ವಾಟ್ಸ್‌ಆ್ಯಪ್‌ ಪೀಡಿತರು!

7

ವಾಟ್ಸ್‌ಆ್ಯಪ್‌ ಪೀಡಿತರು!

Published:
Updated:
Deccan Herald

ನಮಗೆ ಇಲ್ಲಿಯವರೆಗೆ ಇಲಿ, ಮಂಗ, ಹಂದಿ, ಸೊಳ್ಳೆಮತ್ತು ಬಾವಲಿಗಳಿಂದ ಮಾತ್ರ ಭಯಂಕರ ಸೋಂಕು ರೋಗಗಳು ಹಬ್ಬುವ ಬಗ್ಗೆ ಗೊತ್ತಿತ್ತು. ಈಗ ಅವುಗಳ ಪಟ್ಟಿಗೆ ‘ವಾಟ್ಸ್‌ಆ್ಯಪ್’ ಸೇರಿಕೊಂಡಿದೆ. ತಾವು ‘ವಾಟ್ಸ್‌ಆ್ಯಪ್‌ಪೀಡಿತ’ರೆಂಬ ಅರಿವು ಇದ್ದರೂ ಜನ, ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅದನ್ನೊಂದು ರೋಗವೆಂದು ಒಪ್ಪಿಕೊಂಡರೆ ತಾನೇ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು! ವಿಶ್ವ ಆರೋಗ್ಯ ಸಂಸ್ಥೆಯಾದರೂ ವಾಟ್ಸ್‌ಆ್ಯಪ್‌ ಅನ್ನು ಭಯಂಕರ ಅಂಟುರೋಗವೆಂದು ಸಾರುತ್ತದೋ ಎಂದು ಕಾದು ನೋಡಬೇಕು!

ದೇಶವನ್ನೇ ಬೆಚ್ಚಿಬೀಳಿಸುವಂತೆ, ಅಲ್ಲಲ್ಲಿ ಗುಂಪು ಹಿಂಸಾಚಾರ ನಡೆಯುತ್ತಿರುವುದಕ್ಕೆ ಕಾರಣ ವಾಟ್ಸ್‌ಆ್ಯಪ್‌ ಎಂಬ ಮಾರಕ ರೋಗ. ಮಕ್ಕಳ ಕಳ್ಳರಿದ್ದಾರೆಂದೋ, ಗೋ ಕಳ್ಳರೆಂದೋ ಹುಸಿ ಸಂದೇಶಗಳನ್ನು ಹಬ್ಬಿಸುವಂಥ ಮನಸ್ಥಿತಿಯಲ್ಲಿರುವುದು ಈ ರೋಗದ ಆರಂಭಿಕ ಲಕ್ಷಣ. ಈ ಹುಚ್ಚು ಸಂದೇಶಗಳು ಥೇಟ್ ಹುಚ್ಚುನಾಯಿಯಂತೆ ಸಿಕ್ಕಸಿಕ್ಕವರನ್ನು ಕಚ್ಚಿಕೊಂಡು ಹೋಗುತ್ತವೆ. ಹೀಗೆ ಹುಚ್ಚುಹಿಡಿದ ‘ವಾಟ್ಸ್‌ಆ್ಯಪ್ಪ’ರು ಗುಂಪು ಗುಂಪಾಗಿ ಯಾರೋ ಅಮಾಯಕರ ಮೇಲೆ ದಾಳಿ ಮಾಡಿ ಕೊಂದೇಬಿಡುತ್ತಾರೆ! ನೇರ ಮರಣದಂಡನೆ! ಇಲ್ಲಿ ಪೊಲೀಸ್, ಕೋರ್ಟ್‌ಗಳು ವರ್ಷಾನುಗಟ್ಟಲೆ ತೆಗೆದುಕೊಳ್ಳುವ ಕೆಲಸವು ಕೆಲವೇ ನಿಮಿಷಗಳಲ್ಲಿ ಮುಗಿದುಬಿಡುತ್ತದೆ. ಅಂದರೆ ವಾಟ್ಸ್‌ಆ್ಯಪ್‌ ರೋಗ ಯಾವ ಮಟ್ಟದಲ್ಲಿ ಹಬ್ಬಿದೆ ಎಂದು ನೀವೇ ಊಹಿಸಿ.

ಈ ಸಂಬಂಧದ ಗುಂಪು ಹಿಂಸಾಚಾರಗಳು ನಡೆಯುವುದಕ್ಕೆ ಮೊದಲೂ ಅನೇಕರಲ್ಲಿ ಈ ರೋಗವು ಬೇರೆ ಬೇರೆ ರೀತಿಯಲ್ಲಿ ಹರಡಿಕೊಂಡಿತ್ತು. ‘ನಾನೇನೋ ಸೌಖ್ಯವಾಗಿದ್ದೇನಮ್ಮ. ನಿನ್ನ ಸೊಸೆ ವಾಟ್ಸ್‌ಆ್ಯಪ್‌ ರೋಗದಿಂದ ಬಳಲುತ್ತಿದ್ದಾಳೆ’ ಎಂದು ಊರಿನಲ್ಲಿರುವ ತಾಯಿಗೆ ಫೋನ್ ಮಾಡಿ ಹೇಳಿದ ತಕ್ಷಣವೇ, ಅದೇನೋ ಇಂಗ್ಲಿಷ್ ಹೆಸರಿನ ಮಹಾರೋಗವಿರಬೇಕೆಂದು ಅಪ್ಪ– ಅಮ್ಮ ಕಾರು ಮಾಡಿಕೊಂಡು ಬೆಂಗಳೂರಿಗೆ ಬಂದದ್ದನ್ನು ಲಂಬೋದರ ಇನ್ನೂ ಮರೆತಿಲ್ಲ. ಹಾಗೆ ನೋಡಿದರೆ ಲಂಬೋದರನ ಮನೆಯಲ್ಲೀಗ ಮಕ್ಕಳ ಪರಿಸ್ಥಿತಿಯೂ ಅಷ್ಟೇ. ಅವರಿಗೆ ಓದುವುದರಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಬಂದಿದೆ. ದುರದೃಷ್ಟವಶಾತ್ ಅವರು ಓದುವುದು ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಮಾತ್ರ! ಅರ್ಧಾಂಗಿ ಅಪರೂಪಕ್ಕೆ ಎಲ್ಲಾದರೂ ಅಡುಗೆ ಮಾಡಿದರೆ, ಊಟ, ತಿಂಡಿ ಬಡಿಸುವ ಸಂಪ್ರದಾಯ ನಿಲ್ಲಿಸಿದ್ದಾಳೆ. ಡೈನಿಂಗ್ ಟೇಬಲ್ ಮೇಲೆ ‘ನೋ ಸರ್ವಿಸ್’ ಬೋರ್ಡು ಇದೆ. ಒಟ್ಟಾರೆ ಲಂಬೋದರನ ಮನೆಯಲ್ಲಿ ಪರಿಸ್ಥಿತಿ ಎಷ್ಟು ಚಿಂತಾಜನಕವಾಗಿದೆಯೆಂದರೆ ಅಪ್ಪ, ಅಮ್ಮ ಮತ್ತು ಮಕ್ಕಳು ಒಬ್ಬರಿಗೊಬ್ಬರು ಮಾತನಾಡದೆ ಬಹಳ ದಿವಸಗಳೇ ಆಗಿವೆ!

ವಾಟ್ಸ್‌ಆ್ಯಪ್‌ನಿಂದ ‘ಕಸ’ದ ಸಮಸ್ಯೆಯೂ ಹೆಚ್ಚಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೋದಿಜೀಯ ‘ಸ್ವಚ್ಛ ಭಾರತ’ದ ಬಗ್ಗೆ ಯಾರೂ ಗಮನ ಕೊಟ್ಟಂತಿಲ್ಲ. ಎಲ್ಲರಿಗೂ ತಮ್ಮ ಮೊಬೈಲ್‌ನಲ್ಲಿ ತುಂಬಿ ತುಳುಕುವ ‘ಸಂದೇಶಗಳ ತ್ಯಾಜ್ಯ’ ರಾಶಿಯನ್ನು ಸ್ವಚ್ಛಗೊಳಿಸಿಯೇ ಸಮಯ ಹಾಳಾಗಿಬಿಡುತ್ತದೆ.

ವಾಟ್ಸ್‌ಆ್ಯಪ್‌ ಗುಂಪುಗಳ ಕತೆಯೇ ಬೇರೆ. ಇದೊಂದು ರೀತಿಯಲ್ಲಿ ಗುಂಪಿನಲ್ಲಿ ಗೋವಿಂದ ಇದ್ದಹಾಗೆ. ವಿಡಿಯೊಸಂದೇಶ ಅಥವಾ ಜೋಕುಗಳನ್ನು ತಮ್ಮ ದಿನನಿತ್ಯದ ಕರ್ತವ್ಯ ಅನ್ನುವಷ್ಟು ಶಿಸ್ತಿನಿಂದ ರವಾನಿಸುತ್ತಲೇ ಇರುತ್ತಾರೆ. ಅದರಲ್ಲೂ ಚಾಚೂ ತಪ್ಪದೆ ‘ಗುಡ್ ಮಾರ್ನಿಂಗ್’ ಮತ್ತು ‘ಗುಡ್ ನೈಟ್’ಗಳನ್ನು ಕಳುಹಿಸುವವರ ಸಂಖ್ಯೆ ವಿಪರೀತವಿದೆ. ಈ ಸಹೃದಯರ ಚಿತ್ರ ಸಂದೇಶಗಳಿಗೂ ‘ಗುಂಪು ಹಿಂಸಾಚಾರ’ಕ್ಕೂ ಯಾವುದೇವ್ಯತ್ಯಾಸವಿಲ್ಲ ಎಂದು ಅನೇಕರು ಅಭಿಪ್ರಾಯಪಡುತ್ತಾರೆ.

ಇನ್ನು ವಾಟ್ಸ್‌ಆ್ಯಪ್‌ನಲ್ಲಿ ಜೋಕುಗಳು ಮತ್ತು ಕಾಮಿಡಿ ವಿಡಿಯೊಗಳೇ ಮಹತ್ವದ ಪಾತ್ರ ವಹಿಸುತ್ತವೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ವಾಟ್ಸ್‌ಆ್ಯಪ್‌ ಯಾವಾಗ ಈ ಭೂಮಂಡಲಕ್ಕೆ ಬಂದಿಳಿಯಿತೋ ಆವಾಗಿನಿಂದ ಇಡೀ ಜಗತ್ತೇ ಬಿದ್ದು ಬಿದ್ದು ನಗುತ್ತಿದೆ! ಜನರು ಎಷ್ಟು ನಗುತ್ತಿದ್ದಾರೆ ಅಂದರೆ ಯಾರಿಗೂ ಯಾವುದೇ ಸಮಸ್ಯೆ ಇಲ್ಲ ಅಂದುಕೊಳ್ಳಬೇಕು. ಇಡೀ ದಿವಸ ಗಿರಾಕಿಗಳೇ ಇಲ್ಲದಿದ್ದರೂ ಅಂಗಡಿ ಮಾಲೀಕ ನಗುತ್ತಾ ಫುಲ್ ಖುಷಿಯಲ್ಲಿರುತ್ತಾನೆ. ಯಾಕೆಂದರೆ ಆತ ವಾಟ್ಸ್‌ಆ್ಯಪ್‌ನಲ್ಲಿ ಮುಳುಗಿರುತ್ತಾನೆ. ದುರ್ವಾಸ ಮುನಿಯಂತಿದ್ದವರ ಮುಖದಲ್ಲೂ ಈಗ ಮಂದಹಾಸ ಕಾಣಬಹುದು. ಸರ್ಕಾರಿ ಕಚೇರಿಗಳಲ್ಲಿ ಸೋಮಾರಿಯಾಗಿದ್ದ ಗುಮಾಸ್ತರು ಈಗ‘ಕೈ’ಗೆ ಕೆಲಸ ಕೊಡುತ್ತಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ಅಷ್ಟೊಂದು ಮಜಾ ಇದೆ. ಮೊನ್ನೆ ಯಾರೋ ಒಬ್ಬರು ಜೀವನದಲ್ಲಿ ಜುಗುಪ್ಸೆ ಎಂದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಓದಿದಾಗ, ‘ಯಾಕೆ ಈ ಪುಣ್ಯಾತ್ಮ ವಾಟ್ಸ್‌ಆ್ಯಪ್‌ ನೋಡುವ ಅಭ್ಯಾಸ ಇಟ್ಟುಕೊಂಡಿಲ್ಲ’ ಎಂದನಿಸಿತು! ವಿಶೇಷವೆಂದರೆ ಇಂತಹ ನಗುವಿನ ಸರಕನ್ನು ‘ರಫ್ತು’ ಮಾಡುವುದರಲ್ಲೂ ಚೀನಿಯರದ್ದೇ ಎತ್ತಿದ ತಲೆ!

ಅಂದಹಾಗೆ, ಈ ‘ವಾಟ್ಸ್‌ಆ್ಯಪ್ಪುಗೆ’ ಒಂದು ಚಟವಾಗಲು ಕೆಲವರು ಕೋಡುವ ಕಾರಣ- ‘ವಾಟ್ಸ್ಯಾಪಾಯನ’. ಅರೆ! ನಾವೆಲ್ಲಾ ‘ಕಾಮಸೂತ್ರ’ದ ಕರ್ತೃ ವಾತ್ಸ್ಯಾಯನನ ಬಗ್ಗೆ ಕೇಳಿದ್ದೇವೆ. ಈ ವಾಟ್ಸ್ಯಾಪಾಯನ ಯಾರು? ಈತ ಬೇರಾರೂ ಅಲ್ಲ, ವಾಟ್ಸ್‌ಆ್ಯಪ್‌ನಲ್ಲಿ ಸಾಮಾಜಿಕ, ಆರೋಗ್ಯ, ರಾಜಕೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆಗಾಗ ಪರಿಹಾರ ಸೂತ್ರ ಹರಿದಾಡುತ್ತಿರುತ್ತದಲ್ಲವೇ? ಅವನ್ನೆಲ್ಲಾ ಬರೆಯುವವನೇ ‘ವಾಟ್ಸ್ಯಪಾಯನ’!

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !