ತೊರೆದು ಹೋದವರ ಮರೆಯುವುದುಂಟೆ?

7

ತೊರೆದು ಹೋದವರ ಮರೆಯುವುದುಂಟೆ?

Published:
Updated:

ಮತ್ತೆ ಭೇಟಿಯಾಗುವ ಮಾತೇ ಇಲ್ಲ 
ಕವಲೊಡೆದ ಹಾದಿಯಲ್ಲಿ ಮತ್ತೆ ವಾಪಸು ಬರದ ಖಾತ್ರಿಯಲಿ 
ಎಷ್ಟೇ ದೂರ ನಡೆದು ಹೋದರೂ 
ತೊರೆದು ಹೋದವರ ಮರೆಯುವುದುಂಟೆ?

ಒಂದೇ ಜೀವ ಎರಡು ದೇಹವಾಗಿದ್ದು 
ಅನಿವಾರ್ಯತೆಗಳ ನೆಪವೊಡ್ಡಿ ಬದುಕಿನ ಬಂಡಿ ನಡೆಸಲು 
ವಿಮುಖರಾಗಿ ತಮ್ಮ ತಮ್ಮದೇ ಹಾದಿ ತುಳಿದರೂ 
ತೊರೆದು ಹೋದವರ ಮರೆಯುವುದುಂಟೆ?

ಯಾವುದೋ ವಿಷ ಗಳಿಗೆ ಅಂತರಂಗಕ್ಕಿಳಿದು  
ಉಸಿರುಗಟ್ಟಿಸಿ ರೋಷವುಕ್ಕಿಸಿ ಕಣ್ಣಹನಿಗಳೇ ನಿಗಿ ನಿಗಿ ಕೆಂಡವಾಗಿ 
ಹುಚ್ಚು ಹಿಡಿದಂತಾ ಆವೇಶದಲಿ 
ಎತ್ತಲೋ ನಡೆದುಬಿಟ್ಟರೆ 
ತೊರೆದು ಹೋದವರ ಮರೆಯುವುದುಂಟೆ?

ಉಕ್ಕಿ ಬಂದ ದುಃಖವನು ಒಂದು ಬಿಕ್ಕಿಗೂ ಸಿಕ್ಕದಂತೆ ಗುಟ್ಟಾಗಿಟ್ಟು 
ತುಟಿಯರಳಿಸಿ ನಕ್ಕು ಬದುಕಿನ ಸಿಕ್ಕನ್ನು ಬಿಡಿಸಿಕೊಳ್ಳಲು 
ಯಾರ ಹಂಗಿಗೂ ಸಿಕ್ಕದೇ 
ತೊರೆದು ಹೋದವರ ಮರೆಯುವುದುಂಟೆ?

ಮರೆತೆನೆಂದರೂ ನೆನಪುಗಳ ತೊರೆಯಲಾಗದು 
ತೊರೆದನೆಂದರೂ ನೆನಪುಗಳ ಮರೆಯಲಾಗದು 
ಮುಂದೆ ಅಡಿಯಿಟ್ಟಷ್ಟು ಹಿಂದೆ ಓಡುವ ಮನಸು 
ತೊರೆದು ಹೋದವರ ಮರೆಯುವುದುಂಟೆ?

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !