ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಮ್ಯೂಸಿಯಂಗೆ 9 ಗ್ಯಾಲರಿ

Last Updated 24 ಜನವರಿ 2019, 19:30 IST
ಅಕ್ಷರ ಗಾತ್ರ

ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಜನಪದ ಹೀಗೆ ಒಟ್ಟು ಭಾರತೀಯ ಸಂಗೀತವೇ ಒಂದು ಅನನ್ಯ ಅನುಭೂತಿ. ಅದರ ಪರಂಪರೆ, ಇತಿಹಾಸದ ಹಾದಿಯ ಸಮಗ್ರ ಪರಿಚಯ ಇಂದಿನ ಮತ್ತು ಮುಂದಿನ ತಲೆಮಾರಿಗೆ ಆಸಕ್ತಿಯ ವಿಷಯವೂ ಹೌದು. ಈ ಆಸಕ್ತಿಯನ್ನು ತಣಿಸಲೆಂದೇ ‘ಇಂಡಿಯನ್‌ ಮ್ಯೂಸಿಕ್‌ ಎಕ್ಸ್‌ಪೀರಿಯನ್ಸ್‌ (ಐಎಂಇ)’ ರೂಪುಗೊಂಡಿದೆ. ಇದೊಂದು ಸಂಗೀತದ ಸಮಗ್ರ ಮಾಹಿತಿಗಳ ಜೊತೆ ಸಂಗೀತದ ಅನುಭವ ನೀಡುವ ಸಂವಾದಿ ಸಂಗ್ರಹಾಲಯ.

ಭಾರತೀಯ ಸಂಗೀತ ಉಗಮದಿಂದ ಅದು ಬೆಳೆದು ಬಂದಿರುವ ಹಾದಿಯನ್ನು ಸಮಗ್ರವಾಗಿ ತಿಳಿಸುವ ಈ ಮ್ಯೂಸಿಯಂ ಇರುವುದು ಜೆ.ಪಿ.ನಗರದ 7ನೇ ಹಂತದ ಬ್ರಿಗೆಡ್‌ ಮಿಲೇನಿಯಮ್‌ ಅವೆನ್ಯೂ ಆವರಣದಲ್ಲಿ.

ಐಎಂಇ ಒಳ ಹೊಕ್ಕರೆ ಸಂಗೀತ ಲೋಕಕ್ಕೆ ಕಾಲಿಟ್ಟ ಅನುಭವವಾಗುತ್ತದೆ. ಸಂಗೀತದೊಂದಿಗೆ ನಾವು ಮತ್ತು ನಮ್ಮೊಂದಿಗೆ ಸಂಗೀತ ಬೆರೆತ ಭಾವ. ಭಾರತೀಯ ಸಂಗೀತದ ಎಲ್ಲ ಆಯಾಮಗಳನ್ನು ತಿಳಿದುಕೊಳ್ಳುವುದರ ಜತೆಗೆ ನಮಗಿಷ್ಟದ, ಖ್ಯಾತನಾಮರ ಸಂಗೀತವನ್ನು ಆಸ್ವಾದಿಸುವ ಅವಕಾಶವೂ ದೊರೆಯುತ್ತದೆ. ಅಲ್ಲದೆ ಸ್ವರ, ರಾಗ, ತಾಳ, ಸಂಗೀತದ ವಿವಿಧ ಪರಿಕರಗಳ ಪರಿಚಯದ ಜತೆಗೆ ನಾವು ಅವುಗಳನ್ನು ಬಳಸಿ ನಮ್ಮದೇ ಆದ ಸಂಯೋಜನೆಗಳನ್ನು ರಚಿಸಿ ಕೇಳಿ, ಅನುಭವಿಸಬಹುದು.

ಇದು ಭಾರತದ ಪ್ರಥಮ ಸಂಗೀತ ಸಂವಾದಿ ಸಂಗ್ರಹಾಲಯ (ಇಂಟರಾಕ್ಟಿವ್‌ ಮ್ಯೂಸಿಕ್‌ ಮ್ಯೂಸಿಯಂ). ‘ಸಂಗೀತವಿಲ್ಲದ ಜೀವನ ಆತ್ಮವಿಲ್ಲದ ದೇಹದಂತೆ’ ಎಂಬ ಘೋಷ ವಾಕ್ಯದೊಂದಿಗೆ ಆರಂಭವಾಗಿರುವ ಐಎಂಇ ವಿಶ್ವದ ಕೆಲವೇ ಕೆಲವು ಇಂಟರಾಕ್ಟಿವ್‌ ಮ್ಯೂಸಿಕ್‌ ಮ್ಯೂಸಿಯಂಗಳಲ್ಲಿ ಒಂದು.

ಇದು ಬ್ರಿಗೆಡ್‌ ಮಿಲೇನಿಯಮ್‌ ಗ್ರೂಪ್‌ನ ಅಧ್ಯಕ್ಷ ಎಂ.ಆರ್‌. ಜೈಶಂಕರ್‌ ಅವರ ಕನಸಿನ ಒಂದು ಅಪ್ರತಿಮ ಯೋಜನೆ. 2013ರಲ್ಲಿ ಈ ಯೋಜನೆ ಆರಂಭಗೊಂಡಿತ್ತು. ಯಾವ ಫಲಾಪೇಕ್ಷೆ ಇಲ್ಲದೇ ‘ಇಂಡಿಯನ್‌ ಮ್ಯೂಸಿಕ್‌ ಎಕ್ಸ್‌ಪಿರಿಯೆನ್ಸ್‌ ಟ್ರಸ್ಟ್‌’ ಇದನ್ನು ನೋಡಿಕೊಳ್ಳುತ್ತಿದೆ. ಸಂಗೀತದ ವೈವಿಧ್ಯತೆಯ ಅರಿವು ಮತ್ತು ಪ್ರೀತಿಯನ್ನು ಹೆಚ್ಚಿಸುವುದು ಮ್ಯೂಸಿಯಂನ ಉದ್ದೇಶ.

ಭಾರತೀಯ ಸಂಗೀತ ಮ್ಯೂಸಿಯಂನ ನೋಟ
ಭಾರತೀಯ ಸಂಗೀತ ಮ್ಯೂಸಿಯಂನ ನೋಟ

ಆರಂಭದಲ್ಲಿ ಸಂಗೀತದ ಕೆಲವೇ ಪ್ರಕಾರಗಳ ಪರಿಚಯಿಸುತ್ತಿದ್ದ ಮ್ಯೂಸಿಯಂ ಕ್ರಮೇಣ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. 2015ರಲ್ಲಿ ಸೌಂಡ್‌ ಗಾರ್ಡನ್‌ (ಶಬ್ದದ ಅಲೆಗಳು, ಕೊಳವೆಯ ಗಂಟೆ, ಶಿಲೆಯಲ್ಲಿನ ಶಬ್ದನಾದ) ಆರಂಭಿಸಿದ ಮ್ಯೂಸಿಯಂ ಇದೀಗ ಒಂಬತ್ತು ಗ್ಯಾಲರಿಗಳೂ, ಸಂಗೀತದ ಪರಿಕರಗಳನ್ನು ಪರಿಚಯಿಸಿದೆ. ಜತಗೆ ಮೂರು ಮಿನಿ ಥಿಯೇಟರ್‌ಗಳು, ಸಂಗೀತ ಸಲಕರಣೆಗಳ ಪ್ರಕ್ರಿಯೆಯನ್ನು ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿಗೆ ಭೇಟಿ ನೀಡುವವರಿಗೆ ಕಂಪ್ಯೂಟರ್ ಆಧಾರಿತ ಸಂವಾದದ (ಇಂಟರಾಕ್ಟಿವ್‌) ವ್ಯವಸ್ಥೆಯನ್ನೂ ಒದಗಿಸಿದೆ.

ಈ ಗ್ಯಾಲರಿಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಇತ್ತೀಚೆಗಷ್ಟೆ ಅವಕಾಶ ಮಾಡಿಕೊಡಲಾಗಿದೆ. ಇವುಗಳ ಅಧಿಕೃತ ಉದ್ಘಾಟನೆ ಬರುವ ಫೆಬ್ರುವರಿಯಲ್ಲಿ ನಡೆಯಲಿದೆ.

ಸಮಕಾಲೀನ ಅಭಿವ್ಯಕ್ತ: ಭಾರತೀಯ ಮತ್ತು ಪಾಶ್ಚಿಮಾತ್ಯ ಪ್ರಭಾವಗಳನ್ನು ಬಳಸಿಕೊಂಡು ಹೊರಹೊಮ್ಮಿರುವ ರಾಕ್‌, ಪಾಪ್‌, ಫ್ಯೂಷನ್‌ ಸೇರಿದಂತೆ ವಿವಿಧ ಶೈಲಿಯನ್ನು ಒಳಗೊಂಡಿರುವ ಸಮಕಾಲೀನ ಭಾರತೀಯ ಸಂಗೀತದ ಪರಿಚಯ ಈ ಗ್ಯಾಲರಿಯಲ್ಲಾಗಲಿದೆ. ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ ಅನ್ನೇ ಇಲ್ಲಿ ಅನಾವರಣಗೊಲಿಸಲಾಗಿದೆ. ಆ ರಸ್ತೆಯಲ್ಲಿ ಕಂಡು ಬರುವ ಜನದಟ್ಟಣೆ, ಬಟ್ಟೆ, ಆಭರಣ ಮಾರಾಟ, ಖರೀದಿಯ ಭರಾಟೆ, ವಾಹನಗಳ ಸದ್ದು, ಮಿಶ್ರ ದನಿಗಳ ಸಂಗೀತ ಇಲ್ಲೂ ಕೇಳುತ್ತದೆ. ಎರಡು ಆಟೊ ರಿಕ್ಷಾಗಳಲ್ಲಿ ಮಿನಿ ಥಿಯೇಟರ್‌ ವ್ಯವಸ್ಥೆ ಮಾಡಲಾಗಿದೆ.

ಜೀವಂತ ಸಂಪ್ರದಾಯಗಳು: ದೇವಾಲಯಕ್ಕೆ ಹೋದಂತೆ ಭಾಸವಾಗುವಂತೆ ಇದನ್ನು ಸಿದ್ಧಪಡಿಸಲಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತದ ಉಗಮ, ಬೆಳವಣಿಗೆಯನ್ನು ಕಾಲಾನುಕ್ರಮಣಿಕೆಯಲ್ಲಿ ತಿಳಿಸಲಾಗಿದೆ. ಜತೆಗೆ ಕರ್ನಾಟಕ, ಹಿಂದೂಸ್ತಾನಿ ಶೈಲಿಗಳ ಆರಂಭಿಕ ಪರಿಕಲ್ಪನೆಗಳ ಪರಿಚಯವಾಗುತ್ತದೆ. ಅಲ್ಲದೆ ಶೃತಿ, ರಾಗಾ, ತಾಳ, ಘರಾನ, ಧೃಪದ್‌, ಖಯಾಲ್‌ ಅಥವಾ ಠುಮ್ರಿ, ಸಂಗೀತ ಕಛೇರಿಗಳೆಂದರೆ ಏನು? ಇವುಗಳಲ್ಲಿ ಇರುವ ವಿಧಗಳು, ವಿಭಿನ್ನತೆಯನ್ನು ತಿಳಿದುಕೊಳ್ಳುವುದರ ಜತೆಗೆ ಅವುಗಳನ್ನು ಅನುಭವಿಸಬಹುದು. ನೃತ್ಯದೊಂದಿಗೆ ಸಂಗೀತ, ಸಂಗೀತದೊಂದಿಗೆ ನೃತ್ಯ ಬೆಸೆದುಕೊಂಡು ಬೆಳೆದು ಬಂದ ಬಗೆಯನ್ನು ತಿಳಿಯಬಹುದು. ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತನಾಮರು, ಅವರು ಬಳಸುತ್ತಿದ್ದ ವಾದ್ಯಗಳ ಪರಿಚಯ (ಸಾರಂಗಿ, ಖಯಾಲ್‌, ವಯೊಲಿನ್‌, ಶೆಹನಾಯಿ, ಕೊಳಲು, ತಬಲಾ) ಇಲ್ಲಾಗುತ್ತದೆ. ದೇಶದ ಯಾವ ಪ್ರದೇಶಗಳು ಯಾವ ಸಂಗೀತ ಪ್ರಕಾರಗಳಿಗೆ ಪ್ರಸಿದ್ಧಿ ಪಡೆದಿವೆ ಎಂಬುದನ್ನು ಮ್ಯಾಪ್‌ ಮೂಲಕ ವಿವರಿಸಲಾಗಿದೆ.

ಜನಗಳ ಹಾಡು (ಜನಪದ): ದೇಶದ ವಿವಿಧ ಮೂಲೆಯ ಜನಪದ ಗೀತೆಗಳು, ನೃತ್ಯಗಳ ಪರಿಚಯ ಸಂಗ್ರಹಾಲಯದಲ್ಲಿದೆ. ಮನುಷ್ಯನ ಹುಟ್ಟು, ಸಾವು ಹಾಗೂ ದುಡಿತದ ಸಮಯದಲ್ಲಿನ ಹಾಡುಗಳನ್ನು ಇಲ್ಲಿ ಕೇಳಬಹುದು. ತೊಗಲು ಗೊಂಬೆಗಳ ಮೂಲಕ ಈ ಹಾಡುಗಳ ಅರ್ಥವನ್ನು ವಿವರಿಸಿದ್ದೊಂದು ವಿಶೇಷ. ರಾಜಸ್ಥಾನದಲ್ಲಿ ರಾಮಾಯಣವನ್ನು ಜನರಿಗೆ ತಲುಪಿಸಲು ಬಳಸುತ್ತಿದ್ದ ಪೆಟ್ಟಿಗೆಯೂ ಇಲ್ಲಿದೆ.

ಸಮ್ಮಿಲನ ಕೇಂದ್ರ: ಭಾರತಕ್ಕೆ ಬಂದ ಬ್ರಿಟಿಷರು, ಪೋರ್ಚುಗೀಸರು, ಫ್ರೆಂಚರು, ಡಚ್ಚರು ವಸಾಹತುಗಳನ್ನು ವಿಸ್ತರಿಸಿದಂತೆ ಅವರ ಸಂಗೀತದ ಪ್ರಭಾವವೂ ಭಾರತೀಯ ಸಾಂಸ್ಕೃತಿಕ ಜಗತ್ತಿನ ಮೇಲಾಯಿತು. ಅದರ ಪರಿಣಾಮವಾಗಿ ಅವರ ವಾದ್ಯಗಳು ನಮ್ಮ ಸಂಗೀತದೊಂದಿಗೆ ಸಮ್ಮಿಲನಗೊಂಡಿವೆ. ಪ್ರಮುಖವಾಗಿ ಸ್ಯಾಕ್ಸೋಫೋನ್‌, ಕ್ಲಾರಿನೆಟ್‌, ಕೀಬೋರ್ಡ್‌, ಚಿಲ್ಲೊ, ಗಿಟಾರುಗಳನ್ನು ಇಂದು ಭಾರತೀಯ ಸಂಗೀತ ಕಛೇರಿಗಳಲ್ಲಿ ಕಾಣಬಹುದು. ಇವುಗಳು ಹೇಗೆ ಸಮ್ಮಿಲನಗೊಂಡವು, ಅವುಗಳ ಇತಿಹಾಸವೇನು ಎಂಬುದನ್ನು ಚಿತ್ರಗಳ ಸಹಿತ ವಿವರಿಸುವ ಪ್ರಯತ್ನ ಈ ಗ್ಯಾಲರಿಯದು.

ಸಂಗೀತ ವಾದ್ಯಗಳು: ದೇಶದ ವಿವಿಧ ಮೂಲೆಗಳಲ್ಲಿ ಪ್ರಮುಖವಾಗಿ ಬಳಸುವ 100 ವಾದ್ಯಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಅವುಗಳ ಉಗಮ, ತಯಾರಿಸುವ ಮತ್ತು ಬಳಕೆಯ ಕಲೆಯನ್ನು ತಿಳಿಸುವುದರ ಜತೆಗೆ ಈ ವಾದ್ಯಗಳು 360 ಡಿಗ್ರಿ ಕೋನಗಳಲ್ಲಿ ಹೇಗೆ ಕಾಣುತ್ತವೆ ಎಂಬುದರ ಚಿತ್ರಣವನ್ನೂ ಇಲ್ಲಿ ಕಾಣಬಹುದು. ಪ್ರಮುಖವಾಗಿ ನವಿಲಿನಾಕಾರದ ಮಯೂರ ವೀಣೆ, ಹಾವಿನಾಕಾರದ ನಾಗಪಾಣಿ, ರುಬಬ್‌, ಪುಂಗಿ, ರಾವಣಹಥ, ಏಕತಾರ, ಗೊಗೊನಾ, ವಿವಿಧ ಆಕಾರದ ವೀಣೆಗಳು, ತಬಲ, ಡೋಲು, ಶಹನಾಯಿ, ಘಟ ಮೊದಲಾದ ವಾದ್ಯಗಳನ್ನೂ ಇಲ್ಲಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT