ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಧೆಯ ಸ್ವಗತ

Last Updated 17 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಗೋಕುಲದ ಸುಂದರ ಪ್ರಕೃತಿಯ ನಡುವೆಯೂ
ಪ್ರತಿಕ್ಷಣ ನಾನು ಒಂಟಿ ಕೃಷ್ಣ
ನಿನ್ನ ನೆನಪುಗಳು ಕಾಡದೆ ಬಿಡವು ನನ್ನ

ನನ್ನನ್ನು ನಿತ್ಯ ನವ ಚೈತನ್ಯದ ಬುಗ್ಗೆಯಾಗಿಸುವ
ನಿನ್ನೊಡನೆ ಬದುಕಿದ ನೆನಪುಗಳು
ನನಗೂ ಇಷ್ಟವೇ
ಆದರೆ...
ಏಕಾಂಗಿಯಾಗಿಸಲೆಂದೇ ನಾ ಮುಂದು ತಾ ಮುಂದು
ಎಂದು ಹೊಯ್ದಾಡುವ ನಿನ್ನೆಗಳು
ಹೀಗಿದ್ದವು

ಆಗ ನನಗೆ ವಯಸ್ಸು ಎಂಟಿರಬೇಕು
ಕೇರಿಯವರೆಲ್ಲಾ ಗೋಪಮ್ಮನ ಮಗನ ನೋಡಲು
ದಿನಾಲೂ ಮುಗಿಬಿದ್ದು ಹೋಗುತ್ತಿದ್ದರು
ಅವನ ಕಂಡರೆ ಇಹಲೋಕದ ನೋವುಗಳೆಲ್ಲಾ
ಮರೆತು ಹೋಗುತ್ತವೆಯೆಂಬ
ಭ್ರಮೆ ಎಲ್ಲರಲ್ಲಿ,
ನೋಡಿಯೇ ಬಿಡೋಣ ನಾನೂ ಒಮ್ಮೆ ಎಂದು
ಒಂದು ದಿನ ಹೊರಟೆ
ಅಬ್ಬಾ, ಅದೇನು ಆಕರ್ಷಣೆ ಆ ನಗುವಿನಲ್ಲಿ
ಮನಸೋಲದೆ ಇರಲು ಸಾಧ್ಯವೇ ಇಲ್ಲ
ಕಡುಗಪ್ಪು ಬಣ್ಣವಾದರೂ ಅದೆಂತಹುದೋ
ಬಿಟ್ಟಿರಲಾಗದ ಅಯಸ್ಕಾಂತ ಅವನು

ಮಾಸಗಳು ಉರುಳಿದಂತೆ
ಭೇಟಿಗಳು ದ್ವಿಗುಣಗೊಂಡವು, ನಮ್ಮ ಪ್ರೀತಿಯ ಹೆಚ್ಚಿಸಿದವು
ಅವನ ಬಣ್ಣದ ಬಗ್ಗೆ ನನಗ್ಯಾವ ತಕರಾರೂ ಇರಲಿಲ್ಲ
ನನ್ನ ವಯಸ್ಸಿನ ಬಗ್ಗೆ ಅವನಿಗೂ,
ಪ್ರೀತಿ-ಪ್ರೇಮ-ಸ್ನೇಹ ಎಲ್ಲದಕ್ಕೂ
ಪರ್ಯಾಯ ಪದ ಎಂದಿದ್ದರೆ ನಾವಿಬ್ಬರೇ
‘‘ರಾಧಾ-ಕೃಷ್ಣ’’

ನಂದಗೋಕುಲದ ಪ್ರತಿ ಮನೆಯಲೂ
ನಮ್ಮಿಬ್ಬರ ಬಗ್ಗೆಯೇ ಗುಸುಗುಸು ಪಿಸುಪಿಸು
ಕೃಷ್ಣನೆಂಬ ಹೂವಿನಲ್ಲಿ ಬೆರೆತ ಗಂಧ ಈ ರಾಧೆ
ಎಂದು ಸಾರಿ ಹೇಳಬಹುದಷ್ಟೆ
ಲೌಕಿಕ ಜಗತ್ತಿಗೆ ನಮ್ಮಿಬ್ಬರ ಸಂಬಂಧವ
ಅರ್ಥ ಮಾಡಿಸುವುದಾದರೂ ಹೇಗೆ ?

ಅವನು ಕೊಳಲನೂದಲು ಶುರು ಮಾಡಿದರೆ
ಹರಿಯುತ್ತಿದ್ದ ಯಮುನೆಯೂ ಕೆಲಕಾಲ ನಿಂತು
ಸಾಗುತ್ತಿದ್ದಳು
ಗೋವುಗಳು ಮೇಯುವುದ ನಿಲ್ಲಿಸಿ ಕೃಷ್ಣನನ್ನೇ
ಕಣ್ತುಂಬಿಕೊಳ್ಳುತ್ತಿದ್ದವು
ಆಗೆಲ್ಲಾ ಭಾವಲೋಕದಲಿ ಅವನ ಎದೆಗಾನಿಸಿ
ಕಳೆದುಹೋಗುತ್ತಿದ್ದೆ
ಕಳ್ಳ ಕೃಷ್ಣನ ಲೀಲೆಗಳಿಗೆ ಸೋಲುತ್ತಿದ್ದೆ

ಅದ್ಯಾರ ಕಣ್ಣು ಬಿತ್ತೋ ಕಾಣೆ
ಬಿಲ್ಲ ಹಬ್ಬಕ್ಕಾಗಿ ಮಥುರೆಗೆ ಹೊರಟ ಕೃಷ್ಣನ
ಮತ್ತೆ ನಿನ್ನ ಭೇಟಿ ಎಂದು ?
ನಾನು ಕೇಳಿದ್ದಷ್ಟೆ,
ಅವನತ್ತಿರ ಉತ್ತರವಿರಲಿಲ್ಲ
ಗೋಪಮ್ಮ ಹೇಳುತ್ತಾಳೆ :
ಪ್ರಪಂಚದ ಕಷ್ಟಗಳ ನಿವಾರಣೆಗೆಂದು
ಹುಟ್ಟಿದವನು ಕೃಷ್ಣ
ಅವನಿಗೆ ಸಹಕರಿಸಿದರೇನೆ ಜಗತ್ತಿನ ಒಳಿತೆಂದು

ಸತ್ಯವಿರಬಹುದು
ಆದರೆ,
ನಿತ್ಯ ಕಾಡುವ ನನ್ನ ಒಂಟಿತನವನ್ಹೇಗೆ ಕೊಲ್ಲಲಿ
ಅಣುಅಣುವಿನಲೂ ಬೆರೆತು ಹೋದ
ಅವನನು ಕಣ್ಣ ಮುಂದೆ ತರಿಸಿ
ಕನಸುಗಳನ್ನು ಸಮಾಧಾನಿಸಬೇಕಿದೆ
ಅದೆಲ್ಲಿ ಅಂತಾ ಹುಡುಕಲಿ ಕೃಷ್ಣನ

ಇಂದಿಗೂ ಕಾಯುತ್ತಿದ್ದೇನೆ ಯಮುನೆಯ ದಡದಲ್ಲಿ
ನನ್ನ ಕರ್ಣಗಳಲ್ಲಿ ತುಂಬಿರುವ
ಕೊಳಲ ದನಿಯ ಆಲಿಸುತ್ತಾ...
ಒಮ್ಮೆಯಾದರೂ ಬಂದು ಬಿಡು ಕೃಷ್ಣ
ಕಾಲನು ಕರೆದೊಯ್ಯುವ ಮುನ್ನ
ಕಣ್ತುಂಬಿಕೊಳ್ಳುವೆ ನಿನ್ನ
ಅಮರಪ್ರೇಮಿಯೆಂಬ ಬಿರುದಿನ ಗರಿ ಬೇಡ ನನಗೆ
ದೇವರೂ ಮೋಸ ಮಾಡಿದನೆಂಬ
ಅಪವಾದದ ಹಂಗೇಕೆ ನಿನಗೆ
ನನ್ನದಲ್ಲದ ತಪ್ಪಿಗೆ ವಿರಹದ ಶಿಕ್ಷೆಯೇಕೆ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT