ಶುಕ್ರವಾರ, ಏಪ್ರಿಲ್ 3, 2020
19 °C

ಅಂಗವಿಕಲರ ಅನುದಾನ ದುರ್ಬಳಕೆ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಅಂಗವಿಕಲರ ಹೆಸರಿನಲ್ಲಿ ತಲೆ ಎತ್ತುತ್ತಿರುವ ಶಾಲೆಗಳು ಅಧಿಕಾರಿಗಳಿಗೆ ಆಮಿಷ ತೋರುವ ಮೂಲಕ ಸರ್ಕಾರದ ಅನುದಾನ ದುರ್ಬಳಕೆ ಮಾಡುತ್ತಿದ್ದು, ಅಂತಹ ಶಾಲೆಗಳ ಬಗ್ಗೆ ನಿಗಾವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ರೇಣುಕಾ ಮಂದಿರದಲ್ಲಿ ಮಂಗಳವಾರ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಮತ್ತು ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಸಮಾರಂಭದಲ್ಲಿ ಅವರು ಮಾತನಾಡಿದರು.‘ಸರ್ಕಾರದ ಅನುದಾನಕ್ಕಾಗಿಯೇ ಕೆಲವರು ಅಂಗವಿಕಲ ಶಾಲೆಗಳನ್ನು ತೆರೆಯುತ್ತಿದ್ದಾರೆ. ಅನುದಾನ ಬರದಿದ್ದಾಗ ಅದಕ್ಕಾಗಿ ಜನಪ್ರತಿನಿಧಿಗಳ ಶಿಫರಸ್ಸು ಮಾಡಿಸಿ ಅನುದಾನ ಪಡೆಯಲು ಹವಣಿಸುತ್ತಾರೆ. ಅವರಿಗೆ ಸಾಮಾಜಿಕ ಕಳಕಳಿ–ಸೇವೆಗಿಂತ ಅನುದಾನ ಮುಖ್ಯ ಗುರಿಯಾಗಿರುತ್ತದೆ. ಮಂತ್ರಿಯಾದ ಮೇಲೆ ಯಾರೂ ಶಿಫಾರಸ್ಸಿಗಾಗಿ ಬಂದಿಲ್ಲ. ಶಾಸಕನಾಗಿದ್ದಾಗ ಅಂತಹವರು ಅನುದಾನ ಪಡೆಯಲು ನನ್ನ ಶಿಫಾರಸ್ಸಿಗಾಗಿ ದುಂಬಾಲು ಬಿದ್ದಿದ್ದರು. ಇಂಥ ಕೆಟ್ಟ ಅನುಭವವಾಗಿರುವುದರಿಂದ ಹೇಳುತ್ತಿದ್ದೇನೆ. ಅಧಿಕಾರಿಗಳು ಯಾವುದೇ ಆಮಿಷಕ್ಕೆ ಒಳಗಾಗದೇ ಅಂಗವಿಕಲರಿಗೆ ಸಲ್ಲಬೇಕಾದ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಬೇಕು’ ಎಂದು ಹೇಳಿದರು.ಅರ್ಜಿ ಹಾಕಿದ ಎಲ್ಲ ಅಂಗವಿಕಲರಿಗೆ ಸೌಲಭ್ಯ ಸಿಗುತ್ತಿಲ್ಲ. ಅರ್ಜಿ ಹಾಕಿದವರಲ್ಲಿ ಕೆಲವರನ್ನು ಆಯ್ಕೆ ಮಾಡಲಾಗುತ್ತಿದೆ. ಇಂಥ ತಾರತಮ್ಯ ಏಕೆ ಎಂದು ಪ್ರಶ್ನಿಸಿದರೆ, ಅಧಿಕಾರಿಗಳು ಸರ್ಕಾರದ ಅನುದಾನ ಕೊರತೆ ಎಂದು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ 31,414 ಅಂಗವಿಕಲರಿದ್ದಾರೆ.ಅರ್ಜಿ ಹಾಕಿದ ಎಲ್ಲರಿಗೂ ಸರ್ಕಾರದ ಸೌಲಭ್ಯ ಕಲ್ಪಿಸುವಲ್ಲಿ ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆ ಸಂದರ್ಭದಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸುತ್ತೇನೆ. ಉಳಿದಂತೆ ಅಂಗವಿಕಲರು ಮನೆಗಳನ್ನು ನೀಡುವಂತೆ ಒತ್ತಾಯಿಸುತ್ತಾ ಬಂದಿದ್ದಾರೆ.ನಗರ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ 28ಎಕರೆ ಜಾಗವನ್ನು ಗುರುತಿಸಿದ್ದಾರೆ. ಆ ಜಾಗವನ್ನು ವಸತಿ ಇಲಾಖೆಗೆ ನೀಡಿದರೆ ಮನೆ ನಿರ್ಮಿಸಿ ಕೊಡುವುದಾಗಿ ವಸತಿ ಸಚಿವ ಅಂಬರೀಷ್ ಭರವಸೆ ನೀಡಿದ್ದಾರೆ. ನಗರದಲ್ಲಿನ 100 ಅಂಗವಿಕಲರಿಗೆ ವಸತಿಸೌಲಭ್ಯ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲಾ ಅಂಗವಿಕಲರಿಗೆ ಸೌಲಭ್ಯ ವಿಸ್ತರಿಸಲಾವುದು ಎಂದು

ತಿಳಿಸಿದರು.ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎನ್. ವೀರಭದ್ರಪ್ಪ, ಜಿ.ಪಂ. ಸದಸ್ಯೆ ಸಹನಾರವಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ಟ್ರೈಸಿಕಲ್ ಮತ್ತು ಅಂಗವಿಕಲರ ಸಾಲದ ಚಕ್ ವಿತರಣೆ ಮಾಡಲಾಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜಿ.ಎಂ. ರುದ್ರೇಗೌಡ, ವಿಕಲಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಜಿಲ್ಲಾ ಅಧಿಕಾರಿ ಶಶಿಧರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)