ಹಿಟ್ಟಿನಿಂದ ಮಾಡಿದ ಯಾತನೆ

7

ಹಿಟ್ಟಿನಿಂದ ಮಾಡಿದ ಯಾತನೆ

Published:
Updated:
ಚಿತ್ರ: ವಿಷ್ಣು ಎಸ್

ನಿಮ್ಮ ಅಂಗಾಂಗಗಳನ್ನು ಒಂದರ ಮೇಲೊಂದು ರಾಶಿ ಗುಡ್ಡೆಯಾಗಿ ಹೇರಲಾಗುತ್ತದೆ.

ರಕ್ತ, ಬೆವರು, ವಿಸರ್ಜನೆಗಳು, ಕಣ್ಣ ಪಿಸುರು.

ಕಣ್ಣಿಂದ ಒಸರುವ ಪಿಸುರು.

ಕಡಲ ಮಧ್ಯ ಭಾಗದಲ್ಲಿ ಗಂಟು ಹಾಕಿಕೊಂಡ ನಿಮ್ಮ ನಾಲಿಗೆ

ಪೂರ್ವನಿರ್ಧಾರಿತ ಕಕ್ಷೆಯಲ್ಲಿ ಸೂರ್ಯ ಮಂಡಲ ಈಸುವಾಗ

ಗೊಂದಲಗಳು.

 

ಫುಟ್‌ಪಾತ್ ನಿಮಗೆ ಹೇಳುವುದಿಲ್ಲ

ಅದರ ಮೇಲೆ ನಿಮ್ಮ ಪಾದ ಬಿದ್ದಿತ್ತೆಂದು

ಕಾಂಕ್ರೀಟ್ ತಟ್ಟೆಯ ಮೇಲೆ ನಿಮ್ಮ ಶೂಗಳನ್ನು

ಶೂಗಳ ತಟ್ಟೆಯ ಮೇಲೆ ನಿಮ್ಮ ಪಾದಗಳನ್ನು

ನಿಮ್ಮ ದುರಾದೃಷ್ಟಗಳ ತಟ್ಟೆಯಲ್ಲಿ ನಿಮ್ಮ ಕಾಲುಗಳನ್ನು

ಸಾದರಪಡಿಸುತ್ತದೆ.

ದಡ್ಡ ಸಂತೋಷಗಳನ್ನು ಹೊಂದುವಂತೆ ನೀವು ತಲೆಯ ತಂತಿಗಳನ್ನು ಶ್ರುತಿಗೊಳಿಸುತ್ತೀರಿ

ಸಹಿಸಲಾಗದೆ ನಿಮ್ಮದೇ ತಲೆಬುರುಡೆಯನ್ನು ಹೂತುಹಾಕುತ್ತೀರಿ

ಒಂದು ಹಿಡಿ ಹಿಟ್ಟು ಸವರಿ ಬಿಳಿಯಾದ ಕಟ್ಟೆಯ ಮೇಲೆ ನೀವೇ ಮುದ್ದೆಯಾಗಿ

ಹುದುಗಾಗುವಿರಿ.

ನೀವು ಉಬ್ಬಿ ನಿಮ್ಮ ಯಾತನೆಯನ್ನು ಒಣ ಬಿಸಿ ಬ್ರೆಡ್ಡು ಲೋಫಿನಂತೆ ಮಾಡುವಿರಿ.

ನಿಮ್ಮ ನೀರಿಗಾಗಿ ಹುಡುಕಾಡುವಿರಿ

ನಿಮ್ಮ ಸ್ಥೂಲ ಸೂಕ್ಷ್ಮಗಳ ನಡುವೆ

ಬಿರಿಯುವುದರ ನಡುವೆ

ಮತ್ತು ನಿಮ್ಮ ಹಣೆಯೂ ಕೆಂಪಗಾಗುತ್ತದೆ

ನಿಮ್ಮ ಬ್ರೆಡ್ಡಿನಂತೆ

 

ನೆಲದ ಸಿಕ್ಕುಸಿಕ್ಕಾದ ನೆನಪಿನಲ್ಲಿ

ಅಲ್ಲೌಹಲ್ ಮಹೂಫಜ್‌ನ ನಿಮ್ಮ ಭುಜಗಳ ಮೇಲಿಟ್ಟು

ನಿಮ್ಮನ್ನು ಎತ್ತಿಡಲಾಗುತ್ತದೆ

 

ನೀವು ಬ್ರೆಡ್ಡಿನಂತೆ ಬೂಸು ಹಿಡಿಯುತ್ತೀರಿ

 

ವ್ಯರ್ಥವಾಗಿ ಪ್ರತಿಭಟಿಸುತ್ತೀರಿ ನೀವು

ನಿಮ್ಮ ದೇಹದ ಒದ್ದಾಟವನ್ನು

ನಿಮ್ಮ ಮಂಚದ ಬಿಳಿ ಕಟ್ಟೆಯ ಮೇಲೆ

ಫುಟ್‌ಪಾತಿನಲ್ಲಿ

ಪ್ರತಿಬಿಂಬಿಸುವ ಮತ್ತು ಪ್ರತಿಬಿಂಬಿಸಿದ

ಜೊತೆಗೆ ಬೆಳಕು ಹೀರುವ ಮೇಲ್ಮೈಗಳಲ್ಲಿ.

ನಿಮ್ಮ ದೇಹ ತಾನೊಂದು ಸಂಕೀರ್ಣ ಮಿಶ್ರಣವೆನ್ನುವುದನ್ನು ಮರೆಯುತ್ತದೆ

ನಿಮ್ಮ ಪರಿಚಿತ ಕಾಲುಗಳನ್ನು ಮಾತ್ರ ನೀವು ಕಾಣಬಹುದೆನ್ನುವುದನ್ನು ಮರೆಯುತ್ತದೆ

ನೀವೊಂದು ಕ್ರೂರ ಮೃಗ,
ಇತರ ದಾರಿ ಹಿಡಿದವರಿಗಿಂತ ಭಿನ್ನವಾದ ಲಕ್ಷಣಗಳುಳ್ಳ ಮೃಗ.

ಅದಕ್ಕೆ ಅವರ ನಡೆಯನ್ನಾಗಲೀ ಅವರ ಭಾಷೆಯನ್ನಾಗಲೀ

ಕಲಿಯಲಾಗುವುದಿಲ್ಲ.

ತನ್ನಿಚ್ಛೆಯಂತೆ ನಡೆಯುವ

ಅಥವಾ ಎಡವುವ, ಅಳುವ ಹಕ್ಕಿಲ್ಲ.

ಆತ್ಮದ ಕಿಟಕಿ ತೆರೆದು ಗಾಳಿ ಬರಲು, ಒಡಕುಗಳನ್ನು ಕಳಚಿ

ಶೋಕಾಚರಣೆ ಮಾಡಲು ಹಕ್ಕಿಲ್ಲ

ನೀವು ಮರೆತುಬಿಡುತ್ತೀರಿ

ನೀವೂ ಬ್ರೆಡ್ಡಿನಂತೆ ಎನ್ನುವುದನ್ನು.

 

ಮರೆತುಬಿಡುತ್ತೀರಿ ನೀವು

ಹುಟ್ಟಿನಲ್ಲೇ ನಿಮ್ಮ ಆತ್ಮಗಳು ಹೇಗೆ ಬೆಸೆದುಕೊಂಡವು

ಹೇಗೆ ನಿಮ್ಮ ಮಾಸು ಹರಿದು ಬೆರೆಸಿಬಿಟ್ಟರು

ನಿಮ್ಮ ಗೋಪ್ಯವನ್ನು ಮರೆಮಾಡುವ ಬಟ್ಟೆಗಳ ಜೊತೆ

ಅವರು ಕಾಣಿಸುವ ಸಾಧ್ಯತೆಯ ಪದರಗಳ ಜೊತೆ

ಮರೆತುಬಿಡುತ್ತೀರಿ ನಿಮ್ಮನ್ನು

ಮತ್ತು ತಮ್ಮದೇ ಕಾಲರುಗಳನ್ನು ಹರಿದು

ಗೋಡೆಗಳ ಮೇಲೆ ಭಾವಚಿತ್ರಗಳಾಗುವ ನಿಮ್ಮ ಹೆಂಗಸರನ್ನು

ಗೋಡೆಗಳ ಮೇಲೆ, ಗೋರಿ ಕಲ್ಲುಗಳ ಮೇಲೆ ಮತ್ತು

ಗುಜರಿಯ ಕಾರುಗಳ ಮೇಲೆ ಚಿತ್ರ ಬರೆಯುವುದನ್ನು ಕಲಿತ ಹುಡುಗರನ್ನು

ನಿಮ್ಮ ಹೆಸರು ಹೇಳಿ ನಡೆಯುವುದನ್ನೂ ಸಹ

ಥೇಟು ಬ್ರೆಡ್ಡಿನಂತೆ.

 

ಹಾಗೆ ನಿಮ್ಮ ಆತ್ಮವನ್ನು ಕಲಸಲಾಗುತ್ತದೆ.

ಏಕಸಮವಾಗಿ, ಹುದುಗಾಗಿ, ನಾದಿ, ಬೇಯಿಸಿ

ಮಾರಲಾಗುತ್ತದೆ.

ಆರೋಗ್ಯ ಪ್ರಮಾಣಗಳನ್ನು ಉಲ್ಲಂಘಿಸಿದ ಅಂಗಡಿಗಳಲ್ಲಿ

ನಕಲಾಗಿಸಿ- ಅಕ್ರಮ ಉದ್ದೇಶಗಳಿಗೆ ಬಳಕೆಯಾಗಿ

ವೋಟು ಹಾಕಿ ಆಯ್ಕೆ ಮಾಡಿ

ಥೇಟು ಬ್ರೆಡ್ಡಿನಂತೆಯೇ ತಿನ್ನುವುದಕ್ಕಾಗಿ.

ಮೂಲ: ಅಶ್ರಫ್ ಫಯಾದ್ಕ

ನ್ನಡಕ್ಕೆ: ಪ್ರತಿಭಾ ನಂದಕುಮಾರ್

 *** 

‘A Melancholy Made of Dough’

ತಾರೀಕ್ ಅಲ್ ಹೈದರ್ ಇಂಗ್ಲಿಷಿಗೆ ಅನುವಾದ

(ಅಶ್ರಫ್ ಫಯಾದ್ ಪ್ಯಾಲೆಸ್ಟೀನಿಯನ್ ಕಲಾವಿದ ಮತ್ತು ಕವಿ. ಗಾಜಾದ ನಿರಾಶ್ರಿತ ದಂಪತಿಯ ಮಗ. ಎಡ್ಜ್ ಆಫ್ ಅರೇಬಿಯಾ ಎನ್ನುವ ಬ್ರಿಟಿಷ್- ಅರೇಬಿಯಾ ಕಲಾ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ. ‘Instructions Within’ ಎನ್ನುವ ಪುಸ್ತಕದಲ್ಲಿ, ಕಾಫಿ ಕೆಫೆಯಲ್ಲಿಯ ಮಾತುಗಳಲ್ಲಿ ಹಾಗೂ ಟ್ವಿಟರ್‌ಗಳಲ್ಲಿ ಅವನು ನಾಸ್ತಿಕತೆಯನ್ನು ಬೆಂಬಲಿಸಿದ್ದನೆಂದು ಸನಾತನಿಗಳು ಧರ್ಮ ಭ್ರಷ್ಟತೆಯ ಆರೋಪದ ಮೇರೆಗೆ ನವೆಂಬರ್ 2015 ರಲ್ಲಿ ‘ತಲೆ ಕತ್ತರಿಸಿ ಮರಣದಂಡನೆ’ಯ ಶಿಕ್ಷೆ ವಿಧಿಸಿದರು. ಜಾಗತಿಕ ಮಟ್ಟದಲ್ಲಿ ಅದಕ್ಕೆ ಪ್ರತಿರೋಧ ವ್ಯಕ್ತವಾಗಿದ್ದರಿಂದ ಮೂರು ತಿಂಗಳ ನಂತರ ಶಿಕ್ಷೆಯನ್ನು ಎಂಟು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 800 ಛಡಿ ಏಟುಗಳಿಗೆ ಬದಲಾಯಿಸಲಾಯಿತು. ಜೊತೆಗೆ ತಾನು ಪಶ್ಚಾತ್ತಾಪ ಪಟ್ಟಿರುವೆನೆಂದು ಅಧಿಕೃತ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಪ್ರಸ್ತುತ ಫಯಾದ್ ಜೈಲಿನಲ್ಲಿದ್ದಾನೆ.)

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !