ಭಾನುವಾರ, ಜನವರಿ 26, 2020
18 °C

ಅಂಡಮಾನ್: ಅರೆನಗ್ನ ನೃತ್ಯ: ತನಿಖೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್) :  ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಪ್ರವಾಸಿಗರ ಮುಂದೆ ಜವಾರಾ ಬುಡಕಟ್ಟು ಮಹಿಳೆಯರು ಅರೆ ನಗ್ನರಾಗಿ ಕುಣಿಯುತ್ತಿರುವ ವಿಡಿಯೊ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾದ ಬಳಿಕ ಇಡೀ ಪ್ರಕರಣವು ವಿವಾದದ ಸ್ವರೂಪ ಪಡೆದುಕೊಂಡಿದೆ.ಪ್ರಕರಣದ ಹಿಂದಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಸರ್ಕಾರ, ಘಟನೆಯ ತನಿಖೆ ನಡೆಸುವಂತೆ ಅಂಡಮಾನ್ ಮತ್ತು ನಿಕೋಬಾರ್ ಆಡಳಿತದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿದೆ.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಪ್ರವಾಸ ಕೈಗೊಂಡಿದ್ದವರ ಮುಂದೆ ಜವಾರಾ ಬುಡಕಟ್ಟು ಮಹಿಳೆಯರು ಅರೆ ನಗ್ನರಾಗಿ ಕುಣಿಯುತ್ತಿದ್ದ ವಿಡಿಯೊ ದೃಶ್ಯ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.ಪ್ರವಾಸಿಗನೊಬ್ಬ ಚಿತ್ರೀಕರಿಸಿದ್ದ ಈ ದೃಶ್ಯವನ್ನು `ಗಾರ್ಡಿಯನ್~ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಬ್ರಿಟನ್ ವಾರಪತ್ರಿಕೆ `ದಿ ಅಬ್ಸರ್ವರ್~ ಕೂಡ ವರದಿ ಮಾಡಿತ್ತು.  ಬುಡಕಟ್ಟು ಮಹಿಳೆಯರಿಗೆ ಆಹಾರ ನೀಡುವ ಆಮಿಷ ಒಡ್ಡಿದ್ದ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಪ್ರವಾಸಿಗರ ಮುಂದೆ ಅರೆ ನಗ್ನವಾಗಿ ನರ್ತಿಸಲು ಆದೇಶಿಸಿದ್ದರು ಎಂದು ಆರೋಪಿಸಲಾಗಿದೆ. `ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ಆಡಳಿತದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಈ ಘಟನೆಯ ಬಗ್ಗೆ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಲಿದ್ದಾರೆ~ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ವಿ.ಕಿಶೋರ್ ಚಂದ್ರ ಹೇಳಿದ್ದಾರೆ.ಇದೊಂದು ವಿಷಾದನೀಯ ಘಟನೆ ಎಂದು ಹೇಳಿರುವ ಅವರು, ಪ್ರಕರಣದ ಹಿಂದಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. `ಈ ಘಟನೆಯ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ದ್ವೀಪದ ಆಡಳಿತವು ಯತ್ನಿಸಲಿದ್ದು, ಶೀಘ್ರದಲ್ಲಿ ದೃಶ್ಯವನ್ನು ಚಿತ್ರೀಕರಿಸಿರುವ ಛಾಯಾಗ್ರಾಹಕನನ್ನು ಪತ್ತೆ ಹಚ್ಚಲಿದೆ~ ಎಂದು ಅವರು ಹೇಳಿದ್ದಾರೆ.`ವಿಡಿಯೊ ತುಣುಕನ್ನು ಪಡೆಯಲು ನಾವು ಯತ್ನಿಸುತ್ತಿದ್ದು, ಆ ತುಣುಕು ಎಷ್ಟು ಹಳೆಯದು ಎಂಬುದನ್ನು ಪತ್ತೆ ಹಚ್ಚಲು ಕೇಂದ್ರ ಗೃಹ ಸಚಿವಾಲಯವು ಆ ದೃಶ್ಯದ ತಾಂತ್ರಿಕ ವಿವರಗಳನ್ನು ಪರೀಕ್ಷಿಸಲಿದೆ~ ಎಂದು ಸಚಿವರು ಹೇಳಿದ್ದಾರೆ.ಈ ಘಟನೆ ಯಾವಾಗ ನಡೆದಿದ್ದು  ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಪ್ರಕರಣಗಳು ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಆಡಳಿತದ ನಿರಾಕರಣೆ: ಪ್ರಕರಣದ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಆಡಳಿತವು  `ಇದೊಂದು ಬೇಜವಾಬ್ದಾರಿತನ~ ದ ವಿಡಿಯೊ ತುಣುಕು ಎಂದು ಬಣ್ಣಿಸಿದ್ದು, ಯಾವಾಗ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದೆ.

ಈ ನಡುವೆ, `ಇದು ಹಳೆಯ ವಿಡಿಯೊ ತುಣುಕು~ ಎಂದು  ಪೊಲೀಸರು ತಿಳಿಸಿದ್ದರು.`ಈ ವಿಡಿಯೊ ಸುಮಾರು 10 ವರ್ಷ ಹಳೆಯದಾಗಿದ್ದು, 2002ರಲ್ಲಿ ಚಿತ್ರೀಕರಿಸಿರುವ ಸಾಧ್ಯತೆ ಇದೆ~ ಎಂದು ಅಂಡಮಾನ್ ಡಿಜಿಪಿ ಎಸ್‌ಬಿ ಡಿಯೋಲ್ ಹೇಳಿದ್ದಾರೆ.ಚಾನೆಲ್‌ಗಳಿಗೆ ನೋಟಿಸ್: ಈ ಮಧ್ಯೆ, ಈ ದೃಶ್ಯವನ್ನು ಪ್ರಸಾರ ಮಾಡಿರುವ ದೆಹಲಿ ಮೂಲದ ಎರಡು ಟಿವಿ ವಾಹಿನಿಗಳಿಗೆ ವಕೀಲರ ಮೂಲಕ ನೋಟಿಸ್ ಜಾರಿ ಮಾಡುವುದಾಗಿ ಅಂಡಮಾನ್ ಮತ್ತು ನಿಕೋಬಾರ್ ಆಡಳಿತ ಹೇಳಿದೆ.  `ದಿ ಗಾರ್ಡಿಯನ್~ ಮತ್ತು `ದಿ ಅಬ್ಸರ್ವರ್~ ವಾರಪತ್ರಿಕೆ ಬಿಡುಗಡೆ ಮಾಡಿದ್ದ ಈ ದೃಶ್ಯವನ್ನು ದೆಹಲಿ ಮೂಲದ ಎರಡು ಚಾನೆಲ್‌ಗಳು  ಪ್ರಸಾರ ಮಾಡಿದ್ದವು.

ಪ್ರತಿಕ್ರಿಯಿಸಿ (+)