರಿಗಳಲ್ಲಿ ಸಹವಾದಕರಾಗುವುದಕ್ಕೂ ಸಾಧ್ಯವಾಯಿತು. ಕೆ.ಜೆ.ಯೇಸುದಾಸ್‌, ವಿಕ್ಕು ವಿನಾಯಕಂ, ಕೆ.ಎಸ್.ಚಿತ್ರ, ಸುರೇಶ್ ವಾಡ್ಕರ್‌ ಉಸ್ತಾದ್ ಜಾಕೀರ್ ಹುಸೇನ್‌, ಹರಿಹರನ್, ಶಿವಮಣಿ ಮುಂತಾದವರ ವೈವಿಧ್ಯಮಯ ಸಂಗೀತ ಕಾರ್ಕ್ರಮಗಳಿಗೆ ‘ಸಾಥ್‌’ ನೀಡಿದ್ದು ಮಾತ್ರವಲ್ಲದೆ ಲೂಯಿಸ್ ಬ್ಯಾಂಕ್, ಗಿನೊ ಬ್ಯಾಂಕ್‌, ಫಜಲ್‌ ಖುರೇಷಿ, ಶೆಲ್ಡನ್ ಡಿ ಸಿಲ್ವಾ ಅವರ ‘ಬ್ಯಾಂಡ್‌’ಗೂ ಲಯ ಒದಗಿಸಿದರು. ಅವರು ನುಡಿಸಿದ ಕರ್ನಾಟಕ ಶೈಲಿಯ ಕೀರ್ತನೆಗಳನ್ನು ಸಂಗ್ರಹವೂ ಸಣ್ಣದೇನಲ್ಲ.

ಎ.ಆರ್‌.ರಹಮಾನ್ ಸಂಗೀತ ಸಂಯೋಜನೆ ಮಾಡಿದ್ದ ‘ಬಾಗಿ ಬಾಗಿ ಪರದೇಶಿ...’ ಹಾಡನ್ನು ‘ಬಾಲಲೀಲ’ದಲ್ಲಿ ಮರುನಿರ್ಮಾಣ ಮಾಡಿದ ಬಾಲಭಾಸ್ಕರ, ಅದಕ್ಕೆ ಇಂಪು ತುಂಬಿದ ರೀತಿ ಅನನ್ಯ. ಲೀಡ್‌ ಗಿಟಾರ್‌, ಬಾಸ್‌ ಗಿಟಾರ್‌, ವೇವ್ ಡ್ರಮ್‌ ಮುಂತಾದ ಪ್ರಬಲ ವಾದ್ಯಗಳ ನಡುವೆಯೂ ಭಾಸ್ಕರ ಅವರ ಇಲೆಕ್ಟ್ರಾನಿಕ್ ಪಿಟೀಲಿನಿಂದ ಹೊರಟ ಮೆಲುದನಿ ಕಿವಿಗೆ ಇಂಪು; ಮನಸ್ಸಿಗೆ ರಸರೋಮಾಂಚಕ.

12ನೇ ವಯಸ್ಸಿನಲ್ಲೇ ಮೊದಲ ಕಛೇರಿ ನಡೆಸಿಕೊಟ್ಟ ಈ ‘ಬಾಲ’ 17ನೇ ವಯಸ್ಸಿನಲ್ಲಿ ಮಲಯಾಳಂನ ‘ಮಾಂಗಲ್ಯಪಲ್ಲಕ್ಕ್‌’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದರು. ನಂತರ ವೈವಿಧ್ಯಮಯ ಹಾಡುಗಳ ಮೂಲಕ ಚಿತ್ರರಸಿಕರ ಮನಸ್ಸಿಗೂ ಲಗ್ಗೆ ಇರಿಸಿದರು. ‘ನಿನಕ್ಕಾಯ್‌‘ (ನಿನಗಾಗಿ) ಮತ್ತು ‘ಆದ್ಯಮಾಯ್‌’ (ಮೊದಲ ಬಾರಿ) ಆಲ್ಬಂಗಳ ರೊಮ್ಯಾಂಟಿಕ್‌ ಹಾಡುಗಳು ಇಂದಿಗೂ ಯುವನಜರ ಮೈ–ಮನವನ್ನು ಕುಣಿಸಬಲ್ಲ ಸಾಮರ್ಥ್ಯ ಹೊಂದಿವೆ.

ತಂತಿವಾದ್ಯಗಳ ಪೈಕಿ ಅತಿ ಸಣ್ಣದೆಂದು ಹೇಳಲಾಗುವ ಪಿಟೀಲಿನ ಸ್ಕ್ರೋಲ್‌ ಮತ್ತು ಬ್ರಿಜ್‌ ನಡುವೆ ರಸಲೋಕ ಸೃಷ್ಟಿಸಿದ ಅವರ ಮಾಂತ್ರಿಕ ಬೆರಳು 40ರ ಹರೆಯದಲ್ಲೇ ಸ್ತಬ್ಧವಾಗಿದೆ. ಇಷ್ಟು ಬೇಗ ಅವರನ್ನು ಇನ್ನಿಲ್ಲದಂತೆ ಮಾಡಿದ ಕಾಲನನ್ನು ಬೈಯುವುದಕ್ಕೂ ಆಗದೆ ಅಭಿಮಾನಿಗಳು ಮೂಕವಾಗಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !