ಮಂಗಳವಾರ, ಜನವರಿ 19, 2021
19 °C
ಡಾ. ಚೆನ್ನಣ್ಣ ವಾಲೀಕಾರ ನಿಧನರಾಗಿ ಇಂದಿಗೆ (ನ.24) ಒಂದು ವರ್ಷ

ಮುದ್ರಿತ ಕೃತಿಗಳಿಗಿಂತ ಅಪ್ರಕಟಿತ ಬರಹಗಳೇ ಹೆಚ್ಚು!

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಹಿರಿಯ ಬಂಡಾಯ ಸಾಹಿತಿ ಡಾ. ಚೆನ್ನಣ್ಣ ವಾಲೀಕಾರ ಅವರು ನಿಧನರಾಗಿ ಮಂಗಳವಾರಕ್ಕೆ (ನ.24) ಒಂದು ವರ್ಷವಾಗುತ್ತದೆ. ಅವರ ಕೃತಿಗಳನ್ನು ಸಾಹಿತ್ಯಾಸಕ್ತರಿಗೆ ತಲುಪಿಸಲು ಮತ್ತು ಅವರ ವಿಚಾರಗಳನ್ನು ಜನರಿಗೆ ಮುಟ್ಟಿಸಲು ವಾಲೀಕಾರ ಕುಟುಂಬ ಸದಸ್ಯರು ಸರ್ವ ಪ್ರಯತ್ನ ನಡೆಸಿದ್ದಾರೆ.

ಮನೆಯ ಮಹಡಿಯ ಪುಟ್ಟ ಕೋಣೆಯಲ್ಲಿ ಚೆನ್ನಣ್ಣ ಅವರ ಅಪ್ರಕಟಿತ ಬರಹಗಳನ್ನು ಸಂಗ್ರಹಿಸಿಡುವಲ್ಲಿ ನಿರತರಾದ ಕುಟುಂಬ ಸದಸ್ಯರು ಪುಟ್ಟ ಕವನಗಳನ್ನೂ ಬಿಡದೇ ಎಲ್ಲವನ್ನೂ ಜತನದಿಂದ ಕಾಯ್ದಿರಿಸಿದ್ದಾರೆ. ಕಳೆದು ಹೋಗಿರುವ ಕೃತಿಗಳನ್ನು ಸ್ನೇಹಿತರು, ಆಪ್ತರ ಮೂಲಕ ಪಡೆಯುತ್ತಿದ್ದಾರೆ.

ಕಳೆದ ವರ್ಷ ಅವರು ನಿಧನರಾದ ಸಂದರ್ಭದಲ್ಲಿ ಅವರ ಬರಹಗಳನ್ನು ಮತ್ತು ಕವನಗಳನ್ನು ಪ್ರಕಟಿಸಲು ಕೆಲ ಪ್ರಕಾಶನ ಸಂಸ್ಥೆಗಳು ಆಸಕ್ತಿ ತೋರಿದ್ದವು. ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಅವರ ನೆನಪುಗಳನ್ನು ಸದಾ ಸ್ಮರಿಸುವಂತಹ ಕಾರ್ಯಗಳು ಆಗಬೇಕು ಎಂಬ ಅಶಯ ಸಾಹಿತ್ಯಾಸಕ್ತರಿಂದ ವ್ಯಕ್ತವಾಗಿತ್ತು.

‘ಕಳೆದ 8 ರಿಂದ 10 ವರ್ಷಗಳ ಅವಧಿಯಲ್ಲಿ ಮುತ್ಯಾ ಚೆನ್ನಣ್ಣ ಅವರು ತುಂಬಾ ಬರೆದರು. ಕೋಣೆಯಲ್ಲಿ ಕೂತು ಪುಟ್ಟ ಕವನಗಳ ಜೊತೆ ಮಹಾಕಾವ್ಯ ರಚಿಸಿದರು. ಕೆಲವಷ್ಟು ನನ್ನ ಕಡೆಯಿಂದ ಕಂಪ್ಯೂಟರ್‌ನಲ್ಲಿ ಟೈಪಿಸಿದರು. ಮುದ್ರಿತ ಕೃತಿಗಳಿಗಿಂತ ಅಪ್ರಕಟಿತ ಬರಹಗಳೇ ಹೆಚ್ಚಿವೆ’ ಎಂದು ಮೊಮ್ಮಗ ಅರವಿಂದ್ ವಾಲೀಕಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ದಿನ ಮುತ್ಯಾ ಅವರು ನೂರು ಅಥವಾ ಇನ್ನೂರು ಪುಟದ ನೋಟ್‌ಪುಸ್ತಕದಲ್ಲಿ ಮುತ್ಯಾ ಅವರು ಬರೆಯುತ್ತಿದ್ದರು. ಅಲ್ಲಿಯೇ ಕಟ್ಟಿಗೆಯ ತಿಜೋರಿಯಲ್ಲಿ ಅವುಗಳನ್ನು ಭದ್ರವಾಗಿ ಕೂಡಿಡುತ್ತಿದ್ದರು. ಬಿಡುವು ಇದ್ದಾಗ, ಅವುಗಳನ್ನು ಆಸಕ್ತಿಯಿಂದ ಓದಿ, ಅರ್ಥ ತಿಳಿಪಡಿಸುತ್ತಿದ್ದರು’ ಎಂದು ಅವರು ನೆನಪಿಸಿಕೊಂಡರು.

ವರ್ಷಗಳು ಕಳೆದಂತೆ ಪುಟಗಳಲ್ಲಿನ ಅಕ್ಷರಗಳು ಮಸುಕಾಗುತ್ತವೆ. ಪುಟಗಳು ಮುದುಡುತ್ತವೆ. ಅವು ಹಾಳಾಗದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ಪುಸ್ತಕ ರೂಪದಲ್ಲಿ ಅವುಗಳನ್ನು ಅವುಗಳನ್ನು ಹೊರತರಬೇಕು ಎಂಬ ಹಂಬಲ ಇರುವ ಕಾರಣ ಅರವಿಂದ ವಾಲೀಕಾರ ಅವರು ಪ್ರತಿ ದಿನ ಬರಹಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸುತ್ತಿದ್ದಾರೆ.

ಸಮಾಜದಲ್ಲಿ ಅಸಮಾನತೆ, ಮಾನವೀಯತೆ, ಸಮುದಾಯಕ್ಕೆ ಸಿಗದ ಸ್ಪಂದನೆ, ಬಡತನ ಸೇರಿದಂತೆ ಹಲವು ವಿಷಯಗಳ ಕುರಿತು ಚೆನ್ನಣ್ಣ ಅವರು ಕವನಗಳನ್ನು ಮತ್ತು ದೀರ್ಘ ಬರಹಗಳನ್ನು ಬರೆದಿದ್ದಾರೆ. ಎಲ್ಲವನ್ನೂ ಒಟ್ಟುಗೂಡಿಸಿ ಕೃತಿಗಳನ್ನು ತಂದರೆ, 10ಕ್ಕೂ ಹೆಚ್ಚು ಸಂಪುಟಗಳನ್ನು ಹೊರತರಬಹುದು. ಪ್ರಕಾಶನ ಸಂಸ್ಥೆಯವರು ಆಸಕ್ತಿ ತೋರಬೇಕು ಎಂದು ಕುಟುಂಬ ಸದಸ್ಯರು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು