ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿಗಳು

Last Updated 25 ಮೇ 2019, 19:30 IST
ಅಕ್ಷರ ಗಾತ್ರ

ರಾ ತ್ರಿ ಒಂದು ಗಂಟೆಯಾಗಿರಬೇಕು. ಯಾರದೋ ಮನೆಯಲ್ಲಿ ಮಗು ಶೃತಿ ಹಿಡಿದಂತೆ ಬಿಡದೆ ಅಳುತ್ತಿದೆ. ಮಗುವಿನ ಅವ್ವ ಅದನ್ನು ರಮಿಸಲು ಜೋಗುಳ ಪದ ಹಾಡುತ್ತಿದ್ದಾಳೆ. ನೀರವ ರಾತ್ರಿಯಲ್ಲಿ ಆ ಪದ ಊರ ಕಿವಿಯ ತುಂಬಿ ಊರಿನಂಥ ಊರ ಜನರ ಮೈಯನ್ನು ಲಯವಾಗಿ ತಟ್ಟಿ ಅವರ ಕಣ್ಣುಗಳಿಗೆ ನಿದ್ದೆ ಸುರಿಯುವಂತೆ ಮಾಡಿದೆ. ಮಗುವಿಗೆ ಏನು ಅರ್ಥವಾಯಿತೋ ಏನೋ. ಅಳುವಿನ ಶೃತಿ ನಿಲ್ಲಿಸಿತು. ಊರ ಕಣ್ಣಿನ ರೆಪ್ಪೆಗಳು ಮಾತ್ರ ಒಂದಕ್ಕೊಂದು ಅಂಟಿಕೊಂಡು ಮಿಲನದ ಅವಸ್ಥೆ ತಲುಪಿವೆ. ಬೀದಿಗಳ ತುಂಬಾ ಜಡಿ ಮಳೆಯಂತೆ ಬೀಳಲು ಹವಣಿಸುತ್ತಿರುವ ಕತ್ತಲನ್ನು ಅಲ್ಲಲ್ಲಿ ಇರುವ ಬೀದಿ ದೀಪಗಳು ಸೀಳಿಕೊಂಡು ತಮ್ಮ ಪೌರುಷ ಮೆರೆಯುತ್ತಿವೆ. ಬೀದಿ ದೀಪಗಳಿಗೆ ತಾವೇನೂ ಕಮ್ಮಿ ಇಲ್ಲವೆಂಬಂತೆ ಕೆಲ ಮನೆಗಳ ಲಾಟೀನುಗಳು ಕಿಡಕಿಯಿಂದ ಬೆಳಕಿನ ಕುಡಿ ಚಾಚುತ್ತಿವೆ. ಮನೆ ಹೊರಗೆ ಕಟ್ಟೆಯ ಮೇಲೆ ಮಲಗಿದ್ದ ಪ್ರಶಾಂತ ಎಂದಿನಂತೆ ಎದ್ದ. ಎದ್ದವನೇ ತಮ್ಮ ಮನೆ ಎದುರಿನ ಬೀದಿ ಹಿಡಿದುಕೊಂಡು ಹೊರಟ. ಸ್ವಲ್ಪ ಮುಂದೆ ಹೆಜ್ಜೆ ಹಾಕಿರಬೇಕು. ಅಲ್ಲಿ ನೀರು ಮಡುಗಟ್ಟಿ ರಜ್ಜಾಗಿತ್ತು. ಆ ರಜ್ಜು ಲೆಕ್ಕಿಸದೆ ನೀರಿನ ಮಡುವಿನೊಳಗೆ ಹೆಜ್ಜೆ ಇಟ್ಟ. ಪಾದಗಳು ರಜ್ಜಿನಲ್ಲಿ ತೊಯ್ದು ಹೋದವು. ಆ ರಜ್ಜು ಅಮೂರ್ತ ಕಲಾಕೃತಿಯಂತೆ ಅಂಟಿಕೊಂಡಿತ್ತು. ಏನೂ ಆಗಿಲ್ಲವೆಂಬಂತೆ ಮುಂದೆ ನಡೆದ. ಅವನು ನಡೆದಂತೆಲ್ಲ ಹೆಜ್ಜೆಗಳ ಗುರುತು ದಾರಿಗುಂಟ ಮೂಡಿ ಸಾಲುಗಟ್ಟಿದ ಇರುವೆಯಂತೆ ತೋರತೊಡಗಿತ್ತು.

ಆ ಬೀದಿಯ ತಿರುವಿನಲ್ಲಿನ ಕೊನೆಯ ಮನೆಯದು. ಪ್ರಶಾಂತ ಇನ್ನೇನು ಆ ಮನೆಯನ್ನು ದಾಟಿಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಕತ್ತಲಿದ್ದರೂ ಗೋಡೆಯ ಮರೆಗೆ ಕೂತು ಉಚ್ಚೆ ಹೊಯ್ಯುತ್ತಿದ್ದ ಪಾರ್ವತಿಗೆ ಹೆಜ್ಜೆಯ ಸಪ್ಪಳ ಕೇಳಿಸಿ ಹಾವು ಕಂಡವಳಂತೆ ಬೆಚ್ಚಿದಳು. ಆ ಕಡೆ ತಿರುಗಿ ನೋಡಿದರೆ ಅಲ್ಲಿ ಪ್ರಶಾಂತ ಕಾಣಿಸಿದ. ಉಚ್ಚೆ ಹೊಯ್ಯುವುದು ಅರ್ಧ ಮಾಡಿ ಎದ್ದು ನಿಂತು ಒಂದು ಹುಸಿಗೆಮ್ಮ ಕೆಮ್ಮಿದಳು. ಪ್ರಶಾಂತ ಯಾವ ಹುಸಿಗೆಮ್ಮನ್ನೂ ಕಿವಿಗೆ ಹಾಕಿಕೊಳ್ಳದೆ ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಯಂತೆ ನಡೆದ. ಪಾರ್ವತಿಗೆ ಅವನು ತಿರುಗಿ ನೋಡದೇ ಹೋದದ್ದು ‘ಇವನು ನೋಡಿಯೂ ಬೇಕಂತಲೇ ನೋಡದಂತೆ ನಟಿಸುತ್ತಿದ್ದಾನೆ..’ ಅನಿಸಿತು. ಅವನು ಮುಂದೆ ಹೋಗುವುದನ್ನೇ ಕಾದಂತಿದ್ದ ಅವಳು ನಂತರ ಒತ್ತರು ಬಂದಿದ್ದ ಉಚ್ಚೆ ಪೂರೈಸಿ ನಿರಾಳವಾಗಿ ಮತ್ತೆ ಹಾಸಿಗೆಯಲ್ಲಿ ಬಂದು ಅಂಗಾತವಾದಳು.

ಪ್ರಶಾಂತ ಪಾರ್ವತಿಯ ಮನೆ ದಾಟಿಕೊಂಡು ಸ್ಮಶಾನದ ಕಡೆಗೆ ಹೆಜ್ಜೆ ಬಿರುಸುಗೊಳಿಸಿದ. ಸ್ಮಶಾನ ಅಷ್ಟು ದೂರವೇನೂ ಇಲ್ಲ. ಆ ಪಾರ್ವತಿಯ ಮನೆಯಿಂದ ಒಂದಷ್ಟು ಹೆಜ್ಜೆ ಹಾಕಿದರೆ ಸಿಗುತ್ತದೆ. ಊರ ಜನ ಆ ಸ್ಮಶಾನದಲ್ಲಿ ಬೆಳೆದ ಜಾಲಿಗಿಡಗಳ ಮರೆಯಲ್ಲೇ ನಿತ್ಯ ಶೌಚ ಮುಗಿಸೋದು. ಅದೊಂದು ತರಹ ಸ್ಮಶಾನವೂ ಹೌದು, ಬಯಲು ಶೌಚಾಲಯವೂ ಹೌದು. ಪ್ರಶಾಂತ ಸ್ಮಶಾನಕ್ಕೆ ಬಂದಾಗ ಅಲ್ಲಿ ಒಂದು ಕಡೆ ಕತ್ತಲು ಸೀಳಿಕೊಂಡು ಕಿಡಿ ಕಿಡಿ ಹಾರತೊಡಗಿತ್ತು. ಅಳ್ಳೆದೆಯವರಾಗಿದ್ದರೆ ದೆವ್ವವೆಂದು ಹೌಹಾರಿ ಅಲ್ಲೇ ಎದೆಯೊಡೆದು ಸತ್ತೇ ಹೋಗುತ್ತಿದ್ದರು. ಸ್ಮಶಾನದಲ್ಲಿ ಅದೂ ಈ ಅಪರಾತ್ರಿಯಲ್ಲಿ ಬೆಂಕಿ ಕಿಡಿಗಳು ಕಂಡರೆ ಹೇಗಾಗಬೇಡ. ಪ್ರಶಾಂತ ಒಂದಿಷ್ಟೂ ಆತಂಕಗೊಳ್ಳದೆ ಆ ಬೆಂಕಿ ಕಿಡಿಗಳ ಕಡೆ ಚಲಿಸಿದ. ಮಧ್ಯಾಹ್ನವೋ ಸಂಜೆಯೋ ಸತ್ತವರನ್ನು ಅಲ್ಲಿ ಸುಟ್ಟು ಹಾಕಿದ್ದಾರೆ. ಸುಟ್ಟು ಹೆಚ್ಚೂ ಕಡಿಮೆ ಬೂದಿಯಾಗಿದ್ದರೂ ಅಲ್ಲಲ್ಲಿ ಬೆಂಕಿ ಉಂಡೆಗಳು ಇನ್ನೂ ಉರಿಯುತ್ತಿವೆ. ಸಣ್ಣಗೆ ಹೊಗೆಯಾಡುತ್ತಿದೆ. ಅದು ದೇವರಿಗೆ ಲೋಬಾನ ಹಿಡಿದಂತೆ ಕಾಣುತ್ತಿದೆ. ಹೆಣ ಸುಟ್ಟು ಬೂದಿಯಾದ, ಅಲ್ಲಲ್ಲಿ ಬೆಂಕಿಯ ಹೊಗೆಯಾಡುವ ಜಾಗದ ಸುತ್ತ ಒಂದೆರಡು ಸುತ್ತು ಹಾಕಿ, ಮತ್ತೆ ಮನೆಯ ದಾರಿ ಹಿಡಿದ.

ಮನೆಗೆ ಬಂದವನೆ ಕಟ್ಟೆಯ ಮೇಲೆ ಆಗಲೇ ಹಾಸಿದ್ದ ಹಾಸಿಗೆಯಲ್ಲಿ ಮಲಗಿದ. ಬೆಳಿಗ್ಗೆ ಎದ್ದಾಗ ಅಂಗಳದಲ್ಲಿ ಬಿಸಿಲಕೋಲುಗಳು ಹರಡಿ ಮೋಹಕವಾಗಿ ಕಾಣತೊಡಗಿದ್ದವು. ಆಗಲೇ ಹೊತ್ತಾಗಿದೆಯೆಂದು ಭಾವಿಸಿ ಅಂಗಳದ ಕಸ ಗುಡಿಸಿ, ನೀರು ಚಳಹೊಡೆದು ಸಂಡಾಸಿಗೆಂದು ಬಯಲು ಕಡೆ ಹೊರಟ. ಬೀದಿಯ ತಿರುವಿನಲ್ಲಿನ ಕೊನೆಯ ಮನೆಯ ಹತ್ತಿರ ಬಂದಾಗ ಪಾರ್ವತಿ ಅಂಗಳದಲ್ಲಿ ಕುಳಿತು ಮುಸುರೆ ತಿಕ್ಕತೊಡಗಿದ್ದಳು. ಪ್ರಶಾಂತನನ್ನು ನೋಡಿದ ಪಾರ್ವತಿಗೆ ರಾತ್ರಿ ಅವನನ್ನು ಕಂಡದ್ದು ನೆನಪಾಯಿತು. ಈಗ ಅವಳು ಪ್ರಶಾಂತನನ್ನು ಓರೆಗಣ್ಣಿಂದ ನೋಡತೊಡಗಿದ್ದಳು. ಪ್ರಶಾಂತ ಮುಸುರೆ ತಿಕ್ಕುತ್ತಿದ್ದ ಪಾರ್ವತಿಯ ಕಡೆಗೆ ನೋಡಿದ. ಹುಡುಗಿಯನ್ನು ನೋಡುತ್ತಲೇ ಅವನ ನಾಲಿಗೆಯಲ್ಲಿ ಸಿಳ್ಳೆ ತಾನೇ ತಾನಾಗಿ ಹಾಡು ಗುಣುಗತೊಡಗಿತು. ಸಿಳ್ಳೆಯ ಲಯ ಪಾರ್ವತಿಯ ಕಿವಿ ತುಂಬಿತು. ಆದರೆ, ಅವಳು ಕಣ್ಣೆತ್ತಿ ನೋಡಲಿಲ್ಲ. ಅವನು ತನ್ನನ್ನು ನೋಡಿದ್ದು, ಸಿಳ್ಳೆ ಹಾಕಿದ್ದು ಎಲ್ಲ ಅವಳ ಅರಿವಿಗೆ ಬಂದಿತು. ಪ್ರಶಾಂತ ಸ್ಮಶಾನದ ಜಾಲಿಗಿಡದ ಮರೆಯಲ್ಲಿ ಶೌಚಕ್ಕೆ ಕುಳಿತ. ಅಲ್ಲೇ ಹತ್ತಿರದಲ್ಲಿ ಹೆಣ ಸುಟ್ಟಿರುವ ಬೂದಿ ಗೋಚರಿಸಿ ತುಸು ಭಯಗೊಂಡು ಬೇಗನೆ ಶೌಚ ಮುಗಿಸಿ ಮನೆ ಕಡೆ ಬಂದ.

***

ಪ್ರಶಾಂತ ಈಗ್ಗೆ ಎರಡು ಮೂರು ತಿಂಗಳುಗಳಿಂದ ಆ ಮನೆಯಲ್ಲಿ ಬಾಡಿಗೆಗೆ ಬಂದಿದ್ದ. ಹತ್ತಿರದ ಪಟ್ಟಣದ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಅವನದು ಯಾವ ಊರೋ ಗೊತ್ತಿಲ್ಲ. ಚಿಗುರು ಮೀಸೆಯ ಹರೆಯದ ಅವನು ಹಳ್ಳಿಯ ಹುಡುಗನೇ ಆಗಿರಬೇಕು. ಯಾಕೆಂದರೆ ಮನೆಗೆ ಶೌಚಾಲಯ ಇಲ್ಲವೆಂದು ಗೊತ್ತಿದ್ದೂ ಆ ಮನೆ ಬಾಡಿಗೆ ಹಿಡಿದಿದ್ದ. ಓಣಿಯ ಜನರೊಂದಿಗೆ ಅಷ್ಟೇನೂ ಸಂಪರ್ಕ ಬಂದಿರಲಿಲ್ಲ. ಬೆಳಿಗ್ಗೆ ಬ್ಯಾಂಕಿನ ಕೆಲಸಕ್ಕೆ ಹೋಗಿ ಬಂದು ಸಂಜೆ ಮನೆ ಸೇರಿದರೆ ಏನಾದರೂ ಓದುತ್ತ, ಮೊಬೈಲಿನಲ್ಲಿ ಹಾಡು, ಸಿನಿಮಾ ನೋಡುತ್ತ ಸಮಯ ಕೊಲ್ಲುತ್ತಿದ್ದ. ತಾನೇ ಅಡಿಗೆ ಮಾಡಿಕೊಂಡು ಉಣ್ಣುತ್ತಾ, ಬಟ್ಟೆಗಳನ್ನು ತೊಳೆದುಕೊಳ್ಳುತ್ತಾಕಾಲದ ಜೊತೆ ಚಲಿಸುತ್ತಿದ್ದ. ದಿನಗಳು ಒಂದರೊಳಗೊಂದು ಕಲಸಿಕೊಂಡು ಸರಿದು ಹೋದದ್ದೇ ತಿಳಿಯಲಿಲ್ಲ.

ಎಂದಿನಂತೆ ಪ್ರಶಾಂತ ರಾತ್ರಿ ಊಟ ಮಾಡಿ ಮಲಗಿದ. ಅವತ್ತು ಮಳೆ ಧೋ.. ಧೋ.. ಎಂದು ಸುರಿಯತೊಡಗಿತ್ತು. ಓಣಿಯ ಬೀದಿ, ಊರ ಮನೆಗಳು ಮಳೆಗೆ ತೊಯ್ಯಿಸಿಕೊಂಡು ತಪ್ಪಡಿಯಾಗಿದ್ದವು. ಥಂಡಿ ಸಣ್ಣಗೆ ಸೆರಗು ಬೀಸತೊಡಗಿತ್ತು. ರಾತ್ರಿ ಒಂದು ಗಂಟೆಯಾಗಿರಬೇಕು. ಪ್ರಶಾಂತ ಎದ್ದ. ಎದ್ದವನೆ ಅಂಗಳಕ್ಕೆ ಬಂದ. ಮಳೆ ಬೀಳುತ್ತಲೇ ಇತ್ತು. ಮಳೆಗೆ ಮೈಯೊಡ್ಡಿ ತೊಯ್ಯಿಸಿಕೊಳ್ಳುತ್ತ ಮನೆ ಎದುರಿನ ಬೀದಿ ಹಿಡಿದು ಹೊರಟ. ಅವನು ಹೆಜ್ಜೆ ಇಟ್ಟಂತಲ್ಲೆಲ್ಲಾ ಒದ್ದೆಯಾಗಿದ್ದ ನೆಲ ತಗ್ಗು ಬಿದ್ದು ಅಲ್ಲಿ ಮಳೆ ನೀರು ತುಂಬತೊಡಗಿತ್ತು. ಅವನು ನೀರಿನಂತೆ ಸರಾಗವಾಗಿ ಚಲಿಸುತ್ತಲೇ ನಡೆದ. ಆ ಬೀದಿಯ ತಿರುವಿನ ಕೊನೆಯ ಮನೆ ಸಮೀಪಿಸುವುದಕ್ಕೂ ಪಾರ್ವತಿ ತಲೆಗೊಂದು ಚೀಲ ಹೊದ್ದುಕೊಂಡು ಉಚ್ಚೆ ಹೊಯ್ಯಲು ಹೊರಗೆ ಬರುವುದಕ್ಕೂ ಸರಿ ಆಯಿತು. ಪಾರ್ವತಿ ಕ್ಷಣ ತಬ್ಬಿಬ್ಬುಗೊಂಡಳು. ತಲೆ ಮೇಲೆ ಮಳೆ ಹನಿ ಸುರಿಯುತ್ತಿದ್ದರೂ ತೊಯ್ಯಿಸಿಕೊಳ್ಳುತ್ತ ನಡೆದಿದ್ದ ಪ್ರಶಾಂತ ಅವಳಿಗೆ ಯಕ್ಷಪ್ರಶ್ನೆಯಾಗಿ ಕಾಡಿದ. ಅದೇ ಹೊತ್ತಿಗೆ ಮಿಂಚಂತೆ ಪ್ರಶ್ನೆಯೊಂದು ಅವಳೊಳಗೆ ಹರಿಯಿತು. ‘ಇವನು ದಿನ ನಾ ಉಚ್ಚೆ ಹೊಯ್ಯುವ ಹೊತ್ತಿಗೆ ಯಾಕೆ ಬರ್ತಾನೆ?..’ ಅಂದುಕೊಂಡು ತುಸು ನಾಚಿದಳು. ಬೆಳಿಗ್ಗೆ ಅವನು ಇವಳನ್ನು ನೋಡುತ್ತ ಸಿಳ್ಳೆ ಹೊಡೆದದ್ದು ನೆನಪಾಗಿ ಬೆಚ್ಚಗಾದಳು. ಹುಸಿಗೆಮ್ಮು ಕೆಮ್ಮಿದಳು. ಪ್ರಶಾಂತ ಕಿವುಡನಂತೆ ಕೇಳಿಸಿಕೊಳ್ಳದೆ ಹರಿಯುವ ಮಳೆ ನೀರಿನ ಜೊತೆ ಜಿದ್ದಿಗೆ ಬಿದ್ದವನಂತೆ ಸ್ಮಶಾನದ ದಾರಿ ಹಿಡಿದ. ಪಾರ್ವತಿಗೆ ಏನೊಂದು ತಿಳಿಯಲಿಲ್ಲ. ಈ ರಾತ್ರಿ ತಟಗೂ ಭಯವಿಲ್ಲದಂತೆ ಸ್ಮಶಾನದ ಕಡೆ ಅವನೇಕೆ ಹೋಗುತ್ತಾನೆ ಎಂಬುದು ಬಗೆಹರಿಯಲಾಗದ ಕಗ್ಗಂಟಿನ ಪ್ರಶ್ನೆಯಾಗಿ ಉಳಿಯಿತು ಅವಳೊಳಗೆ. ಸಂಡಾಸಿಗೆ ಹೋಗುತ್ತಿರಬೇಕೆಂದು ಭಾವಿಸಲು ಅವನು ಚರಿಗೆ ಹಿಡಿಯದೆ ಬರಿಗೈಯ್ಯಲ್ಲಿ ಹೊರಟಿದ್ದಾನೆ. ಕೊಡೆಯನ್ನೋ ಚೀಲವನ್ನೋ ಹೊದ್ದುಕೊಳ್ಳದೆ ಮಳೆಗೆ ತೊಯ್ಯಿಸಿಕೊಳ್ಳುತ್ತ ಹೊರಟಿದ್ದು ನೋಡಿದರೆ ಅವನಿಗೇನಾದರೂ ಹುಚ್ಚು ಹಿಡಿದಿರಬೇಕೆನೋ ಅಂದುಕೊಂಡಳು. ಕ್ಷಣ ಹೊತ್ತಿಗೆ ಹಾಗಿರಲಿಕ್ಕಿಲ್ಲವೆಂದು ಅನಿಸಿ, ಉಚ್ಚೆ ಹೊಯ್ದು ನಿರಾಳವಾಗಿ ಪ್ರಶಾಂತ ಮರಳಿ ಬರುವವರೆಗೆ ಕಾಯತೊಡಗಿದಳು. ಚೀಲ ಹೊದ್ದುಕೊಂಡಿದ್ದರೂ ಚಳಿ ಒಳಗೆ ನುಸುಳಿ ಸಣ್ಣಗೆ ನಡುಕ ತರಿಸಿತ್ತು.

ಪ್ರಶಾಂತ ಸ್ಮಶಾನದ ಜಾಗ ಸಮೀಪಿಸಿದ. ಸ್ಮಶಾನದ ಒಳಗಡೆ ಹೋಗದೆ ಅಲ್ಲಿಂದ ಮರಳಿ ಮನೆ ಕಡೆ ದಾರಿ ಹಿಡಿದ. ಅವನು ಬಂದದ್ದನ್ನು ಗಮನಿಸಿದ ಪಾರ್ವತಿ ಸಣ್ಣ ಧ್ವನಿ ಮಾಡಿ ‘ರೀ..’ ಎಂದು ಕರೆದಳು. ಪ್ರಶಾಂತ ಆ ಕಡೆ ನೋಡದೆ, ಕೇಳಿಸಿಕೊಳ್ಳದೆ ಮುಂದೆ ನಡೆದ. ಪಾರ್ವತಿಗೆ ಸೋಜಿಗ ಅನಿಸಿತು. ಏನೊಂದು ತಿಳಿಯದೆ ಗೊಂದಲಗೊಂಡು ಒಳಗೆ ಹೋಗಿ ಮಲಗಿದಳು. ಪ್ರಶಾಂತ ಮನೆಗೆ ಬಂದು ಹಾಸಿಗೆಯಲ್ಲಿ ಮಲಗಿದ. ತೊಯ್ದ ಮೈ ಬಟ್ಟೆಯ ನೀರೆಲ್ಲ ಹಾಸಿಗೆ ತುಂಬಾ ಹರಿದಾಡಿ ಒದ್ದೆಯಾದವು. ಬೆಳಿಗ್ಗೆ ಎದ್ದಾಗ ಮೈ ಬಟ್ಟೆ, ಹಾಸಿಗೆ ತೊಯ್ದಿರುವುದು ನೋಡಿ ಅಚ್ಚರಿಯಾಯಿತು. ಅಂಗಳ ಒದ್ದೆಯಾಗಿರುವುದನ್ನು ನೋಡಿ, ರಾತ್ರಿ ಮಳೆ ಸುರಿದು ಮನೆ ಸೋರಿ ತನ್ನ ಬಟ್ಟೆ, ಹಾಸಿಗೆ ತೊಯ್ದರೂ ಎಚ್ಚರವಾಗಿಲ್ಲವಲ್ಲ ಎಂದುಕೊಳ್ಳುತ್ತ ತುಟಿಯಲ್ಲಿ ನಗೆ ಅರಳಿಸಿದ.ಬಟ್ಟೆ ಬದಲಿಸಿಕೊಂಡು ಸಂಡಾಸಿಗೆಂದು ಚರಿಗೆ ಹಿಡಿದು ಹೊರಟ. ರಾತ್ರಿ ಮಳೆ ಸುರಿದ ಬೆಳಗು ಶುಭ್ರವಾಗಿತ್ತು. ಬೀದಿಗುಂಟ ಸಣ್ಣಗೆ ತಂಗಾಳಿ ಬೀಸುತ್ತಿತ್ತು. ಪಾರ್ವತಿಯ ಮನೆ ಹತ್ತಿರ ಬಂದಾಗ ಅವಳು ಅಂಗಳದಲ್ಲಿ ಕುಳಿತು ಅಕ್ಕಿ ಕೇರತೊಡಗಿದ್ದಳು. ಪ್ರಶಾಂತ ಅವಳ ಕಡೆ ನೋಟ ಬೀರಿದ. ಅವಳೂ ಇವನನ್ನು ನೋಡಿದಳು. ಪಾರ್ವತಿ ಚಂದಗೆ ಕಂಡಳು. ಮೀಸೆಯಲ್ಲೇ ನಕ್ಕ. ಪಾರ್ವತಿಯ ಗಲ್ಲದ ಮೇಲೂ ನಾಚಿಕೆ ನವಿಲು ನರ್ತಿಸಿತು.

***

ಪಾರ್ವತಿಯ ಗೊಂದಲ ಬಗೆಹರಿಯಲೇ ಇಲ್ಲ. ಪ್ರಶಾಂತ ಕನಸಾಗಿ ಬಿಡದೇ ಕಾಡತೊಡಗಿದ್ದ. ಹಗಲೊತ್ತಿನ ಅವನ ಸಿಳ್ಳೆ, ತುಟಿಯಲ್ಲಿ ಕಂಡೂ ಕಾಣದಂತೆ ಅರಳಿಸುವ ನಗೆಯ ಪರಿಮಳ ಪರಿಚಯವಾದವೇ ವಿನಃ ಪ್ರಶಾಂತ ಪೂರ್ತಿಯಾಗಿ ಅರ್ಥವಾಗಲಿಲ್ಲ. ಹಗಲೊತ್ತು ಹಾಗೆ ಮಾತಾಡಿಸಲು ಅವನು ಊರಿನವನೂ ಅಲ್ಲ, ಸಂಬಂಧಿಕನೂ ಅಲ್ಲ. ಮಾತಿಗೆ ಅವನು ಸಿಗತ್ತಲೂ ಇರಲಿಲ್ಲ. ನೌಕರಿಗೆಂದು ಪಟ್ಟಣಕ್ಕೆ ತೆರಳುತ್ತಿದ್ದ. ರಾತ್ರಿ ಮಾತ್ರ ಮಾತಾಡಲು ಸಾಧ್ಯವಿತ್ತು. ಆದರೆ, ಪ್ರಶಾಂತ ರಾತ್ರಿ ಎದುರಿಗೇ ಸುಳಿದು ಹೋದರೂ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಹಗಲು ಸಡಗರ ತಂದರೆ, ರಾತ್ರಿ ಅವಳೊಳಗೆ ಸಂಕಟದ ಮೊಟ್ಟೆಗಳನ್ನು ಇಡುತ್ತಿತ್ತು. ಹಗಲೊತ್ತು ಪಾರ್ವತಿ ಕಂಡೊಡನೆ ಅವಳೊಂದಿಗೆ ಮಾತಿಗಿಳಿಯುವ ಉತ್ಸುಕತೆ ಅವನೊಳಗೆ ಒದ್ದುಕೊಂಡು ಬರುತ್ತಿತ್ತು. ಆದರೆ, ಅವಳ ಮನೆ ಮಂದಿ, ಓಣಿಯ ಜನರೆದುರು ಮಾತಾಡಿಸಲು ಅಸಾಧ್ಯವಾಗಿ ಚಡಪಡಿಸುತ್ತಿದ್ದ. ಈ ಚಡಪಡಿಕೆ ಅವರಿಬ್ಬರೊಳಗೂ ಎಂದಿಗಿಂತ ತೀವ್ರವಾಗಿತ್ತು. ಅವನೊಂದಿಗೆ ಒಂದು ಮಾತನ್ನಾದರೂ ಹಂಚಿಕೊಳ್ಳಬೇಕೆಂದು ಪಾರ್ವತಿ ದಿನಕ್ಕೆ ಒಮ್ಮೆಯಾದರೂ ಅಂದುಕೊಳ್ಳುತ್ತಾಳೆ. ಇವನದೂ ಅದೇ ಕತೆ. ಆದರೆ, ಅದೆಷ್ಟೋ ಹಗಲುಗಳು, ರಾತ್ರಿಗಳು ಹೀಗೆ ಅನಾಯಸವಾಗಿ ಮರದಿಂದ ಬೀಳುವ ಕಾಯಿಗಳಂತೆ ಉದುರಿ ಹೋದವು. ಇಬ್ಬರ ಮಾತುಗಳೂ ತುಟಿಯ ದಾಟದೆ ಅಲ್ಲೇ ಒಳಗೊಳಗೆ ನಲುಗಿ ದುಃಖದ ಪದ ಹಾಡತೊಡಗಿದ್ದವು.

ಪಾರ್ವತಿ ಇವತ್ತು ಪ್ರಶಾಂತನನ್ನು ಮಾತಾಡಿಸಲೇಬೇಕೆಂದು ನಿರ್ಧರಿಸಿದ್ದಳು. ಸಂಜೆ ಕಳೆದು ರಾತ್ರಿಯಾಯಿತು. ಒಂದು ಗಂಟೆ ಹೊತ್ತು. ಊರು ಕತ್ತಲಿನ ಚಾದರ ಹೊದ್ದು ಮಲಗಿತ್ತು. ಪ್ರಶಾಂತ ಎದ್ದು ಬೀದಿಗಿಳಿದ. ಪಾರ್ವತಿ ಆ ಕಡೆ ಈ ಕಡೆ ನೋಡಿದಳು. ಓಣಿ ಜನ ಯಾರೂ ಕಾಣಿಸಲಿಲ್ಲ. ಪ್ರಶಾಂತನಿಗೆ ಎದುರುಗೊಂಡು ನಿಂತಳು. ಅವನನ್ನು ಮಾತಾಡಿಸಿದರೆ ಅಂವ ತುಟಿ ಎರಡು ಮಾಡಲಿಲ್ಲ. ಕೈ ಹಿಡಿದು ಅವಳ ಮನೆಯ ಪಕ್ಕದ ಮೇವಿನ ಬಣವೆಯ ಮರೆಗೆ ಕರೆದೊಯ್ದಳು. ಪ್ರಶಾಂತ ಹಗ್ಗ ಹಿಡಿದು ಎಳೆದರೆ ಬರುವ ಕರುವಿನಂತೆ ಬಂದ. ಅವಳೊಳಗೆ ಎಂಥದೋ ಧೈರ್ಯ ತುಂಬಿಕೊಂಡಿತ್ತು. ಅವನನ್ನು ಮಾತಾಡಿಸಿದರೆ ಮಾತಾಡುತ್ತಲೇ ಇಲ್ಲ. ಗರ ಬಡಿದವನಂತೆ ಕುಳಿತಿದ್ದಾನೆ. ಇವನಿಗೇನಾಗಿದೆ ಎಂದು ತಿಳಿಯದೆ ವಿಲಿಗುಟ್ಟಿದಳು.

ತುಸು ಹೊತ್ತಾಗಿರಬೇಕು. ಪ್ರಶಾಂತ ಕಣ್ದೆರೆದು ತಾನು ಇಲ್ಲಿ ಹೇಗೆ ಬಂದೆನೆಂದು ತಿಳಿಯದೆ ತುಸು ಭೀತನಾದ. ಪಾರ್ವತಿಗೆ ಅರ್ಥವಾಯಿತು, ಇವನು ನಿದ್ದೆಯಲ್ಲಿ ನಡೆಯುತ್ತಾನೆಂದು. ಪ್ರಶಾಂತನಿಗೆ ಎಲ್ಲ ಹೇಳಿದಳು. ಅವನಿಗೆ ಒಂದಿಷ್ಟು ಕಸಿವಿಸಿಯಾದರೂ ತೋರಿಸಿಕೊಳ್ಳಲಿಲ್ಲ. ತನ್ನ ರಾತ್ರಿಗಳ ಬಗೆಗೆ ವಿಸ್ಮಯಗೊಂಡ. ಆತಂಕದ ಸೆಳಕೊಂದು ಅವನೊಳಗೆ ಸುಳಿದು ಹೋಯಿತು. ಅಷ್ಟು ದೂರದಲ್ಲಿ ಹಗಲು ಕಾಣಿಸಿಕೊಂಡು ಕನಸಾಗಿದ್ದ ಪ್ರೇಮದ ಹುಡುಗಿಯ ಮೆದುಬೆರಳುಗಳು ಈ ರಾತ್ರಿ ತನ್ನ ಬೊಗಸೆಯೊಳಗೆ ಚಿನ್ನಾಟವಾಡುತ್ತಿರುವುದು ಆತಂಕವನ್ನು ದೂರಗೊಳಿಸಿ ವಿಚಿತ್ರ ನೆಮ್ಮದಿಯಲ್ಲಿ ತೊಯ್ದು ಹೋಗುವಂತೆ ಮಾಡಿದವು. ನೋಡ ನೋಡುತ್ತಲೇ ಇಬ್ಬರ ತುಟಿಗಳು ಸಲಿಗೆ ಬೆಳೆಸಿದವು. ದಿವ್ಯಾನಂದದ ಅನುಭೂತಿಯಲ್ಲಿ ಮಿಯ್ಯತೊಡಗಿದವು. ಏಕಾಏಕಿ ಮಳೆ ಧೋ.. ಎಂದು ಸುರಿಯತೊಡಗಿತು. ಮಳೆಯೊಳಗೆ ತೊಯ್ಯಿಸಿಕೊಳ್ಳುತ್ತಲೇ ಒಬ್ಬರಿಗೊಬ್ಬರು ದೇಹದ ಬಿಸಿ ಕಾಯಿಸಿದರು. ಹಿತ ಅನ್ನೋದು ಅವರಿಬ್ಬರನ್ನೂ ಆವರಿಸಿತ್ತು. ಬೀದಿಗುಂಟ ಮಳೆಯ ನೀರು ರಭಸವಾಗಿ ಹರಿಯತೊಡಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT