ರಂಜಾನ್: ದೇಹ, ಮನಸ್ಸಿನ ನಿಯಂತ್ರಣ

ಭಾನುವಾರ, ಮೇ 26, 2019
33 °C

ರಂಜಾನ್: ದೇಹ, ಮನಸ್ಸಿನ ನಿಯಂತ್ರಣ

Published:
Updated:
Prajavani

ಭಾರತ ಒಳಗೊಂಡಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ನೆಲೆಸಿರುವ ಮುಸ್ಲಿಮರು ರಂಜಾನ್‌ ತಿಂಗಳ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ. ರಂಜಾನ್‌ ತಿಂಗಳು ಇಸ್ಲಾಮೀ ಕ್ಯಾಲೆಂಡರಿನ 9ನೇ ತಿಂಗಳಾಗಿದೆ. ಈ ಬಾರಿ ಮೇ 6 ಅಥವಾ 7ರಿಂದ ರಂಜಾನ್‌ ತಿಂಗಳು ಆರಂಭವಾಗಲಿದ್ದು, ಇನ್ನೊಂದು ತಿಂಗಳು ಮುಸ್ಲಿಮರು ಉಪವಾಸ ಆಚರಿಸಲಿದ್ದಾರೆ.

ಇಸ್ಲಾಮಿನ ಐದು ಕಡ್ಡಾಯ ಕರ್ಮಗಳಲ್ಲಿ ರಂಜಾನ್‌ ತಿಂಗಳ ಉಪವಾಸ ಕೂಡ ಒಂದು. ಸೂರ್ಯೋದಯಕ್ಕೆ ಮುನ್ನ ಆಹಾರಸೇವನೆ (ಸಹ್ರಿ) ಮುಗಿಸಿ ಹಗಲಿಡೀ ಅನ್ನ, ನೀರು ಹಾಗೂ ಎಲ್ಲ ರೀತಿಯ ಮನೋರಂಜನೆ, ಸುಖಗಳನ್ನು ತ್ಯಜಿಸಿ ಸೂರ್ಯಾಸ್ತದ ಬಳಿಕ ಆಹಾರ ಸೇವಿಸುವುದು (ಇಫ್ತಾರ್‌) ಇಸ್ಲಾಮಿನ ಉಪವಾಸದ ವಿಧಾನ.  

ಉಪವಾಸ ಒಂದು ಆರಾಧನೆಯಾಗಿದೆ. ಮಾತ್ರವಲ್ಲ, ಅದು ಒಬ್ಬನಲ್ಲಿ ದೈವಭಕ್ತಿಯನ್ನು ಮೂಡಿಸುವ ಸಾಧನವೂ ಆಗಿದೆ. ಒಂದು ತಿಂಗಳ ಉಪವಾಸ ವರ್ಷದ ಇನ್ನುಳಿದ 11 ತಿಂಗಳುಗಳ ಜೀವನಕ್ಕೆ ಚೈತನ್ಯ, ಸ್ಫೂರ್ತಿ ತುಂಬಬಲ್ಲದು.

ದೇವರು ಹೇಳಿದರೆ ಏನನ್ನು ಬೇಕಾದರೂ ತ್ಯಜಿಸಲು ಸಿದ್ಧ ಎಂಬ ಪರಿಶೀಲನೆಯನ್ನು ಉಪವಾಸ ನೀಡುತ್ತದೆ. ವರ್ಜಿಸಲು ಸಾಧ್ಯವಾಗದ್ದು ಯಾವುದೂ ಇಲ್ಲ ಎಂಬ ಪಾಠ ಕಲಿಸಿಕೊಡುತ್ತದೆ. ದೇಹವು ಸಾಮಾನ್ಯವಾಗಿ ಬಯಸುವ ಅವಶ್ಯಕತೆಗಳ ಜೊತೆಗೆ ಮಾನಸಿಕ ಪ್ರಲೋಭನೆಗಳನ್ನು ಅದು ತಡೆದು ನಿಲ್ಲಿಸುತ್ತದೆ. ಉಪವಾಸ ಆಚರಣೆಯ ಮತ್ತೊಂದು ಉದ್ದೇಶ ಬಡವರ ಹಸಿವನ್ನು ಅರಿಯುವುದು. ನಿತ್ಯ ಮೂರು ಹೊತ್ತು ತಿಂದರೆ ಹಸಿವಿನ ಅನುಭವ ಆಗದು. ಉಪವಾಸ ಆಚರಿಸಿದರೆ ಹಸಿದವನ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಉಪ ವಾಸದಿಂದ ಆರೋಗ್ಯಕ್ಕೂ ಹಲವು ಲಾಭಗಳಿವೆ.

ಚಿಕ್ಕಮಕ್ಕಳು, ವಯೋವೃದ್ಧರು ಮತ್ತು ವಾಸಿಯಾಗದ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಉಪವಾಸ ಆಚರಿಸಬೇಕಿಲ್ಲ. ಪ್ರೌಢಾವಸ್ಥೆಗೆ ತಲುಪಿದ ಇತರ ಎಲ್ಲರಿಗೂ ಕಡ್ಡಾಯ. ಆದರೂ ಕೆಲವು ಸಂದರ್ಭಗಳಲ್ಲಿ ಉಪವಾಸಕ್ಕೆ ವಿನಾಯಿತಿ ನೀಡಲಾಗಿದೆ.

ಆರೋಗ್ಯ ಹದಗೆಟ್ಟಾಗ ಮತ್ತು ದೂರದ ಊರಿಗೆ ಪ್ರಯಾಣಿಸುವ ಸಂದರ್ಭ ಉಪವಾಸದಿಂದ ವಿನಾಯಿತಿ ಇದೆ. ಗರ್ಭಿಣಿಯರು, ಬಾಣಂತಿಯರು ಹಾಗೂ ಮಹಿಳೆ ಮುಟ್ಟಿನ ಅವಧಿಯಲ್ಲಿ ಉಪವಾಸ ಆಚರಿಸಬೇಕಿಲ್ಲ. ಆದರೆ ರಂಜಾನ್‌ನಲ್ಲಿ ಎಷ್ಟು ಸಂಖ್ಯೆಯ ಉಪವಾಸ ಆಚರಿಸಲು ಸಾಧ್ಯವಾಗುವುದಿಲ್ಲವೋ, ಅವುಗಳನ್ನು ಬೇರೆ ತಿಂಗಳಲ್ಲಿ ಹಿಡಿದು ಪೂರ್ತಿಗೊಳಿಸಬೇಕು.

ಎಲ್ಲ ಋತುಗಳಲ್ಲೂ ಬರುತ್ತದೆ: ರಂಜಾನ್‌ ಉಪವಾಸ ವರ್ಷದ ಎಲ್ಲ ಋತುಗಳಲ್ಲೂ ಬರುತ್ತದೆ. ಬೇಸಿಗೆ, ಚಳಿಗಾಲ ಮತ್ತು ಮಳೆಗಾಲದಲ್ಲೂ ರಂಜಾನ್ ತಿಂಗಳು ಹಾದುಹೋಗುತ್ತದೆ. ಚಾಂದ್ರಮಾನ ತಿಂಗಳ ಲೆಕ್ಕಚಾರ ಹಾಕುವುದರಿಂದ ಹೀಗಾಗುತ್ತದೆ.

ಈ ಬಾರಿ ದೀರ್ಘ ಹಗಲು ಇರುವ ದೇಶಗಳಲ್ಲಿ ಉಪವಾಸದ ಅವಧಿ 18 ರಿಂದ 19 ಗಂಟೆಗಳು ಇರಲಿವೆ. (ಉದಾ: ನಾರ್ವೆ, ಫಿನ್ಲೆಂಡ್, ಸ್ವೀಡನ್). ಕಡಿಮೆ ಹಗಲು ಇರುವ ಕಡೆಗಳಲ್ಲಿ 11 ರಿಂದ 12 ಗಂಟೆಗಳಿಗೆ ಸೀಮಿತವಾಗಿರಲಿವೆ. (ಉದಾ: ನ್ಯೂಜಿಲೆಂಡ್‌, ಚಿಲಿ, ದಕ್ಷಿಣ ಆಫ್ರಿಕಾ)’ ಭಾರತದಲ್ಲಿ ಸಾಧಾರಣವಾಗಿ ಉಪವಾಸದ ಅವಧಿ 13.30 ರಿಂದ 14 ಗಂಟೆಗಳು ಇರುತ್ತವೆ.

ರಂಜಾನ್‌ ತಿಂಗಳ ರಾತ್ರಿಗಳಲ್ಲಿ ವಿಶೇಷ ನಮಾಜ್‌ ನಿರ್ವಹಿಸಲಾಗುತ್ತದೆ. ಅದಕ್ಕೆ ‘ತರಾ ವೀಹ್‌’ ಎನ್ನುವರು. ವಿಶೇಷ ನಮಾಜ್‌ಗಳಲ್ಲಿ ಪವಿತ್ರ ಕುರಾನನ್ನು ಸಂಪೂರ್ಣವಾಗಿ ಪಠಿಸಲಾಗುತ್ತದೆ. ಸಾಮಾನ್ಯವಾಗಿ ಕುರಾನ್‌ ಕಂಠಪಾಠ ಮಾಡಿದವರು (ಹಾಫಿಜ್) ಈ ನಮಾಜ್‌ನ ನೇತೃತ್ವ ವಹಿಸುವರು.

ಅವಶ್ಯಕತೆಗಿಂತ ಹೆಚ್ಚಾಗಿ ಸಂಪತ್ತನ್ನು ಇಟ್ಟುಕೊಳ್ಳಬಾರದು ಎಂದು ಇಸ್ಲಾಂ ಹೇಳುತ್ತದೆ. ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಬೇಕು ಎನ್ನುತ್ತದೆ. ಆರ್ಥಿಕವಾಗಿ ಸಬಲರಾಗಿರುವವರು ತಮ್ಮ ಸಂಪತ್ತಿನ ಶೇ 2.5 ಪಾಲನ್ನು ಝಕಾತ್‌ (ದಾನ) ರೂಪದಲ್ಲಿ ನೀಡಬೇಕು. ರಂಜಾನ್‌ ತಿಂಗಳಲ್ಲಿ ದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !