ಗುರುವಾರ , ಮೇ 13, 2021
36 °C

`ಅಕ್ರಮ ಪತ್ತೆಗೆ ತನಿಖಾ ತಂಡ ರಚನೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ:  ಬಸವ, ಇಂದಿರಾ ಆವಾಜ್ ಹಾಗೂ ಅಂಬೇಡ್ಕರ್ ಸೇರಿದಂತೆ ವಿವಿಧ ಆಶ್ರಯ ಯೋಜನೆಗಳ ಫಲಾನುಭವಿ ಪಟ್ಟಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪತ್ತೆಗಾಗಿ ಇಬ್ಬರು ತಾಲ್ಲೂಕು ಪಂಚಾಯ್ತಿ ಸದಸ್ಯರ ನೇತೃತ್ವದಲ್ಲಿ ರಚಿಸಲಾಗಿರುವ ತನಿಖಾ ತಂಡಕ್ಕೆ ಜೂನ್ 27ರ ಒಳಗೆ ಫಲಾನುಭವಿ ಪಟ್ಟಿಯಲ್ಲಿನ ಸತ್ಯಾಸತ್ಯತೆಯ ವರದಿ ಸಲ್ಲಿಸುವಂತೆ ಶಾಸಕ ಎಂ.ಪಿ.ರವೀಂದ್ರ ಸೂಚಿಸಿದರು.ಸ್ಥಳೀಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿನ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಹಿಂದೆ ತಾಲ್ಲೂಕಿಗೆ ಮಂಜೂರಾದ ವಿವಿಧ ಯೋಜನೆಗಳ ಆಶ್ರಯ ಮನೆ ಹಂಚಿಕೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಕೇಳಿಬಂದಿವೆ. 1,262 ಮನೆಗಳ ಫಲಾನುಭವಿ ಪಟ್ಟಿ ರೂಪಿಸುವಲ್ಲಿ ಕೂಡ ಅಕ್ರಮ ನಡೆದಿದೆ. ಈ ಅಕ್ರಮಗಳನ್ನು ಸರಿಪಡಿಸುವಂತೆ ಸೂಚಿಸಿ ಈಗಾಗಲೇ ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಲಾಗಿದ್ದು, ನಿಗಮವೇ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಅಕ್ರಮ ಮೇಲ್ನೋಟಕ್ಕೆ ಸಾಬೀತಾದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಈ ಹಿಂದೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಸಂಬಂಧಿಕರು ಬೇನಾಮಿ ಹೆಸರಿನಲ್ಲಿ ಆಶ್ರಯ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಆರೋಪ ಕೇಳಿ ಬಂದಿರುವುದರಿಂದ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಆರ್.ಹನುಮಂತಪ್ಪ ಹಾಗೂ ಕಂಚಿಕೇರೆ ಕ್ಷೇತ್ರದ ಸದಸ್ಯೆ ಜಯಲಕ್ಷಿ ನೇತೃತ್ವದಲ್ಲಿ ಎರಡು ಪ್ರತ್ಯೇಕ ತನಿಖಾ ತಂಡ ರಚಿಸಲಾಗಿದೆ. ನಾಳೆಯಿಂದಲೇ ತನಿಖಾ ತಂಡ ಮಂಜೂರಾತಿ ದೊರಕದ 1,262ಮನೆಗಳ  ಫಲಾನುಭವಿಗಳ ಪಟ್ಟಿಯ ಅಕ್ರಮವನ್ನು ಪತ್ತೆಹಚ್ಚಿ ಸತ್ಯಾಶೋಧನ ವರದಿ ಸಲ್ಲಿಸಬೇಕು.ವರದಿ ಕೈಸೇರಿದ ಬಳಿಕ, ಜಾಗೃತಿ ಸಮಿತಿ ಸಭೆ ಸೇರಿ ನಕಲಿ ಫಲಾನುಭವಿಗಳನ್ನು ಕೈಬಿಟ್ಟು, ಅಸಲಿ ಫಲಾನುಭವಿಗಳನ್ನು ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಟಿ.ಪಾಂಡ್ಯಪ್ಪ ಅವರಿಗೆ ಸೂಚಿಸಿದರು.ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆ ಅಡಿ ಕೈಗೆತ್ತಿಕೊಳ್ಳಲಾದ ಕಣವಿ ಮತ್ತು 21ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆಯಾಗಿ ವರ್ಷ ಗತಿಸಿದರೂ ಯೋಜನಾ ವ್ಯಾಪ್ತಿಯ ಗ್ರಾಮಗಳಿಗೆ ಇದುವರೆಗೂ ನೀರು ಪೂರೈಕೆಯಾಗುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹನುಮಂತಪ್ಪ ಸಭೆಯಲ್ಲಿ ಪ್ರಸ್ತಾಪಿಸಿದಾಗ, ತಕ್ಷಣ ಶಾಸಕರು, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕರೆಸಿ ಎಂದು ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದ ಎಇಇ ವೈ.ಶಶಿಧರ ಅವರಿಗೆ ತಾಕೀತು ಮಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಜೀತಪದ್ಧತಿ ಜೀವಂತ ಇದೆ ಎಂಬ ದೂರುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಆಯಾ ಕಂದಾಯ ವೃತ್ತದ ಇಬ್ಬರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಾಮಾಜಿಕ ಕಾಳಜಿ ಹೊಂದಿರುವ ವ್ಯಕ್ತಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಾಧಿಕಾರಿ ನೇತೃತ್ವದಲ್ಲಿ ಜೀತ ಪದ್ಧತಿ ಪತ್ತೆಹಚ್ಚಲು ಸಮಿತಿ ರಚಿಸಲು ಸಭೆಗೆ ಶಾಸಕರು ಸೂಚಿಸಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಎ.ಕೆ.ಶಾರದಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಈಶ್ವರಪ್ಪ, ಮಂಜುಳಾ ಶೇಖರಪ್ಪ, ಕವಿತಾ ಆರ್.ರಾಮಗಿರಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಸ್.ಮಂಜುನಾಥ, ತಹಶೀಲ್ದಾರ್ ಚನ್ನಬಸಪ್ಪ, ಕಾರ್ಯನಿರ್ವಹಣಾಧಿಕಾರಿ ಟಿ.ಪಾಂಡ್ಯಪ್ಪ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.