ಕೆಂಡವಿನ್ನೂ ಆರಿಲ್ಲ...

7

ಕೆಂಡವಿನ್ನೂ ಆರಿಲ್ಲ...

Published:
Updated:
ಚಿತ್ರ: ಮದನ್ ಸಿ.ಪಿ.

ನೆಲಕ್ಕೆ ಬಿದ್ದಿರುವ ಬೀಡಿಯ ತುಂಡಿನ 
ಕೆಂಡವಿನ್ನೂ ಆರಿಲ್ಲ  
ಆ ಮೆಟ್ಟಿಲುಗಳ ಮೇಲೆ ಕುಳಿತವರಾರೋ 
ತುಂಡು ಬೀಡಿಯ ಎಸೆದು 
ಎದ್ದುಹೋಗಿರಬಹುದು ಈಗಷ್ಟೇ.. 
ಘಾಟಿನ್ನೂ ಆವರಿಸಿದೆ 
ಸಾಕ್ಷಿಯಾಗಿ ಎದುರಿನ ಲೈಟು ಕಂಬವಿದೆ.. 
ಮುಚ್ಚಿದ ಬಾಗಿಲುಗಳ ಮಾರುದ್ದ ಓಣಿ 
ದಿನದಾಟ ಮುಗಿಸಿದೆ!
**

ಈಗ್ಗೆ ಒಂದು ಗಂಟೆಯ ಮುಂಚೆ 
ಈ ಬಜಾರ್ ಹೀಗಿರಲಿಲ್ಲ 
ಬಣ್ಣ ಬಣ್ಣದ ದೀಪಗಳು, ಪ್ರತಿ ಅಂಗಡಿಯ ಮುಂದೆ 
ಇಳಿಬಿದ್ದಿದ್ದವು... ‘ನಮ್ಮಲ್ಲಿಗೆ ಬನ್ನಿ, 
ನಮ್ಮಲ್ಲಿಗೆ ಬನ್ನಿ ಹತ್ತಾರು ಸ್ವರಗಳು 
ಕೂಗಿ ಕರೆಯುತ್ತಿದ್ದವು 
ಅಂಗಡಿಗಳ ಮುಂದೆ ಕುಸುರಿ ಮಾಡಿದ ರವಿಕೆಗಳು  
ಚಂದದ ಸೀರೆಗಳು... 
ಮಲ್ಲಿಗೆಯ ರಾಶಿ ಘಮ ಘಮಿಸುತ್ತಿತ್ತು..! 
ಅವರವರ ಮಾತು ಅವರಿಗೆ ಕೇಳದಷ್ಟು 
ಗುಜು... ಗುಜು... ಗೌಜು ಗದ್ದಲ

**
ಗಂಟೆಗಳ ನಂತರ ಎಲ್ಲಕ್ಕೂ ತೆರೆ 
ಅವರವರ ಮನೆದಾರಿ ಅವರವರಿಗೆ...

**
ಕಣ್ಣು ಕೋರೈಸಿ ಝಗಮಗಿಸಿದ ಬಣ್ಣ ಬಣ್ಣದ ದೀಪಗಳು 
ತಾವು ತಾವಲ್ಲವೆನ್ನುವಂತೆ ಮುದುಡಿಕೊಂಡವು 
ಅಲ್ಲೊಂದು ಇಲ್ಲೊಂದು ಒಂದೊಂದೇ ಆರಿ ಆರಿ 
ಕಡೆಗೆಲ್ಲಾ ಕತ್ತಲು, ‌
ಬೀದಿ ದೀಪದ ಬೆಳಕೊಂದು ಬಿಟ್ಟರೆ...

** 
ಎಷ್ಟೆಲ್ಲಾ ವರಾತ, ಅವತಾರಗಳು..  
ಈ ನಾಲ್ಕು ಗಂಟೆಗಳಲಿ! 
ಯಾರು ಏನೆಲ್ಲಾ ಮಾಡಿದರೂ, 
ಮೂಲೆ ಲೈಟುಕಂಬದ ಕೆಳಗೆ ಬಾಲ ಆಡಿಸಿ 
ನೆಲ ಮೂಸುತ್ತಾ ನಿಂತ ನಾಯಿಮರಿಗೆ ಮಾತ್ರ 
ತನಗೂ ಆಮ್ಲೆಟ್ಟಿನ ಒಂದೆರಡು ತುಂಡು ಬೀಳಬಹುದೆನ್ನುವ ಆಸೆ 
ಅದರ ಕಪ್ಪು ಕಣ್ಣು ಎಷ್ಟು ಚಂದವಿದೆ..!

**

ಹೀಗೆ... ದೀಪಗಳು ಒಂದೊಂದೇ ಆರಿ 
ಅಂಗಡಿಗಳು ದಿನದ ಕತೆಗೆ 
ಪೂರ್ಣವಿರಾಮ ಹಾಕಿದಾಗ 
ಆ ಮೆಟ್ಟಿಲುಗಳ ಮೇಲೆ ಯಾರೋ ಬಂದು ಕುಳಿತಿದ್ದರು 
ಕಷ್ಟ ಕಾರ್ಪಣ್ಯಗಳನ್ನೆಲ್ಲ ತುಂಡು ಬೀಡಿಯ 
ಅಂಚಿನಲ್ಲಿ ಸುಟ್ಟು ಎದ್ದು ಹೋಗಿದ್ದರು...

**
ಅರೆ..! ಆಮ್ಲೆಟ್ಟಿನಂಗಡಿಯಲ್ಲಿ ಮಿಂಚುತ್ತಿದ್ದ 
ಮಿಣುಕು ದೀಪವೂ ಕಣ್ಮುಚ್ಚಿತು 
ಈಗ ಕೊನೆ ಅಂಗಡಿಯೂ ಬಂದ್!

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !