ಶನಿವಾರ, ಜೂನ್ 19, 2021
27 °C

ಕಥೆ | ಹುಲಿ ಕಲ್ಲು ಮತ್ತು ಹುಲಿಯಮ್ಮ

ಆದರ್ಶ ವಿಜಯಲಕ್ಷ್ಮಿ  Updated:

ಅಕ್ಷರ ಗಾತ್ರ : | |

Prajavani

ಆ ಅರಳಿಕಟ್ಟೆ ಮೇಲೆ ಕುಳಿತ್ತಿದ್ದಾನಲ್ಲ ಆ ಮುದಿಯ, ಅವನೇ ಮರುಳಜ್ಜ, ಅವನಿಗೆ ಒಂದು ನೂರು ವಯಸ್ಸಿರಬಹುದು. ಯಾರಾದ್ರೂ ‘ಅಜ್ಜ ಎಷ್ಟು ನಿನ್ನ ವಯಸ್ಸು ಅಂದ್ರೆ’ ಅರಳಿ ಸಸಿ ಹಾಕಿದಾಗ ನಾನು ಹುಟ್ಟಿದ್ದು, ಇದಕ್ಕೆ ಎಷ್ಟೋ ನನಗು ಅಷ್ಟೇ ಅಂತ ಕಾಯಂ ಉತ್ತರ. ಇನ್ನು ಒಂದು ಲಹರಿಲಿ ಇದ್ರೆ, ‘ಯಾರಿಗೊತ್ತು ಲೆಕ್ಕ ಇಟ್ಟಿರೋರು ಯಾರು, ಲೆಕ್ಕ ಯಾಕಿಡಬೇಕು ಅಂತೀನಿ, ಈ ಅರಳಿಕಟ್ಟೆ ಲೆಕ್ಕ ಇಟ್ಟಿದ್ಯಾ ಅದರ ಆಯಸ್ಸುನ್ನ ಅಥವಾ ನಮ್ಮ ಊರಿನ ಸುತ್ತ ಇವೆಯಲ್ಲ ಈ ಬೆಟ್ಟಗಳು ಇವಕ್ಕೆ ಗೊತ್ತಿದ್ಯಾ ಎಷ್ಟು ವರ್ಷಾ ಅಂತ, ವಯಸ್ಸು ಎಷ್ಟಾದರೇನು ಬದುಕೋ ಬದುಕು ಮುಖ್ಯಾ, ಹುಚ್ಚುಮುಂಡೆವಾ ನೆನಪಿಟ್ಕೋಬೇಕಾದನ್ನ ಮರೀತಿರಾ, ಮರೀಬೇಕಾದನ್ನ ನೆನಪಿಟ್ಕೋತೀರಾ’ ಅಂತ ಗಟ್ಟಿಯಾಗೇ ಹೇಳ್ತಾನೆ. ಇಷ್ಟು ವಯಸ್ಸಾಗಿದ್ರು ಅಜ್ಜನ ಕಣ್ಣು, ಕಿವಿ ಇನ್ನು ಸ್ವಸ್ತಗಿದೆ. ಬೆನ್ನು ಕೊಂಚ ಬಾಗಿದೆ. ಆದರೆ, ನೆನಪು ಮಾತ್ರ ಸ್ಪಷ್ಟವಾಗಿದೆ. ಇನ್ನು ನೆನ್ನೆ ಮೊನ್ನೆ ನಡಿದಿದೆಯೇನೋ ಅನ್ನೋಹಾಗೆ ಹಿಂದಿನ ಕಥೆಗಳನ್ನ ಹೇಳ್ತಾನೆ.

‘ಏನ್ ಅಜ್ಜ ಆರಾಮಾಗಿ ಕೂತಿದ್ಯ ಏನ್ ಸಮಾಚಾರ ಊಟ ಆಯ್ತಾ’ ಎಂದಾಗ
‘ಹೂ ಮಗ ಇನ್ನೇನು ಕೆಲಸ ನಂಗೆ ಹೇಳು ಉಣ್ಣಾದು, ಕಟ್ಟೆ ಕಾಯೋದು, ಕಥೆ ಹೇಳೋದು ಅಷ್ಟೇ’
‘ಸರಿ ಮತ್ತೆ ನಮ್ಮ ಜನ ಇವತ್ತು ಹುಲಿಯಮ್ಮನ ಕಥೆ ಕೇಳ್ಬೇಕು ಅಂತ ಬಂದಿದ್ದಾರೆ ಹೇಳ್ತಿಯ’
‘ಕಥೆ ಕೇಳೋರು ಇದಾರೆ ಅಂದಮೇಲೆ ಹೇಳೋದು ನನ್ನ ಧರ್ಮ ಅಲ್ವ ಹೇಳ್ತಿನಿ ಕೂತ್ಕೊಳ್ಳಿ’

‘ನಮ್ಮ ಹಳ್ಳಿ ಹುಲಿಕಲ್ಲು ಇದಕ್ಕೆ ಪಂಚಗಿರಿ ಅಂತ ಇನ್ನೊಂದು ಹೆಸರು, ಕಾರಣ ಇಷ್ಟೇ ನಮ್ಮೂರು ಸುತ್ತಲೂ ಐದು ಬೆಟ್ಟ ಇದಾವೆ, ಅದರಲ್ಲಿ ಒಂದು ಅರ್ಭುತಾರಾಯನಬೆಟ್ಟ. ನೆರೆದಿದ್ದ ಜನರ ಕಡೆ ನೋಡಿ ‘ನಮಪ್ಪ ಅರ್ಬುತ ಯಾರು ಗೊತ್ತ’ ಅಂತ ಕೇಳಿದಾಗ ಅಲ್ಲಿ ಇದ್ದೋರು ಗೊತ್ತಿಲ್ಲ ಅಂತಾರೆ ‘ಸರಿ ಪುಣ್ಯಕೋಟಿ ಗೊತ್ತೋ’ ಅಂದಾಗ ‘ಗೊತ್ತಿಲ್ದೇಯೇನು ಸತ್ಯಮೂರ್ತಿ ಗೋಮಾತೆ ನಾವೆಲ್ಲ ಆ ಹಾಡು ಕೇಳಿದ್ದೀವಿ’ ಅಂತಾರೆ ‘ಹೂ ಇರ್ಲಿ ಸತ್ಯಕ್ಕೆ ಪ್ರಾಣ ಕೊಡೋಕೆ ಸಿದ್ಧವಾದೊಳು ಆವಮ್ಮ ಜಿತಾ ಅವ್ವಮ್ಮನ್ನ ನೆನಪಿಟ್ಕೋಬೇಕಾದೆ, ಆದರೆ ಸತ್ಯ ಉಳೀಲಿ ಅಂತ ಪ್ರಾಣ ಬಿಟ್ಟಿದ್ದು ಯಾರು? ಹಸು ಸತ್ಯ ಮೆಚ್ಚಿ, ತನ್ನ ಪ್ರಕೃತಿ ಮರೆತು, ಹುಲಿಗಳ ಸಂಪ್ರದಾಯ ಮುರಿದು, ಸತ್ಯ ಗೆಲ್ಬೇಕು ಅಂತ ಬೆಟ್ಟದ ಮೇಲಿಂದ ಹಾರಿ ತನ್ನ ಪ್ರಾಣಾನೇ ಬಿಟ್ಟಿದ್ದು, ನಮ್ಮಪ್ಪ ಅರ್ಬುತ ಹುಲಿರಾಯ’ ಅಲ್ವೇ? 

ನಿಮ್ಮ ಹಿಂದೆ ಇದ್ಯಲ್ಲ ಗುಡಿ ಅದು ಹುಲಿಯಮ್ಮನ ಗುಡಿ ಅದರ ಪಕ್ಕದಲ್ಲಿ ಇದ್ಯಲ್ಲ, ಆ ಕಲ್ಲು ಅದು ನಮಪ್ಪ ಅರ್ಬುತರಾಯ ಪ್ರಾಣ ಬಿಟ್ಟ ಜಾಗ. ಹೌದು, ಇದೆ ಆ ಹಾಡಲ್ಲಿ ಬರೋ ಕರ್ನಾಟದೇಶ ಈ ಕರ್ನಾಟ ದೇಶದಲ್ಲಿ ನಮ್ಮ ಹುಲಿಕಲ್ಲು. ಇಲ್ಲಿಂದ ಒಂದು ಮೈಲಿ ದೂರ ಮೇಲೆ ಬೆಟ್ಟ ಹತ್ತಿದ್ರೆ ಅದೇ ಗುಹೆ ಅಲ್ಲಿ ಪುಣ್ಯಕೋಟಿ ತಾಯಿ ವಿಗ್ರಹ ಕೆತ್ತಿದ್ದಾರೆ. 

ಹುಲಿ ಮಂದಿಗೆಲ್ಲ ನಮ್ಮ ಅರ್ಬುತಾನೆ ರಾಜ, ಅವನು ಹೇಳಿದ್ದೆ ಶಾಸನ, ನಡೆದಿದ್ದೇ ದಾರಿ. ಕಾಡಿನ ಪ್ರಾಣಿಗೋಳು ನಾಡಿಗೆ ಬರೋಹಾಗಿರಲಿಲ್ಲ. ನಾಡಿನ ಪ್ರಾಣಿಗೋಳು(ಮನುಷ್ಯರು) ಕಾಡಿಗೆ ಹೋಗೋ ಹಾಗಿರಲಿಲ್ಲ. ಅವನು ನಮಪ್ಪ ನೀತಿ ನಿಜಾಯ್ತಿಗೆ ಬೆಲೆ ಕೊಡ್ತಿದ್ದ, ಹಸಿದಿದ್ರೆ ಮಾತ್ರ ಬೇಟೆ ಆಡ್ಬೇಕು ಶೋಕಿಗೆ ಮಾಡೋಹಾಗಿಲ್ಲ, ಕಾನೂನು ಮೀರಿದ್ರೆ ಕಾಲ ಮೀರಿದಂಗೆ. ಅಂತಹ ಒಳ್ಳೆ ಹುಲಿ, ಅಷ್ಟು ಒಳ್ಳೆ ಕಾಡಿನ ದೊರೆ ಎಲ್ಲೂ ಇರಲಿಲ್ಲ. ಅದಕ್ಕೆ ಎಲ್ಲಾ ಪ್ರಾಣಿಗಳಿಗೂ ಅವನ ಕಂಡ್ರೆ ಭಯ ಭಕ್ತಿ ಗೌರವ, ಅರ್ಬುತರಾಯನ ನಿಜಾಯ್ತಿ ಗೋತಿದ್ದೆ ಗೋವಮ್ಮ ಮನೆಗೆ ಹೋಗಿ ಕೂಸಿಗೆ ಮೊಲೆ ಕುಡಿಸಿ ಮತ್ತೆ ಬರ್ತೀನಿ ಅಂತ ಕೇಳಿದ್ದು, ಬೇರೆ ಹುಲಿ ಆಗಿದಿದ್ರೆ ಮಾತಿಗೆಲ್ಲಿ ಅವಕಾಶ ಇರ್ತಿತ್ತು. 

ಅರ್ಭುತ ಪ್ರಾಣ ಬಿಟ್ಟಮೇಲೆ ಪುಣ್ಯಕೋಟಿ ತನ್ನ ಕಂದನ ಬಳಿ ಹೋಯ್ತು, ತಾಯಿ ಇನ್ನು ಬರೋದೇ ಇಲ್ಲ ಅಂತ ನಂಬಿದ್ದ ಕರು ತಾಯಿಯನ್ನ ಕಂಡು ಎಷ್ಟು ನಲಿದಿತ್ತು, ಅದರ ಸಂತಸ ಬಾಯಲ್ಲಿ ಹೇಳೋಕಾಗುತ್ತೆ ಏನು, ಅವಳ ಹಿಂದೆ ಮುಂದೆ ಜಿಗಿಯೋದೇನು, ಅವಳ ಮೈಯನ್ನ ನೆಕ್ಕೋದೇನು, ಕಾಲು ಕಾಲಿಗೆ ಸಿಗೋದೇನು, ಮೊಲೆ ಕುಡಿಯೋದೇನು ಎಷ್ಟು ಸಂಭ್ರಮವೋ ಆ ಕಂದಮ್ಮಗೆ. 

ಆದರೆ ನಮ್ಮ ಅರ್ಬುತರಾಯನ ಹೆಂಡತಿ ಹುಲಿಯಮ್ಮ ಮತ್ತೆ ಅವಳ ಮಕ್ಕಳ ಗತಿ ಏನಾಯ್ತು, ಆಯಮ್ಮ ಎಂತ ಗಟ್ಟಿಗಿತ್ತಿ, ಕಾಡನ್ನ ಹುಲಿ ಮಕ್ಳನ್ನ ಹೆಂಗೆ ಕಾಪಾಡಿದ್ಲು ಗೊತ್ತಾ. 

ನಮಪ್ಪ ಅರ್ಬುತರಾಯ ತೀರೋದ್ಮೇಲೆ ಕಾನೂನು ಇಲ್ಲ ಕಟ್ಟಳೇನು ಇಲ್ಲ, ನಾಡಿನ ಪ್ರಾಣಿಗಳು ಕಾಡಿಗೆ ಹೋಗೋದು, ಕಾಡಿನ ಪ್ರಾಣಿಗಳನ್ನ ಬೇಟೆ ಆಡೋದು. ಹುಲಿ, ಚಿರತೆ, ಜಿಂಕೆ, ಕಾಡಹಂದಿ, ಮೊಲ, ಕಾಡೆಮ್ಮೆ, ನವಿಲು ಎಲ್ಲವನ್ನು ಕೊಲ್ಲೋದು, ಬೆಂಕಿ ಹಚ್ಚಿ ಕುಣಿಯೋದು, ಗಣಪನ ಮುಖದ ಆನೆನ ಕೂಡ ಬಿಡ್ತಿರಲಿಲ್ಲ, ಅದರ ದಂತ ಮುರಿದು ಪ್ರಾಣ ತೆಗೆದು ಹೋಗೋರು, ಜೀವ ಇದ್ದಾಗ ಹತ್ತಿರ ಬರೋಕು ಹೆದರ್ತಿದ್ದ ನಾಯಿ ನರಿಗಳು ಅದರ ದೇಹ ವಾರಗಟ್ಟಲೆ ತಿನ್ನೋರು. ಇದನೆಲ್ಲ ನೋಡಿ ನಮವ್ವ ಹುಲಿಯಮ್ಮನಿಗೆ ಬಾಳ ದುಃಖ ಆಗೋದು, ರಾಯ ಇದ್ದಿದ್ರೆ ಇವ್ರಿಗೆ ಇಷ್ಟು ಧೈರ್ಯ ಬರ್ತಿತ್ತ ಅಂತ ಮನಸಿಗೆ ಹಚ್ಕೊಳ್ಳೋದು.

ನಾಡಿನ ಪ್ರಾಣಿಗಳ ಆರ್ಭಟ ಹೆಚ್ಚುತ್ತಾ ಬಂತು, ಹುಲಿ ಮಕ್ಕಳಿಗೆ ಬೇಟೆ ಸಿಗೋದು ಕಷ್ಟ ಆತು, ಇನ್ನು ನಾಡಿಗೆ ಹೋಗಿ ಮನುಷ್ಯರು ಸಾಕಿರೋ ಕುರಿ, ಕೋಳಿ, ಹಸು, ಎಮ್ಮೆನ ಬೇಟೆ ಅಡಿ ಬರೋಣ ಅಂತ ಯೋಚ್ನೆ ಬಂದ್ರು, ಅಪ್ಪ ಹಾಕಿದ ನಿಯಮ ಅಮ್ಮ ಹೇಳಿಕೊಟ್ಟ ನೀತಿ ಮೀರೋಕೆ ಆಗುತ್ತೆನು, ಹೀಗಿರುವಾಗ ಒಂದು ಹುಲಿಮರಿನ ನಾಡಿನ ಪ್ರಾಣಿಗಳು ಬೇಟೆ ಆಡಿದವು, ಆ ಮರಿ ಚರ್ಮ ಸುಲಿದು ಮನೆ ಗೋಡೆಗೆ ಹಾಕಿಕೊಂಡ್ರು, ಹುಲಿಮರಿ ದೇಹ ಬೆಂಕಿಲಿ ಬೇಯ್ಸಿಬಿಟ್ಟರು, ಆವಾಗ ಹುಲಿಯಮ್ಮನಿಗೆ ತಡೆಯೋಕೇ ಆಗಲಿಲ್ಲ.

ಒಂದು ದಿನ ನಮ್ಮ ದುರ್ಗೆತವ ಹೋಗಿ, ಅವ್ವ ನನ್ನ ಗಂಡ ಸತ್ಯಕ್ಕೆ ಪ್ರಾಣ ಬಿಟ್ಟ. ಈಗ ಈ ಕಾಡನ್ನ, ನನ್ನ ಮಕ್ಕಳನ್ನ ಅನಾಥ ಮಾಡಿ ಹೋದ. ದಿಕ್ಕು ದೆಸೆ ಇಲ್ಲದ ಹಾಗಿದೆ ನಮಗೆ. ನಮ್ಮನ್ನ, ನಮ್ಮ ಕಾಡನ್ನ ನಾವು ಕಾಪಾಡಿಕೊಳ್ಳಬೇಕು, ಅದಕ್ಕೆ ನಮಗೆ ಒಂದು ವರ ಕೊಡು ಅಂತ ಜಬರ್ದಸ್ತ್ ಮಾಡಿ ಕೇಳಿದ್ಲು. ಎಷ್ಟಾದ್ರೂ ಆ ತಾಯಿ ವಾಹನ ಅಲ್ವೇ. ದುರ್ಗಮ್ಮ ಸರಿ ಏನ್ಬೇಕು ಕೇಳು ಅಂದಾಗ ‘ಅಮ್ಮ ನಮ್ಮ ಸಂತತಿ ಹೆಣ್ಣು ಮಕ್ಕಳಿಗೆ ಅವರಿಗೆ ಇಷ್ಟ ಬಂದಾಗ ಮಾನವ ರೂಪ ಸಿಗ್ಬೇಕು ಹಂಗೆ ಇಷ್ಟ ಬಂದಾಗ ಹುಲಿ ರೂಪ ಬರ್ಬೇಕು ಅಂತ ಬೇಡ್ಕೊಂಡ್ಲು, ಅದಕ್ಕೆ ದುರ್ಗಮ್ಮ ‘ಅಲ್ವೇ, ಮನುಷ್ಯರು ಮೃಗ ಆಗೋದು ನೋಡಿದ್ದೀನಿ, ಮೃಗ ಮನುಷ್ಯ ರೂಪ ತಾಳೋದು ಯಾವತ್ತೂ ನೋಡಿಲ್ಲ, ಸರಿ ನಿನ್ನ ಇಷ್ಟದಂತೆ ಆಗಲಿ ಇದನ್ನು ನೋಡೋಣ’ ಅಂತ ಹೇಳಿ ದುರ್ಗಮ್ಮ ‘ತಥಾಸ್ತು’ ಅಂತ ಅಂದ್ಲು.

ಜನಗೊಳು ಗುಂಪಿನಲ್ಲಿ ಯಾರೋ ಮೆಲ್ಲಗೆ ‘ಒಳ್ಳೆ ಕಟ್ಟು ಕಥೆ, ಈ ಎಪ್ಪನೇ ಕಟ್ಟಿರಬೇಕು’ ಅಂತ ಮಾತಾಡಿದ್ದು ಅಜ್ಜನ ಕಿವಿಗೆ ಬೀಳದೆ ಇರಲಿಲ್ಲ. ನಕ್ಕು ‘ಕಂಡಿದ್ದೆಲ್ಲ ಸತ್ಯ ಅಲ್ಲ, ಕಾಣದ್ದೆಲ್ಲ ಸುಳ್ಳು ಅಲ್ಲ, ಹದ್ದಿನ ಕಣ್ಣು ಹದ್ದಿಗೆ, ಹುಲಿ ಕಣ್ಣು ಹುಲಿಗೆ, ಮನುಷ್ಯರ ಕಣ್ಣು ಮನುಷ್ಯರಿಗೆ, ಎಲ್ಲರ ದ್ರಿಷ್ಟಿನು ಬೇರೇನೇ, ನಮಗೆ ಕಂಡದ್ದು ಅವಕ್ಕೆ ಕಾಣಲ್ಲ ಅವಕ್ಕೆ ಕಂಡಿದ್ದು ನಮಗೆ ಕಾಣಲ್ಲ, ಆದ್ರೆ ಮನಸಿನ ಕಣ್ಣು ಅಂಥ ಒಂದು ಇರುತ್ತೆ ಅದು ಯಾರಿಗೂ ಮೋಸ ಮಾಡಲ್ಲ. ಕಥೆ ಇನ್ನು ಈಗ ಶುರು ಆಗಿದೆ. ಪೂರ್ತಿ ಕೇಳಿ ಆಮೇಲೆ ನಿಮ್ ನಿಮ್ ಸತ್ಯ ನೀವೇ ಕಂಡ್ಕೋಬೇಕು, ಮುಂದಕ್ಕೆ ಕೇಳ್ಬೇಕು ಅಂತ ಇರೋರು, ಮುಂದಕ್ಕೆ ಹೋಗ್ಬೇಡಿ ಸಮಾಧಾನವಾಗಿ ಕೇಳಿ' ಎಂದ ಅಜ್ಜ. 

ದುರ್ಗಮ್ಮ ವರ ಕೊಟ್ಟ ಮೇಲೆ ನಮವ್ವ ಮನುಷ್ಯರ ವೇಷ ಹಾಕೊಂಡು ಊರು ಸುತ್ತೋಳು, ಒಂದು ದಿನ ಅವಳ ರೂಪ ನೋಡಿ ಮನಸೋತು, ನಮ್ಮೂರ ಗೌಡ ಕಾಳಿಂಗ,

ಎಂತ ಚೆಲುವೆ ಇದ್ಯಾ ನೀನು, ಎಲ್ಲಿಂದ ಬಂದೆ
ನಿನ್ನ ಕಂಡ ಕ್ಷಣದಿಂದ ಹಾರೋಯ್ತು ನಿದ್ದೆ,
ಅಕ್ಷತೆಯ ತಂದು, ಹಿರಿಯೋರ ಮುಂದೆ ನಿಂತು ಲಗ್ನ ಆಗಾಣ
ಕೊನೆತನಕ ಜೊತೆಯಾಗಿ ಬಾಳ್ವೆ ಮಾಡಣ 
ಎಂತ ಚೆಲುವೆ ಇದ್ಯಾ ನೀನು, ಎಲ್ಲಿಂದ ಬಂದೆ 
ನಿನ್ನ ಕಂಡ ಕ್ಷಣದಿಂದ ಹಾರೋಯ್ತು ನಿದ್ದೆ,

ಅಂತ ಹಾಡ್ತಾ ಹಾಡ್ತಾ ಅವಳ ಹಿಂದು ಮುಂದು ಸುತ್ತಿದ. ಕೊನೆಗೂ ಒಲಿಸಿಕೊಂಡ ಅಥವಾ ನಮ್ಮವ್ವ ಹುಲಿಯಮ್ಮನೇ ಒಲಿದಳು. ಇಬ್ಬರಿಗೂ ಲಗ್ನ ಆತು, ಮೊದಲನೇ ವರ್ಷ ಐದು ಮಕ್ಳು ಹೆತ್ಲು (ಎಷ್ಟಾದ್ರೂ ಹುಲಿಯಮ್ಮ ಅಲ್ವೇ), ಆ ಐದು ಮಕ್ಳ ಬೆನ್ನಲ್ಲೂ ನಾಲ್ಕು ಪಟ್ಟೆ, ಎಡಕ್ಕೆ ಎರಡು, ಬಲಕ್ಕೆ ಎರಡು, ಅದನ್ನ ನೋಡಿ ಗಾಬರಿ ಬಿದ್ದ ನಮ್ಮಪ್ಪ ಕಾಳಿಂಗ ಮಕ್ಕಳಿಗೆ ಯಾವ್ದೋ ಮಾರಿನೋ, ಏನೋ ರೋಗನೋ ಇರ್ಬೇಕು ಅಂತ ಬೆಟ್ಟದ ಮೇಲಿನ ಗುಹೆ ಹತ್ರ ಇರೋ ಪುಣ್ಯಕೋಟಿಗೆ ದಿನ ಹಾಲು ಎರೆದು ಬರೋನು, ಏನ್ ಮಾಡಿದ್ರು ಪಟ್ಟೆ ಮಾತ್ರ ಮಕ್ಕಳ ಜೊತೆಗೆ ಬೆಳೀತು, ಮತ್ತೆರಡು ವರ್ಷದಲ್ಲಿ ಇನ್ನು ಹತ್ತು ಮಕ್ಳು ಅವಕ್ಕೂ ನಾಕು ನಾಕು ಪಟ್ಟೆ, ಸರಿ ಇದು ಅರ್ಬುದರಾಯನ ಶಾಪ ಇರ್ಬೇಕು ಅಂತ ತಿಳ್ಕೊಂಡು, ಹುಲಿ ಕಲ್ಲಿಗೆ ಕುರಿ, ಕೋಳಿ ಬಲಿ ಕೊಟ್ಟ, ಒಂದು ಗುಡೀನು ಕಟ್ಟಿಸಿದ, ಆದ್ರೂ ಪಟ್ಟೆ ಹೋಗ್ಲಿಲ್ಲ, ಇದೆನ್ನೆಲ್ಲ ನೋಡ್ತಿದ್ದ ನಮ್ಮವ್ವ ಒಂದು ದಿನ ತಾನು ಬಂದ ಕೆಲಸ ಆಯಿತು ಅಂತ ಅನ್ಕೊಂಡು, ಕಾಳಿಂಗರಾಯನಿಗೆ ‘ನೋಡಿ ಈ ಮಕ್ಳು ಹುಲಿ ಮಕ್ಳು ಇವರ ವಂಶಕೆಲ್ಲ ಈ ಪಟ್ಟೆ ಇದ್ದೆ ಇರುತ್ತೆ, ಇವರು ಈ ನಾಡಿನ ಜನಗಳ ಜೊತೆ ಬೆರೆತು ಕಾಡನ್ನ ಕಾಪಾಡಬೇಕು, ಕಾಡೊಳಗೆ ಯಾರು ಬರದೇ ಇರೋ ಹಾಗೆ ಕಾಯೋ ಹುಲಿಯಾಳುಗಳು ಇವರು, ನಾನು ಇಲ್ಲಿಗೆ ಬಂದ ಕೆಲಸ ಮುಗಿತು ಮತ್ತೆ ಕಾಡಿಗೆ ಹೋಗ್ತೀನಿ’ ಅಂತ ಹುಲಿಯಾದಳು, ಕಾಡಿಗೆ ಹೋದಳು. 

ಅವತ್ತಿನಿಂದ ಇವತ್ತಿನವರೆವಿಗೂ ನಮ್ಮೂರಲ್ಲಿ ಹುಲಿಯಾಳುಗಳ ಬೆನ್ನಲ್ಲಿ ನಾಲ್ಕು ಪಟ್ಟೆ ಇದ್ದೆ ಇರುತ್ತೆ. ‘ಏಯ್ ಮಾದ ಬಾರ್ಲಾ ಇಲ್ಲಿ, ತೇಗಿ ನಿನ್ನ ಅಂಗಿ, ತೋರ್ಸು ನಿನ್ನ ಬೆನ್ನು’ ಎಂದ, ಮಾದ ಅಂಗಿ ತೆಗೆದು ತಿರುಗಿ ನಿಂತ, ಜನಗಳ ಗುಂಪಿನಿಂದ ಹೂ ಎಂದು ಉದ್ಗಾರ ಬಂತು, ಅವರಲ್ಲಿ ಒಬ್ಬ ಎದ್ದು ಹೋಗಿ ಮಾದನ ಬೆನ್ನು ಮುಟ್ಟಿ ನೋಡಿದ, ಥೇಟ್ ಹುಲಿ ಪಟ್ಟೆ ಇದ್ದ ಹಾಗೆ ಇತ್ತು. ‘ನಿಮ್ಮ ಪರೀಕ್ಷೆ ಮುಗ್ದಿದ್ರೆ ಕಥೆ ಮುಂದುವರೆಸೋಣವೇ ?' ಎಂದ ಅಜ್ಜ. 

ಈಗ ಸರಿ ಸುಮಾರು ವರ್ಷಗಳ ಹಿಂದೆ, ಇನ್ನು ದೇಶಕ್ಕೆ ಸ್ವಾತಂತ್ರ್ಯ ಬಂದಿರ್ಲಿಲ್ಲ, ನಮ್ಮ ಸಣಕಲ ಮಾದ ಇನ್ನು ಕೂಸು ಎಷ್ಟು ಮುದ್ದಾಗಿದ್ನೊ, ಮಗೀನ ಎತ್ತೊಕೆ ಆಗ್ತಿರ್ಲಿಲ್ಲ ಅಷ್ಟು ಭಾರ ಇದ್ದ, ಇವಾಗ ಒಳ್ಳೆ ಪೊರಕೆ ಕಡ್ಡಿ ಇದ್ದ ಹಾಗೆ ಇದ್ದಾನೆ, ನಮ್ಮ ಊರಿಗೆ ಪರದೇಸಿ ಒಬ್ಬ ಬಂದ, ಚರ್ಮ ಇಷ್ಟು ಬೆಳ್ಳಗಿರುತ್ತೆ ಅಂತ ನಮಗೆ ಗೊತ್ತೇ ಇರ್ಲಿಲ್ಲ ಮೈ ಕೈ ಎಲ್ಲ ಬಿಳಿಚ್ಕೊಂಡಿತ್ತು. ಒಳ್ಳೆ ಗೋಡೆಗೆ ಹಸೀ ಸುಣ್ಣ ಹೊಡೆದ ಹಂಗೆ, ತಲೆಗೆ ಒಂದು ಟೊಪ್ಪಿ, ಮಂಡಿ ತಂಕ ಚಡ್ಡಿ, ಒಂದು ಕೈಯಲ್ಲಿ ಒಂದು ಸಣ್ಣ ಕೋಲು, ಇನ್ನೊಂದು ಕೈಯಲ್ಲಿ ತಂಬಾಕು ಊದೋ ಒಂದು ನಾಳ, ಅದರ ಒಂದು ಮೂತಿ ಒಳಗೆ ತಂಬಾಕು ತುಂಬಿಸಿ ಇನ್ನೊಂದು ಹೊಳ್ಳೆಯಿಂದ ಹೊಗೆ ಎಳಿಯೋದು, ಅವನ ಹತ್ತಿರ ಒಂದು ಕೋವಿ ಇತ್ತು, ಸುಮಾರು ಎರಡು ಅಡಿ ಉದ್ದ ಅದರ ಕುಂಡಿಗೆ ಮದ್ದು ತುಂಬಿಸಿ ಕುದುರೆ ಎಳೆದ್ರೆ ಕಿವಿ ಕಿತ್ತು ಹೋಗೋ ಅಷ್ಟು ಸದ್ದು, ಆ ಸದ್ದಿಗೇನೇ ಎದೆ ಹೊಡ್ಕೊಂಡು ಹಕ್ಕಿಗಳು, ಪ್ರಾಣಿಗಳು, ಸತ್ತುಹೋಗ್ತಿದ್ದವೇನೋ.

ಆ ಬಿಳಿಯನ ಜೊತೆಗೆ, ಪೇಟೆಯಿಂದ ಬಂದ ಕರಿಯ, ಅವ್ನು ಭಾಷೆ ಇವ್ನಿಗೆ ಮಾತ್ರ ಅರ್ಥ ಆಗೋದು. ಅವ್ನ ಜೊತೆಗೆ ಐವತ್ತು ಜನರ ಒಂದು ತುಕಡಿ ಎಲ್ಲರ ಹತ್ತಿರಾನೂ ಒಂದೊಂದು ಕೋವಿ,
ಇಬ್ರು ಬಂದು ಊರೋರನೆಲ್ಲ ಕರೆದು ‘ಎನ್ರಪ್ಪ ಇನ್ಮೇಲೆ ಈ ಊರು ನಮ್ಮ ಸಾಹೇಬರ ಸುಪರ್ದಿಲಿ ಇರುತ್ತೆ, ಇವರು ಕಂಪನಿ ಸಾಹೇಬರು. ಇವ್ರು ಹೇಳಿದ ಹಾಗೆ ಎಲ್ಲ ಕೇಳ್ಬೇಕು, ಯಾರೊಬ್ಬರೂ ಚಕಾರ ಎತ್ತಿದ್ರೆ, ಕಂಪನಿ ಕೋವಿ ಹಾರ್ಸುತ್ತೆ, ಹೆಣಗಳು ಉರುಳುತ್ತೆ, ಅದಕ್ಕೆ ಇವರು ಹೇಳಿದ ಹಾಗೆ ಕೇಳಿ, ಇವರು ಕೇಳಿದಷ್ಟು ಸುಂಕ ಕೊಟ್ಟು ನೆಮ್ಮದಿಯಾಗಿರಿ, ಇವರು ನಿಮ್ಮ ಎಲ್ಲ ಬೇಕು ಬೇಡಗಳನ್ನ ನೋಡ್ಕೋತಾರೆ ಅಂದ, ನಮ್ಮೂರಿನ ಹುಳಿಯಾಳು ‘ಯಾವನೋ ಅವ್ನು ನಮ್ಮೂರಿಗೆ ಬಂದು ನಮ್ಮನೆ ಆಳೋನು, ಇದು ನಮ್ಮೂರು ನಮ್ಮವ್ವ ಹುಲಿಯಮ್ಮನ ಊರು, ನಮ್ಮ ಬೇಕು ಬೇಡ ಅವ್ಳು ನೋಡ್ಕೋತಾಳೆ, ಸುಮ್ನೆ ಇಲ್ಲಿಂದ ಜಾಗ ಖಾಲಿ ಮಾಡಿ ಇಲ್ಲ ಅಂದ್ರೆ, ನಿಮ್ ನಿಮ್ ಕೋವಿನ ನಿಮ್ಮ ಬುಡಕ್ಕೆ ಇಡ್ತೀನಿ’ ಅಂತ ಒಂದು ಕೂಗು ಹಾಕಿದ. ಕಂಪನಿ ಸಾಹೇಬ ಏನೋ ಹೇಳ್ದ, ಇದ್ದಕಿದ್ದ ಹಾಗೆ ಡಮ್ ಅಂತ ಶಬ್ದ, ತುಕಡಿಯಿಂದ ಒಬ್ಬನ ಕೋವಿ ಹೊಗೆ ಆಡ್ತಾಇತ್ತು, ದೂರದಲ್ಲಿ ಮೇಯ್ತಿದ್ದ ಮೇಕೆ ನೆಲಕ್ಕೆ ಉರುಳಿತ್ತು, ‘ಆ ಮದ್ದು ಗುಂಡು ನಿನ್ನ ಎದೆಗೆ ಹೊಡಿಬೊದಾಗಿತ್ತು. ಆದರೆ, ನಮ್ಮ ಸಾಹೇಬ್ರು ಕರುಣಾಮಯಿಗಳು, ಅವ್ರು ಹೂ ಅಂದ್ರೆ ನಿಮ್ಮ ಬಾಳು ಬಂಗಾರವಾಗುತ್ತೆ, ನಿಮಗೆಲ್ಲ ಅವರ ಭಾಷೆ ಹೇಳ್ಕೊಡ್ತಾರೆ, ಪ್ರಾಣಿಗಳ ಹಾಗೆ ಬದುಕ್‌ತಿರೋ ನಿಮಗೆ ಅಕ್ಷರ ಕಲಿಸ್ತಾರೆ, ಮತ್ತೆ ಆ ಕೋವಿಗೆ ಮದ್ದು ತುಂಬಿಸಿ ಗುರಿ ಇಟ್ಟು ಬೇಟೆ ಆಡೋದು ಹೇಳ್ಕೊಡ್ತಾರೆ, ನಿಮ್ಮನ್ನೆಲ್ಲ ತಮ್ಮ ಮಕ್ಳು ಅಂತ ನೋಡ್ಕೋತಾರೆ. ಮತ್ತೆ ನಾಳೆ ಬರ್ತಾರೆ. ಬುದ್ದಿ ಇದ್ರೆ ಬದುಕ್ತಿರಾ ಇಲ್ಲ ಅಂದ್ರೆ ಬೀದಿ ಹೆಣವಾಗ್ತಿರ’ ಅಂತ ಹೇಳಿ ಹೊರಟೋದ್ರು.

ತುಕಡಿ ಹೋದಮೇಲೆ ಆ ಕರಿಯ ಮತ್ತೆ ಬಂದ 'ನೋಡಿ ಸಾಹೇಬ್ರು ಇಲ್ಲೇ ಏನು ಇರಲ್ಲ, ಸುಮ್ನೆ ಒಂದೆರಡು ತಿಂಗಳು ಇರ್ತಾರೆ, ಬೇಟೆ ಗೀಟೇ ಆಡ್ತಾರೆ, ಆಮೇಲೆ ಹೊರಟು ಹೋಗ್ತಾರೆ, ಅವರನ್ನ ಎದುರು ಹಾಕಿಕೊಂಡು ಯಾಕೆ ಸುಮ್ನೆ, ಹಿಂದಿನ ಹಳ್ಳಿಲಿ ಅಷ್ಟು ಜನರನ್ನ ಕೊಂದು ಹಾಕ್ಬಿಟ್ರು, ಹೆಂಗಸು ಮಕ್ಳು ಅಂತ ಯಾರನ್ನು ನೋಡ್ಲಿಲ್ಲ, ಕೋವಿಗೆ ಕರುಣೆ ಎಲ್ಲಿ ಬರಬೇಕು, ರಕ್ತ ಚಿಮ್ಮಿಸೋದು ಅಷ್ಟೇ ಅದಕ್ಕೆ ಗೊತ್ತಿರೋದು' ಅಂದ ಅದಕ್ಕೆ ಹಿರಿಯ ನಕ್ಕು ಹೋಗೋಗು 'ಕಟುಕ ಮಾಡಿದ ಪಾಪ ಅವ್ನ ಕೈಲಿರೋ ಕತ್ತಿಗೋ ಅಥವಾ ಕತ್ತಿ ಹಿಡಿದ ಕೈಗೊ' ಅಂದ. ಅಲ್ಲಿಂದ ಮೆಲ್ಲಗೆ ಕಾಲುಕಿತ್ತ ಕರಿಯ.

ನಮ್ಮೂರಿನ ಹಿರೀ ಹುಲಿಯಾಳು ಅವರು ಹೋದಮೇಲೆ ಎಲ್ಲರನ್ನು ಕರೆದು ನೋಡ್ರಪ್ಪಾ ಇದು ನಾವು ಕಂಡು ಕೇಳ್ದೆ ಇರೋ ಸಮಸ್ಯೆ, ಅವರ ಮೈ ಮೇಲೆ ಬಿದ್ದು ರಕ್ತ ಕುಡೀಬೇಕು ಅಂತ ಅನ್ನಿಸ್ತಾ ಇದೆ. ಆದ್ರೆ, ಅವ್ರ ಕೈಯಲ್ಲಿರೋ ಕೋವಿ, ಅದೇನು ಸದ್ದು, ಒಂದೇ ಏಟಿಗೆ ಅಷ್ಟು ದೂರ ಇದ್ದ ಕುರಿನ ಹೊಡೆದು ಉರಿಳಿಸಿ ಬಿಡ್ತು, ಅವರ ಜೊತೆ ಹೊರಾಡೋಕೆ ನಮ್ಮ ಸಿದ್ಧತೆ ಏನು ಸಾಲಲ್ಲ, ಈಗ ದುಡುಕಿ ಎಲ್ಲರ ಪ್ರಾಣ ಕೊಡೋಕಿಂತ ಸರಿಯಾದ ಸಮಯ ನೋಡಿ ಇವರನ್ನ ಹೊಡಿಬೇಕು’ ಏನಂತೀರಾ? ಕಿರೀ ಹುಲಿಯಾಳುಗಳು ಒಲ್ಲದ ಮನಸ್ಸಿಂದ ಒಪ್ಪಿಕೊಂಡ್ರು.

ಮಾರನೇ ದಿನ ಮತ್ತೆ ಬಿಳಿಯ, ಕರಿಯ, ಕೋವಿ ಹಿಡಿದ ತುಕಡಿ ಮತ್ತೆ ಬಂದಾಗ ‘ಸ್ವಾಮಿ ಇದು ನಮ್ಮೂರು, ಆದ್ರೂ ನೀವು ಇಲ್ಲಿ ಇರಿ ನಮ್ಮ ಜೊತೆ ಉಂಡು, ನಮ ಜೀವನ ಮಾಡಿ, ಆದ್ರೆ ನಮ್ಮ ನಮ್ಮ ಹೆಂಗಸರನ್ನ ಮುಟ್ಟಬಾರದು, ನಮ್ಮ ದಿವ್ರನ್ನ ತುಳಿಬಾರ್ದು, ನಮ್ಮ ಕಾಡಿನ ಹುಲಿಗಳನ್ನ ಹೊಡೀಬಾರ್ದು, ಇದಕ್ಕೆ ಒಪ್ಪಿಗೆ ಇದ್ರೆ ನೀವು ಇಲ್ಲಿ ಇರಿ, ನಮಗೇನು ತೊಂದ್ರೆ ಇಲ್ಲ' ಅಂದ್ರು ಹಿರಿಯ.

ಸಾಹೇಬ ಅವ್ನ ಭಾಷೇಲಿ ‘ಎವರಿಬಡಿ ಹ್ಯಾಸ್ ಟು ಬೋ ಬಿಫೋರ್ ಆ ಗನ್’ ಅಂದ, ಅವ್ನು ಏನ್ ಹೇಳಿದ್ರು ಹಲ್ಕಿರಿತಿದ್ದ ಕರಿಯ.

ಸಾಹೇಬ, ಊರಿನ ಗಂಡು ಮಕ್ಕಳಿಗೆಲ್ಲ ದಿನ ಮಾಂಸದ ಊಟ, ಮತ್ತೇರಿಸೋ ಮದ್ಯ, ತಂಬಾಕು ಊದೋ ಪೈಪುಗಳನ್ನ ಕೊಟ್ಟಿದ್ದ. ಎರಡು ವಾರಕ್ಕೆ ಎಲ್ಲರೂ ಅವನನ್ನ ದೇವ್ರು ಅಂತ ಕರಿಯೋರು. ಅವ್ನು ಹೇಳಿದ ಹಾಗೆ ಕೇಳೋರು. ಒಂದು ದಿನ ಆ ಕರಿಯ ಎಲ್ಲಿಂದನೋ ಒಂದು ಹುಡಗೀನ ಕರ್ಕೊಂಡು ಬಂದ, ಅವಳ ಹೆಸರು ಕಮಲಿ, ಅವಳಿಗೂ ಸಾಹೇಬನಿಗೂ ಕೂಡಿಕೆ ಮಾಡಿಸಿದ, ಅವಳು ಬಿಳಿಯನ ಜೊತೇನೆ ಇದ್ದು, ಅವ್ನ ಊಟ, ತಿಂಡಿ, ಅವ್ನ ಸ್ನಾನಪಾನ ನೋಡ್ಕೋತ ಇದ್ಲು. 

ನಮ್ಮ ಹಿರಿ ಹುಲಿಯಾಳು ಇದನ್ನ ನೋಡಿ ತಲೆ ತಲೆ ಚಚ್ಚಿಕೊಳ್ಳೋನು, ಅವತ್ತೇ ಇವರ ಮೈಮೇಲೆ ಬಿದ್ದು ಒಂದಿಬ್ಬರೇನಾದರೂ ಮುಗಿಸಿ ಬಿಡಬೇಕಿತ್ತು, ಏನು ಕೋವಿಲಿ ಸುಟ್ಟಿರೋರು, ಇದನೆಲ್ಲ ನೋಡೋ ಬದಲು ಸಾಯೋದೆ ಮೇಲು ಅಂತ ಬೇಸರ ಮಾಡ್ಕೊಳೋನು. 

ಹೀಗೆ ಕಾಲ ಕಳೀತಾ ಇತ್ತು, ಈ ಬಿಳಿಯ ಒಂದು ದಿನ ಕಮಲಿಯ ಬಳಿ ಬಂದು ಮೆಲ್ಲಗೆ ಕಿವೀಲಿ ‘ನೋಡು ನಾಳೆ ನಾನು ಕಾಡಿಗೆ ಹೋಗ್ತಾ ಇದ್ದೀನಿ, ಈ ಸರ್ತಿ ಹುಲಿ ಹೊಡ್ದೆ ಬರೋದು, ಯಾರಿಗೂ ಹೇಳ್ಬೇಡ ಅಂದ, ಅದಕ್ಕೆ ಅವಳು ‘ಅಯ್ಯೋ ನಿಮ್ಮ ದಮ್ಮಯ್ಯ ಅಂತೀನಿ ಹುಲಿ ವಿಷಯಕ್ಕೆ ಹೋಗ್ಬೇಡಿ, ಹುಲಿ ಹೊಡ್ಯಕ್ಕೆ ಹೋದೋರು ಹಿಂದಿರುಗಿ ಬಂದದ್ದು ನೋಡೇ ಇಲ್ಲ, ಅದು ಬೇರೆ, ಇದು ಹುಲಿಕಲ್ಲು ಅದ್ರ ಪಕ್ಕ ಇರೋ ಗುಡಿ ಹುಲಿಯಮ್ಮನದು, ಹುಲಿ ಹೆಣ್ಣಾಗಿ ಬಂದು ಇಲ್ಲಿ ಜನಕ್ಕೆ ತಾಯಿಯಾಗಿದ್ದಾಳೆ, ದಯವಿಟ್ಟು ಬೇಡ’ ಅಂತ ಎಷ್ಟು ಕೇಳಿಕೊಂಡರು, ಬಿಳಿಯ ಅವಳು ಏಳೋ ಮುಂಚೆ ಬೆಳಿಗ್ಗೆನೇ ಕಾಡಿಗೆ ಕೋವಿ ಹಿಡ್ಕೊಂಡು ಹೊರಟ. 

ಮಾಗಿಯ ಬಿಸಿಲಿಗೆ ಮರಗಳು ಹಸಿರಿನ ಎಲೆಗಳನ್ನೆಲ್ಲ ಕಳಚಿ ಬೋಳು ಬೋಳಾಗಿ ಕಾಣಿಸುತ್ತಿತ್ತು. ಹುಲಿ ಹೊಡೆಯೋಕೆ ಇದಕ್ಕಿಂತ ಒಳ್ಳೆ ಕಾಲ ಇನ್ನೊಂದಿಲ್ಲ, ಕಾಡಿನ ಮಧ್ಯದಲ್ಲಿರುವ ಕೊಳದಲ್ಲಿ ನೀರು ಇನ್ನು ತುಂಬಿತ್ತು. ಹುಲಿ ಬೇಟೆ ಅಂದ್ರೆ ಆಟ ಅಲ್ಲ, ದಿನಗಟ್ಟಲೇ ಕಾಯಬೇಕು, ಹುಲಿ ನೀರು ಕುಡಿಯೋಕೆ ಬಂದಾಗ, ಗುರಿ ಇಟ್ಟು ಹೊಡಿಬೇಕು, ಒಂದು ಸರ್ತಿ ತಪ್ಪಿಬಿಟ್ರೆ, ಮತ್ತೆ ಹುಲಿ ಆ ಕಡೆ ಬರೋದಿಲ್ಲ, ಎರಡು ದಿನ ಕಾದಮೇಲೆ, ಒಂದು ಹೆಣ್ಣು ಹುಲಿ ಜೊತೆಗೆ ಮೂರೂ ಮರಿಗಳ ಜೊತೆ ನೀರಿನ ಬಳಿ ಬಂತು, ಮೆಲ್ಲಗೆ ತನ್ನ ಕತ್ತು ಬಗ್ಗಿಸಿ, ಕುಕ್ಕರು ಗಾಲಿನಲ್ಲಿ ಕೂತು, ನೀರು ಕುಡಿಯಲಾರಂಬಿಸಿತು. 

ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಬಿಳಿ ಬೇಟೆಗಾರ ಮತ್ತೆ ಅವನ ಸಂಗಡಿಗರು, ಹುಲಿ ಮತ್ತು ಮಕ್ಕಳಿಗೆ ಗುರಿ ಇಟ್ಟರು, ಇನ್ನೇನು ಕುದುರೆ ಎಳೆದು ಗುಂಡು ಹಾರಿಸಬೇಕು ಆಗ ಬಿಳಿಯ ‘ಯಾರು ಮರಿಗಳಿಗೆ ಗುಂಡು ಹೊಡೀಬಾರ್ದು, ನನಗೆ ಅವು ಜೀವಂತ ಬೇಕು, ನಮ್ಮ ಕಲ್ಕತ್ತಾ ಸಾಹೇಬರಿಗೆ ಇದನ್ನ ಉಡುಗೊರೆಯಾಗಿ ಕೊಡ್ಬೇಕು’ ಎಂದ. 

ಹುಲಿಗೆ ಮನುಷ್ಯರ ವಾಸನೆ ಬಡಿದು, ಒಂದು ಸರ್ತಿ ಗರ್ಜಿಸಿತು, ಆ ಗರ್ಜನೆಗೆ ಬೇಟೇಗೆ ಬಂದಿದ್ದೋರ ಎದೆಯನ್ನ ನಡುಗಿಸಿ ಬಿಡ್ತು, ಕೈ ಕಾಲುಗಳಲ್ಲಿ ಸ್ವಾಧೀನವೇ ಇಲ್ಲದ ಹಾಗೆ ಗರ ಬಡಿದವರ ತರಹ ತಣ್ಣಗಾಗಿ ಹೋದ್ರು, ಅಷ್ಟರಲ್ಲಿ ಧೈರ್ಯ ತೊಗೊಂಡು ಒಬ್ಬ ಗುಂಡು ಹಾರಿಸಿದ, ಆ ಗುಂಡು ಹುಲಿಯ ಕಿವಿಗೆ ತಾಕಿತು, ಹುಲಿ ಹೆದರಿ ಓಡಿಹೋಯ್ತು, ಬಿಳಿಯ ಸ್ವಲ್ಪ ಹೊತ್ತು ಸುಮ್ಮನಿದ್ದು ಅವನ ಜನಕ್ಕೆ ಆ ಹುಲಿ ಮರಿಗಳನ್ನ ಎತ್ತಿಕೊಂಡು ಬರೋಕೆ ಹೇಳಿದ. ಒಂದು ದೊಡ್ಡ ಗೋಣಿ ಚೀಲದಲ್ಲಿ ಆ ಮೂರು ಮಕ್ಕಳನ್ನ ತುಂಬಿಕೊಂಡು ಊರಿನ ಕಡೆ ಹೋದರು, ಸಂಜೆ ಊರು ತಲುಪಿದ ಮೇಲೆ, ಮರಿಗಳನೆಲ್ಲ ಮನೆ ಹಿತ್ತಲಲ್ಲಿ ಇರುವ ಕಂಬಕ್ಕೆ ಕಟ್ಟಿಹಾಕಿದರು, ಕೈ ಕಾಲು ತೊಳೆದು ಮನೆಯ ಹಜಾರಕ್ಕೆ ಬರುವಷ್ಟರಲ್ಲಿ ಕಮಲಿ ಚೆಂದದ ಬಟ್ಟೆ ಹಾಕಿಕೊಂಡು, ಸಿಂಗಾರ ಮಾಡ್ಕೊಂಡು ಕೂತಿದ್ಲು, ಅವಳನ್ನ ನೋಡಿ ಹತ್ತಿರಕ್ಕೆ ಸೆಳೆದು ನೋಡಿದ್ಯಾ ಹುಲಿ ಹೊಡೆದೋರು ವಾಪಸ್ಸು ಬರಲ್ಲ ಅಂದಿದ್ದೆ, ಹುಲಿ ಹೊಡೆದು ಅದರ ಮರಿಗಳನ್ನ ತಂದಿದ್ದೀನಿ ಅಂದ, ಅದಕ್ಕವಳು ಅವನನ್ನೇ ತೀಕ್ಷ್ಣವಾಗಿ ನೋಡುತ್ತಾ 'ಹುಲಿ ಹೊಡೆದ ಮೇಲೆ ಹುಲಿನಾ ಹೊತ್ತು ತರಬೇಕಿತ್ತು ಮರಿಗಳನ್ನ ಯಾಕೆ ತಂದ್ರಿ’ ಎಂದು ಕೇಳಿದಳು. ‘ಹುಲಿಗೆ ಗುಂಡು ತಗುಲಿ ಓಡಿ ಹೋಯ್ತು ಇಷ್ಟು ಹೊತ್ತಿಗೆ ಅದು ಎಲ್ಲೋ ಸತ್ತು ಬಿದ್ದಿರುತ್ತೆ’ ಅಂದ. ‘ಈ ಮರಿಗಳನ್ನ ನಮ್ಮ ಜನರಲ್ ಸಾಹೇಬರಿಗೆ ಕೊಡ್ತೀನಿ, ಅವರು ಇವುಗಳನ್ನ ಇಂಗ್ಲೆಂಡಿಗೆ ತೊಗೊಂಡು ಹೋಗ್ತಾರೆ’ ಅಂದ.

‘ತಾಯಿ ಮಕ್ಕಳನ್ನ ಬೇರೆ ಮಾಡೋದು ತಪ್ಪು, ಇವುಗಳನ್ನ ಮತ್ತೆ ಕಾಡಿಗೆ ಬಿಟ್ಟು ಬರ್ತೀನಿ, ಹುಲಿ ಸತ್ತಿರಲಿಕ್ಕೆ ಇಲ್ಲ’ ಅಂದಳು. 
‘ಹಹಹ... ಎಂದು ನಗುತ್ತ ಹುಲಿ ಸತ್ತಿರಲಿಕ್ಕೆ ಇಲ್ಲ, ನಿನಗೆ ಹೇಗೆ ಗೊತ್ತು ಹೋಗ್ ಹೋಗು ಒಳಗಡೆ ಹೋಗಿ ಒಂದು ಚಹಾ ಮಾಡು’ ಎಂದ.
‘ಬೇಡ ನನ್ನ ಮಾತು ಕೇಳಿ ಈ ಹುಲಿ ಸಹವಾಸ ನಮಗೆ ಬೇಡ ಬಿಟ್ಟು ಬಿಡೋಣ’ ಅಂದಳು. 
‘ಕಮಲಿ ಹುಲಿ ವಿಚಾರ ಬಿಡು, ಹೇಳಿದ ಕೆಲಸ ಮಾಡು ಹೋಗು’ ಅಂದ.

‘ಏಯ್ ಮುಠಾಳ ನಿನಗೆ ಎಷ್ಟು ಸರ್ತಿ ಹೇಳೋದು, ರೋಷದಿಂದ ಅತ್ತಿಂದಿತ್ತ ಇತ್ತಿಂದತ್ತ ನಡೆಯಲಾರಂಭಿಸಿದಳು, ಹುಲಿಯಮ್ಮ ತನ್ನ ಮಕಳನ್ನ ಕಾಪಾಡಿಕೊಳ್ಳೋಕೆ ಏನ್ ಬೇಕಾದ್ರು ಮಾಡ್ತಾಳೆ, ಈ ನರಸತ್ತ ಮಕ್ಕಳ ಹಾಗಲ್ಲ ಅವಳು, ಅರ್ಭುದರಾಯ ಹಾಕಿದ ನೀತಿ, ಮಾಡಿದ ಕಾನೂನು ಕಾಪಾಡೋಕೆ ದುರ್ಗೆಯನ್ನೇ ಒಲಿಸಿಕೊಂಡೋಳು ಅವಳು, ನಿನಗೆ ಪ್ರೀತಿಯಿಂದ ಹೇಳ್ದೆ ಕೇಳಲಿಲ್ಲ, ಎಲ್ಲಿ ಕೇಳ್ತಿರಾ ಕೈಯಲ್ಲಿ ಕೋವಿ ಇದೆ ಅನ್ನೋ ಧಿಮಾಕು, ಹಿಂದೇನೆ ಹೇಳ್ದೆ ನಿಂಗೆ ಇಲ್ಲಿ ಕಾನೂನು ಮುರಿದ್ರೆ ಕಾಲ ಮೀರಿದಹಂಗೆ, ಅರ್ಭುದರಾಯನಿಗೆ ನರಬಲಿ ಸಿಕ್ಕಿ ತುಂಬಾ ದಿನ ಆಗಿತ್ತು, ಇವತ್ತು ನಿನ್ನ ಬಲಿ, ನಿನ್ನ ರಕ್ತಾಭಿಷೇಕ ಅವನಿಗೆ, ಕಮಲಿಯ ಮುಖ ಸ್ವಲ್ಪ ಸ್ವಲ್ಪನೇ ಹುಲಿಯ ರೂಪ ತೆಗೆದುಕೊಳ್ಳುತಿತ್ತು, ಬಿಳಿಯ ಕೂಗಿಕೊಳ್ಳಬೇಕು ಅಂತ ಅನ್ನಿಸಿದರೂ ಕೊರಳಿನಿಂದ ಸಣ್ಣ ಸ್ವರ ಕೂಡ ಬರಲಿಲ್ಲ, ಪಕ್ಕದಲ್ಲೇ ಇದ್ದ ಕೋವಿ ತೆಗೆದುಕೊಳ್ಳಬೇಕು ಅನ್ನಿಸಿದರೂ ಕೈ ಒಂದು ಅಂಗುಲನು ಅಲುಗಾಡಲಿಲ್ಲ, ಓಡಿ ಹೋಗೋಣ ಅಂತ ಅನ್ನಿಸಿದರೂ ಕಾಲಿನಲ್ಲಿ ಸ್ವಾಧೀನವಿಲ್ಲ, ಕೂತಿದ್ದ ಹಾಗೆ ಕಲ್ಲಿನ ಹಾಗೆ ತಣ್ಣಗೆ ಕೂತಿದ್ದ, ಅವಳ ದೇಹ ಪೂರ್ತಿ ಹುಲಿಯಾಯಿತು, ಹುಲಿಯಮ್ಮ ತನ್ನ ನಿಜ ರೂಪ ತಾಳಿದಳು, ಅವನ ಮೈ ಮೇಲೆ ಹಾರಿ ರಕ್ತ ಹೀರಿ ಅವನ ದೇಹ ಎಳೆದುಕೊಂಡು ಬಂದ್ಳು, ಹುಲಿ ಕಲ್ಲಿನ ಮುಂದೆ ದೇಹ ಎಸೆದಳು, ಮತ್ತೆ ಹೆಣ್ಣಿನ ರೂಪ ಪಡ್ಕೊಂಡಳು, ಅವಳು ಹೋಗುತಿದ್ದನ್ನು ನೋಡುತಿದ್ದ ಹುಲಿಯಾಳುಗಳು ಅಡ್ಡ ಬಿದ್ದು ಕೆನ್ನೆ ತಟ್ಕೊಂಡು ಕ್ಷಮೆ ಕೇಳಿದರು.

'ಥೂ, ಹುಲಿ ಮಕ್ಕಳ ನೀವು, ಹುಲಿ ಕೊಟ್ಟ ಹಾಲಿಗಿಂತ ಅವ್ನು ಕೊಟ್ಟ ಕಳ್ಳು ರುಚಿಯಾಯ್ತು, ನಾಡಿನ ನಾಯಿಗಳು ಕಾಡೊಳಗೆ ಬರದೇ ಇರೋ ಹಾಗೆ ಕಾಯೋದು ನಿಮ್ಮ ಹೊಣೆ, ಹೆಂಡ ಕುಡ್ದು ಹೊಣೆ ಮರೆತ್ರೆ ನಾಡಿನ ಮಕ್ಕಳನ್ನ ಹೆರಲಿಲ್ಲ, ಹಾಲು ಇಡಲಿಲ್ಲ ಅನ್ಕೋತೀನಿ, ಇದೆ ಕೊನೆ. ಇನ್ನು ಯಾರಾದ್ರೂ ಕಾಡಿನ ತಂಟೆಗೆ ಬಂದ್ರೆ ಮೊದಲು ನಿಮ್ಮ ರಕ್ತ ಹೀರ್ತಿನಿ’ ಅಂತ ಗುಡುಗಿ ಮನೆಯೊಳಗೆ ಹೋಗಿ ಕಟ್ಟು ಬಿಚ್ಚಿ ಮರಿಗಳನ್ನ ಎತ್ತಿಕೊಂಡು ಕಾಡಿನ ಕಡೆಗೆ ಹೊರಟು ಹೋದಳು. 

ಹುಲಿಯಮ್ಮನ ಗುಡಿ ಗಂಟೆ ಹೊಡೆಯುತ್ತಿತ್ತು, ಕಥೆ ಮುಗಿದಿತ್ತು. ಕತ್ತಲು ಕವಿದಿತ್ತು. ನೆರೆದಿದ್ದ ಜನ ಗುಡಿಗೆ ಹೋಗಿ ಭಕ್ತಿಯಿಂದ ನಮಸ್ಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.