ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೆಲಿಪೋರ್ಟ್’ ಎಂಬ ನಾರದ ಸಂಚಾರ ನಿಜವಾದೀತೆ?

Last Updated 3 ಫೆಬ್ರುವರಿ 2019, 4:50 IST
ಅಕ್ಷರ ಗಾತ್ರ

ಪೌರಾಣಿಕ ಸಿನಿಮಾದಲ್ಲಿ ನಾರದ ಮುನಿ ವೈಕುಂಠದಿಂದ ಛಂಗನೆ ಮಾಯವಾಗಿ ಕೈಲಾಸದಲ್ಲಿ ಅವತರಿಸಿ, ಮತ್ತಲ್ಲಿಂದ ಕಾಲು ಕಿತ್ತು ಭೂಲೋಕದಲ್ಲಿ ಪ್ರತ್ಯಕ್ಷವಾಗಿ; ಅಲ್ಲಿಂದ ಕಣ್ಮರೆಯಾಗಿ, ಪಾತಾಳಲೋಕದಲ್ಲಿ ಕಾಣಿಸಿಕೊಳ್ಳುವ ದೃಶ್ಯಾವಳಿಗಳನ್ನು ನೋಡಿದ್ದೇವೆ. ಅದೇ ರೀತಿ ಕಲ್ಪನೆ ಮಿಶ್ರಿತ ವೈಜ್ಞಾನಿಕ ಆಂಗ್ಲ ಸಿನಿಮಾಗಳಾದ ‘ಸ್ಟಾರ್-ಟ್ರೆಕ್’, ‘ದಿ ಫ್ಲೈ’ ಗಳಲ್ಲಿ ನಾಯಕನಟರು ಕ್ಷಣಾರ್ಧದಲ್ಲಿ ಅಂತರಿಕ್ಷದ ಕ್ಷಿಪಣಿಗಳಿಂದ ನೇರವಾಗಿ ಭೂಲೋಕದಲ್ಲಿ ಪ್ರತ್ಯಕ್ಷವಾಗಿ ದೃಶ್ಯಾವಳಿಗಳು ಸರ್ವೇಸಾಮಾನ್ಯವಾಗಿವೆ. ಈ ರೀತಿಯ ನಾರದ-ಸಂಚಾರವನ್ನು ವೈಜ್ಞಾನಿಕವಾಗಿ ಕಾರ್ಯಸಾಧು ಮಾಡುವ ಪ್ರಯತ್ನವೇ ‘ಟೆಲಿಪೋರ್ಟೇಷನ್’.

ಟೆಲಿಗ್ರಾಫ್, ಟೆಲಿಪೋನ್, ಮತ್ತು ಟೆಲಿವಿಷನ್ ಎಂಬ ಮಾಧ್ಯಮಗಳ ಮೂಲಕ ಅಕ್ಷರ, ಧ್ವನಿ ಮತ್ತು ದೃಶ್ಯಗಳನ್ನು ದೂರದ ಸ್ಥಳಕ್ಕೆ ಬಿತ್ತರಣೆ ಮಾಡುವುದನ್ನು ಸಾಧಿಸಿದ ನಂತರ ಯಾವುದೇ ವಾಹನದ ಸಹಾಯವಿಲ್ಲದೇ ಮಾನವನನ್ನು ಅಥವಾ ಒಂದು ವಸ್ತುವನ್ನು ಸಪ್ತಸಾಗರ ದಾಟಿಸುವ, ಅಥವಾ ಬ್ರಹ್ಮಾಂಡದ ಆಚೆಗೆ ಕಳಿಸುವ ಪ್ರಯತ್ನಕ್ಕೆ ನಾವುಗಳು ಕೈ ಹಾಕಿದ್ದು ಸಹಜವೇ. ಈ ಪ್ರಯತ್ನವನ್ನೇ ‘ಟೆಲಿಪೋರ್ಟೇಷನ್’ ಎನ್ನುವುದು. ಇದರ ಸಾಧಕ ಬಾಧಕಗಳ ಬಗ್ಗೆ ಮತ್ತು ಅದರಲ್ಲಿ ಕೈಗೊಂಡಿರುವ ಸಂಶೋಧನೆ ಬಗ್ಗೆ ಕ್ಷ-ಕಿರಣ ಬೀರುವ ಯತ್ನ ಇಲ್ಲಿದೆ.

ಮಾನವನ ಬಹುದಿನದ ಕನಸಾದ ಸಾವನ್ನು ಗೆಲ್ಲಬೇಕು ಮತ್ತು ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಬೇಕು ಎಂಬ ಉತ್ಕಟ ಬಯಕೆಗೆ ಪ್ರಕೃತಿ ತಣ್ಣೀರೆರಚುತ್ತಲೇ ಬಂದಿದೆ. ಬೆಳಕಿನ ವೇಗವನ್ನು ಮೀರಿ ಅಥವಾ ಕನಿಷ್ಠ ಪಕ್ಷ ಅದರ ವೇಗದಲ್ಲಿ ಸಂಚಾರ ಮಾಡಿದರೆ ಮಾತ್ರ ‘ಟೆಲಿಪೋರ್ಟೇಷನ್’ ಸಾಧ್ಯ ಎಂಬ ಪ್ರಮುಖ ನಿಬಂಧನೆ, ಈ ಕ್ಷೇತ್ರದಲ್ಲಿನ ಸಂಶೋಧನೆಗೆ ಉತ್ತೇಜನಕಾರಿಯಾಗಿಲ್ಲ ಎಂದೇ ಹೇಳಬೇಕು.

ಬಿಬಿಸಿ ಮಾಧ್ಯಮ ಜುಲೈ 2017 ರಲ್ಲಿ ‘ಟೆಲಿಪೋರ್ಟೇಷನ್ ಮೂಲಕ ಫೋಟಾನ್- ಕಣವನ್ನು ಭೂಮಿಯಿಂದ 1400 ಕಿ.ಮೀ ದೂರದಲ್ಲಿರುವ ಕೃತಕ ಉಪಗ್ರಹಕ್ಕೆ ಕಳಿಸಿದ ಚೀನಾ ವಿಜ್ಞಾನಿಗಳು’ ಎಂಬ ತಲೆಬರಹದೊಂದಿಗೆ ಬಿತ್ತರಿಸಿದ ಸುದ್ದಿಯಿಂದಾಗಿ ಬಹಳ ಸನಿಹದಲ್ಲೇ ಮಾನವನನ್ನು ಅಂತರಿಕ್ಷಕ್ಕೋ, ಭಾರತದಿಂದ ಅಮೆರಿಕಕ್ಕೋ ಯಾವುದೇ ವಾಹನದ ಸಹಾಯವಿಲ್ಲದೇ ನಾರದ ಸಂಚಾರದಂತೆ ಕ್ಷಣಾರ್ಧದಲ್ಲಿ ಮಾಯ ಮಾಡುವ ದಿನ ದೂರವಿಲ್ಲ ಎಂದು ಅನೇಕರು ಭಾವಿಸಿದ್ದೂ ಆಯಿತು. ಇದರ ಸುತ್ತ ಉತ್ಪ್ರೇಕ್ಷೆಗಳು-ಕಲ್ಪನೆಗಳು ಗರಿಗೆದರಿ ಸದ್ದು ಮಾಡುತ್ತಲೂ ಇವೆ. ಹಾಗಿದ್ದರೆ, ಫ್ಯಾಕ್ಸ್ ಮೆಷಿನ್ ಮೂಲಕ ಒಂದು ಹಾಳೆಯಲ್ಲಿನ ಮಾಹಿತಿಯನ್ನು ದೂರದ ಸ್ಥಳಕ್ಕೆ ರವಾನಿಸಿದಂತೆ ಮಾನವನನ್ನು ಸಹ ಕಳಿಸಿಕೊಡಬಹುದೆ? ಎಂಬ ಉಹಾಪೋಹಗಳು ಮಾಧ್ಯಮಗಳಲ್ಲಿ ತೇಲಾಡತೊಡಗಿದವು. ಆದರೆ ಫ್ಯಾಕ್ಸ್‌ನಲ್ಲಿ ಹಾಳೆಯ ನಕಲು ದೂರದ ಊರಿಗೆ ಹೋಗುತ್ತದೆಯೇ ವಿನಃ ಮೂಲ ಹಾಳೆ ಅದೃಶ್ಯವಾಗುವುದಿಲ್ಲ ತಾನೆ? ಅಂದ ಮೇಲೆ ಮಾನವನ ನಕಲು ದೂರದೂರಿನಲ್ಲಿ ನಿಮಾರ್ಣವಾದರೆ? ಮೂಲ ವ್ಯಕ್ತಿಯ ಗತಿ ಏನು? ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಕ್ವಾಂಟಮ್ ಥಿಯರಿ ಪ್ರಕಾರ ಈ ರೀತಿ ಭೌತಿಕ ವಸ್ತುವನ್ನು ಕ್ಲೋನ್ ಮಾಡುವುದು ಅಸಾಧ್ಯವಾದುದು ಎಂಬುದು ಸಹ ಈ ಟೆಲಿಪೋರ್ಟೇಷನ್ ಪ್ರಯತ್ನಕ್ಕೆ ವಿಘ್ನವನ್ನೇ ತಂದೊಡ್ಡಿದೆ.

‘ಕ್ವಾಂಟಮ್- ಟೆಲಿಪೋರ್ಟೇಷನ್’ ಎಂಬ ಆಶಾಕಿರಣದ ಬೆನ್ನುಹತ್ತಿ

ಮಾನವ ಅದೃಶ್ಯವಾಗಿ ಮತ್ತೆಲ್ಲೋ ಉದ್ಭವವಾಗುವುದು ಟೆಲಿವಿಷನ್ ಅಥವಾ ಟೆಲಿಫೋನ್‍ನಲ್ಲಿ ದೃಶ್ಯ ಅಥವಾ ಧ್ವನಿ ಕಳಿಸಿದಷ್ಟು ಸುಲಭವಲ್ಲ ಎಂಬುದು ವಿಜ್ಞಾನಿಗಳಿಗೆ ಖಾತ್ರಿಯಾಗಿದೆ. ಆದರೆ, ‘ಕ್ವಾಂಟಮ್- ಟೆಲಿಪೋರ್ಟೇಷನ್’ ಎಂಬ ಕ್ರಿಯೆಯ ಮೂಲಕ ಪರಮಾಣುವಿನ ಕಣವಾದ ಫೋಟಾನ್ ಅನ್ನು ಚೀನಾದ ವಿಜ್ಞಾನಿಗಳು ಭೂಮಿಯಿಂದ 1400 ಕಿ.ಮೀ ಎತ್ತರದಲ್ಲಿರುವ ಉಪಗ್ರಹಕ್ಕೆ 2017 ರಲ್ಲಿ ರವಾನಿಸಿದರು ಎಂಬ ಸುದ್ದಿ ಟೆಲಿಪೋರ್ಟೇಷನ್ ಪ್ರತಿಪಾದಕರ ಆಸೆಗೆ ಪುಷ್ಟಿ ನೀಡಿದೆ. ‘ಮಾನವನ ಟೆಲಿಪೋರ್ಟೇಷನ್’ಗೆ ಈ ಪ್ರಯೋಗ ಮುನ್ನುಡಿ ಎಂದು ಅವರು ಹೇಳತೊಡಗಿದ್ದಾರೆ. ವಾಸ್ತವವಾಗಿ, ಚೀನಿ ವಿಜ್ಞಾನಿಗಳು ಈ ಪ್ರಯೋಗದಲ್ಲಿ ಫೋಟಾನ್ ಅನ್ನು ರವಾನಿಸಿಲ್ಲ ಬದಲಾಗಿ ಒಂದು ಫೋಟಾನ್ ಕಣದಲ್ಲಿನ ಮಾಹಿತಿಯನ್ನು ಮಾತ್ರ ರವಾನಿಸಿದ್ದಾರೆ ಎಂಬ ಸತ್ಯವನ್ನು ಅನೇಕ ವಿಜ್ಞಾನಿಗಳು, ವೈಜ್ಞಾನಿಕ ಲೇಖಕರು ಸ್ಪಷ್ಟಪಡಿಸಿದ್ದಾರೆ.

ಪರಿಣಾಮ– ದುಷ್ಪರಿಣಾಮ

ಒಂದು ವೇಳೆ ಮುಂದೊಂದು ದಿನ ಫೋಟಾನ್‍ನ ಮಾಹಿತಿ ಮಾತ್ರವಲ್ಲದೇ ಫೋಟಾನ್‍ಅನ್ನೇ ರವಾನಿಸುವುದು ಸಾಧ್ಯವಾಗಿದ್ದೇ ಆದರೆ?! ಸುಮಾರು 1028 ನಷ್ಟು ಪರಮಾಣು ಕಣಗಳಿಂದ ಮಾಡಲ್ಪಟ್ಟಿರುವ ಮಾನವನ ದೇಹವನ್ನು ಟ್ರಿಲಿಯನ್- ಟ್ರಿಲಿಯನ್ ಕಣಗಳಾಗಿ ವಿಭಜಿಸಿ ಟೆಲಿಪೋರ್ಟೇಷನ್ ಮೂಲಕ ಮತ್ತೊಂದು ಸ್ಥಳಕ್ಕೆ ಕಳಿಸಿ, ಕಾರನ್ನೊ, ಬೈಕನ್ನೋ ಬಿಡಿಭಾಗಗಳಿಂದ ಅಸೆಂಬ್ಲಿ ಮಾಡಿದಂತೆ ಮಾಡುವುದು ಸಾಧ್ಯವಾದರೆ ಹೇಗೆ? ಎಂಬ ಅಂತೆ- ಕಂತೆಗಳು ಅಂತರ್ಜಾಲದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಲೇ ಇವೆ.

ಇದು ಸಾಧ್ಯವೇ ಆದರೆ, ಎರಡು ಪ್ರಮುಖ ಪ್ರಶ್ನೆಗಳು ಉದ್ಭವವಾಗುತ್ತವೆ:

* ‘ಮಾನವನ ದೇಹವನ್ನು ಅಣು- ಅಣು ಆಗಿ ವಿಂಗಡಿಸಿವುದೇನೋ ಸರಿ. ಆದರೆ ಆತನ ಮೆದುಳಿನಲ್ಲಿ ಅವಿತು ಕುಳಿತಿರುವ ವಿಚಾರಗಳನ್ನು ಹೇಗೆ ರವಾನಿಸುವಿರಿ?’ ಎಂಬುದು ಮತ್ತು

* ‘ಭೌತಿಕ ದೇಹದ ಮರುಜೋಡಣೆಯಲ್ಲಿ ಎಡವಟ್ಟಾದರೆ ಹೇಗೆ?’ ಊನವುಳ್ಳ ಹೊಸ ಮಾನವನ ಜನನಕ್ಕೆ ಯಾರು ಹೊಣೆ?

ಇನ್ನು ಕೆಲವು ಆಸೆಬುರಕ ಮಾನವ ಜೀವಿಗಳು, ‘ನನಗೆ 50 ವರ್ಷ ದಾಟಿದೆ, ಟೆಲಿಪೋರ್ಟೇಷನ್ ಮೂಲಕ ಪುರ್ನನಿರ್ಮಾಣ ಸಾಧ್ಯವಾಗಿದ್ದೇ ಆದರೆ ನನ್ನ 50 ವರ್ಷದ ಮೂಲ ಆಕೃತಿ ಬದಲು 20ರ ಚಿರಯುವಕನ ರೂಪವನ್ನು ಏಕೆ ಮರುಸೃಷ್ಟಿಸಬಾರದು?’ ಎಂದು ಕೇಳತೊಡಗಿದ್ದಾರೆ. ಇಂತಹ ಅತಿ ಆಸೆ ಇಲ್ಲದ ಕೆಲವು ತಾಯಂದಿರ ಪುಟ್ಟ ಬಯಕೆ– ತಮ್ಮ ಪುಟ್ಟ ಮಕ್ಕಳನ್ನು ದಿನವೂ ಶಾಲೆಗೆ ಟ್ರಾಫಿಕ್ ಜಂಜಾಟವಿಲ್ಲದೇ ಟೆಲಿಪೋರ್ಟ್ ಮಾಡಿದರೆ ಹೇಗೆ ಎಂಬುದು! ಇಂತಹ ಸುದ್ದಿಗಳೂ ನೂರಾರು ರೂಪದಲ್ಲಿ ಅಂರ್ತಜಾಲದಲ್ಲಿ ಸುಳಿದಾಡುತ್ತಿವೆ. ಈ ರೀತಿ ದಿನವೂ ಮಕ್ಕಳನ್ನು ಕಣ- ಕಣವಾಗಿ ವಿಭಜಿಸಿ ಶಾಲೆಗೆ ರವಾನಿಸುವುದು ದಿನ- ನಿತ್ಯದ ಶಿಶುಹತ್ಯೆ ಅಲ್ಲದೆ ಬೇರೇನು? ಎಂಬ ಪ್ರಶ್ನೆಗಳನ್ನೂ ಸಹಜವಾಗಿ ಮಾನವತಾವಾದಿಗಳು ಎತ್ತುತಿದ್ದಾರೆ. ಮಾನವನ- ಟೆಲಿಪೋರ್ಟೇಷನ್‌ನಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ಪ್ರಕೃತಿಯ ನಿಯಮದಂತೆ ಬದುಕ ಬಯಸುವ ಪ್ರತಿಯೊಬ್ಬರಿಗೂ ಅನಿಸುವುದು ಸಹಜವೇ. ಮಾನವನ ಪುನರ್ನಿರ್ಮಾಣ ಪ್ರಕೃತಿಮಾತೆಯ ಹಕ್ಕು ಮಾತ್ರ ಆಗಿದ್ದರೆ ಮಾತ್ರ ಸಕಲ ಜೀವಜಂತುಗಳಿಗೂ ಇಲ್ಲಿ ಉಳಿಗಾಲ ಎಂಬ ಕಠೋರ ಸತ್ಯವನ್ನು ಮನಗಂಡಾದರೂ, ‘ಮಾನವನ- ಟೆಲಿಪೋರ್ಟೇಷನ್’ ಕಾಲ್ಪನಿಕ ಕಥೆಗಳಲ್ಲಿ ಇದ್ದರೇ ಚೆಂದ ಅದು ಸತ್ಯವಾಗದಿರಲಿ ಎಂಬುದು ನಿಸರ್ಗಕ್ಕೆ ಹತ್ತಿರವಾಗಿ ಬದುಕುವವರ ಸದ್ಯದ ಆಶಯ.

ಪ್ರಯತ್ನದ ಫಲ

ಟೆಲಿಪೋರ್ಟೇಷನ್ ಪ್ರಯತ್ನದಲ್ಲಿ ಭೌತವಿಜ್ಞಾನಿಗಳು ‘ಕ್ವಾಂಟಮ್ ಥಿಯರಿ’ಯ ಮತ್ತಷ್ಟು ಉಪಯುಕ್ತ ವಿಚಾರಗಳನ್ನು ಕಂಡುಕೊಂಡಿದ್ದಾರೆ. ಅದೇ ‘ಕ್ವಾಂಟಮ್- ಕಂಪ್ಯೂಟಿಂಗ್’ ಎಂಬ ನವೀನ ರೀತಿಯ ಗಣಕವಿಜ್ಞಾನ. ಈ ಕ್ವಾಂಟಮ್ ಕಂಪ್ಯೂಟರ್‍ಗಳು ‘1’ ಅಥವಾ ‘0’ ಎಂಬ ಬೈನರಿ ಅಂಕಿಗಳ ಮೂಲಕ ಮಾಹಿತಿ ರವಾನಿಸದೇ, ಕ್ಯೂ-ಬಿಟ್ ಎಂಬ ಅಂಕಿ ಮೂಲಕ ವಿಷಯ ಸಂಗ್ರಹಿಸುತ್ತವೆ. ಈ ಕ್ಯೂ-ಬಿಟ್ ನ ವಿಶೇಷತೆ ಅಂದರೆ ಇವು ಕೇವಲ ‘1’ ಮತ್ತು ‘0’ ಸ್ಥಾನದಲ್ಲಿ ಸ್ಥಾಪಿಸಲ್ಪಡದೇ ಎರಡೂ ಸ್ಥಾನದಲ್ಲಿ ಏಕಾಕಾಲಕ್ಕೆ ಗೋಚರವಾಗುವ ಶಕ್ತಿ ಹೊಂದಿವೆ. ಇದರಿಂದ ನಮ್ಮ ಕಂಪ್ಯೂಟರ್‍ಗಳ ವೇಗ ಮತ್ತಷ್ಟು ವೃದ್ಧಿಸುವುದು ಸ್ವಾಗತಾರ್ಹ ವಿಚಾರವೇ.

‘ಕ್ವಾಂಟಮ್-ಟೆಲಿಪೋರ್ಟೇಷನ್’ ಅಂದರೆ...

ಚಾರ್ಲ್ಸ್‌ ಬೆನೆಟ್ ಎಂಬ ಕ್ವಾಂಟಮ್ ವಿಜ್ಞಾನಿ ಹೇಳಿರುವ ಉಪಕತೆಯ ಮೂಲಕ ಇದನ್ನು ಅರ್ಥ ಮಾಡಿಕೊಳ್ಳುವುದು ಸುಲಭ.

ಬೆಂಗಳೂರಿನಲ್ಲಿರುವ ಭಾರತೀಯ ಬೇಹುಗಾರಿಕೆ ಸಂಸ್ಥೆಗೆ ವಾರಾಣಸಿಯಲ್ಲಿರುವ ಗಂಗೆ ಎಂಬ ಮಹಿಳೆ ಬಳಿ ಭಯೋತ್ಪಾದಕರ ಕುರಿತಾದ ಮಹತ್ತರವಾದ ಮಾಹಿತಿ ಲಭ್ಯವಿದೆ ಎಂಬ ಸುದ್ದಿ ಸಿಗುತ್ತದೆ. ಆದರೆ, ಈ ಗಂಗೆ ಬೆಂಗಳೂರಿಗೆ ಬಂದು ಮಾಹಿತಿ ಹಂಚಿಕೊಳ್ಳಲು ತಯಾರಿಲ್ಲ. ಬೇಹುಗಾರಿಕೆ ಸಂಸ್ಥೆ ಈ ಕೆಲಸಕ್ಕೆ ಭಗೀರಥ- ಅತಿರಥ ಎಂಬ ಇಬ್ಬರು ಏಜೆಂಟ್‌ಗಳನ್ನು ನೇಮಿಸುತ್ತಾರೆ. ಈ ಭಗೀರಥ- ಅತಿರಥರ ಅನ್ಯೋನ್ಯ ಬಂಧ ಎಂತಹುದು ಅಂದರೆ, ಭಗೀರಥ ‘ಹೌದು’ ಎಂದರೆ ಅತಿರಥ ಸಹ ‘ಹೌದು’ ಎನ್ನುತ್ತಾನೆ. ಅತಿರಥ ‘ಇಲ್ಲ’ವೆಂದರೆ ಭಗೀರಥ ಸಹ ‘ಇಲ್ಲ’ ಎನ್ನುತ್ತಾನೆ. ಭಗೀರಥನನ್ನು ಗಂಗೆಯ ಊರಿಗೆ ಕಳಿಸಲಾಯಿತು. ಆತ ಗಂಗೆಯನ್ನು ತನಿಖೆಗೊಳಪಡಿಸುವ ಪ್ರಯತ್ನ ಮಾಡದೇ ಅವಳ ಜೊತೆ ಸ್ನೇಹ ಮಾತ್ರ ಬೆಳೆಸಿದ. ಇವನು ಇಷ್ಟಪಡುವ ವಿಚಾರಗಳಿಗೆ ಅವಳಿಂದ (‘ಇಲ್ಲ’ ಎಂಬ) ನಕಾರಾತ್ಮಕ ಉತ್ತರ ದೊರೆತು ಅವಳು ಇವನನ್ನು ಇಷ್ಟಪಡುವುದಿಲ್ಲ ಎಂಬ ಮಾಹಿತಿ ಸಂಗ್ರಹಿಸಿದ. ಅದನ್ನು ಬೆಂಗಳೂರಿಗೆ ರವಾನಿಸಿದ. ಬೆಂಗಳೂರಿನ ಅಧಿಕಾರಿಗಳು ಅತಿರಥನನ್ನು ಪ್ರಶ್ನೆಗಳಿಗೆ ಒಳಪಡಿಸಿ ಸುಲಭವಾಗಿ ಗಂಗೆಯ ಮನಸ್ಸಿನಲ್ಲಿರುವ ಮಾಹಿತಿಯನ್ನು ಪರೋಕ್ಷವಾಗಿ ಸಂಗ್ರಹಿಸಿದರು!

ವೈಜ್ಞಾನಿಕ ಭಾಷೆಯಲ್ಲೇ ಹೇಳಬೇಕೆಂದರೆ–ಇಲ್ಲಿ ‘ಭಗೀರಥ- ಅತಿರಥ’ ಎರಡು ಎಂಟ್ಯಾಗಲ್ಡ್‌-ಕ್ವಾಂಟಮ್ ಫೋಟಾನ್‍ ಕಣಗಳು (ಪರಸ್ಪರ ಹೊಂದಾಣಿಕೆಯಿರುವ ಕಣಗಳು). ‘ಗಂಗೆ’ ಎಂಬುದು ಮತ್ತೊಂದು ಫೋಟಾನ್. ಈ ಪ್ರಯೋಗದ ಉದ್ದೇಶ ಗಂಗೆ ಎಂಬ ಫೋಟಾನ್‍ನ ಮಾಹಿತಿಯನ್ನು ಭಗೀರಥ ಫೋಟಾನ್‍ನ ಮೂಲಕ ದೂರದ ಸ್ಥಳದಲ್ಲಿರುವ (ಅಂತರಿಕ್ಷದಲ್ಲಿ) ಅತಿರಥ ಫೋಟಾನ್‍ಗೆ ರವಾನಿಸುವುದು. ಈ ಪ್ರಯೋಗದಲ್ಲಿ ತಿಳಿದು ಬರುವ ಪ್ರಮುಖ ವಿಚಾರವೆಂದರೆ, ಒಂದು ಫೋಟಾನ್‍ನ ಮಾಹಿತಿಯನ್ನು ದೂರದ ಸ್ಥಳಕ್ಕೆ ರವಾನಿಸಬಹುದು ವಿನಃ ಫೋಟಾನನ್ನೇ ಕಳಿಸುವುದು ಮತ್ತು ಅದನ್ನು ಮೂಲ ಸ್ಥಳದಲ್ಲಿ ನಾಶ ಮಾಡುವುದು ಸಾಧ್ಯವಿಲ್ಲ.

ಹೀಗಿದ್ದೂ ಕೆಲವರು ಮಾನವನ ದೇಹವನ್ನು ಅಣು-ಪರಮಾಣುಗಳ ಗಾತ್ರಕ್ಕೆ ವಿಭಜಿಸುವುದು ಸಾಧ್ಯವಾದರೆ ಮತ್ತು ಅದನ್ನು ದೂರದ ದೇಶದಲ್ಲೋ, ಗ್ರಹದಲ್ಲೋ ಮತ್ತೆ ಒಂದೂಗೂಡಿಸಲು ಸಾಧ್ಯವಾದರೆ ಮಾನವನ ಟೆಲಿಪೋರ್ಟೇಷನ್ ಸಾಧ್ಯ ಎಂಬ ವಾದದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT