ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ–ಕಾಯಿಯ ಖಾದ್ಯ

Last Updated 6 ಜೂನ್ 2014, 19:30 IST
ಅಕ್ಷರ ಗಾತ್ರ

ಎಲ್ಲ ಪ್ರದೇಶದಲ್ಲೂ ಭಾಷೆಯ ಜೊತೆಗೆ ಊಟ ತಿಂಡಿಯಲ್ಲೂ ವೈವಿಧ್ಯೆ ಇರುತ್ತದೆ.  ಹಾಗೆಯೇ ಕರಾವಳಿ ಪ್ರದೇಶದಲ್ಲಿ ಅಕ್ಕಿ ಹಾಗೂ ಕಾಯಿ ಬಳಸಿ ಹತ್ತಾರು ಬಗೆಯ ತಿಂಡಿ ಮಾಡಲಾಗುತ್ತದೆ. ಈ ತಿಂಡಿಗಳು ಆರೋಗ್ಯಕ್ಕೂ ಹಿತ, ಬಾಯಿಗೂ ರುಚಿ, ಮಾಡುವುದೂ  ಸುಲಭ.
ತಲೆತಲಾಂತರದಿಂದಲೂ ಮನೆಯಲ್ಲಿ ಸಾಗುವಳಿ ಮಾಡಿಕೂಂಡು ಬರುವ ಮನೆಗಳಲ್ಲಿ ಅಕ್ಕಿ ಹಾಗೂ ತೆಂಗಿನಕಾಯಿಯಂತೂ ಧಾರಳವಾಗಿ ಇದ್ದೇ ಇರುತ್ತದೆ.

ಅಕ್ಕಿ ಮತ್ತು ತೆಂಗಿನಕಾಯಿ ಉಪಯೋಗಿಸಿ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಬಹುದು. ದಿನದ ಅಡುಗೆಯಾಗಿರಬಹುದು ವಿಶೇಷ ಸಂದರ್ಭದಲ್ಲಿ ಮಾಡುವ ಅಡುಗೆಯಾಗಿರಬಹುದು, ಮಳೆಗಾಲದಲ್ಲಿ ಮಾಡುವ ಕುರುಕುರು   ಸಿಹಿ  ಅಥವಾ ಖಾರ ತಿಂಡಿಯಾಗಿರಬಹುದು ಎಲ್ಲ  ತರಹದ ತಿಂಡಿ ತಿನಿಸುಗಳನ್ನು ಅಕ್ಕಿ–ಕಾಯಿಯಿಂದಲೇ ತಯಾರಿಸಬಹುದು. ಇಲ್ಲಿವೆ ಕೆಲವು ಮಾದರಿಗಳು.

ಎರೆ ಅಪ್ಪ
ಬೇಕಾಗುವ ಸಾಮಗ್ರಿಗಳು:
ಒಂದು ಬಟ್ಟಲು ತಿಂಡಿ ಅಕ್ಕಿ, ಒಂದು ಬಟ್ಟಲು ತೆಂಗಿನ ತುರಿ, ಅರ್ಧ ಚಮಚ ಮೆಂತೆ, ಚಿಟಿಕೆ ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಅಕ್ಕಿ ಹಾಗೂ ಮೆಂತೆಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಬೆಲ್ಲ ಹಾಗೂ ನೆನೆದ ಅಕ್ಕಿಯನ್ನು ಸೇರಿಸಿ ನುಣ್ಣಗೆ ಅರಿಯಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಹಿಟ್ಟು ದೋಸೆ ಹಿಟ್ಟಿನ ಹದದಲ್ಲಿರಬೇಕು. ಕಾದ ಎಣ್ಣೆಯಲ್ಲಿ ಒಂದೊಂದೇ ಸೌಟಿನಲ್ಲಿ ಹಾಕಿ ನಿಧಾನವಾಗಿ ಎರಡು ಬದಿ ಕಾಯಿಸಿ ತೆಗೆಯಬೇಕು. ಈಗ ರುಚಿಕರವಾದ ಹಾಗೂ ಸ್ವಾದಿಷ್ಟಕರವಾದ ತಿಂಡಿ ತಯಾರು. ಇದನ್ನು ಮಕ್ಕಳೂ ಸಹ ಇಷ್ಟ ಪಟ್ಟು ತಿನ್ನುತ್ತಾರೆ.

ಕಾಯಿ ವಡೆ
ಬೇಕಾಗುವ ಸಾಮಗ್ರಿಗಳು: ಒಂದು ಬಟ್ಟಲು ತಿಂಡಿ ಅಕ್ಕಿ, ಒಂದು ಬಟ್ಟಲು ತೆಂಗಿನ ತುರಿ, ನಾಲ್ಕು ಹಸಿಮೆಣಸು, ರುಚಿಗೆ ಉಪ್ಪುಹಾಗೂ ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಅಕ್ಕಿಯನ್ನು ಸ್ವಲ್ಪ ಹುರಿಯಬೇಕು, ಅಕ್ಕಿ ಹುರಿದ ಕೂಡಲೆ ಬಿಸಿ ಅಕ್ಕಿಗೆ ನೀರು ಹಾಕಿ ಒಂದು ಗಂಟೆ ನೆನೆಯಲು ಬಿಡಬೇಕು. ನಂತರ ನೀರು ಬಸಿದು ತೆಂಗಿನ ತುರಿ ಹಾಗೂ ಹಸಿಮೆಣಸು ಸೇರಿಸಿ ಸ್ವಲ್ಪವೇ ನೀರು ಸೇರಿಸಿ ಗಟ್ಟಿಯಾಗಿ ಮಿಕ್ಸಿಯಲ್ಲಿ ಅರಿಯಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಈ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಬಾಳೆ ಎಲೆಗೆ ಅಥವಾ ಪ್ಲಾಸ್ಟಿಕ್ ಹಾಳೆಗೆ ಎಣ್ಣೆ ಹಚ್ಚಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ಬಿಸಿ ಬಿಸಿಯಾದ ಗರಿಗರಿಯಾದ ಕಾಯಿವಡೆ ತಿನ್ನಲು ತಯಾರು.

ಅಕ್ಕಿ ಒತ್ತು ಶಾವಿಗೆ
ಬೇಕಾಗುವ ಸಾಮಗ್ರಿಗಳು:  ಬಿಳಿ ಕುಸುಬಲು ಅಕ್ಕಿ ಎರಡು ಪಾವು, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಮೂರು ಚಮಚ ತೆಂಗಿನ ಎಣ್ಣೆ, ಒಂದು ಚಮಚ ಸಾಸುವೆ, ಒಂದು ಚಮಚ ಉದ್ದಿನಬೇಳೆ, ಒಂದು ಚಮಚ ಕಡ್ಲೇಬೇಳೆ, ಸ್ವಲ್ಪ ಕರಿಬೇವು, ಒಂದು ಲಿಂಬೆ ಗಾತ್ರದಷ್ಟು ಬೆಲ್ಲ,ಸಲ್ಪ ತೆಂಗಿನ ತುರಿ.

ಮಾಡುವ ವಿಧಾನ: ಹಿಂದಿನ ದಿನವೇ ಅಕ್ಕಿಯನ್ನು ನಾಲ್ಲ್ಕು ಗಂಟೆನೀರಿನಲ್ಲಿ ನೆನೆಸಿ, ನುಣ್ಣಗೆ ಅರೆದಿಡಬೇಕು. ಹಿಟ್ಟು ದೋಸೆ ಹಿಟ್ಟಿನ ಹದದಲ್ಲಿರಬೇಕು. ಮಾರನೇ ದಿನ ಬೆಳಿಗ್ಗೆ ಕುಡಿಯುವ ನೀರಿನ ಲೋಟಗಳಿಗೆ ಹಾಕಿ ಹಬೆಯಲ್ಲಿ ಅರ್ಧ ಗಂಟೆ ಬೇಯಿಸಿ‌ನಂತರ ಬಿಸಿ ಇರುವಾಗಲೆ ಶ್ಯಾವಿಗೆ ಒರಳಿಗೆ ಹಾಕಿ ಒತ್ತಿದರೆ ಶ್ಯಾವಿಗೆ ತಯಾರು. ಇದನ್ನು ಹಲವಾರು ಖಾದ್ಯಗಳ ಜೊತೆಯಲ್ಲಿ ತಿನ್ನಬಹುದು. ಮಜ್ಜಿಗೆ ಹುಳಿ, ಕಾಯಿ ಚಟ್ನಿ, ಮೆಣಸುಕಾಯಿ. ಸಿಹಿ ಇಷ್ಟ ಬೇಕೆಂದರೆ, ಕಾಯಿಹಾಲು ಜೊತೆಗೆ, ಹುಳಿ ಬೇಕೆಂದರೆ ಮಾವಿನ ಮಿಡಿ ಉಪ್ಪಿನಕಾಯಿ ಹಾಗೂ ಕೊಬ್ಬರಿ ಎಣ್ಣೆಯೊಂದಿಗೆ ತಿಂದರೆ ಅದರ ಗಮ್ಮತ್ತೆ ಬೇರೆ.

ಒಗ್ಗರಣೆ: ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸುವೆ, ಉದ್ದಿನಬೇಳೆ, ಕಡ್ಲೇಬೇಳೆ ಹಾಕಿ ಸಾಸುವೆ ಸಿಡಿದ ನಂತರ ಕರಿಬೇವು ಹಾಕಬೇಕು. ನಂತರ ಕಾಯಿತುರಿ ಹಾಗೂ ಅರ್ಧ ಚಮಚ ಸಾಸುವೆ, ನಾಲ್ಕೈದು ಒಣಮೆಣಸು ಸೇರಿಸಿ ನೀರು ಹಾಕದೇ ಮಿಕ್ಸಿಯಲ್ಲಿ ಮಸಾಲೆ ಪುಡಿ ಮಾಡಿಟ್ಟುಕೊಂಡಿರಬೇಕು. ಒಗ್ಗರಣೆಗೆ ಇದನ್ನು ಸೇರಿಸಿ, ನಂತರ ಸ್ವಲ್ಪ ನೀರು ಹಾಗೂ ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಈ ಒತ್ತು ಶ್ಯಾವಿಗೆಯನ್ನು ಈ ಒಗ್ಗರಣೆಯಲ್ಲಿ ಸೇರಿಸಿದರೆ ಶ್ಯಾವಿಗೆ ಒಗ್ಗರಣೆ ಸವಿಯಲು ಸಿದ್ಧ.

ಪುಂಡಿಗಟ್ಟಿ

ಬೇಕಾಗುವ ಸಾಮಗ್ರಿಗಳು: ಒಂದು ಬಟ್ಟಲು ಕುಸುಬಲು ಅಕ್ಕಿ, ಒಂದು ಬಟ್ಟಲು ತೆಂಗಿನ ತುರಿ ಹಾಗೂ ರುಚಿಗೆ ತಕ್ಕಸ್ಟು ಉಪ್ಪು.

ಮಾಡುವ ವಿಧಾನ: ಸುಮಾರು ನಾಲ್ಕು ಗಂಟೆಗಳ ಕಾಲ ಅಕ್ಕಿಯನ್ನು ನೆನೆಸಬೇಕು. ನಂತರ ನೆನೆದ ಅಕ್ಕಿ ಹಾಗೂ ತೆಂಗಿನ ತುರಿಯನ್ನು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ತರಿತರಿಯಾಗಿ ಗಟ್ಟಿಯಾಗಿ ಅರಿಯಬೇಕು. ನಂತರ ಹಬೆಯಲ್ಲಿ ಇಪ್ಪತ್ತೈದು ನಿಮಿಷ ಬೇಯಿಸಬೇಕು. ಈಗ ಬಿಸಿಬಿಸಿಯಾದ ಪುಂಡಿಗಟ್ಟಿ ತಯಾರು. ಕಾಯಿಚಟ್ನಿ ಅಥವಾ ಮಾವಿನ ಮಿಡಿ ಉಪ್ಪಿನಕಾಯಿಯೊಂದಿಗೆ ಸವಿಯಬಹುದು. ಸಿಹಿ ಇಷ್ಟ ಪಡುವವರು ಕಾಯಿ ಹೂ ಹಾಗೂ ಬೆಲ್ಲದ ಮಿಶ್ರಣದೊಂದಿಗೆ ಸವಿಯಬಹುದು.

ಉಂಡ್ಲಿಕಾ
ಬೇಕಾಗುವ ಸಾಮಗ್ರಿಗಳು: ಎರಡು ಬಟ್ಟಲು ತಿಂಡಿ ಅಕ್ಕಿ, ಒಂದು ಬಟ್ಟಲು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆಸಬೇಕು. ನಂತರ ನೆನೆದ ಅಕ್ಕಿ ಹಾಗೂ ತೆಂಗಿನ ತುರಿಯನ್ನು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಅರಿಯಬೇಕು.   ಹಿಟ್ಟು ನೀರಾಗಿರಬೇಕು ರುಚಿಗೆ ಉಪ್ಪು ಸೇರಿಸಿ ಬಾಂಡ್ಲಿಯಲ್ಲಿ ನಿಧಾನ ಉರಿಯಲಿ ಮಗುಚುತ್ತಿರಬೇಕು. ಹಿಟ್ಟು ಅರ್ಧ ಬೆಂದು ಗಟ್ಟಿಯಾಗುತ್ತದೆ. ನಂತರ ಅದನ್ನು ತಣ್ಣಗಾಗಲು ಬಿಡಬೇಕು. ತಣ್ಣಗಾದ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಹಬೆಯಲ್ಲಿ ಹತ್ತು ನಿಮಿಷ ಬೇಯಿಸಬೇಕು.  ಈಗ ತಯಾರಾದ ಉಂಡ್ಲಿಕಾವನ್ನು ಕಾಯಿ, ಬೇಲ್ಲದ ಮಿಶ್ರಣದೊಂದಿಗೆ ಸವಿಯ ಬಹುದು. ಚಟ್ನಿಯ ಜೊತೆಗೂ ತಿನ್ನಬಹುದು. ಇದನ್ನು ಗಣಪತಿ ಹಬ್ಬಕ್ಕೆ ದೇವರಿಗೆ ನೈವೆದ್ಯಕ್ಕೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT