ಶನಿವಾರ, ಸೆಪ್ಟೆಂಬರ್ 19, 2020
26 °C

ಸಂಡೇ ಮೂಡು (ಕವಿತೆ)

ಆನಂದ ಪಾಟೀಲ Updated:

ಅಕ್ಷರ ಗಾತ್ರ : | |

ಅಂಗೈಗಳಲಿ ಗದ್ದವ ಇಟ್ಟು
ಕಿಟಕಿಯ ಸರಳಿಂದಾಚೆಗೆ ನೋಡುತ
ಇದ್ದಾನವನು ಇದ್ದಾನೆ
ಹಾಗೇ ಹಾಗೇ ಇದ್ದಾನೆ

ನಗರೇಶ್ವರ ಗುಡಿ ಚೌಗಡ ಕೇಳಿಸಿ
ಮಸೀದಿಯಿಂದ ದನಿಯೂ ಬಂದು
ಹಿತ್ತಲಿನಲ್ಲಿ ಕಾವ್ ಕಾವ್ ಕೇಳಿ
ಅಲ್ಲಿಯೆ ಇದ್ದಾನವನು ಹೌದು
ಅಲ್ಲಿಯೇ ಇದ್ದಾನೆ!

ತಲಬಾಗಿಲ ಕದ ತೆಗೆದೂ ಆಗಿ
ಅಂಗಳಕ್ಕೆ ಥಳಿ ಹೊಡೆದೂ ಆಗಿ
ರಂಗವಲ್ಲಿಯನು ಬಿಟ್ಟೂ ಆಗಿ
ಅವ್ವನ ಕೂಗು ಕೇಳಿಯು ಆಗಿ
ಇದ್ದಾನಿದ್ದಾನಿದ್ದಾನೆ
ಇನ್ನೂ ಅಲ್ಲಿಯೆ ಇದ್ದಾನೆ!

ಪೇಪರು ಹೊಸಿಲಲಿ ಬಿದ್ದೂ ಆಯಿತು
ಸೊಪ್ಪು ಮಾರುವವಳು ಹೊರಟೂ ಹೋದಳು
ನಲ್ಲಿಯ ಸೊರ್ ರರ್
ಶುರವೂ ಆಯಿತು
ಟಕ್ ಟಕ್ ಟಕ್ ಟಕ್
ಕೋಲಿನ ಸದ್ದು
ಮೇಲಿನ ಮನೆಯಾ
ದೇಸಾಯರದು
ವಾಕಿಂಗ್ ಮುಗಿಸಿ
ಬಂದೂ ಆಯಿತು

ಅಪ್ಪನ ತುಟಿಯಲಿ ಟೀ ಇಳಿಯುವಾ
ಸರರ ಸೌಂಡೂ ಕೇಳಿಸಿ ಆಯಿತು
ಉಂಹಂ ಉಂಹುಂ
ಉಂಹಂ ಉಂಹುಂ
ಇದ್ದಾನಿನ್ನೂ ಇದ್ದಾನೆ
ಅವನು ಅಲ್ಲಿಯೆ ಇದ್ದಾನೆ!

ಈ ದಿನ ಸಂಡೆ, ಏನಿದು ಮೂಡೆ (mood)
ಕಾಲನು ಚಾಚಿ ಉದ್ದಕೆ ಉದ್ದಕೆ
ಬಿದ್ದುಕೊಂಡಲ್ಲಿಯೆ ಅಲ್ಲಿಯೆ ಅಲ್ಲಿಯೆ
ಕಿಟಕಿಯಲ್ಲಿ ಮುಖವಿಟ್ಟು ಆಚೆಗೆ
ಏನೊ ನೋಡುತ್ತಿದ್ದಾನವನು
ಇದ್ದಾನಿದ್ದಾನಿದ್ದಾನೆ!

ಯಾರಿಗು ಕಾಣದ ದೂರದಲೆಲ್ಲೋ
ಅಡಗಿಕೊಂಡಿಹುದನೇನೋ ಅವನು
ನೋಡುತಲಿದ್ದಾನಿದ್ದಾನೆ!
ಸಂಡೇ ಅಂದರೆ ಸಂಡೇ ಅದು
ಎಲ್ಲಾ ಮರೆಸಿ ಎಲ್ಲಿಯೊ ಇರಿಸಿ
ಸುಮ್ಮನೆ ಇರಿಸುವ ಸಿಹಿ ಸಿಹಿ ಉಂಡೆ
ಯಾರಿಗು ಕಾಣದ ಹಾಗೇ ಹೂಂ
ಮೆಲ್ಲುತಲಿದ್ದಾನಿದ್ದಾನೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.