ಶುಕ್ರವಾರ, ಮೇ 27, 2022
26 °C

ಮಂಗಳವಾಯಿತು, ಇನ್ನು ಶುಕ್ರ

ಎಂ. ಅಬ್ದುಲ್ ರೆಹಮಾನ್ ಪಾಷ Updated:

ಅಕ್ಷರ ಗಾತ್ರ : | |

ಮುಸ್ಸಂಜೆ ಹೊತ್ತಿನಲ್ಲಿ ಪಶ್ಚಿಮದಲ್ಲಿ ಮೊದಲು ಕಾಣಿಸುವುದು ಸಂಜೆ ನಕ್ಷತ್ರ. ಹಾಗೆಯೇ ಸೂರ್ಯೋದಯಕ್ಕಿಂತ ಮುಂಚೆ ಪೂರ್ವದಲ್ಲಿ ಮೋಹಕವಾಗಿ ಹೊಳೆಯುವುದು ಬೆಳಗಿನ ನಕ್ಷತ್ರ. ಹೆಸರು ಹೀಗಿದ್ದರೂ ಇದು ನಿಜವಾಗಿಯೂ ಒಂದು ನಕ್ಷತ್ರವಲ್ಲ; ಇದು ಗ್ರಹ, ಶುಕ್ರ ಗ್ರಹ. ಕಾಣುವ ಗಾತ್ರ ಮತ್ತು ಹೊಳಪಿನಿಂದಾಗಿ ಇದನ್ನು ಜನ ‘ನಕ್ಷತ್ರ’ ಎಂದು ಕರೆದರು. ಇದು ದೂರದ ಬೆಟ್ಟದ ಹಾಗೆ ಇಲ್ಲಿಂದಲೇ ನೋಡಲು ಚಂದ, ಹತ್ತಿರದಿಂದ ಇದು ಘೋರ. ಆದರೂ ನಮ್ಮ ಇಸ್ರೊ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಶುಕ್ರನತ್ತ ಸಾಗುವ ಸಿದ್ಧತೆ ನಡೆಸುತ್ತಿದೆ.

ಇಸ್ರೊ ನಮ್ಮ ದೇಶಕ್ಕಷ್ಟೇ ಅಲ್ಲ, ಇಡೀ ಜಗತ್ತಿನ ಖಗೋಳ ವಿಜ್ಞಾನ ಕ್ಷೇತ್ರಕ್ಕೆ ಹೆಮ್ಮೆ. ಹಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿರುವ ಅಮೆರಿಕ, ಬ್ರಿಟನ್, ಚೀನಾ ಮುಂತಾದ ದೇಶಗಳಿಗಿಂತಲೂ ನಿಖರವಾದ ತಂತ್ರಜ್ಞಾನ ಹಾಗೂ ಮಿತವ್ಯಯಕ್ಕೆ ಹೆಸರುವಾಸಿ ಇಸ್ರೊ. ಚಂದ್ರ ಹಾಗೂ ಮಂಗಳನತ್ತ ಯಾನ ಬೆಳೆಸಿದ ನಂತರ ಇಸ್ರೊ ಈಗ ಶುಕ್ರ ಗ್ರಹದತ್ತ ಮುಖ ಮಾಡಿದೆ. ಎಲ್ಲವೂ ಸಾಂಗವಾಗಿ ನಡೆದರೆ 2023ರಲ್ಲಿ ಶುಕ್ರಯಾನಕ್ಕೆ ಚಾಲನೆ ಸಿಗಲಿದೆ.

ಭೂಮಿಯ ಅವಳಿ ಸೋದರಿ
ಭೂಮಿಯಿಂದ ಬರಿಗಣ್ಣಿನಿಂದ ಕಾಣುವ ಐದು ಗ್ರಹಗಳಲ್ಲಿ ಅತ್ಯಂತ ಉಜ್ವಲವಾಗಿ ಕಾಣುವ ಗ್ರಹ ಶುಕ್ರ. ಇದು ಅನುಕ್ರಮಣಿಕೆಯಲ್ಲಿ ಸೌರವ್ಯೂಹದಲ್ಲಿ ಸೂರ್ಯನ ಸುತ್ತುತ್ತಿರುವ ಎರಡನೆಯ ಗ್ರಹ. ಶುಕ್ರಗ್ರಹ ಸೂರ್ಯದಿಂದ ಸರಾಸರಿ 10.82 ಕೋಟಿ ಕಿ.ಮೀ (10,82,09,000) ದೂರದಲ್ಲಿದೆ. ಭೂಮಿಯ ನೆರೆಹೊರೆಯ ಗ್ರಹಗಳ ಪೈಕಿ ಒಂದು ಕಡೆ ಮಂಗಳ, ಇನ್ನೊಂದು ಕಡೆ ಶುಕ್ರ ಗ್ರಹ ಇದೆ. ಗಟ್ಟಿ ನೆಲ ಇರುವ ನಾಲ್ಕು ಗ್ರಹಗಳಲ್ಲಿ ಶುಕ್ರವೂ ಒಂದು. ಭೂಮಿಯೊಂದಿಗೆ ಶುಕ್ರವೂ ಹುಟ್ಟಿಕೊಂಡಿತು ಎನ್ನುವ ಕಾರಣಕ್ಕೆ ಇದನ್ನು ಭೂಮಿಯ ‘ಅವಳಿ ಸೋದರಿ’ ಎನ್ನುತ್ತಾರೆ. ಭೂಮಿಗೆ ಅತ್ಯಂತ ಹತ್ತಿರವಾಗಿರುವ ಗ್ರಹ ಕೂಡ ಹೌದು ಇದು. ಭೂಮಿ ಮತ್ತು ಶುಕ್ರ ಗ್ರಹಗಳ ನಡುವೆ ಇರುವ ಸಾಮ್ಯತೆಗಳು ಹಲವು. ಈ ಸಾಮ್ಯತೆಗಳು ‘ಅವಳಿ ಸೋದರಿ’ ಎಂಬ ಹೆಸರು ಬರಲು ಕಾರಣ. ಉದಾಹರಣೆಗೆ, ಗಾತ್ರ, ದ್ರವ್ಯರಾಶಿ, ಸಾಂದ್ರತೆ, ಸಂಯೋಜನೆ ಮತ್ತು ಗುರುತ್ವ ಎರಡೂ ಗ್ರಹಗಳಲ್ಲಿ ಸಮನಾಗಿವೆ. ಸಾಮ್ಯತೆ ಇಲ್ಲಿಗೇ ಮುಗಿಯಿತು, ಉಳಿದೆಲ್ಲವೂ ವಿಚಿತ್ರ.

ಶುಕ್ರ ಗ್ರಹದ ಸುತ್ತಲೂ ವಾತಾವರಣವಿದೆ. ಇದು ಹೆಚ್ಚಿನಂಶ ಕಾರ್ಬನ್ ಡೈ ಆಕ್ಸೈಡ್‍ನಿಂದ ತುಂಬಿದೆ. ಶುಕ್ರ ದಟ್ಟವಾದ ಮೋಡಗಳಿಂದ ಆವೃತವಾಗಿದೆ. ಇಲ್ಲಿನ ಮೋಡಗಳು ನೀರಿನ ಮೋಡಗಳಲ್ಲ, ಇವು ಬಹುಪಾಲು ಸಲ್ಫ್ಯೂರಿಕ್ ಆ್ಯಸಿಡ್‍ನಿಂದ ತುಂಬಿದ ಮೋಡಗಳು. ಈ ದಟ್ಟ ಮೋಡಗಳಿಂದಾಗಿ ಶುಕ್ರದ ನೆಲ ಹೊರಗಡೆಯಿಂದ ಕಾಣುವುದಿಲ್ಲ. ಈ ಮೋಡಗಳು ಸೂರ್ಯನ ಬಹುಪಾಲು ಬೆಳಕನ್ನು ಪ್ರತಿಫಲಿಸುತ್ತವೆ. ಶುಕ್ರ ಗ್ರಹ ಭೂಮಿಯಿಂದ ಅಷ್ಟು ಉಜ್ವಲವಾಗಿ ಕಾಣುವುದು ಈ ಕಾರಣಕ್ಕಾಗಿಯೇ. ಸೂರ್ಯನಿಗೆ ಅತ್ಯಂತ ಹತ್ತಿರವಿರುವ ಗ್ರಹ ಬುಧ. ಅದರ ಸರಾಸರಿ ಉಷ್ಣತೆ 167 ಡಿಗ್ರಿ ಸೆಲ್ಸಿಯಸ್. ಆದರೆ ಸೂರ್ಯನಿಂದ ಬುಧ ಗ್ರಹಕ್ಕಿಂತಲೂ ಎರಡು ಪಟ್ಟು ಹೆಚ್ಚು ದೂರವಿರುವ ಶುಕ್ರ ಗ್ರಹದ ಸರಾಸರಿ ಉಷ್ಣತೆ ಸೀಸವೂ ಕರಗಿ ದ್ರವವಾಗುವಷ್ಟು– ಅಂದರೆ 465 ಡಿಗ್ರಿ ಸೆಲ್ಸಿಯಸ್. ಇದು ಸೌರವ್ಯೂಹದಲ್ಲಿಯೇ ಅತ್ಯಂತ ಬಿಸಿಯಾದ ಗ್ರಹ. ತನ್ನ ದಟ್ಟ ವಾತಾವರಣದ ಮೇಲೆ ಬಿದ್ದು ಪ್ರತಿಫಲನ ಆಗುವ ಶಾಖವನ್ನು ಚದುರಿಹೋಗದಂತೆ ಹಿಡಿದಿಟ್ಟುಕೊಳ್ಳುವುದೇ ಶುಕ್ರ ಗ್ರಹ ಇಷ್ಟು ಬಿಸಿಯಾಗಿರುವುದಕ್ಕೆ ಕಾರಣ. ಅತಿ ಹೆಚ್ಚಿನ ಶಾಖದಿಂದಾಗಿ ಇಲ್ಲಿ ದ್ರವ ರೂಪದ ನೀರಿಲ್ಲ, ಹೀಗಾಗಿ ಇದು ತುಂಬ ಒಣ ಗ್ರಹ. ಮೇಲ್ಮೈನಲ್ಲಿ 1 ಕಿ.ಮೀನಿಂದ 240 ಕಿ.ಮೀ.ನಷ್ಟು ಅಗಲದ ಸಾವಿರಾರು ಜ್ವಾಲಾಮುಖಿಗಳು ನಿರಂತರವಾಗಿ ಬೆಂಕಿ ಕಾರುತ್ತಿರುತ್ತವೆ.

ವಿರುದ್ಧ ತಿರುಗುವ ಸೋದರಿ
ಭೂಮಿಯು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಗಿರಕಿ ಹೊಡೆಯುತ್ತದೆ ಎಂದು ನಮಗೆ ಗೊತ್ತು. ಆದರೆ ಶುಕ್ರ ಅದಕ್ಕೆ ವಿರುದ್ಧವಾಗಿ, ಪೂರ್ವದಿಂದ ಪಶ್ಚಿಮಕ್ಕೆ ತಿರುಗುತ್ತದೆ. ಅಂದರೆ ಅಲ್ಲಿ ಸೂರ್ಯೋದಯ ಪಶ್ಚಿಮದಲ್ಲಿ, ಸೂರ್ಯಾಸ್ತ ಪೂರ್ವದಲ್ಲಿ! ಗಿರಕಿಯನ್ನೂ ಎಷ್ಟು ನಿಧಾನವಾಗಿ ಹೊಡೆಯುತ್ತದೆ ಎಂದರೆ, ಭೂಮಿ ತನ್ನ ಸುತ್ತ ತಾನು ಒಂದು ಸಲ ಸುತ್ತುವ ಕಾಲವನ್ನು ಒಂದು ದಿನ ಎನ್ನುತ್ತೇವಲ್ಲ, ಆ ಲೆಕ್ಕದಲ್ಲಿ ಸೋಮಾರಿ ಶುಕ್ರ ತನ್ನ ಸುತ್ತ ತಾನು ತಿರುಗಲು 43 ದಿನ ತೆಗೆದುಕೊಳ್ಳುತ್ತದೆ. ಅಂದರೆ ಸುಮಾರು ನಮ್ಮ ಇಪ್ಪತ್ತೊಂದೂವರೆ ದಿನಗಳ ಹಗಲು, ಅಷ್ಟೇ ಸಮಯದ ರಾತ್ರಿ ಶುಕ್ರನಲ್ಲಿ. ಈ ನಿಧಾನಗತಿಗೆ ವಿರುದ್ಧ ಎನ್ನುವಂತೆ, ಶುಕ್ರ ಸೂರ್ಯನಿಗೆ ತುಂಬ ಹತ್ತಿರವಿರುವುದರಿಂದ, ಅದು ಸೂರ್ಯನ ಸುತ್ತ ಒಂದು ಸುತ್ತು ಸುತ್ತಲು ತೆಗೆದುಕೊಳ್ಳುವ ಸಮಯ, 225 ದಿನ ಮಾತ್ರ. ಭೂಮಿಗೆ ಒಂದು ಚಂದ್ರವಿದೆ, ಶುಕ್ರಕ್ಕೆ ಇಲ್ಲ.

ಭೂಮಿಯು ಸ್ವಯಂಭ್ರಮಣೆಯಲ್ಲಿ ಗಂಟೆಗೆ 1,670 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಆದರೆ ಶುಕ್ರ ತಿರುಗುವ ವೇಗ ಕೇವಲ ಗಂಟೆಗೆ 6.52 ಕಿ.ಮೀ. ಆದರೆ ಇಲ್ಲಿನ ಒಂದು ವಿಚಿತ್ರ ಸಂಗತಿಯೆಂದರೆ ಶುಕ್ರದ ನೆಲಕ್ಕೆ ಹತ್ತಿರವಿರುವ ವಾತಾವರಣದ ಪದರವು ಸುಮಾರು ಇಷ್ಟೇ ವೇಗದಲ್ಲಿ ಚಲಿಸುತ್ತಿದ್ದರೆ, ಇದರ ವಾತಾವರಣದ ಮೇಲ್ಪದರದ ಮಾರುತ ಸುಮಾರು ಗಂಟೆಗೆ 360 ಕಿ.ಮಿ. ವೇಗದಲ್ಲಿ ಚಲಿಸುತ್ತದೆ. ಅಂದರೆ ಶುಕ್ರವು ಸ್ವತಃ ತಿರುಗುವ ಗತಿಗಿಂತ 60 ಪಟ್ಟು ಹೆಚ್ಚು ವೇಗ. ಇದೊಂದು ವಿಸ್ಮಯ.

ಶುಕ್ರದತ್ತ ಪಯಣಕ್ಕೆ ಸಿದ್ಧತೆ
ಚಂದ್ರಯಾನ ಮತ್ತು ಮಂಗಳಯಾನದ ಯಶಸ್ಸಿನಿಂದ ಉತ್ತೇಜಿತವಾದ ಇಸ್ರೊ ಈಗ ಶುಕ್ರ ಗ್ರಹದ ಶೋಧನೆಯ ಸಾಹಸಕ್ಕೆ ಕೈ ಹಾಕಿದೆ. ಯೋಜನೆ ವಿಕಾಸದ ಹಂತದಲ್ಲಿದೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಮಂಜೂರಾತಿ ಸಿಕ್ಕಿದ್ದು, ತಗಲುವ ವೆಚ್ಚವನ್ನು ಹಂತಹಂತವಾಗಿ ಬಿಡುಗಡೆ ಮಾಡುವ ಯೋಜನೆಯಿದೆ. ಚಂದ್ರಯಾನ 2ರ ಅಡಿ ಆಕಾಶನೌಕೆಯನ್ನು 2020ರಲ್ಲಿ ಉಡಾಯಿಸುವ ಯೋಜನೆಯಿದ್ದು, ಅದರ ನಂತರ, ಅಂದರೆ 2023ರಲ್ಲಿ ಶುಕ್ರಯಾನದ ನೌಕೆಯನ್ನು ಹಾರಿಬಿಡುವ ಯೋಜನೆಯಿದೆ.

ಯಾವುದೇ ಬಾಹ್ಯಾಕಾಶ ಯಾನದಲ್ಲಿ, ರಾಕೆಟ್ಟಿನ ಮೇಲಿರಿಸುವ ಪೇಲೋಡ್ ತೂಕವು ಬಹಳ ಮಹತ್ವದ್ದು. ಮೊದಲು 175 ಕೆ.ಜಿ.ಗಾಗಿ ಯೋಜಿತವಾಗಿದ್ದ ಅದರ ಸಾಮರ್ಥ್ಯವನ್ನು 100 ಕೆ.ಜಿ.ಗೆ ಇಳಿಸಲಾಗಿದೆ. ಮತ್ತು ಇದು 500 ವ್ಯಾಟ್ ಶಕ್ತಿಯನ್ನು ಹೊಂದಿರುತ್ತದೆ. ಇದು ಕಕ್ಷಾಗಾಮಿಯಾಗಿರುತ್ತದೆ, ಶುಕ್ರದ ಮೇಲೆ ಇಳಿಯುವುದಿಲ್ಲ. ಇದು ಸ್ಥಾಪಿತವಾದಾಗ ಅತಿಯಾದ ಓರೆಯಾದ ಕಕ್ಷೆಯಲ್ಲಿ ಕನಿಷ್ಠ 500 ಕಿ.ಮೀ. ಮತ್ತು ಗರಿಷ್ಠ 60,000 ಕಿ.ಮೀ.ದೂರದಲ್ಲಿ ಸುತ್ತುತ್ತದೆ. ಈ ಕಕ್ಷೆಯನ್ನು ಕ್ರಮೇಣ ಚಿಕ್ಕದು ಮಾಡುವ ಉದ್ದೇಶವಿದೆ. ಬಾಹ್ಯಾಕಾಶ ನೌಕೆ ಅಂತಿಮವಾಗಿ ನಿರ್ಮಾಣಗೊಳ್ಳುವ ಹೊತ್ತಿಗೆ ಈ ಎಲ್ಲ ಅಂಶಗಳನ್ನು ಹೆಚ್ಚು ನಿಖರಗೊಳಿಸಲಾಗುತ್ತದೆ. ಕಕ್ಷಾಗಾಮಿ ನೌಕೆಯಲ್ಲಿ ಇರಿಸಬಹುದಾದ ಉಪಕರಣಗಳ ಸಹಾಯದಿಂದ ಶುಕ್ರ ಗ್ರಹದ ಮೇಲ್ಮೈ, ಮೇಲ್ಮೈನ ಅಡಿಭಾಗ, ಗ್ರಹದ ವಾತಾವರಣದ ಸಂಯೋಜನೆ, ಸೂರ್ಯನ ವಿಕಿರಣಗಳು ಮತ್ತು ಸೌರಮಾರುತಗಳ ಪರಿಣಾಮ ಇತ್ಯಾದಿಗಳನ್ನು ಶೋಧಿಸಲಾಗುತ್ತದೆ.

1966ರ ಮಾರ್ಚ್ 1ರಂದು ರಷ್ಯಾದ ಬಾಹ್ಯಾಕಾಶ ಶೋಧಕ ಗ್ರಹ ನೌಕೆ ವೆನೆರಾ 3 ಮೊಟ್ಟಮೊದಲ ಬಾರಿಗೆ ಶುಕ್ರ ಗ್ರಹದ ಮೇಲೆ ಅಪ್ಪಳಿಸಿ ಇಳಿದಿತ್ತು. ಅಲ್ಲಿಂದೀಚೆಗೆ ಹಲವಾರು ಹತ್ತಿರದಿಂದ ಹಾದು ಹೋಗುವ ಶೋಧಕಗಳು, ಕಕ್ಷಾಗಾಮಿಗಳು ಮತ್ತು ಅದರ ಮೇಲೆ ಅಪ್ಪಳಿಸಿದ ಗ್ರಹನೌಕೆಗಳು ಶೋಧನೆ ನಡೆಸಿವೆ. ಶುಕ್ರ ಗ್ರಹದ ಕುರಿತು ಈವರೆಗೆ ಆಗಿರುವ ಅಧ್ಯಯನಗಳ ಹೊರತಾಗಿಯೂ ಅನೇಕ ಅಂಶಗಳು ನಿಗೂಢವಾಗಿವೆ.

ಸೇರುವುದಿದ್ದರೆ ಹೇಳಿ
ಅಂತರ ಗ್ರಹ ಯಾನ ಮತ್ತೆ ಮತ್ತೆ ಎಲ್ಲ ದೇಶಗಳು ಮಾಡುವಷ್ಟು ಸುಲಭವಲ್ಲ. ಯಾವುದಾದರೂ ಒಂದು ಸಮರ್ಥ ದೇಶ ಇಂಥ ಅಂತರಗ್ರಹ ಯಾನ ಯೋಜಿಸಿದ್ದೇ ಆದರೆ ಕೂಡಲೇ ಜಗತ್ತಿನ ಇತರ ರಾಷ್ಟ್ರಗಳೂ ಈ ಪ್ರಯೋಗದ ಪ್ರಯೋಜನ ಪಡೆಯುವುದು ವಾಡಿಕೆ. ಇಸ್ರೊ ಭಾರತದಿಂದ ಈಗಾಗಲೇ ಪೂರ್ವಭಾವಿಯಾಗಿ ಗುರುತಿಸಲಾಗಿರುವ ಪ್ರಯೋಗಗಳೆಂದರೆ; ಅಲ್ಟ್ರಾವಯಲೆಟ್ ಇಮೇಜಿಂಗ್ ಸ್ಪೆಕ್ಟ್ರೋಸ್ಕೋಪಿ ಟೆಲಿಸ್ಕೋಪ್, ಥರ್ಮಲ್ ಕ್ಯಾಮೆರಾ, ಕ್ಲೌಡ್ ಮಾನಿಟರಿಂಗ್ ಕ್ಯಾಮೆರಾ, ವೀನಸ್ ಅಟ್ಮಾಸ್ಫಿಯರ್ ಸ್ಪೆಕ್ಟ್ರೋಪೊಲರಿಮೀಟರ್, ಏರ್‍ಗ್ಲೋ ಫೋಟೋಮೀಟರ್, ರೇಡಿಯೋ ಅಕಲ್ಟೇಷನ್ ಎಕ್ಸ್‌ಪೆರಿಮೆಂಟ್, ಮಾಸ್ ಸ್ಪೆಕ್ಟೋಮೀಟರ್, ಪ್ಲಾಸ್ಮಾ ವೇವ್ ಡಿಟೆಕ್ಟರ್ ಇತ್ಯಾದಿ.

ಇಸ್ರೋ ಈಗಾಗಲೇ ತನ್ನ ಯೋಜನೆಯ ಸ್ಥೂಲ ವಿಶೇಷಣಗಳನ್ನು ಪ್ರಕಟಿಸಿ ‘ಅವಕಾಶಗಳ ಪ್ರಕಟಣೆ’ ಮಾಡಿದೆ. ಗ್ರಹ ಸಂಶೋಧನಾ ಅಧ್ಯಯನ, ಬಾಹ್ಯಾಕಾಶಕ್ಕಾಗಿ ವೈಜ್ಞಾನಿಕ ಉಪಕರಣಗಳನ್ನು ಅಭಿವೃದ್ಧಿಪಡಿಸುವ ಸಂಸ್ಥೆಗಳು, ಪ್ರಯೋಗಗಳನ್ನು ಅಭಿವೃದ್ಧಿ ಪಡಿಸಬಯಸುವವರು, ಭಾರತದಲ್ಲಿನ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು ಹಾಗೆಯೇ ವಿದೇಶೀ ಬಾಹ್ಯಾಕಾಶ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯಗಳು, ವಿಶ್ವವಿದ್ಯಾಲಯಗಳನ್ನು ಉದ್ದೇಶಿಸಿ ‘ಯಾರು ಯಾರು ಶುಕ್ರಾಧ್ಯಯನದಲ್ಲಿ ಕೈಜೋಡಿಸುತ್ತೀರಿ ನೋಡಿ’ ಎಂದು ಆಹ್ವಾನವನ್ನಿತ್ತಿದೆ. ಇದು ಯೋಜನೆಯ ಆರ್ಥಿಕ ನೆರವಿಗೂ ಸಹಾಯಕವಾಗುತ್ತದೆ. ಬಾಹ್ಯಾಕಾಶ ಎಜೆನ್ಸಿ ಈಗಾಗಲೇ ಸಹಯೋಗ ನೀಡಿ ಜಂಟಿಯಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಆಶಯವನ್ನು ತೋರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು