ಬುಧವಾರ, ಏಪ್ರಿಲ್ 21, 2021
30 °C

ಅಂದು ಅಪ್ಪ ನಾಯಕ, ಇಂದು ಮಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂದು ಅಪ್ಪ ನಾಯಕ, ಇಂದು ಮಗ...!ಇಂತಹ ಅಪರೂಪದ ಹಾಗೂ ವಿಶೇಷ ಸಂದರ್ಭಕ್ಕೆ ಈ ಸಲದ ರಣಜಿ ಋತುವಿನ ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳ ನಡುವಿನ ಪಂದ್ಯ ಸಾಕ್ಷಿಯಾಗಲಿದೆ.ಮೀರತ್‌ನಲ್ಲಿ ಶನಿವಾರ ಆರಂಭವಾಗಲಿರುವ ಈ ಪಂದ್ಯದಲ್ಲಿ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಅಪ್ಪ ಹಾಗೂ ಮಗ ಇಬ್ಬರೂ ಕರ್ನಾಟಕ ತಂಡವನ್ನು ಮುನ್ನಡೆಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ.ಸಹೋದರರು ಹಾಗೂ ಸಂಬಂಧಿಗಳು ಕರ್ನಾಟಕ ತಂಡದ ಸಾರಥ್ಯ ವಹಿಸಿಕೊಂಡ ಉದಾಹರಣೆಗಳು ನಮ್ಮ ಮುಂದಿವೆ. ಆದರೆ, ಅಪ್ಪ ಮತ್ತು ಮಗ ಕರ್ನಾಟಕ ತಂಡವನ್ನು ಮುನ್ನಡೆಸಿದ್ದು ಇದೇ ಮೊದಲು. 1983-84ರ ರಣಜಿ ಋತುವಿನಲ್ಲಿ ರೋಜರ್ ಬಿನ್ನಿ ಕರ್ನಾಟಕದ ಸಾರಥ್ಯ ವಹಿಸಿಕೊಂಡಿದ್ದರು. ಈಗ ಪುತ್ರ ಸ್ಟುವರ್ಟ್ ಉತ್ತರ ಪ್ರದೇಶ ವಿರುದ್ಧದ ಪಂದ್ಯಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ.ಈ ಸಲದ ರಣಜಿಯ ಮೊದಲ ಎರಡು ಪಂದ್ಯಗಳಿಗೆ ವೇಗಿ ಆರ್. ವಿನಯ್ ಕುಮಾರ್ ಕರ್ನಾಟಕ ತಂಡಕ್ಕೆ ನಾಯಕರಾಗಿದ್ದರು. ಅವರು ತೊಡೆಯ ಸ್ನಾಯು ಸೆಳೆತದಿಂದ ಬಳಲುತ್ತಿರುವ ಕಾರಣ ಈ ಪಂದ್ಯದಲ್ಲಿ ಆಡುತ್ತಿಲ್ಲ. ಇದರಿಂದ 28 ವರ್ಷ ವಯಸ್ಸಿನ ಸ್ಟುವರ್ಟ್‌ಗೆ ತಂಡವನ್ನು ಮುನ್ನಡೆಸುವ ಚೊಚ್ಚಲ ಅವಕಾಶ ಲಭಿಸಿದೆ.`ಕರ್ನಾಟಕ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದ್ದು ಖುಷಿ ನೀಡಿದೆ. ಅಪ್ಪ ಕೂಡಾ ತಂಡವನ್ನು ಮುನ್ನಡೆಸಿದ್ದರು. ಈಗ ನನಗೂ ಅವಕಾಶ ಸಿಕ್ಕಿದೆ. ಇದು ತೀರಾ ಅಪರೂಪ~ ಎಂದು ಸ್ಟುವರ್ಟ್ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.ಸಹೋದರರ ಕಮಾಲ್: ಸಹೋದರ ಕ್ರಿಕೆಟಿಗರಾದ ಪಿ.ಆರ್. ಅಶೋಕಾನಂದ ಹಾಗೂ ಪಿ.ಆರ್. ಶ್ಯಾಮಸುಂದರ್ ಅವರೂ ಕರ್ನಾಟಕ ತಂಡದ ನಾಯಕರಾಗಿದ್ದರು. ಶ್ಯಾಮಸುಂದರ್ 1951-52ರಲ್ಲಿ ಕೇರಳ ವಿರುದ್ಧದ ಪಂದ್ಯದಲ್ಲಿ ಮೊದಲ ಸಲ ನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದರು. ಅಶೋಕಾನಂದ 1970-71ರಲ್ಲಿ ಬಿಹಾರ್ ವಿರುದ್ಧದ ಪಂದ್ಯದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ತಂಡವನ್ನು ಮುನ್ನಡೆಸಿದ್ದರು.ಸಹೋದರ ಸಂಬಂಧಿಗಳಾದ ಬ್ರಿಜೇಶ್ ಪಟೇಲ್ ಹಾಗೂ ವೈ.ಬಿ. ಪಟೇಲ್ ಕೂಡಾ ಕರ್ನಾಟಕದ ಸಾರಥ್ಯ ವಹಿಸಿಕೊಂಡಿದ್ದರು. ವೈ.ಬಿ. ಪಟೇಲ್ 1964-65ರಲ್ಲಿ ಕೇರಳ ವಿರುದ್ಧದ ಪಂದ್ಯದಲ್ಲಿ, ಬ್ರಿಜೇಶ್ 1978-79ರಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಮೊದಲ ಸಲ ಕರ್ನಾಟಕದ ನೇತೃತ್ವ ವಹಿಸಿಕೊಂಡಿದ್ದರು.ನಾಳೆಯಿಂದ ಪಂದ್ಯ: ಉತ್ತರ ಪ್ರದೇಶ ವಿರುದ್ಧ ಶನಿವಾರ ಆರಂಭವಾಗಲಿರುವ ಪಂದ್ಯದಲ್ಲಿ ವೇಗದ ಬೌಲರ್‌ಗಳಾದ ವಿನಯ್ ಹಾಗೂ ಅಭಿಮನ್ಯು ಮಿಥುನ್ ಆಡುತ್ತಿಲ್ಲ. ಆದಕಾರಣ  ಯುವ ಆಟಗಾರರು ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷದ ರಣಜಿಯಲ್ಲಿ ಆಡಿದ್ದ ಶಿವಮೊಗ್ಗದ ಎಸ್.ಎಲ್. ಅಕ್ಷಯ್ ತಂಡಕ್ಕೆ ಮರಳಿದ್ದಾರೆ. ಕುನಾಲ್ ಕಪೂರ್, ಕೆ.ಎಲ್. ರಾಹುಲ್ ಹಾಗೂ ಎಚ್.ಎಸ್. ಶರತ್ ಅಂತಿಮ ಹನ್ನೊಂದರ ಆಕಾಂಕ್ಷೆಯಲ್ಲಿರುವ ಆಟಗಾರರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.