ಸೋಮವಾರ, ಮೇ 16, 2022
30 °C

ಅಕ್ರಮ- ಸಕ್ರಮ ಯೋಜನೆ ಶೀಘ್ರವೇ ಜಾರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಕಟ್ಟಡಗಳ ಸರಣಿ ಲೇಖನ ಮಾಲೆಗೆ ಹಲವು ನಾಗರಿಕ ಸೇವಾ ಸಂಸ್ಥೆಗಳು ಪ್ರತಿಕ್ರಿಯೆ ನೀಡಿದ್ದು, ನಿಯಮ ಉಲ್ಲಂಘಿಸಿರುವ ಕಟ್ಟಡಗಳನ್ನು ಒಡೆಯುವುದಕ್ಕಿಂತ ಸಕ್ರಮಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿವೆ. ಹಾಗೆಯೇ ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿವೆ.ಅಕ್ರಮ ಕಟ್ಟಡಗಳ ಸಕ್ರಮದಿಂದ ಬಿಬಿಎಂಪಿಗೆ ಆದಾಯ

ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳು `ನಾಯಿ ಕೊಡೆ~ಗಳಂತೆ ತಲೆಯೆತ್ತಿವೆ. ಅಕ್ರಮ ಸಕ್ರಮದ ಮೂಲಕ ದಂಡ ವಿಧಿಸಿ ಇಂತಹ ಕಟ್ಟಡಗಳನ್ನು ಸಕ್ರಮಗೊಳಿಸುವುದರಿಂದ ಬಿಬಿಎಂಪಿಗೆ ಕೋಟ್ಯಂತರ ರೂಪಾಯಿ ಆದಾಯ ಬರಲಿದೆ.ಕಂದಾಯ ನಿವೇಶನಗಳಲ್ಲಿ ಲಕ್ಷಾಂತರ ಕಟ್ಟಡಗಳು ತಲೆಯೆತ್ತಿವೆ. ಇಂತಹ ಕಟ್ಟಡಗಳನ್ನು ಸರ್ಕಾರ ಅತ್ತ ಸಕ್ರಮಗೊಳಿಸುತ್ತಿಲ್ಲ, ಇತ್ತ ಅಭಿವೃದ್ಧಿ ಶುಲ್ಕವನ್ನೂ ಸಂಗ್ರಹಿಸುತ್ತಿಲ್ಲ. ಇದರಿಂದ ಕಂದಾಯ ನಿವೇಶನಗಳಲ್ಲಿ ಮನೆ ನಿರ್ಮಿಸಿದವರು ಇಕ್ಕಟ್ಟಿಗೆ ಸಿಲುಕಿದ್ದಾರೆ.ಇನ್ನು ಇಂತಹ ನಿವೇಶನ ಖರೀದಿಸಿ ಮನೆ ಕಟ್ಟುವ ಕನಸು ಕಾಣುತ್ತಿರುವ ನೌಕರ ಕುಟುಂಬಗಳು ಬ್ಯಾಂಕ್ ಸಾಲ ಪಡೆಯಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿವೆ. ದುಡ್ಡಿದ್ದವರು ಅಕ್ರಮ-ಸಕ್ರಮಕ್ಕಾಗಿ ಕಾಯದೆ ಮನೆ ನಿರ್ಮಿಸಿದ್ದಾರೆ. ದುಡ್ಡಿಲ್ಲದೆ ಸಾಲ ಪಡೆದು ಮನೆ ಕಟ್ಟುವರರ ಪಾಡೇನು? ಇಂತಹವರ ಬಗ್ಗೆಯೂ ಸರ್ಕಾರ ಗಮನಹರಿಸಿ ಶೀಘ್ರ ಸೂಕ್ತ ತೀರ್ಮಾನಕ್ಕೆ ಬರಬೇಕು.ನಗರದಲ್ಲಿ ಲೆಕ್ಕವಿಲ್ಲದಷ್ಟು ಕಟ್ಟಡಗಳು ಕೆಎಂಸಿ ಕಾಯ್ದೆ ಉಲ್ಲಂಘಿಸಿ ಮನೆ ನಿರ್ಮಿಸಿರುವುದಕ್ಕೆ ಜನಪ್ರತಿನಿಧಿಗಳುಶ್ರಿ ಹಾಗೂ ಅಧಿಕಾರಿಗಳು ಇಬ್ಬರೂ ಕಾರಣ. ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಆಡಳಿತವಿದ್ದಾಗ ಒಂದು ರೀತಿ, ಅಧಿಕಾರಿಗಳ ಆಡಳಿತವಿದ್ದಾಗ ಮತ್ತೊಂದು ರೀತಿ ನಿಯಮಗಳ ಉಲ್ಲಂಘನೆಯಾಗಿದೆ.

 

ಇದಕ್ಕೆಲ್ಲಾ ಭ್ರಷ್ಟಾಚಾರವೇ ಮೂಲ ಎನ್ನಬಹುದು. ಸರ್ಕಾರ ಎಷ್ಟೇ ಕಠಿಣ ಕಾನೂನು ಜಾರಿಗೊಳಿಸಿದರೂ ಅದರಿಂದ ಅಧಿಕಾರಿಗಳಿಗೆ ಮತ್ತಷ್ಟು ಲಾಭ. ಎಷ್ಟು ಜನ ಒಳ್ಳೆಯ ಅಧಿಕಾರಿಗಳಿರಲು ಸಾಧ್ಯ ಹೇಳಿ? ಮೇಲಿನ ಹಂತದಿಂದಲೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಾಗ ಮಾತ್ರ ಕೆಳ ಹಂತದಲ್ಲಿಯೂ ಭ್ರಷ್ಟಾಚಾರ ನಿಲ್ಲಿಸಲು ಸಾಧ್ಯವಾಗಬಹುದು.

- ಮುನಿರಾಜು, ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ

ಅಧಿಕಾರಿಗಳಿಗೆ ಗೊತ್ತಿದ್ದೇ ಅಕ್ರಮ

ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತಿದ್ದೇ ಕಟ್ಟಡಗಳ ನಿರ್ಮಾಣದ ಉಲ್ಲಂಘನೆ ಯಥೇಚ್ಛವಾಗಿ ನಡೆದಿದೆ. ಬಿಬಿಎಂಪಿಯ ನಗರ ಯೋಜನೆ, ಆರೋಗ್ಯ ಹಾಗೂ ಕಂದಾಯ ಇಲಾಖೆಗಳಿಗೆ ಗೊತ್ತಿಲ್ಲದೆ ನಿಯಮ ಉಲ್ಲಂಘನೆ ಮಾಡುವುದು ಅಸಾಧ್ಯ. ಆದರೂ, ಅಪಾರ ಸಂಖ್ಯೆಯಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡಗಳ ನಿರ್ಮಾಣವಾಗಲು ಯಾರು ಹೊಣೆ?ಬಹುಮುಖ್ಯವಾಗಿ ಅನೇಕ ಕಡೆಗಳಲ್ಲಿ ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ನೀಡಿದ ಜಾಗವನ್ನು ಬಾಡಿಗೆಗೆ ನೀಡಲಾಗಿದೆ. ಅದಕ್ಕೆ ಪಾಲಿಕೆಯ ಆರೋಗ್ಯ ವಿಭಾಗ ವ್ಯಾಪಾರ ಪರವಾನಗಿ ಕೂಡ ನೀಡಿವೆ. ಇದೇ ಕಟ್ಟಡ ಮಾಲೀಕರು ಕಂದಾಯ ಇಲಾಖೆಗೆ ಆಸ್ತಿ ತೆರಿಗೆ ಪಾವತಿಸಿ ಸಕ್ರಮಗೊಳಿಸಿಕೊಳ್ಳುತ್ತಿದ್ದಾರೆ. ಇದರಿಂದ ಶೇ 30ರಿಂದ 40 ವಾಹನಗಳು ಇಂದು ಸಾರ್ವಜನಿಕ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ನಿಲ್ಲುವಂತಾಗಿದೆ.ಇದೀಗ ಸಾರ್ವಜನಿಕ ರಸ್ತೆಗಳಲ್ಲಿ ರಾತ್ರಿ ವೇಳೆ ನಿಲುಗಡೆ ಮಾಡುವಂತಹ ಕಾರುಗಳಿಗೆ ಬಿಬಿಎಂಪಿ ಮಾಸಿಕ 60 ರೂಪಾಯಿ ತೆರಿಗೆ ಹಾಕಲು ಹೊರಟಿದೆ. ಬಿಬಿಎಂಪಿ ಮಾಡಿದ ತಪ್ಪಿಗೆ ಸಾರ್ವಜನಿಕರ ಮೇಲೆ ಹೊರೆ ಹೊರಿಸಲು ಹೊರಟಿರುವ ಅದರ ಕ್ರಮ ನಿಜಕ್ಕೂ ಹಾಸ್ಯಾಸ್ಪದ.ವಾಹನ ನಿಲುಗಡೆಗೆ ಪರವಾನಗಿ ಪಡೆದು ನೆಲಮಹಡಿಗಳನ್ನು ಬಾಡಿಗೆಗೆ ನೀಡಿರುವಂತಹ ಪ್ರಕರಣಗಳಲ್ಲಿ ಪಾಲಿಕೆ ಮುಲಾಜಿಲ್ಲದೆ ಟ್ರೇಡ್ ಲೈಸನ್ಸ್ ರದ್ದುಪಡಿಸಬೇಕು. ಉಳಿದಂತೆ, ನಿಯಮ ಉಲ್ಲಂಘಿಸಿರುವ ಕಟ್ಟಡಗಳನ್ನು ಅಕ್ರಮ-ಸಕ್ರಮದ ಮೂಲಕ ಸರ್ಕಾರ ಸಕ್ರಮಗೊಳಿಸಬೇಕು.

-ಎನ್. ಮುಕುಂದ್, ಸಿಟಿಜನ್ ಆಕ್ಷನ್ ಫೋರಂಎಂಜಿನಿಯರ್‌ಗಳಿಗೆ ತಕ್ಕ ಶಿಕ್ಷೆಯಾಗಬೇಕು

ಕೆಎಂಸಿ ಕಾಯ್ದೆ ಉಲ್ಲಂಘನೆಯಾಗಲು ಪಾಲಿಕೆ ಎಂಜಿನಿಯರ್‌ಗಳು ಮುಖ್ಯ ಕಾರಣ. ನಿಯಮ ಉಲ್ಲಂಘನೆಯಾಗುವವರೆಗೆ ಸುಮ್ಮನಿದ್ದು ಆನಂತರ ಸಕ್ರಮಗೊಳಿಸುವ ಕ್ರಮ ಸರಿಯಾದುದಲ್ಲ. ಇದಕ್ಕೆ ಕಾರಣರಾದ ಪಾಲಿಕೆ ಎಂಜಿನಿಯರ್‌ಗಳ ಮನೆ ಒಡೆಯುವುದೇ ಸೂಕ್ತ.ಇಲ್ಲದಿದ್ದಲ್ಲಿ ನ್ಯಾಯಯುತವಾಗಿ ನಿಯಮ ಪಾಲನೆ ಮಾಡಿ ಮನೆ ನಿರ್ಮಿಸಿಕೊಂಡವರಿಗೆ ಸಿಗುವ ಬಹುಮಾನವಾದರೂ ಏನು? ಲಂಚ ಪಡೆದು ದೊಡ್ಡ ಬಂಗಲೆ ನಿರ್ಮಿಸಿಕೊಂಡು ಸಾಮಾನ್ಯ ಜನರಿಗೆ ತೊಂದರೆ ಕೊಡುವಂತಹ ಎಂಜಿನಿಯರ್‌ಗಳಿಗೆ ತಕ್ಕ ಶಿಕ್ಷೆಯಾಗಬೇಕು.

-ಕಾತ್ಯಾಯಿನಿ ಚಾಮರಾಜ್, ಸಿವಿಕ್ ಸಂಸ್ಥೆ ಕಾರ್ಯಕಾರಿ ಟ್ರಸ್ಟಿಅಕ್ರಮ ಕಟ್ಟಡಗಳನ್ನು ಬಹಿಷ್ಕರಿಸಿ

ನಗರದಲ್ಲಿ ನಿಯಮ ಉಲ್ಲಂಘಿಸಿ ಲಕ್ಷಾಂತರ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಇದಕ್ಕೆ ನಿಯಂತ್ರಣವೇ ಇಲ್ಲದಂತಾಗಿದೆ. ಹಾಗಾಗಿ ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡ ಕಟ್ಟಡಗಳ ವಿವರವನ್ನು ಬಿಬಿಎಂಪಿ ಬಹಿರಂಗಪಡಿಸಬೇಕು. ಅಲ್ಲದೇ ಆ ಕಟ್ಟಡದ ಬಳಿ ಫಲಕ ಅಳವಡಿಸಲಿ. ಜನತೆ ಸಹ ಅಕ್ರಮ ವಾಣಿಜ್ಯ ಕಟ್ಟಡಗಳು ಹಾಗೂ ಮನೆಗಳನ್ನು ಬಾಡಿಗೆಗೆ ಪಡೆಯಬಾರದು. ಆ ಮೂಲಕ ತಪ್ಪಿತಸ್ಥರಿಗೆ  ಶಿಕ್ಷೆಯಾಗಬೇಕು.

-ರಾಮಕೃಷ್ಣಯ್ಯ, ಬಸವನಗುಡಿಸರ್ವೀಸ್ ರಸ್ತೆ ತೆರವುಗೊಳಿಸಿ

ಬೆಂಗಳೂರು ದಕ್ಷಿಣ ವಿಭಾಗದ ವಾರ್ಡ್ ನಂ. 176 ವ್ಯಾಪ್ತಿಯಲ್ಲಿ ಬರುವ ಬಿಟಿಎಂ 2ನೇ ಹಂತದ 16ನೇ ಮುಖ್ಯರಸ್ತೆಯಿಂದ ಎಡಕ್ಕೆ (ವಾಟರ್ ಟ್ಯಾಂಕ್) ಜಯದೇವ ಆಸ್ಪತ್ರೆಗೆ ಹೋಗುವ ವರ್ತುಲ ರಸ್ತೆಯ ಸರ್ವೀಸ್ ರಸ್ತೆಯನ್ನು ತೆರವುಗೊಳಿಸಬೇಕು.ಈ ಸಂಬಂಧ ಬಿಬಿಎಂಪಿ ಕೇಂದ್ರ ಕಚೇರಿಯ ನಗರ ಯೋಜನೆಯ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಸರ್ವೀಸ್ ರಸ್ತೆಯನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೋರುತ್ತೇವೆ

- ಬಿಟಿಎಂ 2ನೇ ಹಂತದ ನಿವಾಸಿಗಳು(ಮುಂದುವರಿಯಲಿದೆ...)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.