ಸಿದ್ದಯ್ಯನ ಪವಾಡ

ಮಂಗಳವಾರ, ಮಾರ್ಚ್ 19, 2019
26 °C

ಸಿದ್ದಯ್ಯನ ಪವಾಡ

Published:
Updated:
Prajavani

ಅವತ್ತು ಮಠದಲ್ಲಿ ಪುರಾಣ ಪ್ರವಚನ ಇತ್ತು. ಪ್ರವಚನ ಕೇಳಲು ಹೋಗಿದ್ದ ರುದ್ರಾಯಣಿಯವರು ಅಲ್ಲೇ ಸಿದ್ದಯ್ಯನಿಗೆ ಜನ್ಮ ನೀಡಿದರು. ಮಠದ ಅಂಗಳದಲ್ಲೇ ಹುಟ್ಟಿದ ಸಿದ್ದ ಸಹಜವಾಗಿಯೇ ಅಲ್ಲಿನ ಭಜನೆ, ಮಂತ್ರ, ಪೂಜೆಗಳಿಂದ ಪ್ರಭಾವಿತನಾದ. ವಯಸ್ಸಿಗೆ ಬರುತ್ತಿದ್ದಂತೆ ಅವನಲ್ಲಿ ದೇವರ ಬಗೆಗಿನ ಹುಚ್ಚು ಹೆಚ್ಚಾಯಿತು.
ದೇವರನ್ನು ಕಂಡು ಬರುತ್ತೇನೆ ಎಂದು ಆತ ದೇಶಾಂತರ ಹೊರಟ. ಕಾಶಿ, ವಾರಾಣಸಿಗಳಲ್ಲೆಲ್ಲ ಅಡ್ಡಾಡಿದ. ಗಂಗಾ ನದಿಯ ತಟದಲ್ಲಿ ಮಿಂದೆದ್ದ.

ಹಿಮಾಲಯಕ್ಕೆ ಹೋಗಿ ಕೊರೆವ ಚಳಿಯಲ್ಲಿ ತಪಸ್ಸು ಮಾಡಿದ. ಸಿಕ್ಕ ಸಿಕ್ಕ ಗುಡಿ ಗುಂಡಾರ, ಮಸೀದಿಗಳಲ್ಲೆಲ್ಲ ಹೊಕ್ಕು ನೋಡಿದ. ದೇವರು ಸಿಗಲೇ ಇಲ್ಲ. ದೇವರೇ ಇಲ್ಲ, ಇದೆಲ್ಲ ಕಪಟಿಗಳ ನಾಟಕ ಎಂದು ಸಾರತೊಡಗಿದ. ದಾರಿಯಲ್ಲಿ ಅವನಿಗೆ ಈ ಹಿಂದೆ ದೀಕ್ಷೆ ನೀಡಿದ್ದ ಗುರುವೊಬ್ಬ ಎದುರಾದ.

‘ನಿನಗೆ ದೇವರು ಸಿಗಲಿಲ್ಲವೆಂದರೆ ದೇವರೇ ಇಲ್ಲ ಅಂತಿಯೇನೋ ಮೂರ್ಖ? ದೇವರೇ ಇಲ್ಲವೆಂದರೆ ಹೂವಿನ ಎಸಳಿನಲ್ಲಿ ಸುಗಂಧ ಸುರಿಯುವನ್ಯಾರು, ಜೇನಿನ ಹುಟ್ಟಿನಲ್ಲಿ ಸವಿಯನ್ನು ತುಂಬುವವನ್ಯಾರು, ಜಿಂಕೆಯ ಓಟದಲ್ಲಿ ವಯ್ಯಾರವನ್ನು ಇಟ್ಟವನ್ಯಾರು’ ಎಂದು ಪ್ರಶ್ನೆ ಹಾಕಿದರು ಗುರುಗಳು.
ಇಂವ ಚಿಂತೆಗೆ ಬಿದ್ದ.

‘ಇಷ್ಟು ದೂರ ಬಂದಿದ್ದಿ. ಸತ್ಯಕ್ಕೆ ಹತ್ತಿರದಲ್ಲಿರುವಿ. ಮತ್ತೆ ಸರಿಯಾಗಿ ಹುಡುಕು, ಹೊರಡು’ ಎಂದು ಅಜ್ಞಾಪಿಸಿಬಿಟ್ಟರು ಗುರುಗಳು.

ಆತ ಮತ್ತೆ ಹೊರಟ. ಈ ಸಲ ನಿಸರ್ಗದೊಳಕ್ಕೆ ತನ್ನನ್ನು ತಾನು ಕಳೆದುಕೊಂಡ. ಮೊಗ್ಗಿನ ಹುಟ್ಟನ್ನು, ಹೂವಿನ ಅರಳುವಿಕೆಯನ್ನು, ಜಿಂಕೆಯ ಓಟವನ್ನು ನಿತ್ಯವೂ ಗಮನಿಸತೊಡಗಿದ.

ಸೂರ್ಯನ ಹುಟ್ಟು-ಸಾವು, ಭೂಮಿ ಎಂಬ ಬುಗುರಿ, ಮಳೆಯ ಪ್ರಣಯ. ಸಸ್ಯದ ತಾಯ್ತನ, ನದಿಯ ಜುಳು ಜುಳು, ಸಮುದ್ರದ ಆಗಾಧತೆ ಅವನಿಗೆ ಅರ್ಥವಾದವು. ಈಗಾತನ ಬಿಳಿಯ ಗಡ್ಡ ಎದೆಗೆ ಇಳಿದಿದ್ದವು. ಆತ ನಡುವಯಸ್ಸು ದಾಟಿದ್ದ.

ಮತ್ತೆ ಗುರುವನ್ನು ಹುಡುಕಿಕೊಂಡು ಬಂದ.

‘ದೇವರು ಸಿಕ್ಕನೇ’ ಗುರುಗಳು ಕೇಳಿದರು.

‘ಇಲ್ಲ ಗುರುಗಳೆ, ಆದರೆ ಸತ್ಯ ಸಿಕ್ಕಿತು’

‘ಏನದು?’

‘ಮೊಗ್ಗು, ಹೂವು, ಜಿಂಕೆ, ಮಳೆ, ಹುಟ್ಟು ಸಾವು ಇವೆಲ್ಲವೂ ನಿಸರ್ಗದ ಚಲನಶೀಲ ಗುಣಗಳು. ಇವುಗಳನ್ನೇ ತಮ್ಮ ಬಂಡವಾಳ ಮಾಡಿಕೊಂಡಿರುವ ಧಾರ್ಮಿಕ ದಲ್ಲಾಳಿಗಳು, ಕಪಟಿಗಳು ಇವುಗಳನ್ನೇ ದೇವರ ಲೀಲೆ ಎಂದರು. ಕಾಣದ ದೇವರನ್ನು ಕಲ್ಪಿಸಿಕೊಂಡು ಶಿಲ್ಪ ಕೆತ್ತಿ ಗುಡಿ ಗುಂಡಾರದಲ್ಲಿಟ್ಟು ದೇವರ ಗುಣಗಾನ ಮಾಡುತ್ತಾ ಹೊಟ್ಟೆ ಹೊರೆಯುತ್ತಿದ್ದಾರೆ, ಅಷ್ಟೆ ಗುರುಗಳೆ.’ ಎಂದು ಒಂದೇ ಉಸುರಿಗೆ ಒದರಿದ.

‘ಈಗ ನೀನು ಸರಿಯಾದ ದಿಕ್ಕಿನಲ್ಲಿರುವೆ. ನಿನಗೆ ಸತ್ಯ ಸಿಕ್ಕಿದೆ. ಸತ್ಯದ ಸಾಕ್ಷಾತ್ಕಾರವೇ ದೇವರು. ಹೋಗು, ನೀನು ಕಂಡುಕೊಂಡ ಸತ್ಯವನ್ನು ನಿನ್ನ ಜಗತ್ತಿಗೆ ಸಾರು’ ಗುರುಗಳ ಆದೇಶ ಮತ್ತೆ ಹೊರಬಿತ್ತು.

ಸಿದ್ದ ಈಗ ಮಾಗಿದ್ದ. ಆತನ ಮುಖದ ಮೇಲೆ ಸಾಕ್ಷಾತ್ಕಾರದ ವಿಶೇಷ ಕಳೆ ಇತ್ತು. ತಾನು ಕಂಡುಕೊಂಡ ಸತ್ಯವನ್ನು ತನ್ನವರಿಗೆ ಹೇಳಬೇಕು ಎಂಬ ಹಂಬಲ ಅವನಲ್ಲಿ ಹೆಮ್ಮರವಾಗತೊಡಗಿತು. ಊರ ಕಡೆ ಹೆಜ್ಜೆ ಹಾಕಿದ.

ಊರಿಗೆ ಬಂದಾಗ ಅವನನ್ನು ಹೆತ್ತ ಜೀವಗಳು ನಿಸರ್ಗದ ಸೃಷ್ಟಿ- ಲಯಗಳ ಚಲನಶೀಲತೆಗೆ ಬೆಲೆತೆತ್ತು ಇನ್ನಿಲ್ಲವಾಗಿದ್ದವು. ಅವನಿಗೆ ಅವನವರು ಅನ್ನುವವರು ಯಾರೂ ಇರಲಿಲ್ಲ. ಆತ ಊರ ಹೊರಗಿನ ಪಾಳು ದೇಗುಲದಲ್ಲಿ ಉಳಿದುಕೊಂಡ.

ನಿಧಾನಕ್ಕೆ ಊರ ಜನ ಅವನನ್ನು ಸುತ್ತುವರಿಯತೊಡಗಿದರು. ಅವನ ಮುಖದ ಪ್ರಭೆಗೆ ಮಾರು ಹೋಗಿ ಅಡ್ಡಬೀಳತೊಡಗಿದರು. ಇರಿ ಹಾಗೆಲ್ಲ ಮಾಡಬಾರದು. ದೇವರೆನ್ನುವುದು ಇಲ್ಲವೇ ಇಲ್ಲ. ನಿಮಗೇ ನೀವೇ ದೇವರಾಗಿ. ಇದೆಲ್ಲ ನಿಸರ್ಗದ ಆಟೋಟ ಎಂದು ಆತ ಹೇಳತೊಡಗಿದ. ಅವರ ಗದ್ದಲದ ನಡುವೆ ಅವನ ಧ್ವನಿ ಕ್ಷೀಣವಾಗಿತ್ತು.

‘ಸ್ವಾಮಿಗಳು ದೇವರ ಜೊತೆ ಮುನಿಸಿಕೊಂಡಂಗೆ ಕಾಣ್ತದೆ. ಅದಕ್ಕೆ ಹೀಗೆಲ್ಲ ಹೇಳ್ತಿದ್ದಾರೆ. ಏಷ್ಟೇ ಆದರೂ ದೇವರ ದರ್ಶನ ಮಾಡಿದ ದೊಡ್ಡವರು. ಸ್ವಾಮಿಗಳಿಗೆ ನಮ್ಮ ಭಕ್ತಿಯನ್ನು ಅರ್ಪಿಸುವುದು ನಮ್ಮ ಕರ್ತವ್ಯ’ ಎಂದು ಊರ ಜನ ಪಾಳು ಬಿದ್ದ ಗುಡಿಯ ಮುಂದೆಯೇ 
ಒಂದು ಮಂಟಪ ನಿರ್ಮಿಸಿ ಅಹೋರಾತ್ರಿ ಭಜನೆ ಮಾಡತೊಡಗಿದರು.

ಆದರೆ, ಬೆಳಿಗ್ಗೆ ಅವರಿಗೆ ಆಘಾತ ಕಾದಿತ್ತು. ತನ್ನ ಜೀವಮಾನ ಪೂರ್ತಿ, ಕಾಶಿ, ವಾರಾಣಸಿ, ಹಿಮಾಲಯಗಳನ್ನು ಸುತ್ತಾಡಿ ದಣಿದಿದ್ದರಿಂದಲೋ, ಊರ ಜನರ ಭಕ್ತಿಗೆ ಬೆಕ್ಕಸ ಬೆರಗಾಗಿ ಮಂಕು ಬಡಿದೋ ಅಥವಾ ಇನ್ನು ನಾನಿದ್ದುಕೊಂಡು ಫಲವೇನು ಅಂದುಕೊಂಡೋ ಸಿದ್ದಯ್ಯ ಸ್ವಾಮಿಗಳು ನಿಸರ್ಗದ ಕರೆಗೆ ಓಗೊಟ್ಟು ದೇಹ ತ್ಯಜಿಸಿದ್ದರು.
ಸಿದ್ದಯ್ಯ ಸ್ವಾಮಿಗಳು ಐಕ್ಯರಾದ ಜಾಗದಲ್ಲೀಗ ದೊಡ್ಡ ಮಠ ಎದ್ದಿದೆ. ಅವರ ಮೇಲೆ ಸಾವಿರಾರು ಭಜನೆಗಳು, ಶ್ಲೋಕಗಳು ರಚನೆಗೊಂಡಿವೆ.

‘ಸಿದ್ದಯ್ಯ ಸ್ವಾಮಿ ಪವಾಡ’ ಗ್ರಂಥದ ಲಕ್ಷಾಂತರ ಪ್ರತಿಗಳು ಖಾಲಿಯಾಗಿವೆ. ಅವರ ಗದ್ದುಗೆಯಲ್ಲಿರುವ ಈಗಿನ ಮರಿ ಸ್ವಾಮಿಯವರನ್ನು ವರ್ಷಕ್ಕೊಮ್ಮೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !