ಭಾನುವಾರ, ಜೂನ್ 20, 2021
20 °C
ರೌಂಡ್‌ ಟೇಬಲ್‌ ಇಂಡಿಯಾದಿಂದ ಕಾರು ರ್‍ಯಾಲಿ

ಅಂಧರಿಂದ ಚಾಲಕರಿಗೆ ‘ಮಾರ್ಗದರ್ಶನ’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇವರು ದೃಷ್ಟಿಯಿಂದ ಅಂಗವಿಕಲರೇ ಹೊರತು, ಬುದ್ಧಿಯಿಂದ ಅಲ್ಲ ಎಂಬುದನ್ನು ಸಾಬೀತುಪಡಿಸಿದರು. ಕಣ್ಣು ಕಾಣಿಸದಿದ್ದರೂ ಬ್ರೈಲ್‌ ಲಿಪಿಯ ನಕ್ಷೆಯ ನೆರವಿನಿಂದ ಕಾರು ಚಾಲಕರಿಗೆ ನಿರ್ದೇಶನ ನೀಡುವ ಮೂಲಕ ಎಲ್ಲರಲ್ಲೂ ಬೆರುಗು ಮೂಡಿಸಿದರು. ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಪ್ರಶಸ್ತಿ, ಪದಕಗಳನ್ನು ಗಿಟ್ಟಿಸಿಕೊಂಡ ಇವರು ಕಣ್ಣಿದ್ದವರನ್ನೂ ನಾಚಿಸಿದರು.ರೌಂಡ್‌ ಟೇಬಲ್‌ ಇಂಡಿಯಾ ವತಿಯಿಂದ ನಗರದಲ್ಲಿ ಪ್ರಥಮ ಬಾರಿಗೆ ಭಾನುವಾರ ಆಯೋಜಿಸಲಾಗಿದ್ದ ಕಾರು ರ್‍ಯಾಲಿಯು ಅಂಧರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಒದಗಿಸಿಕೊಟ್ಟಿತು. ಬೆಳಗಾವಿ, ಧಾರವಾಡ, ಗದಗ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 60 ಅಂಧರು ರ್‍ಯಾಲಿಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.ಹೆಣ್ಣು ಭ್ರೂಣಹತ್ಯೆ ತಡೆ, ಪರಿಸರ ಮಾಲಿನ್ಯ ನಿಯಂತ್ರಣ, ಶಿಕ್ಷಣ ಹಾಗೂ ಸಮಯದ ಮಹತ್ವವನ್ನು ಸಾರುವ ಸಂದೇಶಗಳನ್ನು ರ್‍ಯಾಲಿಯಲ್ಲಿ ಬಿತ್ತರಿಸುವ ಮೂಲಕ ಸಾಮಾಜಿಕ ಕಳಕಳಿಯನ್ನೂ ಇವರು ಮೆರೆದರು.ಇಲ್ಲಿನ ಕಾಲೇಜು ರಸ್ತೆಯ ಬೆನನ್‌–ಸ್ಮಿಥ್‌ ಪದವಿ ಕಾಲೇಜಿನ ಬಳಿ ಉತ್ತರ ವಲಯ ಪೋಲಿಸ್‌ ಮಹಾನಿರ್ದೇಶಕ ಭಾಸ್ಕರರಾವ್‌ ಅವರು ರ್‍ಯಾಲಿಗೆ ಚಾಲನೆ ನೀಡಿದರು. ಇಲ್ಲಿಂದ ಆರಂಭಗೊಂಡ ರ್‍ಯಾಲಿಯು ಹಿಂಡಲಗಾ, ವಿನಾಯಕ ನಗರ, ನಾನಾವಾಡಿ, ಬೆನಕನಹಳ್ಳಿ, ಸಾವಗಾಂವ್‌, ಮಾಂಡೊಳಿ ರಸ್ತೆ, ಕಾಂಗ್ರೆಸ್‌ ರಸ್ತೆ, ಭಾಗ್ಯನಗರ, ಗೋವಾವೆಸ್‌, ಕ್ಯಾಂಪ್‌ ಪ್ರದೇಶ, ಬೋಗಾರವೆಸ್‌ ಮಾರ್ಗವಾಗಿ ಸಂಚರಿಸಿ ಪುನಃ ಬೆನನ್‌–ಸ್ಮಿತ್‌ ಪದವಿ ಕಾಲೇಜು ತಲುಪಿತು. ಸುಮಾರು 1 ಗಂಟೆ 30 ನಿಮಿಷಗಳ ಕಾಲ ನಡೆದ ರ್‍ಯಾಲಿಯು 32 ಕಿ.ಮೀ. ದೂರ ಕ್ರಮಿಸಿತು.ತರಬೇತಿ

‘ಕಾರು ರ್‍ಯಾಲಿಯಲ್ಲಿ ಬ್ರೈಲ್‌ ಲಿಪಿಯ ನಕ್ಷೆಯನ್ನು ಉಪಯೋಗಿಸುವ ಕುರಿತು ದೃಷ್ಟಿಹೀನರಿಗೆ ನುರಿತ ತಜ್ಞರಿಂದ ಎರಡು ದಿನಗಳ ಕಾಲ ಸರಾಸರಿ 3 ಗಂಟೆ ತರಬೇತಿ ಕೊಡಿಸಲಾಗಿತ್ತು. ರ್‍ಯಾಲಿಯ ಸಂದರ್ಭದಲ್ಲಿ ಎದುರಾಗುವ ಟ್ರಾಫಿಕ್‌ ಸಿಗ್ನಲ್‌ಗಳನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಮಾಹಿತಿಯನ್ನು ಒದಗಿಸಲಾಗಿತ್ತು. ನಾವು ರ್‍ಯಾಲಿ ಹಮ್ಮಿಕೊಂಡ ಮಾರ್ಗದಲ್ಲಿ ಹೆಚ್ಚಿನ ಟ್ರಾಫಿಕ್‌ ಸಿಗ್ನಲ್‌ಗಳು ಇಲ್ಲದೇ ಇರುವುದರಿಂದ ವಾಹನ ಚಲಾವಣೆಗೆ ಯಾವುದೇ ತೊಂದರೆಯಾಗಲಿಲ್ಲ’ ಎಂದು ರೌಂಡ್‌ ಟೇಬಲ್‌ ಇಂಡಿಯಾ ಮಾಜಿ ಅಧ್ಯಕ್ಷ ಆನಂದ ಹೆಡಾ ‘ಪ್ರಜಾವಾಣಿ’ಗೆ ತಿಳಿಸಿದರು.‘ಅಂಧರನ್ನು ಉತ್ತೇಜಿಸುವ ನಿಟ್ಟಿನಲ್ಲಿ ನವದೆಹಲಿ, ಮುಂಬೈ, ಹೈದರಾಬಾದ್‌, ಕಾನ್ಪುರ, ಮೈಸೂರು ನಗರಗಳಲ್ಲಿ ಈಗಾಗಲೇ ಕಾರು ರ್‍ಯಾಲಿ ಆಯೋಜಿಸಲಾಗಿತ್ತು. ಇದೀಗ ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ರ್‍ಯಾಲಿ ಆಯೋಜಿಸಲಾಗುತ್ತಿದೆ. ಇದರಲ್ಲಿ ಬಂದ ಆದಾಯವನ್ನು ಶಾಲಾ ಕಟ್ಟಡಗಳ ತರಗತಿಗಳ ನಿರ್ಮಾಣ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಬಳಸಲಾಗುವುದು’ ಎಂದು ಅವರು ತಿಳಿಸಿದರು.ಇಂದ್ರಜೀತ ಪ್ರಥಮ: ಸಮಯ, ದೂರ ಹಾಗೂ ವೇಗವನ್ನು ಸಮರ್ಪಕವಾಗಿ ಅನುಸರಿಸಿ ಚಾಲಕನಿಗೆ ಮಾರ್ಗದರ್ಶನ ನೀಡಿದ ಅಂಧರಾದ ಇಂದ್ರಜೀತ ಹಲಗೇಕರ ರ್‍ಯಾಲಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ವಿವೇಕ ಚಬ್ದಾ ದ್ವಿತೀಯ ಸ್ಥಾನ ಪಡೆದುಕೊಂಡರು. ಅದರಂತೇ ಪವನ ಜವಾರ್‌ ಹಾಗೂ ಸ್ನೇಹಾ ಗೋಟಡಕಿ ಸಮಬಲ ಸಾಧಿಸುವ ಮೂಲಕ ತೃತೀಯ ಸ್ಥಾನ ಗಳಿಸಿಕೊಂಡರು.ಕಾರನ್ನು ಸಿಂಗರಿಸುವ ಸ್ಪರ್ಧೆಯಲ್ಲಿ ಸ್ನೇಹಾ ಗೋಟಡಕಿ ತಂಡ ಹಾಗೂ ಆಲ್‌ ಲೇಡಿಜ್‌ ಕಾರು ಸ್ಪರ್ಧೆಯಲ್ಲಿ ಮೇಧಾ ಶಹಾ ಮತ್ತು ಪೂಜಾ ಮಿರ್ಜಿ ತಂಡವು ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿತು.ವಿಜಯಕುಮಾರ ಮಂಗಸೂಳೆ, ಗಿರೀಶ ಮಾನೆ, ಅಕ್ಷಯ ಮಲಿಕ್‌, ಅವಿನಾಶ ಪೋತದಾರ, ಹರೀಶ ಗುಲ್ಬಾನಿ, ನಾರಾಯಣ ಹೆಡಾ, ರಾಜು ಅಹುಜಾ, ಬೆಂಬಳಗಿ, ಮನೋಜ ಹುಯಿಲಗೋಳ, ದೀಪಕ ಚಿಂಡಕ, ರೌಂಡ್‌ ಟೇಬಲ್‌ ಇಂಡಿಯಾ ಅಧ್ಯಕ್ಷ  ಶ್ರೀಹರ್ಷ ರಾವ್‌, ಸಂತೋಷ ಸರೋದೆ, ಆನಂದ ದೇಸಾಯಿ, ಮಂದಾರ ಮುತಕೇಕರ ಹಾಜರಿದ್ದರು. ಆರತಿ ಅಹುಜಾ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.