ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ | ಇಗೋ... ಹೊರಟೆ ನಾನೀಗ ಹಾಗೂ ಇತರ ಕವನಗಳು

Last Updated 22 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಇಗೋ... ಹೊರಟೆ ನಾನೀಗ
ಒಲವ ಹೂಗಳು ಹುಲುಸಾಗಿ ಅರಳಿವೆ
ಹೃದಯ ಕಂದರದಲ್ಲಿ
ನೀಲಿಗಡಲ ದಾಟಿ ಬಂದ ಬೆಳ್ಹಕ್ಕಿ ಹಿಂಡು
ಹಾರುತಿದೆ ಅಲ್ಲಿ

ಕಾಣದ ನೋವು
ಹಗಲುವೇಷ ಧರಿಸಿ
ಶತಪಥ ನಡೆದಾಡುತ್ತಿರೆ
ಸುತ್ತು ಬಳಸಿ

ಕಣ್ಣ ಕೊಳ ಬತ್ತಿ
ಹುಟ್ಟದಾಗಿದೆ ಕಂಬನಿಯೊಂದು ಇಲ್ಲಿ
ವರ ಕೇಳಿದರೆ
ಶಾಪ ನೀಡುತ್ತಿಹನು ದೇವ
ಸಲಹುವವನೆ ಕೊಲ್ಲಬಹುದೇನು ಹೀಗೆ
ಇದ್ಯಾವ ನ್ಯಾಯ ಕಾಯ್ವನೆ?

ಬದುಕ ಹಾಡಿಗೆ
ಶೃತಿ, ರಾಗ, ತಾಳ, ಮೇಳಗಳಿಲ್ಲ
ಏಕಾಂತದ ಜಾಡಿಗೆ
ಮೌನವೇ ಆಗಿರುವಾಗ ಎಲ್ಲಾ

ಇರದ ಗಮ್ಯದ, ಇಲ್ಲದ ದಾರಿಯ
ಹುಡುಕ ಹೊರಟಿರುವೆನಲ್ಲ!
ಕುರುಡು ನನಗೋ ಅಥವಾ ಲೋಕಕೋ
ಬಿಡಿಸಿ ಹೇಳುವವರಾರು ಇಲ್ಲ

ಹೆಜ್ಜೆ ನಡೆದದ್ದೆ ಹಾದಿ ಬಯಲ ಬೆಳಕಲಿ
ನೆರಳೂ ಇಲ್ಲದಾಗಿ
ಇಗೋ... ಹೊರಟೆ ನಾನೀಗ
ನನ್ನ ನಾ ತ್ಯಜಿಸಿ!

***

ಕಾದ ಕಾವಲಿಯ ಮೇಲಿನ ರೊಟ್ಟಿ ಕವಿತೆ
ಲದ್ದಿ ತುಂಬಿದ ತಲೆಯ ಬುದ್ಧಿಗೆ
ಬಡಿದ ಲಟ್ಟಣಿಗೆ
ಖಟಕ್ ಎಂದು ಮುರಿದಂತೆ
ಬರೆಯಬೇಕು ಕವಿತೆ

ಬೆಂಕಿಯ ನಾಲಿಗೆಗೆ ಸಿಲುಕಿದ ಕಬ್ಬಿಣ
ಮೈಯೊಡ್ಡಿ ಮೃದುವಾಗಿ
ಮತ್ತಷ್ಟು ಗಟ್ಟಿಯಾದಂತೆ
ಮಾಗಬೇಕು ಬಾಳ ಸಂಹಿತೆ
ಬವಣೆಗಳ ಮೇಳದಲ್ಲಿ ನರಳಿ
ಕಷ್ಟ-ನಷ್ಟಗಳ ನಡುವಲ್ಲಿ ಬೆಂದು
ಸೃಷ್ಟಿಯಾಗಬೇಕು ಕವಿತೆ

ಅವ್ವನ ಗಾಜಿನ ಗೊಳಗಳ
ತೊಟ್ಟ ಖಾಲಿ ಕರಗಳು
ಹದವಾಗಿ ತಟ್ಟಿ ಹರವಿದ
ಕಾದ ಕಾವಲಿಯ ಮೇಲಿನ
ರೊಟ್ಟಿಯಂತಾಗಿ
ಬೇಯಬೇಕು ಕವಿತೆ

ಅಪ್ಪನ ಮೈಗಂಟಿದ
ಬೆವರಿನ ಘಮದ
ಕೈಗಳಿಗೆ ಮೆತ್ತಿದ
ಕೆಸರಿನ ನಂಟಿನ ಪ್ರೇಮದ
ಕಥೆಯಾದ ವ್ಯಥೆಯ
ಹೇಳಬೇಕು ಕವಿತೆ

ಸರಾಗವಿಲ್ಲ....
ಬದುಕಿನ ಬಂಡಿ ಹರಿವ ಹಾದಿ
ನಡೆದು ಬಿದ್ದು ಎದ್ದು
ದಿಗಂತದಿ ಸಂತಸದ
ಕುರುಹು ಕಂಡಂತಾಗಿ ಖುದ್ದು
ಕಷ್ಟದ ಸರಹದ್ದುಗಳ ದಾಟಿ
ಕ್ರಮಿಸಬೇಕು ಕವಿತೆ

ನೆರಳಿಲ್ಲದೆ ಹಾರುವ
ಮುಗಿಲ ಹಕ್ಕಿಯಂತೆ
ಮೂಕವಾದ ಭಾವಗಳ ಹೊಂದಿಸಿ
ಚಿಂತನೆಗಳ ಮಂಥಿಸಿ
ಮಗುವಿನ ತೊದಲು
ಹಾಡಾಗಬೇಕು ಕವಿತೆ

ಹೃದಯದ ಮಿಡಿತವನ್ನು ತುಡಿತವಾಗಿಸಿ
ಮನದ ಮೌನವನ್ನು ಮಾತಾಗಿಸಿ
ಬಿತ್ತಬೇಕಿದೆ ಬಿರಿದೆದೆಯ ನೆಲದಲಿ
ಅಡಗಿಸಿಟ್ಟ ನೋವು ನಿರಾಶೆಗಳನು
ಅಕ್ಷರಬೀಜವಾಗಿಸಿ
ಅಂತರಂಗದ ಅರಿವಿನ
ಬಿಂದುವಿನಲ್ಲಿ ಹುದುಗಿಸಿ
ಹುಟ್ಟಬೇಕಿದೆ ನಾಳೆಗೆ
ತಲೆಯೆತ್ತಿ ಮುಗಿಲೆತ್ತರಕ್ಕೆ
ಜ್ಞಾನವೃಕ್ಷವಾಗಿ ನಿಲ್ಲಬೇಕು ಕವಿತೆ

ಕತ್ತಲಾಲಯದ ಗೋಡೆಗಳ
ಉರುಳಿಸಿ ಬಯಲಾದಂತೆ
ಹೊತ್ತು ಮುಳುಗುವ ಹೊತ್ತಿಗೆ
ದೀಪ ಹಚ್ಚಿಟ್ಟಂತೆ
ಬೆಳಕಾಗಬೇಕು ಕವಿತೆ

ಇರುವುದೆಲ್ಲವ ಕಳೆದು
ತೃಪ್ತಿಯಾದಂತೆ
ಬೋಳು ಮರ ಮತ್ತೆ
ಚಿಗುರಿ ಹಸಿರಾದಂತೆ
ಅಳಿದು ಉಳಿಯಬೇಕು ಕವಿತೆ

***

ಸಾವಿನ ಪರಿ
ಕಣ್ಣ ಕಾಡಿಗೆ ತಾಕಿ
ಕಪ್ಪಾಗಿ ಕಂಬನಿ ದುಂಬಿ
ಹಾರಿದೆ ಮನಸು ರೆಕ್ಕೆ ಹಚ್ಚಿ
ಇಲ್ಲದ ಆಗಸವನ್ನರಸಿ
ಅಹಂಕಾರದಿ ಉರಿದು ರೊಚ್ಚಿ

ಕಿಚ್ಚಲ್ಲದ ಕಿಚ್ಚು
ಸೂರ್ಯನ ಕಿರಣ ಶಾಖಕೆ
ಮಂಜಾಗಿ ಬೆಳಗಿ
ಹೂಬಿಟ್ಟಿತು ಬೇರು
ಧ್ಯಾನದ ನಿನಾದಕೆ ಕರಗಿ

ಕಡಲ ಅಲೆಗಳ ಮಾತಿಗೆ
ಮರಳ ದಂಡೆಯ ಕಿವುಡು
ನಗುವ ಚಂದಿರನ ಮೇಲೆ
ನೋವು ಏರಿ ಹೊರಟಿದೆ ಸವಾರಿ
ಇದಲ್ಲವೆ ಸಾವಿನ ಪರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT