ಬುಧವಾರ, ಜನವರಿ 22, 2020
16 °C

ಅಂಗವೈಕಲ್ಯ ಮೆಟ್ಟಿನಿಂತ ಉದ್ಯಮಿ

ಚಿತ್ರ–ನಿರೂಪಣೆ: ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ಬಾಲ್ಯದಿಂದಲೇ  ಎರಡೂ ಕಾಲು ಸ್ವಾಧೀನವಿಲ್ಲ. ಇಲ್ಲಿಯವರೆಗೂ ಹೆಜ್ಜೆ, ಹೆಜ್ಜೆಗೂ ಕಷ್ಟಗಳ ಸರಮಾಲೆ. ನನ್ನಿಂದ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಸದಾ ಎದುರುಗೊಳ್ಳುತ್ತಿತ್ತು. ಆ ಪ್ರಶ್ನೆ ಎದುರಾದಾಗಲೆಲ್ಲ ಉತ್ತರ ನೀಡುವ ಛಲವೂ ಗಟ್ಟಿಯಾಗುತ್ತಾ ಹೋಯಿತು. ಕ್ರೀಡೆಯಲ್ಲಿ ಸಾಧಿಸಿದ್ದ ಯಶಸ್ಸು ಆತ್ಮಬಲವನ್ನು ಇಮ್ಮಡಿಗೊಳಿಸಿತು. ಅದರ ಪರಿಣಾಮವೇ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪೇಪರ್‌ ಪ್ಲೇಟ್‌, ಕಪ್‌ ತಯಾರಿಸುವ ಕೈಗಾರಿಕೆ ಆರಂಭ!‘ಮಾಹಿತಿ ತಂತ್ರಜ್ಞಾನದ ದೊಡ್ಡ ಕಂಪೆನಿಗಳಲ್ಲೊಂದಾಗಿರುವ ಇನ್ಫೊಸಿಸ್‌ನಲ್ಲಿ ಕೆಲಸ ಸಿಕ್ಕರೆ ಸಾಕು ಜೀವನ ದಡ ಸೇರಿದ ಹಾಗೆಯೇ ಎನ್ನುವವರ ಸಂಖ್ಯೆ ದೊಡ್ಡದಿದೆ. ಆ ಕಂಪೆನಿಯಲ್ಲಿದ್ದ ಕೆಲಸವನ್ನು ಬಿಟ್ಟು, ಸ್ವಂತದ್ದನ್ನು ಏನಾದರೂ ಮಾಡಲೇಬೇಕು ಎಂಬ ಮನದೊಳಗಿನ ಛಲ ಇಲ್ಲಿಗೆ ತಂದು ನಿಲ್ಲಿಸಿದೆ’ ಎನ್ನುತ್ತಾರೆ ಶಿವಾನಿ ಇಂಡಸ್ಟ್ರೀಸ್‌ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕರೂ ಆಗಿರುವ ಸಬ್ಬನಹಳ್ಳಿ ಶಿವಕುಮಾರ್‌.ಮದ್ದೂರು ತಾಲ್ಲೂಕಿನ ಸಬ್ಬನಹಳ್ಳಿ ಶಿವಕುಮಾರ್‌ ಅವರ ಊರು.. ಪುಟ್ಟೇಗೌಡ–ಲಕ್ಷ್ಮಮ್ಮ ದಂಪತಿಯ ಆರು ಮಕ್ಕಳಲ್ಲಿ ನಾನೇ ಹಿರಿಯವ. ಕೃಷಿಯನ್ನೇ ನೆಚ್ಚಿಕೊಂಡಿದ್ದ ಕುಟುಂಬ ಆರ್ಥಿಕವಾಗಿ ಅಂತಹ ಸಬಲವಾಗಿಯೇನೂ ಇರಲಿಲ್ಲ ಎಂದು ಹಳೆಯ ದಿನಗಳ ನೆನಪಿಗೆ ಜಾರುತ್ತಾರೆ. ‘ಎರಡು ವರ್ಷದವನಾಗಿದ್ದಾಗ ಪುಟ್ಟ, ಪುಟ್ಟ ಹೆಜ್ಜೆಗಳನ್ನಿಡುತ್ತಾ ಅಚ್ಚುಕಟ್ಟಾಗಿಯೇ ಓಡಾಡುತ್ತಿದ್ದೆ. ಒಂದು ದಿನ ದಿಢೀರ್‌ ಪೊಲಿಯೊ ಅಟ್ಯಾಕ್‌ ಆಗಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡವು.

ಯಾರ ನೆರವೂ ಇಲ್ಲದೇ ಸ್ವತಂತ್ರವಾಗಿ ಎದ್ದು ನಿಲ್ಲಲೂ ಆಗದಂತಹ ಸ್ಥಿತಿ ಎದುರಾಯಿತು. ಕೈಗಳೇ ಕಾಲುಗಳಾದವು. ‘ಮನೆಯಲ್ಲಿಟ್ಟುಕೊಂಡು ಓದಿಸುವುದು ಕಷ್ಟ ಎಂದ ಅರಿತ ಮನೆಯವರು, ಮೇಲುಕೋಟೆಯಲ್ಲಿ ಹಿರಿಯ ಗಾಂಧಿವಾದಿ ಸುರೇಂದ್ರ ಕೌಲಗಿ ಅವರು ಅಂಗವಿಕಲರಿಗಾಗಿ ನಡೆಸುತ್ತಿದ್ದ ‘ಜನಪರ ಸೇವಾ ಟ್ರಸ್ಟ್‌’ಗೆ ಸೇರಿಸಿದರು. ಎಂಟನೇ ತರಗತಿವರೆಗೆ ಅಭ್ಯಾಸ ನಡೆಯಿತು. ಅಲ್ಲಿ ಓದಿನೊಂದಿಗೆ ಸ್ವಾವಲಂಬಿ ಬದುಕಿನ ಪಾಠವನ್ನೂ ಕಲಿಸಿದರು. ಅದುವೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ.ಕ್ರೀಡೆಯಲ್ಲಿ ಚಿನ್ನದ ಹುಡುಗ

‘ಮೈಸೂರಿನಲ್ಲಿ ಅಂಗವಿಕಲರಿಗಾಗಿಯೇ ಇರುವ ಜೆಎಸ್‌ಎಸ್‌ ಕಾಲೇಜಿನಲ್ಲಿ ಡಿಪ್ಲೊಮಾ ಇನ್‌್ ಕಂಪ್ಯೂಟರ್‌ ಸೈನ್ಸ್‌ ವ್ಯಾಸಂಗ ಮಾಡಿದೆ. ಮಾಲತಿ ಹೊಳ್ಳ ಅಂತಹವರು ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವುದನ್ನು ಕಂಡು ನಾನೂ ಡಿಪ್ಲೊಮಾ ಓದುವಾಗಲೇ ಅಂಗವಿಕಲರ ಗಾಲಿ ಕುರ್ಚಿ ವಿಭಾಗದಲ್ಲಿ ಜಾವೆಲಿನ್‌ ಎಸೆತಕ್ಕೆ ಸೇರಿಕೊಂಡೆ.‘ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಭಾಗವಹಿಸಿ, ಚಿನ್ನದ ಪದಕ ಗೆದ್ದೆ. ಭಾರತ ತಂಡವನ್ನು ಪ್ರತಿನಿಧಿಸಿ, ಇಂಗ್ಲೆಂಡ್‌, ಮಲೇಷ್ಯಾ, ಸಿಂಗಪುರ, ಬೆಲ್ಜಿಯಂ ಹಾಗೂ ಫ್ರಾನ್ಸ್‌ನಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೆ. ಮಲೇಷ್ಯಾದಲ್ಲಿ ಕಂಚು, ಬೆಲ್ಜಿಯಂನಲ್ಲಿ ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದೆ. ರಾಷ್ಟ್ರಮಟ್ಟದಲ್ಲಿ 11 ಚಿನ್ನ, ಏಳು ಬೆಳ್ಳಿ ಹಾಗೂ 20 ಕಂಚಿನ ಪದಕಗಳನ್ನು ಪಡೆದುಕೊಂಡೆ.‘ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದರೂ, ಪ್ರೋತ್ಸಾಹದ ಕೊರತೆ ನನ್ನನ್ನು ಕಾಡುತ್ತಿತ್ತು. ವಿದೇಶಗಳಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಆರ್ಥಿಕ ಮುಗ್ಗಟ್ಟು ಎದುರಾಗುತ್ತಿತ್ತು. ಸಾಧನೆಗೆ ಬಹುತೇಕರು ಹೊಗಳುತ್ತಿದ್ದರೇ ಹೊರತು, ಹಣಕಾಸಿನ ನೆರವೇನೂ ಸಿಗುತ್ತಿರಲಿಲ್ಲ. ಪ್ರತಿ ಬಾರಿಯೂ ಬೇರೆಯವರ ಬಳಿ ಆರ್ಥಿಕ ನೆರವಿಗಾಗಿ ಹೋಗುವುದಕ್ಕೆ ಸ್ವಾಭಿಮಾನ ಅಡ್ಡಬರುತ್ತಿತ್ತು. ಪರಿಣಾಮ ಕ್ರೀಡಾಕ್ಷೇತ್ರವನ್ನು ಕೈ ಬಿಡಬೇಕಾಯಿತು.

ಇನ್ಫೊಸಿಸ್ ನೌಕರಿ‘ವ್ಯಾಸಂಗ ಪೂರ್ಣಗೊಂಡ ನಂತರ ಬೆಂಗಳೂರಿನಲ್ಲಿ ಇನ್ಫೊಸಿಸ್‌ ಕಂಪೆನಿಯಲ್ಲಿ ‘ಟೆಕ್ನಿಕಲ್‌ ಸರ್ಪೋಟರ್‌’ ಕೆಲಸಕ್ಕೆ ಸೇರಿದೆ. ಅಲ್ಲಿ ನಾಲ್ಕೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ದಿನ ಕಳೆದಂತೆಲ್ಲಾ ಅದೇಕೋ ಸಮಯ ವ್ಯರ್ಥ ಮಾಡುತ್ತಿದ್ದೇನೆ ಅನ್ನಿಸುತ್ತಿತ್ತು. ಸ್ವಂತ ಉದ್ದಿಮೆ ಮಾಡಬೇಕು ಎನ್ನುವ ತುಡಿತದಿಂದಾಗಿ ಅಲ್ಲಿಂದ ಹೊರ ಬಂದೆ.ಕುರಿ ಫಾರ್ಮ್‌ ಆರಂಭ

‘ಸಬ್ಬನಹಳ್ಳಿಯಲ್ಲಿಯೇ ಎರಡು ವರ್ಷದ ಹಿಂದೆ ಅತ್ಯಾಧುನಿಕ ರೀತಿಯಲ್ಲಿ ₨6 ಲಕ್ಷ ವೆಚ್ಚದಲ್ಲಿ ಕುರಿಗಳ ಫಾರ್ಮ್‌ ಆರಂಭಿಸಿದೆ. ಅದಂತೂ ಚೆನ್ನಾಗಿಯೇ ನಡೆಯುತ್ತಿದೆ. ಗ್ರಾಮದಲ್ಲಿರುವ ಸಹೋದರರೂ ಕೈಜೋಡಿಸಿದ್ದರಿಂದ ಅಲ್ಲಿನ ಕೆಲಸದ ಹೊರೆ ಕಡಿಮೆಯಾಯಿತು. ಆಗಲೂ ಸಮಯ ವ್ಯರ್ಥವಾಗುತ್ತಿದೆ, ಮತ್ತೇನನ್ನಾದರೂ ಹೊಸದು ಮಾಡಬೇಕು ಎನಿಸಲಾರಂಭಿಸಿತು. ಆಗ ಕೈಗಾರಿಕೆ ಘಟಕ ಆರಂಭಿಸಿದೆ.ಈಗ ‘ನಾನೂ ಉದ್ಯಮಿ’

ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಪ್ರಧಾನಮಂತ್ರಿ ರೋಜ್‌ಗಾರ್‌ ಯೋಜನೆಯಡಿ ಕಾಗದದ ತಟ್ಟೆ ಮತ್ತು ಲೋಟಗಳನ್ನು ತಯಾರಿಸುವ ಪುಟ್ಟ ಕೈಗಾರಿಕಾ ಘಟಕ ಆರಂಭಿಸಲು ಇಚ್ಛಿಸಿರುವುದಾಗಿಯೂ, ಆರ್ಥಿಕ ನೆರವು ನೀಡುವಂತೆಯೂ ಅರ್ಜಿ ಹಾಕಿದ್ದೆ. ಖಾದಿ ಗ್ರಾಮೀಣ ಕೈಗಾರಿಕಾ ಯೋಜನೆಯಡಿ ₨25 ಲಕ್ಷ ಸಾಲ ಮಂಜೂರಾಯಿತು.‘ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆರು ತಿಂಗಳ ಹಿಂದೆ ಕಪ್‌ ತಯಾರಿಕೆಯ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ. 90 ಎಂಎಲ್‌ ಅಳತೆಯ 50 ಸಾವಿರ ಕಪ್‌ಗಳನ್ನು ಪ್ರತಿ ದಿನ ತಯಾರಿಸಲಾಗುತ್ತಿದೆ. ವಾರಕ್ಕೆ ಮೂರು ಲಕ್ಷ ಕಪ್‌ ತಯಾರಿಸಲಾಗುತ್ತಿದೆ. ಅವುಗಳಿಗೆ ಮಾರುಕಟ್ಟೆ ಒದಗಿಸಲೂ ಬಹಳಷ್ಟು ಶ್ರಮ ಪಡಬೇಕಾಯಿತು. ಆದರೆ, ಈಗ ಪರವಾಗಿಲ್ಲ. ಬೆಂಗಳೂರಿನ ಸಗಟು ಮಾರುಕಟ್ಟೆಗೆ ಪೂರೈಸುತ್ತಿದ್ದೇನೆ. 150 ಎಂಎಲ್‌ ಅಳತೆಯ ಕಪ್‌ಗಳನ್ನು ತಯಾರಿಸಲು ಶೀಘ್ರದಲ್ಲಿಯೇ ಇನ್ನೊಂದು ಯಂತ್ರ ಅಳವಡಿಸಲಾಗುತ್ತಿದೆ.ಸ್ವತಂತ್ರವಾಗಿ ಕಾರು ಚಾಲನೆ!

ಕೈಗಾರಿಕೆ ಘಟಕದ ಕೆಲಸಗಳಿಗೆ ಸಂಬಂಧಿಸಿದ ಓಡಾಟಕ್ಕಾಗಿ ಕಾರು ತೆಗೆದುಕೊಂಡಿದ್ದೇನೆ. ಕಾಲುಗಳಲ್ಲಿ ಶಕ್ತಿ ಇಲ್ಲದೇ ಇದ್ದರೂ ನಾನೇ ಚಾಲನೆ ಮಾಡುತ್ತಿದ್ದೇನೆ. ನನಗೋಸ್ಕರವಾಗಿಯೇ ಷೋರೂಂನವರು ಕಾರಿನ ಬ್ರೇಕ್‌ ಹಾಗೂ ಆಕ್ಸಿಲೇಟರ್‌ ನಿಯಂತ್ರಣದ ಲಿವರ್‌ಗಳನ್ನು ಸ್ಟೇರಿಂಗ್‌ ಬಳಿಯೇ ಅಳವಡಿಸಿಕೊಟ್ಟಿದ್ದಾರೆ. ಹೀಗಾಗಿ ಕಾರು ಚಾಲನೆ ಕಷ್ಟ ಎನಿಸುತ್ತಿಲ್ಲ. ಸ್ವಾವಲಂಬಿ ಸಂಚಾರ ಸರಾಗವಾಗಿಯೇ ಸಾಗಿದೆ.ಸದ್ಯ ಕಾಗದದ ತಟ್ಟೆ ಮತ್ತು ಕಪ್‌ಗಳನ್ನು ತಯಾರಿಸುವ ಘಟಕದಲ್ಲಿ ಮೂವರಿಗೆ ಉದ್ಯೋಗ ನೀಡಲಾಗಿದೆ. ಸದ್ಯದಲ್ಲೇ ಯಂತ್ರದ ಬದಲು ಕೈಗಳಿಂದಲೇ ಕಾಗದದ ತಟ್ಟೆ ಮತ್ತು ಕಪ್‌ಗಳನ್ನು ತಯಾರಿಸುವ ಘಟಕ ಆರಂಭಿಸಬೇಕೆಂದಿದ್ದೇನೆ. ಆ ಘಟಕದಲ್ಲಿ ಅಂಗವಿಕಲರಿಗೇ ಉದ್ಯೋಗ ನೀಡುವ ಆಲೋಚನೆ ಇದೆ. ಈ ಯೋಜನೆಯಲ್ಲಿ ಹತ್ತಾರು ಅಂಗವಿಕಲರಿಗೆ ಉದ್ಯೋಗ ಸಿಗುವ ಅವಕಾಶವಿದೆ.ಕುರಿ ಫಾರ್ಮ್‌ ಚೆನ್ನಾಗಿ ನಡೆಯುತ್ತಿದೆ. ಅದರೊಟ್ಟಿಗೇ ಮೇಕೆ ಸಾಕಾಣಿಕೆಯನ್ನೂ ಆರಂಭಿಸುವ ಆಲೋಚನೆ ಇದೆ. ಕುರಿ ಫಾರ್ಮ್‌ ಮತ್ತು ಪುಟ್ಟ ಕೈಗಾರಿಕೆ ಘಟಕಗಳು ಯಶಸ್ವಿಯಾಗಿ ನಡೆಯುತ್ತಾ ಉತ್ತಮ ವರಮಾನ ತರಲಾರಂಭಿಸಿದವು. ಬದುಕು ಸರಾಗವಾಗಿಯೇನೂ ಸಾಗುತ್ತಿತ್ತು. ಹಾಗಿದ್ದೂ ಬದುಕಿನ ಬಂಡಿ ಎಳೆಯಲು ಜೋಡಿ ಬೇಕೆನಿಸಿತು. ಮೂರು ವರ್ಷದ ಹಿಂದೆ ಮದುವೆಯಾದೆ. ಶಿವಾನಿ ಎಂಬ ಮಗಳಿದ್ದಾಳೆ. ಈಗ ನಮ್ಮ ಪೇಪರ್‌ ತಟ್ಟೆ ತಯಾರಿಕೆ ಘಟಕಕ್ಕೆ ಅವಳ ಹೆಸರನ್ನೇ ಇಟ್ಟಿದ್ದೇನೆ.ನೆಮ್ಮದಿಯ ಕೊಯ್ಲು

ನನಗೀಗ 34 ವರ್ಷ. ಈವರೆಗಿನ ಬದುಕಿನ ಹಾದಿಯಲ್ಲಿ ಸಾಕಷ್ಟು ಅವಮಾನ, ಸವಾಲಿನ ಘಟನೆಗಳನ್ನು ಎದುರಿಸಿದ್ದೇನೆ. ಅವೆಲ್ಲವನ್ನೂ ಮೆಟ್ಟಿ ನಿಂತು ಮುನ್ನಡೆದಿದ್ದೇನೆ. ಕ್ರೀಡಾಕ್ಷೇತ್ರದಲ್ಲಿ ಸ್ಪರ್ಧೆಯೊಡ್ಡಿ ಪದಕಗಳನ್ನು ಗೆದ್ದಿದ್ದು ಬದುಕಿನ ನೈಜ ಸವಾಲುಗಳನ್ನು ಎದುರಿಸಲು ಸ್ಫೂರ್ತಿ ನೀಡಿದೆ. ಅಂಗವಿಕಲರನ್ನು ನೋಡಿ ಅನುಕಂಪ ತೋರುವುದಕ್ಕಿಂತ ಅವರಿಗೆ ಸ್ವಂತವಾಗಿ ಏನಾದರೂ ಉದ್ದಿಮೆ ಮಾಡಲು ಅವಕಾಶ ಮಾಡಿಕೊಡಬೇಕು, ಅವರನ್ನು ಪ್ರೋತ್ಸಾಹಿಸಬೇಕು.

ಅವರೂ ಸಾಧಿಸಿ ತೋರಿಸುತ್ತಾರೆ. ಅಂಗವಿಕಲರೂ ತಮ್ಮ ದೇಹಸ್ಥಿತಿ ನೋಡಿಕೊಂಡು ಚಿಂತಿತರಾಗುವ ಬದಲು ಬದುಕಿನ ಹಲವು ಮುಖಗಳತ್ತ ಕಣ್ಣು ಹಾಯಿಸಬೇಕು. ಅವಕಾಶಗಳು ಬಾರದೇ ಇದ್ದರೂ ತಾವೇ ಮುಂದಾಗಿ ಸೃಷ್ಟಿಸಿಕೊಳ್ಳಬೇಕು. ಆಗ ಬದುಕು ಬೇರೆಯದೇ ಕಥೆ ಹೇಳುತ್ತದೆ. ಅಂಗವೈಕಲ್ಯ ಮರೆಯಾಗುತ್ತದೆ.

ಪ್ರತಿಕ್ರಿಯಿಸಿ (+)