ಶನಿವಾರ, ಮಾರ್ಚ್ 6, 2021
18 °C

ಎಂದಿಗೂ ಬೇಡ ದುಷ್ಟರ ಸಹವಾಸ

ಭಾನುಶ್ರೀ Updated:

ಅಕ್ಷರ ಗಾತ್ರ : | |

Prajavani

ಅಲ್ಲೊಂದು ಆಲದ ಮರ; ಆ ಮರದ ಗಿಣಿಗಳು ವಾಸವಾಗಿದ್ದವು. ಅದೇ ಮರದ ಪೊಟರೆಯಲ್ಲಿ ವಯಸ್ಸಾದ ಒಂದು ಹದ್ದು ಕೂಡ ವಾಸವಾಗಿತ್ತು. ಅದಕ್ಕೆ ಕಣ್ಣುಗಳು ಕಾಣುತ್ತಿರಲಿಲ್ಲ. ಗಿಣಿಗಳಿಗೆ ಆ ಹದ್ದುವಿನ ಮೇಲೆ ಕರುಣೆ. ಅವು ತಮ್ಮ ಆಹಾರದಲ್ಲಿ ಅದಕ್ಕೂ ಒಂದು ಪಾಲನ್ನು ನೀಡುತ್ತಿದ್ದವು. ಹೀಗೆ ಅದರ ಬದುಕು ತೊಂದರೆಯಿಲ್ಲದೆ ನಡೆಯುತ್ತಿತ್ತು.

ಒಂದು ದಿನ ಗಿಣಿಗಳು ಮರದಲ್ಲಿ ಇಲ್ಲದಿದ್ದಾಗ ಬೆಕ್ಕೊಂದು ಅಲ್ಲಿಗೆ ಬಂದಿತು. ಹದ್ದು ‘ಯಾರು ನೀನು’ ಎಂದು ಪ್ರಶ್ನಿಸಿತು. ಬೆಕ್ಕು ಉತ್ತರಿಸಿತು. ಆಗ ಹದ್ದು ಹೇಳಿತು: ‘ನೀನು ಇಲ್ಲಿರುವುದು ಗಿಣಿಗಳಿಗೆ ಒಳ್ಳೆಯದಲ್ಲ. ನೀನು ಬಂದಿರುವುದೇ ಅವುಗಳ ಮೊಟ್ಟೆಯನ್ನು ಕದ್ದು ತಿನ್ನಲು. ಈ ಕೂಡಲೇ ಇಲ್ಲಿಂದ ಹೊರಡು ಎಂದಿತು. ಆದರೆ ಬೆಕ್ಕು ಹೇಳಿತು: ‘ಹದ್ದಣ್ಣ! ಈಗ ನಾನು ಸನ್ಯಾಸವನ್ನು ತೆಗೆದುಕೊಂಡಿರುವೆ. ಆದುದರಿಂದ ನಾನು ಯಾರಿಗೂ ತೊಂದರೆಯನ್ನು ಮಾಡುವುದಿಲ್ಲ. ನನ್ನನ್ನು ನಂಬು’.

ಹದ್ದು ಆ ಬೆಕ್ಕಿನ ಮಾತನ್ನು ನಂಬಿತು. ಅಲ್ಲೇ ಮರದ ಸಮೀಪದಲ್ಲಿಯೇ ಅದು ಓಡಾಡಿಕೊಂಡಿರುತ್ತಿತ್ತು. ಯಾವಾಗಲೂ ‘ಶಾಂತಿ’, ‘ಸೌಹಾರ್ದ’ ಎಂಬ ದೊಡ್ಡ ದೊಡ್ಡ ಮಾತುಗಳನ್ನೇ ಆಡುತ್ತಿತ್ತು. ಕೆಲವು ದಿನಗಳಾದ ಬಳಿಕ ಬೆಕ್ಕನ್ನು ಹದ್ದು ಪೂರ್ತಿಯಾಗೇ ನಂಬಿತು. ಬೆಕ್ಕಿ ಅಲ್ಲೇ ಸುಳಿದಾಡುತ್ತಿರುವ ಸುಳಿವನ್ನೂ ಅದು ಗಿಳಿಗಳಿಗೆ ನೀಡಲಿಲ್ಲ.

ಹದ್ದು ತನ್ನನ್ನು ಪೂರ್ಣವಾಗಿ ನಂಬಿದೆ – ಎಂದು ಬೆಕ್ಕಿಗೂ ಮನವರಿಕೆಯಾಯಿತು. ಈಗ ಅದು ತನ್ನ ನಿಜವಾದ ಬುದ್ಧಿಗೆ ಮರಳಿತು. ಗಿಣಿಗಳು ಮರದಲ್ಲಿ ಇಲ್ಲದ ಸಮಯವನ್ನು ಹೊಂಚುಹಾಕಿ ಎದುರು ನೋಡುತ್ತಿತ್ತು. ಅವು ಹೊರಗೆ ಹೋದ ಕೂಡಲೇ ಅದು ತನ್ನ ಕೈ ಚಳಕವನ್ನು ತೋರಿಸುತ್ತಿತ್ತು. ಗಿಳಿಗ ಮೊಟ್ಟೆಯನ್ನು ದಿನವೂ ಒಂದೊಂದಾಗಿ ಕಬಳಿಸುತ್ತಬರುತ್ತಿತ್ತು.

ಆರಂಭದಲ್ಲಿ ಗಿಳಿಗಳಿಗೆ ಬೆಕ್ಕಿನ ಈ ಕರಾಮತ್ತು ಗಮನಕ್ಕೆ ಬರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಅವುಗಳಿಗೆ ಗೊತ್ತಾಯಿತು. ತಮ್ಮ ಮೊಟ್ಟೆಯನ್ನು ಈ ಮುದಿ ಹದ್ದು ತಿನ್ನುತ್ತಿದೆ – ಎಂದೇ ಅವು ಭಾವಿಸಿದವು. ಒಂದು ದಿನ ಅವೆಲ್ಲವೂ ಸೇರಿ, ಆ ಹದ್ದನ್ನು ಕುಕ್ಕಿ ಕುಕ್ಕಿ ಕೊಂದೇಬಿಟ್ಟವು!.

ಕಪಟ ಬೆಕ್ಕಿನ ಕಾರಣದಿಂದಾಗಿ ಹದ್ದು ತನ್ನ ಜೀವವನ್ನೇ ಕಳೆದುಕೊಂಡಿತು.

***

ದುಷ್ಟರ ಸಹವಾಸ ಎಂದಿಗೂ ಅಪಾಯಕಾರಿ – ಎನ್ನುವುದನ್ನು ಮೇಲಣ ಕಥೆ ಹೇಳುತ್ತಿದೆ.

ನಾವು ಹಲವೊಮ್ಮೆ ಧೂರ್ತರ ಮೋಸದ ಮಾತುಗಳಿಗೆ ಮರುಳಾಗಿಬಿಡುತ್ತೇವೆ. ಅವರ ವಂಚನೆಯ ಸುಳಿಗಳನ್ನು ಅರ್ಥಮಾಡಿಕೊಳ್ಳಲೂ ವಿಫಲರಾಗುತ್ತೇವೆ. ಆ ಧೂರ್ತರು ನಮ್ಮನ್ನು ಬಳಸಿಕೊಂಡು, ನಮಗೇ ಅರಿವಿಗೆ ಬಾರದಂತೆ, ಅಕ್ರಮಗಳನ್ನು ಮಾಡುತ್ತಿರುತ್ತಾರೆ. ವಂಚನೆಯ ಈ ಸುಳಿಯಿಂದ ಬಿಡಿಸಿಕೊಳ್ಳುವುದು ಹೇಗೆ?

ನಮ್ಮ ಎಚ್ಚರಿಕೆಯೇ ನಮಗೆ ಶ್ರೀರಕ್ಷೆ. ಯಾರಾದರೂ ಅವರ ಸ್ವಭಾವಕ್ಕೆ ವಿರುದ್ಧವಾದ ಮಾತುಗಳನ್ನು ಆಡುತ್ತಿದ್ದಾರೆ ಎಂದಾದಲ್ಲಿ ನಾವು ಅವನ್ನು ತುಂಬ ಎಚ್ಚರದಿಂದ ಸ್ವೀಕರಿಸಬೇಕು. ಅವರ ಮಾತುಗಳ ಹಿಂದಿರುವ ಮರ್ಮವನ್ನು ತಿಳಿದುಕೊಳ್ಳುವ ಜಾಣ್ಮೆಯನ್ನೂ ನಾವು ಬೆಳೆಸಿಕೊಳ್ಳಬೇಕು. ದುರ್ಯೋಧನನ ಸಹವಾಸದಲ್ಲಿದ್ದ ಒಳ್ಳೆಯವರೂ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ರಾವಣನೊಬ್ಬನ ಕಾರಣದಿಂದ ಅವನ ಪರಿವಾರವೆಲ್ಲವೂ ನಾಶವಾಯಿತು. ಹೀಗಾಗಿ ನಾವು ಯಾರ ಸ್ನೇಹವನ್ನು ಮಾಡುತ್ತಿದ್ದೇವೆ, ಅದರ ಸಾಧಕ–ಬಾಧಕಗಳೇನು – ಎಂಬುದನ್ನು ಚೆನ್ನಾಗಿ ಆಲೋಚಿಸಿ, ಆ ಬಳಿಕವಷ್ಟೆ ಮುಂದುವರಿಯಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.