ಗುರುವಾರ , ಫೆಬ್ರವರಿ 25, 2021
29 °C

ಅಂತಿಮ ಹಂತದಲ್ಲಿ ಗಜಪಯಣದ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತಿಮ ಹಂತದಲ್ಲಿ ಗಜಪಯಣದ ಸಿದ್ಧತೆ

ಮೈಸೂರು: ದಸರಾ ಮಹೋತ್ಸವಕ್ಕೆ ಗಜಪಯಣದ ಸಿದ್ಧತೆಗಳು ಅಂತಿಮ ಘಟ್ಟದಲ್ಲಿದ್ದು, ದಿನಾಂಕ ನಿಗದಿಯಷ್ಟೇ ಬಾಕಿ ಉಳಿದಿದೆ. ಆ. 15, 21 ಹಾಗೂ 22 ಈ ಮೂರು ದಿನಾಂಕಗಳನ್ನು ಅರಣ್ಯ ಇಲಾಖೆ ನಿಗದಿಪಡಿಸಿದೆ. ಆ. 9ರಂದು ಇಲ್ಲಿ ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ನೇತೃತ್ವ ದಲ್ಲಿ ನಡೆಯುವ ದಸರಾ ಪೂರ್ವಭಾವಿ ಸಭೆಯಲ್ಲಿ ದಿನಾಂಕ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬಿ.ಜೆ. ಹೊಸಮಠ ಅವರು  ಒಟ್ಟು 15 ಆನೆಗಳಿಗೆ ದಸರೆಯಲ್ಲಿ ಭಾಗವಹಿಸಲು ಅನುಮತಿ ನೀಡಿದ್ದಾರೆ. ಇದರಲ್ಲಿ 12 ಆನೆಗಳು ಒಟ್ಟು ಎರಡು ಹಂತದಲ್ಲಿ ನಗರಕ್ಕೆ ಬರುವ ನಿರೀಕ್ಷೆ ಇದೆ.ಕಾವೇರಿ, ಚೈತ್ರಾ, ವಿಜಯಾ, ಸರಳ, ಅರ್ಜುನ, ಅಭಿಮನ್ಯು, ಬಲರಾಮ, ಗಜೇಂದ್ರ, ಗೋಪಾಲಸ್ವಾಮಿ, ದುರ್ಗಾಪರಮೇಶ್ವರಿ,    ಭೀಮಾ ಹಾಗೂ ಮೈಥಿಲಿ ಆನೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಇಂದಿನಿಂದ ಕಾಮಗಾರಿಗೆ ಚಾಲನೆ: ಇಲ್ಲಿನ ಅರಮನೆ ಆವರಣದಲ್ಲಿ ಆನೆಗಳು ತಂಗುವುದಕ್ಕೆ ತಾತ್ಕಾಲಿಕ ಶಿಬಿರಗಳು, ಮಾವುತರು, ಕಾವಾಡಿಗಳಿಗೆ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಕಾರ್ಯ ಸೋಮವಾರದಿಂದ ಆರಂಭವಾಗಲಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚು ಸುಸಜ್ಜಿತವಾಗಿ ಶೆಡ್‌ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.ಆನೆಗಳ ನಿರ್ವಹಣೆ ಖರ್ಚು ಭರಿಸಲು ಪ್ರಸ್ತಾವ: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ನಿರ್ವಹಣಾ ವೆಚ್ಚವನ್ನು ಶೇ 100ರಷ್ಟು ದಸರಾ ಉನ್ನತಮಟ್ಟದ ಸಮಿತಿಯೇ ಭರಿಸಬೇಕು ಎಂದು ಅರಣ್ಯ ಇಲಾಖೆ ಹೊಸ ಪ್ರಸ್ತಾವ ವೊಂದನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.ಇದುವರೆಗೂ ದಸರಾ ಉನ್ನತಮಟ್ಟದ ಸಮಿತಿಯಲ್ಲಿ ತೀರ್ಮಾನವಾದಂತೆ ಶೇಕಡಾವಾರು ಪ್ರಮಾಣದಲ್ಲಿ ಅರಣ್ಯ ಇಲಾಖೆ ಹಾಗೂ ಸಮಿತಿ ವೆಚ್ಚವನ್ನು ಭರಿಸುತ್ತಿದ್ದವು. ಕಳೆದ ಬಾರಿ ₹ 44 ಲಕ್ಷ ವೆಚ್ಚವಾಗಿತ್ತು. ಇದರಲ್ಲಿ ಶೇ 60ರಷ್ಟನ್ನು ಇಲಾಖೆ ಹಾಗೂ ಶೇ 40ರಷ್ಟನ್ನು ಸಮಿತಿ ಭರಿಸಿತ್ತು. ಇದು ಅರಣ್ಯ ಇಲಾಖೆಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.ಆ. 9ರಂದು ನಡೆಯುವ ದಸರಾ ಕುರಿತ ಉನ್ನತಮಟ್ಟದ ಸಭೆಯಲ್ಲಿ ಈ ಸಂಬಂಧ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆಗಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.